ರಾಜ್ಯದಲ್ಲಿ ಮತ್ತೆ ಕೊರೊನಾ ಆತಂಕ; ಒಂದೇ ವಾರದಲ್ಲಿ ಶೇ.1.16ಕ್ಕೆ ಏರಿದ ಪಾಸಿಟಿವಿಟಿ ರೇಟ್‌

ರಾಜ್ಯದಲ್ಲಿ ಮತ್ತೆ ಕೊರೊನಾ ಆತಂಕ; ಒಂದೇ ವಾರದಲ್ಲಿ ಶೇ.1.16ಕ್ಕೆ ಏರಿದ ಪಾಸಿಟಿವಿಟಿ ರೇಟ್‌

ಕೊರೊನಾ ಮೂರನೇ ಅಲೆ ಆರಂಭವಾಯ್ತಾ? ಹೌದು, ಇಂತಹ ಒಂದು ಸುಳಿವು ಸಿಕ್ಕಿದೆ. ಇಷ್ಟು ದಿನ ಕೇರಳ, ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆಯ ಏರಿಕೆ ಕಾಣ್ತಾ ಇತ್ತು. ಆದ್ರೆ, ಇದೀಗ ರಾಜ್ಯದಲ್ಲಿ, ಬೆಂಗಳೂರಿನಲ್ಲಿ ದಿಢೀರ್‌ ಅಂತ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.

ಕೊರೊನಾ ಮೊದಲನೇ ಅಲೆಯನ್ನು ಭಾರತ ಒಂದು ಹಂತದಲ್ಲಿ ಯಶಸ್ವಿಯಾಗಿಯೇ ನಿರ್ವಹಿಸಿತ್ತು. ಇದೇ ಉತ್ಸಾಹದಲ್ಲಿ ಎರಡನೇ ಅಲೆಯನ್ನು ಎದುರಿಸುವ ವಿಶ್ವಾಸದಲ್ಲಿ ಇತ್ತು. ಆದ್ರೆ, ಅಂದುಕೊಂಡಿದ್ದೇ ಒಂದು ಆಗಿದ್ದೇ ಇನ್ನೊಂದು ಆಗಿ ಬಿಡ್ತು. ಯಾವ ತಜ್ಞರು ಅಂದಾಜಿಸದ ಮಟ್ಟಿಗೆ ಬರಸಿಡಿಲಿನಂತೆ ಎರಡನೇ ಅಲೆ ಬಂದು ಅಪ್ಪಳಿಸಿ ಬಿಡ್ತು.

blank
ಬಹುಪಾಲು ಸೋಂಕಿತರಲ್ಲಿ ಆಕ್ಸಿಜನ್‌ ಸಮಸ್ಯೆ ಕಾಣಿಸಿಕೊಳ್ತಾ ಇತ್ತು. ಆಸ್ಪತ್ರೆಯಲ್ಲಿಯೇ ಆಕ್ಸಿಜನ್‌ ಅಲಭ್ಯತೆಯಿಂದ ನೂರಾರು ಜನ ಪ್ರಾಣ ಕಳೆದುಕೊಂಡ್ರು. ನಮ್ಮ ರಾಜ್ಯದ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿಯೂ ಒಂದೇ ದಿನ 24 ಮಂದಿ ಪ್ರಾಣ ಕಳೆದುಕೊಂಡ್ರು.

ಆಸ್ಪತ್ರೆಗಳಲ್ಲಿ ಬೆಡ್‌ಗಳ ಸಮಸ್ಯೆ, ರೆಮ್‌ಡಿಸಿವರ್‌ ಔಷಧಿಯ ಸಮಸ್ಯೆ, ಆ್ಯಂಬುಲೆನ್ಸ್‌ ಸಮಸ್ಯೆ, ಅಂತ್ಯಸಂಸ್ಕಾರದ ಸಮಸ್ಯೆ.. ಒಂದಾ ಎರಡಾ? ನೂರಾರು ಸಮಸ್ಯೆಗಳು ಕಾಣಿಸಿಕೊಂಡ್ವು. ತದನಂತರ ಕೇಸ್‌ಗಳ ಸಂಖ್ಯೆ ಇಳಿಯಾಗುತ್ತಾ ಸಾಗಿತ್ತು. ಕೋವಿಡ್‌ ನಿರ್ಬಂಧಗಳನ್ನು ಸರ್ಕಾರ ತೆರವು ಮಾಡಿತ್ತು. ಆದರೆ ಈಗ ಮತ್ತೆ ಆತಂಕ ಆರಂಭವಾಗಿದೆ. ಮೂರನೇ ಅಲೆ ಅರಂಭವಾಗಿಬಿಡ್ತಾ ಅನ್ನೋ ಭಯ ಹುಟ್ಟಿಸುತ್ತಿದೆ.

blank

ರಾಜ್ಯದಲ್ಲಿ ದಿಢೀರ್‌ ಏರಿಕೆ ಆಯ್ತು ಸೋಂಕಿತರ ಸಂಖ್ಯೆ..

