ಅಗಲವಾದ ಬಾಯಿಯ ಮೂಲಕ ಗಿನ್ನಿಸ್​ ದಾಖಲೆ -ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್

ಅಗಲವಾದ ಬಾಯಿಯ ಮೂಲಕ ಗಿನ್ನಿಸ್​ ದಾಖಲೆ -ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್

1. ಇಂದು ಕೊರೊನಾ ಕುರಿತು ಡಿಸಿಗಳೊಂದಿಗೆ ಸಿಎಂ ಸಭೆ

blank

ರಾಜ್ಯದಲ್ಲಿ ಕೊರೊನಾ ವೈರಸ್‌ ನಿಯಂತ್ರಣ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಇಂದು ಸಭೆ ನಡೆಸಲಿದ್ದಾರೆ. ಇಂದು ಸಂಜೆ 5.30ಕ್ಕೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ತಮ್ಮ ಮೊದಲ ಸಭೆ ನಡೆಸಲು ನಿರ್ಧರಿಸಿದ್ದಾರೆ. ಬೆಂಗಳೂರು ನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಶಿವಮೊಗ್ಗ, ಉಡುಪಿ, ಚಾಮರಾಜನಗರ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆಗೆ ಸಿಎಂ ವರ್ಚುವಲ್​ ಸಭೆ ನಡೆಸಲಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಪಂಚಾಯತ್‌ನ ಸಿಇಓಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ.

2. ಮಲಪ್ರಭೆಯ ಆರ್ಭಟಕ್ಕೆ ಜಲಾವೃತವಾದ ಬೆಳೆ

blank

ಮಲಪ್ರಭಾ ನದಿ ಆರ್ಭಟ ಹಾಗೂ ಬಸವಸಾಗರ ಜಲಾಶಯ ಹಿನ್ನೀರಿನಿಂದ ಬಾಗಲಕೋಟೆಯ ಹುನಗುಂದ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಹುನಗುಂದ ಭಾಗದ ಹತ್ತಕ್ಕೂ ಹೆಚ್ಚು ಹಳ್ಳಿಗಳ ಸಾವಿರಾರು ಎಕರೆ ಬೆಳೆ ಜಲಾವೃತವಾಗಿದ್ದು, ಬಿಸ್ನಾಳಕೊಪ್ಪ ಗ್ರಾಮದಲ್ಲಿ ಹೆಸರು, ಕಬ್ಬು , ಜೋಳ ನೀರುಪಾಲಾಗಿದೆ. ಪ್ರವಾಹದಿಂದಾಗಿ ಒಂದು ಎರಡು ಎಕರೆ ಭೂಮಿ ಹೊಂದಿದ್ದ ಸಣ್ಣ ರೈತರಿಗೆ ಬಾರಿ ಸಂಕಷ್ಟ ಉಂಟಾಗಿದೆ. ಇಷ್ಟೆಲ್ಲಾ ಅವಾಂತರ ಸೃಷ್ಟಿಯಾಗಿದ್ರು ಅಧಿಕಾರಿಗಳು, ಜನಪ್ರತಿನಿಧಿಗಳು ಈ ಕಡೆ ತಿರುಗಿ ನೋಡಿಲ್ಲ ಅಂತ ಜನರು ಆಕ್ರೋಶ ಹೊರಹಾಕಿದ್ದಾರೆ.

3. ತ.ನಾಡಿನಲ್ಲಿ ಆ.9ರವರೆಗೆ ಲಾಕ್​ಡೌನ್​ ವಿಸ್ತರಣೆ

ಕಳೆದ ಮೂರು ದಿನಗಳಿಂದ ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ ತಮಿಳುನಾಡಿನಲ್ಲಿ ಆಗಸ್ಟ್ 9ರವರೆಗೆ ಲಾಕ್‌ಡೌನ್ ವಿಸ್ತರಿಸಲಾಗಿದೆ. ಈ ಮುಂಚೆ ವಿಧಿಸಿದ್ದ ಲಾಕ್​ಡೌನ್ ನಿಯಮಗಳೇ ಪ್ರಸ್ತುತ ಲಾಕ್​​ಡೌನ್​​ಗೂ ಅನ್ವಯವಾಗಲಿದ್ದು, ನಿಯಮಾವಳಿಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಅಂತಾ ಸರ್ಕಾರ ಹೇಳಿದೆ. ಅಲ್ಲದೆ ಕೊವಿಡ್ 3ನೇ ಅಲೆ ಬಂದೆರಗುವ ಸಂಭವ ಇರುವುದರಿಂದ ನಿಯಮಗಳನ್ನು ಕಠಿಣವಾಗಿ ಜಾರಿಗೊಳಿಸುವಂತೆ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಸ್ಥಳೀಯ ಆಡಳಿತಗಳಿಗೆ ಸೂಚನೆಯನ್ನೂ ನೀಡಿದ್ದಾರೆ.

