ಬಳ್ಳಾರಿಯಲ್ಲಿ ಕೊನೆಗೂ ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ

– ನಗರದಲ್ಲಿವೆ 30 ಸಾವಿರ ಬೀದಿ ನಾಯಿಗಳು

ಬಳ್ಳಾರಿ: ಗಣಿ ನಾಡು ಬಳ್ಳಾರಿಯಲ್ಲಿ ಸುಮಾರು 30 ಸಾವಿರ ಬೀದಿ ನಾಯಿಗಳಿವೆ. ಈ ಬೀದಿ ನಾಯಿಗಳ ಹಾವಳಿಗೆ ನಗರದ ಜನತೆ ಹೈರಾಣಾಗಿದ್ದಾರೆ. ಬಳ್ಳಾರಿಯಲ್ಲಿ ಅಂದಾಜು 25- 30 ಸಾವಿರಕ್ಕೂ ಅಧಿಕ ಬೀದಿ ನಾಯಿಗಳಿವೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಬೀದಿನಾಯಿಗಳ ಉಪಟಳ ತಡೆಯಲು ಮಹಾನಗರ ಪಾಲಿಕೆ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಮುಂದಾಗಿದೆ.

ಸಂತಾನಹರಣ ಚಿಕಿತ್ಸೆಗೆ ಭಾರೀ ಪ್ರಮಾಣದ ಹಣ ಬೇಕಾಗಿತ್ತು. ಒಂದು ನಾಯಿಯ ಸಂತಾನ ಹರಣ ಚಿಕಿತ್ಸೆಗೆ ಸುಮಾರು 2 ರಿಂದ 3 ಸಾವಿರ ರೂ. ಬೇಕಿತ್ತು. ಹೀಗಾಗಿ ಈ ಚಿಕಿತ್ಸೆ ಮಾಡಲಾಗದ ಕಾರಣ ಮಹಾನಗರ ಪಾಲಿಕೆ ಕೈಚೆಲ್ಲಿ ಕುಳಿತಿತ್ತು. ಈ ಹಿನ್ನೆಲೆಯಲ್ಲಿ ನಾಯಿಗಳ ಸಂತತಿ ವಿಪರೀತ ಹೆಚ್ಚಾಗಿತ್ತು.

ಈ ಸಮಸ್ಯೆಗೆ ಕಾರಣ ಕಂಡು ಹಿಡಿದ ಮಹಾನಗರ ಪಾಲಿಕೆ, ಹಾಲಿ ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರ ಮುತುವರ್ಜಿಯಿಂದ ಸ್ಥಳೀಯ ಎನ್‍ಜಿಓ ಸಂಸ್ಥೆಯನ್ನ ಈ ಟೆಂಡರ್ ಪ್ರಕ್ರಿಯೆಗೆ ಆಹ್ವಾನಿಸಿ ಸಂತಾನಹರಣ ಶಸ್ತ್ರಚಿಕಿತ್ಸೆಯ ಜೊತೆಜೊತೆಗೆ ರೇಬಿಸ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಪ್ರಾರಂಭಿಕ ಹಂತದಲ್ಲಿ ಕೇವಲ 2,400 ನಾಯಿಗಳಿಗೆ ಚಿಕಿತ್ಸೆ ನೀಡಲು ನಿರ್ಧಾರ ಮಾಡಿದ್ದು, ಇದು ಸಾಲದು ಹೆಚ್ಚಿನ ಸಂಖ್ಯೆಯಲ್ಲಿ ಸಂತಾನ ಹರಣ ಚಿಕಿತ್ಸೆ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

The post ಬಳ್ಳಾರಿಯಲ್ಲಿ ಕೊನೆಗೂ ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ appeared first on Public TV.

Source: publictv.in

Source link