ರೌಡಿಗಳನ್ನೂ ಮೀರಿಸಿದ ಮಂಗಗಳ ಭಯಾನಕ ‘ಗ್ಯಾಂಗ್​ ವಾರ್​’ಗೆ ಕಾರಣವಾಯ್ತು ಕೊರೊನಾ!

ರೌಡಿಗಳನ್ನೂ ಮೀರಿಸಿದ ಮಂಗಗಳ ಭಯಾನಕ ‘ಗ್ಯಾಂಗ್​ ವಾರ್​’ಗೆ ಕಾರಣವಾಯ್ತು ಕೊರೊನಾ!

ಅಂಡರ್‌ ವರ್ಲ್ಡ್‌ ಡಾನ್‌ಗಳ ನಡುವಿನ ಗ್ಯಾಂಗ್‌ ವಾರ್‌ ಸುದ್ದಿ ಕೇಳಿರುತ್ತೀರಿ. ನಡುರಸ್ತೆಯಲ್ಲಿಯೇ ಚಿಕ್ಕಪುಟ್ಟ ಪುಡಾರಿಗಳ ನಡುವಿನ ಗ್ಯಾಂಗ್‌ ವಾರ್‌ ನೋಡಿರುತ್ತೀರಿ. ಅಷ್ಟೇ ಏಕೆ, ಹಾಲಿವುಡ್‌, ಬಾಲಿವುಡ್‌, ಸ್ಯಾಂಡಲ್‌ವುಡ್‌ ಸಿನಿಮಾಗಳಲ್ಲಿಯೂ ಗ್ಯಾಂಗ್‌ ವಾರ್‌ ನೋಡಿರುತ್ತೀರಿ. ಆದ್ರೆ, ನಾವೀಗ ಒಂದು ಗ್ಯಾಂಗ್​ ವಾರ್​ ತೋರಿಸ್ತೀವಿ ಇಂತಾ ಗ್ಯಾಂಗ್​ ವಾರ್​ ನೋಡಿರೋದು ಅಪರೂಪದಲ್ಲಿ ಅಪರೂಪ ಅಂದುಕೊಳ್ಳಿ!

ಥಾಯ್ಲೆಂಡ್‌ನಲ್ಲಿ ನಡೆಯಿತು ಮಂಗಗಳ ನಡುವೆ ಗ್ಯಾಂಗ್‌ ವಾರ್‌
ಪರಸ್ಪರ ಎರಡು ಗುಂಪುಗಳ ನಡುವೆ ಗ್ಯಾಂಗ್‌ ವಾರ್‌

ಹೌದು.. ಅದು ಥಾಯ್ಲೆಂಡ್‌ನ ಲೋಪ್‌ಬುರಿ ನಗರದಲ್ಲಿ ನಡೆದಿರುವುದು. ಎಂದಿನಂತೆ ವಾಹನ ಸಾವಾರರು ವಾಹನ ಚಾಲನೆ ಮಾಡುತ್ತಿದ್ರು. ನಡೆದುಕೊಂಡು ಹೋಗುವವರು ನಡೆದುಕೊಂಡು ಹೋಗುತ್ತಿದ್ರು. ಸ್ಥಳೀಯರು ವ್ಯಾಪಾರದಲ್ಲಿ ತೊಡಗಿದ್ರು. ಆದ್ರೆ, ಇದ್ದಕ್ಕಿದ್ದಂತೆ ಎರಡು ಮಂಗಗಳ ಗ್ಯಾಂಗ್‌ ನಡುವೆ ರಸ್ತೆ ಪಕ್ಕ ಚಿಕ್ಕ ವಾರ್‌ ಆರಂಭವಾಗುತ್ತೆ. ನೋಡ್ತಾ ನೋಡ್ತಾ ಇರುವಂತೆ ಎರಡು ಗ್ಯಾಂಗ್‌ ವಾರ ದೊಡ್ಡದಾಗಿ ಬಿಡುತ್ತದೆ. ನೂರಾರು ಮಂಗಗಳು ನಡು ರಸ್ತೆಗೆ ಬಂದು ಪರಸ್ಪರ ಹೊಡೆದಾಟ ಮಾಡಿಕೊಳ್ಳುತ್ತವೆ. ವಾಹನ ಚಾಲನೆಗೆ ಅವಕಾಶವನ್ನೇ ನೀಡುವುದಿಲ್ಲ. ಅಲ್ಲಿರುವ ಜನರು, ವಾಹನ ಸವಾರರು ಮೂಕವಿಸ್ಮಿತರಾಗಿ ನೋಡ್ತಾ ನಿಲ್ಲುತ್ತಾರೆ.