4. ಆಂಧ್ರದಲ್ಲಿ ಆ. 14ರವರೆಗೆ ನೈಟ್​​ ಕರ್ಪ್ಯೂ ಜಾರಿ

ಕೊರೊನಾ ಸೋಂಕನ್ನ ತಡೆಹಿಡಿಯುವ ದೃಷ್ಟಿಯಿಂದ, ಆಂಧ್ರ ಪ್ರದೇಶದಾದ್ಯಂತ ಆಗಸ್ಟ್​ 14 ರವರೆಗೆ ನೈಟ್​ ಕರ್ಪ್ಯೂ ವಿಧಿಸಿ ಜಗನ್​ ಮೋಹನ್​ ರೆಡ್ಡಿ ಸರ್ಕಾರ ಆದೇಶ ಹೊರಡಿಸಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ನೈಟ್​ ಕರ್ಪ್ಯೂ ಜಾರಿಯಲ್ಲಿರಲಿದೆ. ಅಲ್ಲದೇ ಕೊರೊನಾ ಸೋಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸೋಂಕಿತ ವ್ಯಕ್ತಿಗಳನ್ನ ಟೆಸ್ಟ್​​, ಟ್ರೇಸ್​ ಹಾಗೂ ಟ್ರೀಟ್​ ಸೂತ್ರದಡಿಯಲ್ಲಿ ನಿಗಾ ವಹಿಸಲಾಗುತ್ತಿದೆ. ಇನ್ನು ತ್ವರತವಾಗಿ ವ್ಯಾಕ್ಸಿನೇಶನ್ ಅಭಿಯಾನ ಕೈಗೊಳ್ಳಲು ಸೂಕ್ತ ಕ್ರಮಗಳನ್ನ ವಹಿಸಲಾಗಿದೆ ಅಂತಾ ಸರ್ಕಾರ ಮಾಹಿತಿ ನೀಡಿದೆ.

5. ನಿರ್ಗತಿಕರು, ಭಿಕ್ಷುಕರಿಗೂ ಲಸಿಕೆ ಅಭಿಯಾನ

blank

ನಿರ್ಗತಿಕರು, ಭಿಕ್ಷುಕರು ಹಾಗೂ ಅಲೆಮಾರಿಗಳಿಗೋಸ್ಕರ ವಿಶೇಷ ಲಸಿಕಾ ಅಭಿಯಾನಗಳನ್ನು ನಡೆಸಬೇಕೆಂದು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಾಧಿಕಾರಿಗಳಿಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಈ ಕುರಿತು ಪತ್ರ ಬರೆದಿದ್ದಾರೆ. ಈ ವಿಶೇಷ ಅಭಿಯಾನದಲ್ಲಿ ಎನ್‌ಜಿಒಗಳು, ಸಮಾಜ ಸೇವಾ ಸಂಸ್ಥೆಗಳು ಹಾಗೂ ಸ್ವಯಂಸೇವಕರ ನೆರವನ್ನು ರಾಜ್ಯ ಸರ್ಕಾರಗಳು ಪಡೆಯಬಹುದೆಂದು ಭೂಷಣ್ ತಿಳಿಸಿದ್ದಾರೆ.

6. ‘ಕೊರೊನಾ ಅಂತ್ಯಗೊಳಿಸುವುದು ಜನರ ಕೈಯಲ್ಲಿದೆ’