ಒಂದೇ ವಾರದಲ್ಲಿ ಪಾಸಿಟಿವಿಟಿ ರೇಟ್‌ 1.16ಕ್ಕೆ ಏರಿಕೆ

ಹೌದು, ಏನೋ ನಿಶ್ಚಿಂತೆಯಲ್ಲಿದ್ದ ಜನರಲ್ಲಿ ಮತ್ತೆ ಆತಂಕ ಸ್ಟಾರ್ಟ್‌ ಆಗಿದೆ. ಸರ್ಕಾರಕ್ಕೂ ತಲೆ ನೋವಾಗಿ ಪರಿಗಣಿಸುವ ಸಾಧ್ಯತೆ ಗೋಚರಿಸುತ್ತಿದೆ. ಕಳೆದ ಒಂದು ಒಂದೂವರೆ ತಿಂಗಳಿಂದ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಇಳಿಕೆಯಾಗುತ್ತಿತ್ತು. ಹೀಗಾಗಿ ಕೋವಿಡ್‌ ನಿಯಂತ್ರಣಕ್ಕೆ ಹೇರಲಾಗಿದ್ದ ನಿರ್ಬಂಧವನ್ನು ಹಂತ ಹಂತವಾಗಿ ತೆರವು ಮಾಡಿಕೊಡಲಾಗಿತ್ತು. ಜನ ಕೂಡ ಸಾಮಾಜಿಕ ಅಂತರ ಮರೆತು ಸುತ್ತಾಡುತ್ತಿದ್ರು. ಆದರೆ ಇದೀಗ ರಾಜ್ಯದಲ್ಲಿ 19 ದಿನಗಳ ನಂತರ 2 ಸಾವಿರ ಪ್ಲಸ್‌ ಹೊಸ ಸೋಂಕಿತರು ಪತ್ತೆಯಾಗಿದ್ದಾರೆ.
ಇದಕ್ಕೂ ಮುನ್ನ ಜುಲೈ 10 ರಂದು 2162 ಸೋಂಕಿತರು ಪತ್ತೆಯಾಗಿದ್ರು. ಆನಂತರ ಹಂತ ಹಂತವಾಗಿ ಇಳಿಕೆಯ ಹಾದಿಯಲ್ಲಿತ್ತು. ಆದ್ರೆ, ಇದೀಗ ದಿಢೀರ್‌ ಏರಿಕೆ ಕಾಣಿಸಿಕೊಂಡಿದ್ದು ಆತಂಕ ಹುಟ್ಟಿಸಿದೆ. ಇನ್ನು ಪಾಸಿಟಿವಿಟಿ ರೇಟ್‌ ಕೂಡ ಒಂದೇ ವಾರದಲ್ಲಿ 1.16ಕ್ಕೆ ಜಿಗಿದಿದೆ.

ಕೇರಳದಿಂದ ರಾಜ್ಯದ ಮೇಲೆ ಪರಿಣಾಮ ಬೀಳ್ತಾ ಇದೆಯಾ?

ಎರಡನೇ ಅಲೆ ಅರಂಭದಲ್ಲಿಯೂ ರಾಜ್ಯದಲ್ಲಿ ಹೀಗೆಯೇ ಆಗಿತ್ತು

ಇಡೀ ದೇಶದಲ್ಲಿಯೇ ಸೋಂಕಿತರ ಸಂಖ್ಯೆ ಇಳಿಕೆಯಾಗಿದ್ರೂ ಕೇರಳದಲ್ಲಿ ಮಾತ್ರ ಇಳಿಕೆಯಾಗುತ್ತಿಲ್ಲ. ಪ್ರತಿ ನಿತ್ಯ 20 ಸಾವಿರಕ್ಕೂ ಹೆಚ್ಚಿನ ಕೇಸ್‌ಗಳು ದಾಖಲಾಗುತ್ತಿವೆ. ಗುರುವಾರ ಒಂದೇ ದಿನ 22064 ಸೋಂಕಿತರು ಪತ್ತೆಯಾಗಿದ್ದಾರೆ. ಇಡೀ ದೇಶದಲ್ಲಿಯೇ ಗುರುವಾರ 44230 ಪ್ರಕರಣ ದಾಖಲಾಗಿದೆ. ಆದ್ರೆ, ದೇಶದಲ್ಲಿ ಅರ್ಧದಷ್ಟು ಕೇಸ್‌ಗಳು ಕೇರಳ ಒಂದರಲ್ಲಿಯೇ ದಾಖಲಾಗುತ್ತಿವೆ. ಇದರ ಪರಿಣಾಮ ನೇರವಾಗಿ ಕರ್ನಾಟದ ಮೇಲೆ ಬೀಳುತ್ತಿದೆ.