ಗಂಟೆಗಟ್ಟಲೇ ನಡೆಯಿತು ರೋಚಕ ಕಾಳಗ
ಲೋಪ್‌ಬುರಿಯಲ್ಲಿ ಫುಲ್‌ ಟ್ರಾಫಿಕ್‌ ಜಾಮ್‌

ಅಂಡರ್‌ ವರ್ಲ್ಡ್‌ ಡಾನ್‌ಗಳ ನಡುವೆ ಗ್ಯಾಂಗ್‌ ವಾರ್‌ ನಡೆಯುವಾಗ ಹೇಗೆ ಅಲ್ಲಿರುವ ಜನ ಮೂಕವಿಸ್ಮಿತರಾಗಿ ಇರುತ್ತಾರೋ ಅದೇ ರೀತಿ ಲೋಪ್‌ಬುರಿ ಜನ ಇದ್ರು. ವಾಹನ ಚಾಲನೆ ಮಾಡಲು ಸಾಧ್ಯವಾಗದೇ ಸವಾರರು ರಸ್ತೆಯಲ್ಲಿಯೇ ನಿಲ್ಲಿಸಿಕೊಂಡಿದ್ರು. ಯಾರೂ ಅವರ ತಂಟೆಗೆ ಹೋಗುವಂತೆ ಇರಲಿಲ್ಲ. ಯಾಕೆಂದ್ರೆ ಅದು ಅಂತಿಂಥ ಗ್ಯಾಂಗ್‌ ಅಲ್ಲ.

blank

ಪ್ರತಿ ಗ್ಯಾಂಗ್‌ನಲ್ಲಿಯೂ ನೂರಾರು ಮಂಗಗಳು ಇದ್ವು. ಪರಸ್ಪರ ಹೊಡೆದಾಟ ಮಾಡಿಕೊಳ್ತಾ ಇದ್ವು. ಸುಮಾರು ಗಂಟೆಗಳ ಕಾಲ ವಾರ್‌ ನಡೆದಿದೆ. ಈ ಸಂದರ್ಭದಲ್ಲಿ ಲೋಪ್‌ಬುರಿಯಲ್ಲಿ ಫುಲ್‌ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಅನಂತರ ಟ್ರಾಫಿಕ್‌ ಜಾಮ್‌ ನಿಯಂತ್ರಿಸುವಲ್ಲಿ ಅಲ್ಲಿಯ ಟ್ರಾಫಿಕ್‌ ಪೊಲೀಸರು ಹೈರಾಣಾಗಿ ಹೋಗಿದ್ದಾರೆ.

ನೂರಾರು ಮಂಗಗಳಿಗೆ ಗಾಯ
ನಡು ರಸ್ತೆಯಲ್ಲಿಯೇ ಚೆಲ್ಲಿದ ರಕ್ತ

ಸುಮಾರು ಒಂದು ಗಂಟೆಗಳ ಕಾಲ ಕಾದಾಟದ ಬಳಿಕ ಎರಡು ಗ್ಯಾಂಗ್‌ಗಳು ಹಿಂದೆ ಸರಿದಿವೆ. ಈ ವಾರ್‌ನಲ್ಲಿ ನೂರಾರು ಮಂಗಗಳು ಗಾಯಗೊಂಡಿವೆ. ವಾರ್‌ ಹೇಗಿತ್ತು ಅಂದ್ರೆ, ಯಾವುದಾದ್ರೂ ಪ್ರಾಣಿಯನ್ನು ಬಲಿಕೊಟ್ಟಾಗ ಹೇಗೆ ರಕ್ತ ಬಿದ್ದಿರುತ್ತೋ ಅದೇ ರೀತಿ ರಸ್ತೆಯಲ್ಲಿಯೇ ರಕ್ತ ಚೆಲ್ಲಿತ್ತು. ಅಲ್ಲಿಯವರೆಗೂ ಥಾಯ್ಲೆಂಡ್‌ನ ಜನ ಅಷ್ಟೊಂದು ಭೀಕರ ವಾರ್‌ ನೋಡಿಯೇ ಇರಲಿಲ್ಲವಾಗಿತ್ತಂತೆ. ಈ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಸಿದ್ದಾರೆ. ತಮ್ಮ ಮೇಲೂ ಮಂಗಗಳು ದಾಳಿ ನಡೆಸುತ್ತವೆ ಅಂತ ಅಳಲು ತೋಡಿಕೊಂಡಿದ್ದಾರೆ.