ಕೊರೊನಾವನ್ನು ನಿರ್ಮೂಲನೆ ಮಾಡಲು ಬೇಕಾದ ಎಲ್ಲಾ ಅಗತ್ಯ ಸಾಧನಗಳು ಜನರ ಕೈಯಲ್ಲಿದೆ ಅಂತಾ ವಿಶ್ವಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್​ ಅಧಾನೋಮ್​ ಹೇಳಿದ್ದಾರೆ. ಕೊರೊನಾ ಸಾಂಕ್ರಾಮಿಕವನ್ನು ಕೊನೆಗೊಳಿಸಲು ಜಗತ್ತು ಯಾವಾಗ ಆಯ್ಕೆ ಮಾಡಿಕೊಳ್ಳುತ್ತದೋ ಆಗ ಕೊರೊನಾ ಅಂತ್ಯವಾಗಲಿದೆ. ಇನ್ನು ಕಳೆದ ವಾರದಲ್ಲಿ 40 ಲಕ್ಷಕ್ಕೂ ಹೆಚ್ಚಿನ ಕೊರೊನಾ ಕೇಸ್​ಗಳು ಜಾಗತಿಕವಾಗಿ ಪತ್ತೆಯಾಗಿದ್ದು, ಮುಂದಿನ 2 ವಾರಗಳಲ್ಲಿ ಈ ಅಂಕಿ ಅಂಶ 200 ಮಿಲಿಯನ್​ ದಾಟುವ ಸಂಭವವಿದೆ ಅಂತಾ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

7. ಆ. 31ರವರೆಗೆ ಅಂತರಾಷ್ಟ್ರೀಯ ವಿಮಾನಯಾನ ನಿರ್ಬಂಧ

blank

ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ವಿಧಿಸಲಾಗಿದ್ದ ನಿರ್ಬಂಧವನ್ನು ಆಗಸ್ಟ್ 31ರವರೆಗೆ ವಿಸ್ತರಿಸಲಾಗಿದೆ. ಆದ್ರೆ, ಪರಿಸ್ಥಿತಿಗೆ ಅನುಗುಣವಾಗಿ ನಿಗದಿತ ಮಾರ್ಗದಲ್ಲಿ ವಿಮಾನಗಳ ಸಂಚಾರಕ್ಕೆ ನಾಗರಿಕ ವಿಮಾನಯಾನ ಸಚಿವಾಲಯ ಅವಕಾಶ ನೀಡಲಿದೆ. ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರವನ್ನು 2020 ಮಾರ್ಚ್ 23ರಂದು ರದ್ದುಗೊಳಿಸಲಾಗಿತ್ತು. ಆದ್ರೆ, 2020 ಮೇಯಿಂದ ‘ವಂದೇ ಭಾರತ್ ಮಿಷನ್’ ಅಡಿಯಲ್ಲಿ ‘ಏರ್ ಬಬಲ್’ ವ್ಯವಸ್ಥೆ ಅಡಿಯಲ್ಲಿ ನಿಗದಿತ ರಾಷ್ಟ್ರಗಳಿಗೆ ವಿಮಾನಗಳು ಸಂಚಾರ ನಡೆಸುತ್ತಿದ್ದವು.

8. ಇಂದು ಭಾರತ-ಚೀನಾ ಕಮಾಂಡರ್ ಮಟ್ಟದ ಮಾತುಕತೆ

blank

ಚೀನಾ ಭಾರತ ನಡುವಿನ ಗಡಿ ಸಮಸ್ಯೆ ಒಂದು ಮಟ್ಟಕ್ಕೆ ತಣ್ಣಗಾಗಿದ್ದರೂ ಚೀನಾ ತನ್ನ ಗಡಿ ಪ್ರದೇಶದಲ್ಲಿ ಕ್ಯಾಂಪ್​ಗಳನ್ನು ನಿರ್ಮಿಸುವುದರಿಂದ ಮಾತ್ರ ಹಿಂದೆ ಸರಿದಿಲ್ಲ. ಈ ಮಧ್ಯೆ ಹಲವು ತಿಂಗಳುಗಳಿಂದ ಬ್ರೇಕ್ ನೀಡಿದ್ದ ಮಾತುಕತೆಗೆ ಇದೀಗ ಮತ್ತೊಮ್ಮೆ ವೇದಿಕೆ ಸಿದ್ಧಪಡಿಸಲಾಗಿದೆ. ಭಾರತ-ಚೀನಾ ನಡುವೆ 11 ನೇ ಸುತ್ತಿನ ಮಾತುಕತೆ ಏಪ್ರಿಲ್ 9 ರಂದು ನಡೆದಿತ್ತು. ಇದಾದ ಮೂರುವರೆ ತಿಂಗಳ ನಂತರ ಇಂದು ಚೀನಾ-ಭಾರತದ ನಡುವೆ 12 ನೇ ಸುತ್ತಿನ ಮಾತುಕತೆ ನಡೆಲಿದೆ. ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ಬೆಳಗ್ಗೆ 10:30ಕ್ಕೆ ಚೀನಾದ ಮೋಲ್ಡೋ ಗಡಿ ಕೇಂದ್ರದಲ್ಲಿ ನಡೆಯಲಿದೆ.