ಹೀಗಾಗಿಯೇ ದಕ್ಷಿಣ ಕನ್ನಡ, ಉಡುಪಿ, ಕೊಡಗಿನಲ್ಲಿ ಕೇಸ್‌ಗಳ ಸಂಖ್ಯೆ ಏರಿಕೆಯಾಗುತ್ತಿದೆ. ಒಂದು ವಾರದ ಹಿಂದೆ ದಕ್ಷಿಣ ಕನ್ನಡದಲ್ಲಿ 200 ಆಸುಪಾಸಿನಲ್ಲಿ ಬರ್ತಿದ್ದ ದೈನಂದಿನ ಕೇಸ್‌ಗಳು ಈ ವಾರ 400ರ ಗಡಿಗೆ ಬಂದಿದೆ. ಇನ್ನು ಉಡುಪಿಯಲ್ಲಿ ನೂರರ ಒಳಗೆ ದಾಖಲಾಗುತ್ತಿದ್ದ ಸಂಖ್ಯೆ ಈಗ 200ರ ಗಡಿಗೆ ಬಂದಿದೆ. ಇನ್ನು ಕೊಡಗಿನಲ್ಲಿ 50ರ ಆಸುಪಾಸಿನಲ್ಲಿದ್ದ ಕೇಸ್‌ಗಳ ಸಂಖ್ಯೆ 100ರ ಸನಿಹಕ್ಕೆ ಬಂದಿದೆ.

blank

ಎರಡನೇ ಅಲೆಯ ಆರಂಭದಲ್ಲಿಯೂ ಹೀಗೆಯೇ ಆಗಿತ್ತು. ರಾಜ್ಯದಲ್ಲಿ ದಿನನಿತ್ಯದ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿತ್ತು. ಆದ್ರೆ, ಕೇರಳದಲ್ಲಿ, ಮಾಹಾರಾಷ್ಟ್ರಗಳಲ್ಲಿ ಮಾತ್ರ ಹೆಚ್ಚಿನ ಪ್ರಮಾಣದ ಕೇಸ್‌ಗಳು ದಾಖಲಾಗುತ್ತ ಇದ್ವು. ಅದರ ಪರಿಣಾಮ ನೇರವಾಗಿ ಕರ್ನಾಟಕದ ಮೇಲೆ ಬಿದ್ದಿತ್ತು. ಕೇರಳಕ್ಕೆ ಗಡಿ ಹಂಚಿಕೊಂಡಿರೋ ದಕ್ಷಿಣ ಕನ್ನಡ, ಕೊಡಗು, ಮೈಸೂರು ಮತ್ತು ಗಡಿ ಹಂಚಿಕೊಳ್ಳದಿದ್ರೂ ಹೆಚ್ಚಿನ ಒಡನಾಟ ಇರೋ ಉಡುಪಿಯಲ್ಲಿಯೂ ಕೇಸ್‌ಗಳ ಸಂಖ್ಯೆ ಏರಿಕೆಯಾಗಿತ್ತು. ಆನಂತರ ಅದು ಇಡೀ ರಾಜ್ಯಕ್ಕೆ ವ್ಯಾಪಿಸಿತ್ತು.

ಆರ್‌ಟಿಪಿಸಿಆರ್‌ ವರದಿ ಕಡ್ಡಾಯ ಇದ್ರೂ ನಿರ್ಲಕ್ಷ್ಯ..

ಕಡಿವಾಣ ಹಾಕಬೇಕಾದವರು ರಾಜಕೀಯದಲ್ಲಿ ಬ್ಯುಸಿ.

ಕೇರಳದಲ್ಲಿ ಕೋವಿಡ್‌ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗಡಿಯಲ್ಲಿ ಬಿಗುವಿನ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಕೇರಳದಿಂದ ಆಗಮಿಸುವವರಿಗೆ 72 ಗಂಟೆಯೊಳಗಿನ ಆರ್‌ಟಿಸಿಪಿಆರ್‌ ನೆಗೆಟಿವ್‌ ವರದಿ ಕಡ್ಡಾಯವಾಗಿದೆ. ಕನಿಷ್ಠ ಒಂದು ಡೋಸ್‌ ಕೋವಿಡ್‌ ಲಸಿಕೆ ಪಡೆದಿರಬೇಕು ಅಂತ ನಿಯಮ ಮಾಡಲಾಗಿದೆ.