ಮಂಗಗಳ ನಡುವಿನ ಗ್ಯಾಂಗ್‌ ವಾರ್‌ ಇದೇ ಮೊದಲಲ್ಲ
2020ರಲ್ಲಿಲ್ಲೂ ಇದೇ ರೀತಿ ವಾರ್‌ ನಡೆದಿತ್ತು

ಥಾಯ್ಲೆಂಡ್‌ ಲೋಪ್‌ಬುರಿಯಲ್ಲಿ ಮಂಗಗಳ ನಡುವೆ ನಡೆಯುತ್ತಿರುವುದು ಇದೇ ಮೊದಲ ವಾರ್‌ ಅಲ್ಲ. ಈ ಹಿಂದೆಯೂ ಕೂಡ ಚಿಕ್ಕಪುಟ್ಟ ವಾರ್‌ ನಡೆಯುತ್ತಲೇ ಇತ್ತು. 2020 ರಲ್ಲಿ ಮಾತ್ರ ಒಂದು ದೊಡ್ಡ ಪ್ರಮಾಣದ ವಾರ್‌ ನಡೆದಿತ್ತು. ಅದು ಕೂಡ ಈಗ ನಡೆದ ವಾರ್‌ ನಂತೆಯೇ ಟ್ರಾಫಿಕ್‌ ಜಾಮ್‌ ಸೃಷ್ಟಿಸಿತ್ತು. ಆದ್ರೆ, ಅನಂತರದಲ್ಲಿ ಗ್ಯಾಂಗ್‌ ವಾರ್‌ ನಡೆದಿರಲಿಲ್ಲ ವಂತೆ. ಅಷ್ಟಕ್ಕೂ ಯಾಕೆ ಮಂಗಗಳ ನಡುವೆ ವಾರ್‌ ನಡೆಯುತ್ತೆ ಗೊತ್ತಾ?

ಗ್ಯಾಂಗ್‌ ವಾರ್‌ಗೆ ಕಾರಣವಾಯ್ತು ಕೊರೊನಾ
ಆಹಾರ ಇಲ್ಲದೇ ಮಂಗಗಳ ಪರದಾಟ

ಥಾಯ್ಲೆಂಡ್‌ ಪ್ರವಾಸಿಗರಿಗೆ ಸ್ವರ್ಗವಾಗಿದೆ. ಅಲ್ಲಿಯ ಪರಿಸರ, ಐತಿಹಾಸಿಕ ಸ್ಮಾರಕಗಳು ಪ್ರವಾಸಿಗರನ್ನು ಸೂಚಿಗಲ್ಲಿನಂತೆ ಸೆಳೆಯುತ್ತವೆ. ಲೋಪ್‌ಬುರಿಯಲ್ಲಿ ಮಂಗಗಳನ್ನು ನೋಡುವುದಕ್ಕಾಗಿಯೇ ಪ್ರವಾಸಿಗರು ಹೋಗುತ್ತಾರೆ. ಅಲ್ಲಿರುವ ಮಂಗಗಳಿಗೆ ಆಹಾರವನ್ನು ನೀಡುತ್ತಾರೆ. ಪ್ರವಾಸಿಗರು ನೀಡುವ ಆಹಾರವನ್ನೇ ಮಂಗಗಳು ಅವಲಂಬಿಸಿರುತ್ತವೆ. ಆದ್ರೆ, ಕೊರೊನಾ ಆರಂಭವಾದ ಮೇಲೆ ಪ್ರವಾಸಕ್ಕೆ ನಿರ್ಬಂಧ ಹೇರಲಾಗಿತ್ತು. ಸೋಂಕಿನ ಕೇಸ್‌ ಇಳಿಕೆಯಾದ ಮೇಲೆ ಪ್ರವಾಸಕ್ಕೆ ನಿರ್ಬಂಧ ತೆರವು ಮಾಡಲಾಗಿತ್ತು. ಆದ್ರೆ, ಪ್ರವಾಸಿಗರು ಮಾತ್ರ ಬರ್ತಾ ಇಲ್ಲ. ಹೀಗಾಗಿ ಮಂಗಗಳಿಗೆ ಆಹಾರ ಸಮಸ್ಯೆ ಉಂಟಾಗಿದೆ. ಇದೇ ಕಾರಣಕ್ಕೆ ಎರಡು ಗ್ಯಾಂಗ್‌ಗಳ ನಡುವೆ ವಾರ್‌ ನಡೆಯುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಪ್ರಾಬಲ್ಯ ಸಾಧಿಸಲು ನಡೆಯುತ್ತಿದೆ ವಾರ್‌
ಸಂತಾನೋತ್ಪತ್ತಿ ಹೆಚ್ಚಳಕ್ಕೂ ವಾರ್‌ ನಡೆಯುತ್ತೆ

