ಹಾವೇರಿ ಜಿಲ್ಲಾ ರಾಜಕೀಯಕ್ಕೆ ಬಿ​ಎಸ್​​ವೈ ಪುತ್ರ ಎಂಟ್ರಿ? ಸಿಎಂ ಬೊಮ್ಮಾಯಿಗೆ ಹೊಸ ಸವಾಲು?

ಹಾವೇರಿ ಜಿಲ್ಲಾ ರಾಜಕೀಯಕ್ಕೆ ಬಿ​ಎಸ್​​ವೈ ಪುತ್ರ ಎಂಟ್ರಿ? ಸಿಎಂ ಬೊಮ್ಮಾಯಿಗೆ ಹೊಸ ಸವಾಲು?

ಇತ್ತೀಚೆಗೆ ರಾಜ್ಯದ ನೂತನ ಸಿಎಂ ಆಗಿ ಪ್ರಮಾಣ ಸ್ವೀಕಾರ ಮಾಡಿದ ಬಸವರಾಜ್​​ ಬೊಮ್ಮಾಯಿಗೆ ಆತಂಕವೊಂದು ಶುರುವಾಗಿದೆಯಂತೆ. ಬಸವರಾಜ್​​ ಬೊಮ್ಮಾಯಿ ಪ್ರತಿನಿಧಿಸುವ ಹಾವೇರಿ ಜಿಲ್ಲೆಯ ರಾಜಕಾರಣಕ್ಕೆ ಎಂಟ್ರಿ ಕೊಡಲಿದ್ದಾರಂತೆ ಮಾಜಿ ಸಿಎಂ ಬಿ.ಎಸ್​​ ಯಡಿಯೂರಪ್ಪ ಪುತ್ರ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ. ಹೀಗೊಂದು ಸುದ್ದಿ ರಾಜ್ಯ ರಾಜಕೀಯದಲ್ಲಿ ಬಲವಾಗಿ ಕೇಳಿ ಬರುತ್ತಿದ್ದು, ಸಿಎಂ ಬಸವರಾಜ್​​ ಬೊಮ್ಮಾಯಿಗೆ ಆತಂಕ ಹೆಚ್ಚಾಗಿದೆ ಎನ್ನಲಾಗುತ್ತಿದೆ.

ಹಾನಗಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದ ಸಿ.ಎಂ ಉದಾಸಿಯವರು ಇತ್ತೀಚೆಗೆ ನಿಧನ ಹೊಂದಿದ್ದರು. ಇವರ ನಿಧನದಿಂದ ತೆರವಾಗಿರುವ ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯತ ಮತಗಳೇ ನಿರ್ಣಾಯಕ. ಈ ಕ್ಷೇತ್ರದಿಂದ ಮಾಜಿ ಸಿಎಂ ಬಿ.ಎಸ್​​ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಹಾವೇರಿ ಜಿಲ್ಲೆ ಉತ್ತರ ಕರ್ನಾಟಕದ ಹೆಬ್ಬಾಗಿಲು ಅಂತಲೇ ಪ್ರಖ್ಯಾತಿ. ಬಿಜೆಪಿ ಪಕ್ಷಕ್ಕೆ ಉತ್ತರ ಕರ್ನಾಟಕದ ಪ್ರಬಲ ಸಮುದಾಯ ವೀರಶೈವ- ಲಿಂಗಾಯತ ಮತಗಳೇ ಪ್ರಮುಖ ವೋಟ್ ಬ್ಯಾಂಕ್. ಬಿಎಸ್​ವೈ ಪುತ್ರ ಬಿ.ವೈ ವಿಜಯೇಂದ್ರ ಕೂಡ ಲಿಂಗಾಯತ ಸಮುದಾಯಕ್ಕೆ ಸೇರಿದವರು.

ಹಾನಗಲ್​​ ಕ್ಷೇತ್ರದಿಂದ ವಿಜಯೇಂದ್ರ ಕಣಕ್ಕೆ

ಬಿ.ವೈ ವಿಜಯೇಂದ್ರ ರಾಜಕೀಯ ಪ್ರವೇಶ ಮಾಡಬೇಕು. ತಮ್ಮ ಕ್ಷೇತ್ರ ಮಾತ್ರವಲ್ಲದೇ ರಾಜ್ಯದ ಎಲ್ಲಾ ಕ್ಷೇತ್ರದಲ್ಲೂ ಗುರುತಿಸಿಕೊಳ್ಳಬೇಕು. ಈ ಮೂಲಕ ವಿಜಯೇಂದ್ರ ವೀರಶೈವ ಲಿಂಗಾಯತ ಸಮುದಾಯದ ನಾಯಕರಾಗಿ ಹೊರಹೊಮ್ಮಬೇಕು. ಈ ಕಾರಣದಿಂದ ಹಾನಗಲ್​​ ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸು ಎಂದು ವಿಜಯೇಂದ್ರಗೆ ಯಡಿಯೂರಪ್ಪ ಹೇಳಿದ್ದಾರಂತೆ.

ಇದನ್ನೂ ಓದಿ: ‘ಬೊಮ್ಮಾಯಿ ಆಡಳಿತದಲ್ಲಿ ಮಧ್ಯಪ್ರವೇಶಿಸಲ್ಲ, ಆದ್ರೆ ಸರ್ಕಾರ ತರಲು ಕಾರಣರಾದವ್ರ ಕೈಬಿಡಲು ಬಿಡಲ್ಲ’

ನಿಮ್ಮ ನಿರ್ಧಾರದಂತೆ ಆಗಲಿ ಎಂದ ವಿಜಯೇಂದ್ರ

ನೀವು ಹೇಳಿದಂತೆ ನಾನು ಕೇಳುತ್ತೇನೆ. ನಿಮ್ಮ ನಿರ್ಧಾರದಂತೆ ರಾಜಕೀಯದಲ್ಲಿ ಮುನ್ನಡೆಯುತ್ತೇನೆ ಎಂದು ಯಡಿಯೂರಪ್ಪಗೆ ವಿಜಯೇಂದ್ರ ಮಾತು ಕೊಟ್ಟಿದ್ದಾರಂತೆ. ಈಗ ಬಿ.ವೈ ವಿಜಯೇಂದ್ರ ಹಾವೇರಿ ಜಿಲ್ಲೆ ರಾಜಕಾರಣಕ್ಕೆ ಪ್ರವೇಶ ಮಾಡಿದರೆ ಬೊಮ್ಮಾಯಿ ಮುಂದಿನ ನಡೆಯೇನು? ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ.

ವಿಶೇಷ ವರದಿ: ಮಧುಸೂದನ್, ಪೊಲಿಟಿಕಲ್ ಬ್ಯೂರೋ

The post ಹಾವೇರಿ ಜಿಲ್ಲಾ ರಾಜಕೀಯಕ್ಕೆ ಬಿ​ಎಸ್​​ವೈ ಪುತ್ರ ಎಂಟ್ರಿ? ಸಿಎಂ ಬೊಮ್ಮಾಯಿಗೆ ಹೊಸ ಸವಾಲು? appeared first on News First Kannada.

Source: newsfirstlive.com

Source link