9. 2023ಕ್ಕೆ ನಿಸಾರ್​​​ ಉಪಗ್ರಹ ಉಡಾವಣೆ ನಿರೀಕ್ಷೆ

blank

ನಾಸಾ ಮತ್ತು ಇಸ್ರೊ ಸಹಭಾಗಿತ್ವದ ನಿಸಾರ್‌ ಉಪಗ್ರಹವನ್ನು 2023ರಲ್ಲಿ ಉಡಾವಣೆ ಮಾಡುವ ಪ್ರಸ್ತಾವನೆ ಇದೆ ಎಂದು ಕೇಂದ್ರ ಭೂ ವಿಜ್ಞಾನ ಸಚಿವ ಜಿತೇಂದ್ರ ಸಿಂಗ್‌ ಹೇಳಿದ್ದಾರೆ. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿರುವ ಅವರು, ಜಗತ್ತಿನಾದ್ಯಂತ ಇರುವ ನೈಸರ್ಗಿಕ ಸಂಪನ್ಮೂಲಗಳನ್ನು ಗುರುತಿಸುವುದು, ಭೂಕಂಪದಂತಹ ನೈಸರ್ಗಿಕ ವಿಕೋಪಗಳ ಮಾಹಿತಿ ಪಡೆಯುವುದು ಈ ಯೋಜನೆ ಉದ್ದೇಶವಾಗಿದೆ. ಜೊತೆಗೆ ಭೂಮಿ ಮತ್ತು ಕರಾವಳಿ ಪ್ರದೇಶದ ಪ್ರಕ್ರಿಯೆಗಳ ಮಾಹಿತಿ ಸಂಗ್ರಹಕ್ಕೆ ಈ ಉಪಗ್ರಹ ನೆರವಾಗಲಿದೆ ಎಂದಿದ್ದಾರೆ.

10. ಬಾಯಿಯಿಂದಲೇ ಗಿನ್ನಿಸ್​ ದಾಖಲೆ ಬರೆದ ಮಹಿಳೆ

blank

ಅಮೆರಿಕಾದ ಮಹಿಳೆಯೊಬ್ಬರು ತಮ್ಮ ಅಗಲವಾದ ಬಾಯಿಯ ಮೂಲಕ ಗಿನ್ನಿಸ್​ ದಾಖಲೆ ಬರೆದಿದ್ದಾರೆ. 31 ವರ್ಷದ ಸಮಂತಾ ರಾಮ್‌ಸ್ಡೆಲ್ ಈ ದಾಖಲೆ ಬರೆದಿದ್ದು, ತಮ್ಮ ಅಗಲವಾದ ಬಾಯಿಯ ಮೂಲಕ ದಾಖಲೆ ಸೃಷ್ಟಿಸಿದ್ದಾರೆ. 6.52 ಸೆಂಟಿ ಮೀಟರ್‌ ಅಂದ್ರೆ 2.56 ಇಂಚು ಅಗಲ ಬಾಯಿ ತೆರೆಯುವ ಮೂಲಕ ಈ ದಾಖಲೆ ಬರೆದಿದ್ದಾರೆ. ಮನರಂಜನೆಗಾಗಿ ಟಿಕ್​ಟಾಕ್​ ಮಾಡುತ್ತಿದ್ದ ಈಕೆ, ತಮ್ಮ ಸ್ನೇಹಿತರ ಸಲಹೆಯಂತೆ ಗಿನ್ನಿಸ್​ ವಿಶ್ವ ದಾಖಲೆಗೆ ಮುಂದಾಗಿದ್ರು. ಸದ್ಯ ಸಮಂತಾ ಬಾಯಿಯನ್ನ ಅಳತೆ ಮಾಡಿದ ಗಿನ್ನಿಸ್​ ತೀರ್ಪುಗಾರರು ಈಕೆಗೆ ಗಿನ್ನಿಸ್​​ ಪುಟದಲ್ಲಿ ಸ್ಥಾನ ನೀಡಿದ್ದಾರೆ.

The post ಅಗಲವಾದ ಬಾಯಿಯ ಮೂಲಕ ಗಿನ್ನಿಸ್​ ದಾಖಲೆ -ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್ appeared first on News First Kannada.

Source: newsfirstlive.com

Source link