ಹೌದು, ಇಲ್ಲಿ ಮಂಗಗಳು ಎರಡು ಗ್ಯಾಂಗ್‌ ಕಟ್ಟಿಕೊಂಡು ಬಿಟ್ಟಿವೆ. ಆದ್ರೆ, ತಾವೇ ಪ್ರಭುತ್ವ ಸಾಧಿಸಬೇಕು ಅಂತ ಪಣಕ್ಕೆ ಬಿದ್ದಿವೆ. ಒಮ್ಮೆ ತಮ್ಮ ಪ್ರಭಾವ ಕಮ್ಮಿಯಾದರೆ ಮತ್ತೊಂದು ಗ್ಯಾಂಗ್‌ನ ಮಂಗಗಳು ತಾವಿರುವ ಸ್ಥಳಕ್ಕೆ ಬಂದು ಆಹಾರದ ಸಮಸ್ಯೆ ಉಂಟುಮಾಡುತ್ತವೆ ಅನ್ನುವುದು ಪರಸ್ಪರ ಎರಡೂ ಗ್ಯಾಂಗ್‌ನಲ್ಲಿ ಉಂಟಾಗಿದೆ. ಇಷ್ಟೇ ಅಲ್ಲ, ಎರಡೂ ಗ್ಯಾಂಗ್‌ನಲ್ಲಿ ಸಂತಾನೋತ್ಪತ್ತಿಗಾಗಿಯೂ ಗ್ಯಾಂಗ್‌ ವಾರ್‌ ನಡೆಯುತ್ತದೆ ಅಂತೆ.

ಈ ನಗರದಲ್ಲಿವೇ 6 ಸಾವಿರ ಮಂಗಗಳು
ಮಂಗಗಳ ಉತ್ಸವ ಕೂಡ ನಡೆಯುತ್ತೆ

ಹೌದು, ಥಾಯ್ಲೆಂಡ್‌ನ ಲೋಪ್‌ಬುರಿ ಮಂಗಗಳಿಗೆ ಬಾರೀ ಫೇಮಸ್‌. ಇಲ್ಲಿ ಸುಮಾರು 6 ಸಾವಿರ ಮಂಗಗಳು ಇವೆ ಅಂತೆ. ಇಲ್ಲಿಯ ಜನ ಮಂಗಗಳನ್ನು ದೇವರಂತೆಯೇ ನೋಡ್ತಿದ್ದಾರೆ. ಅವರು ಕೂಡ ಪ್ರತಿ ನಿತ್ಯ ಆಹಾರ ನೀಡುತ್ತಾರೆ. ವಿಶೇಷ ಅಂದ್ರೆ ಇಲ್ಲಿ ಮಂಗಗಳ ಉತ್ಸವ ನಡೆಯುತ್ತೆ. ಅದನ್ನು ಮಕ್ಕಳು, ಹಿರಿಯರು ಹಬ್ಬದಂತೆ ಆಚರಿಸುತ್ತಾರೆ. ಮಕ್ಕಳು ಮಂಗಗಳ ಮುಖವಾಡ ಹಾಕಿಕೊಂಡು ಮೆರವಣಿಗೆ ನಡೆಸುತ್ತಾರೆ, ಕುಣಿದು ಕುಪ್ಪಳಿಸುತ್ತಾರೆ.

ಮಂಗಗಳ ಆಹಾರಕ್ಕೆ ವ್ಯವಸ್ಥೆ ಮಾಡುವಂತೆ ಒತ್ತಾಯ
ಸ್ಥಳೀಯರ ಕೂಗಿಗೆ ಥಾಯ್ಲೆಂಡ್‌ ಸರ್ಕಾರ ಸ್ಪಂದಿಸುತ್ತಾ?

ಕೊರೊನಾ ಆರಂಭವಾದ ಮೇಲೆ ಪ್ರವಾಸಿಗರ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಕುಸಿದಿದೆ. ಸ್ಥಳೀಯರು ನೀಡುತ್ತಿರುವ ಆಹಾರ ಅವುಗಳಿಗೆ ಯಾತಕ್ಕೂ ಸಾಕಾಗುತ್ತಿಲ್ಲ. ಇದೇ ಕಾರಣಕ್ಕೆ ಮಂಗಗಳು ಗ್ಯಾಂಗ್‌ ವಾರ್‌ ನಡೆಸುತ್ತಿವೆ. ಹೀಗಾಗಿ ಸರ್ಕಾರ ಮಂಗಗಳ ಆಹಾರಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು ಅಂತ ಅಲ್ಲಿಯ ಸ್ಥಳೀಯರು ಒತ್ತಾಯಿಸಿದ್ದಾರೆ. ಆದ್ರೆ, ಥಾಯ್ಲೆಂಡ್‌ ಸರ್ಕಾರ ಯಾವ ರೀತಿಯಲ್ಲಿ ಸ್ಪಂದಿಸುತ್ತೆ ಅನ್ನೋದನ್ನು ಕಾದು ನೋಡಬೇಕಾಗಿದೆ.

The post ರೌಡಿಗಳನ್ನೂ ಮೀರಿಸಿದ ಮಂಗಗಳ ಭಯಾನಕ ‘ಗ್ಯಾಂಗ್​ ವಾರ್​’ಗೆ ಕಾರಣವಾಯ್ತು ಕೊರೊನಾ! appeared first on News First Kannada.

Source: newsfirstlive.com

Source link