ಆದ್ರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೇರಳ, ಕರ್ನಾಟಕದ ನಡುವೆ ಬೇಕಾಬಿಟ್ಟಿ ಸಂಚಾರ ಆಗುತ್ತಿದೆ ಅಂತ ಆರೋಪ ಕೇಳಿ ಬರ್ತಿದೆ. ಇದಕ್ಕೆಲ್ಲ ಕಡಿವಾಣ ಹಾಕಬೇಕಾದವರು ರಾಜಕೀಯದಲ್ಲಿ ಬ್ಯುಸಿಯಾಗಿ ಬಿಟ್ಟಿದ್ದಾರೆ. ಸಿಎಂ ಬದಲಾವಣೆಯಿಂದ ಇಡೀ ಮಂತ್ರಿ ಮಂಡಲವೇ ಇಲ್ಲದಂತಾಗಿದೆ. ಮುಖ್ಯಮಂತ್ರಿಗಳು ಪ್ರಮಾಣ ವಚಣ ಸ್ವೀಕರಿಸಿದ್ರೂ ಸಚಿವರ ನೇಮಕವಾಗಿಲ್ಲ. ಇದೇ ಕಾರಣಕ್ಕೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವವರು ಇಲ್ಲದಂತಾಗಿದೆ ಬಿಟ್ಟಿದೆ.

ಬೆಂಗಳೂರಿನಲ್ಲಿಯೂ ಸೋಂಕಿನ ಸಂಖ್ಯೆ ದಿಢೀರ್‌ ಏರಿಕೆ!

ಕೇರಳ, ಮಹಾರಾಷ್ಟ್ರದಿಂದ ಸಮಸ್ಯೆ ಆಯ್ತಾ?

ಬೆಂಗಳೂರಿನಲ್ಲಿ ಒಂದು ವಾರದ ಹಿಂದೆ ದೈನಂದಿನ ಸಂಖ್ಯೆ 300 ರಿಂದ 400ರೊಳಗೆ ಬರ್ತಿತ್ತಯ. ಆದರೆ ಈ ವಾರ ಅದರ ಚಿತ್ರಣವೇ ಬದಲಾಗಿ ಬಿಟ್ಟಿದೆ. ಪ್ರತಿ ನಿತ್ಯ ಸೋಂಕಿತರ ಸಂಖ್ಯೆ 500 ಗಡಿ ದಾಟಿದೆ. ಇಲ್ಲಿಯವರೆಗೂ ನಿಶ್ಚಿಂತೆಯಲ್ಲಿದ್ದ ಬೆಂಗಳೂರಿನ ಜನಕ್ಕೆ ಈಗ ಮತ್ತೆ ಆತಂಕ ಆರಂಭವಾಗಿದೆ. ಇದಕ್ಕೆಲ್ಲ ವಲಸಿಗರೇ ಕಾರಣ ಎನ್ನಲಾಗುತ್ತಿದೆ. ಪ್ರತಿ ನಿತ್ಯ ಕೇರಳ ಮತ್ತು ಮಹಾರಾಷ್ಟ್ರಕ್ಕೆ ಸಂಚಾರ ಮಾಡುವ ಸಂಖ್ಯೆ ಇದೆ. ಅವರಿಂದಲೇ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರಬಹುದು ಎಂದು ಅಂದಾಜಿಸಲಾಗುತ್ತಿದೆ.

ಕಠಿಣ ನಿಯಮ ಜಾರಿಗೆ ಮುಂದಾದ ಬಿಬಿಎಂಪಿ..

ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್‌ ಟೆಸ್ಟ್‌ಗೆ ಸೂಚನೆ

ಒಂದು ವಾರದಿಂದ ಬೆಂಗಳೂರಿನ ಚಿತ್ರಣವೇ ಬದಲಾಗಿದೆ. ಹಂತಹಂತವಾಗಿ ದೈನಂದಿನ ಕೋವಿಡ್‌ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಇದು, ಬಿಬಿಎಂಪಿಯನ್ನು ನಿದ್ದೆಗೆಡಿಸಿದೆ. ಇದೇ ಕಾರಣಕ್ಕೆ ಕಠಿಣ ನಿಯಮ ಜಾರಿಗೆ ತರಲು ಬಿಬಿಎಂಪಿ ಮುಂದಾಗಿದೆ. ಈ ಬಗ್ಗೆ ಬಿಬಿಎಂಪಿ ಆಯುಕ್ತ ಗೌರವ್‌ ಗುಪ್ತಾ ಆರೋಗ್ಯಾಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಎರಡನೇ ಅಲೆಯ ಸಂದರ್ಭದಲ್ಲಿ ಕೈಕೊಂಡ ಕಠಿಣ ಕ್ರಮವನ್ನು ಮತ್ತೆ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಅಂದರೆ ಬಿಬಿಎಂಪಿಯ 8 ಝೋನ್‌ಗಳಲ್ಲಿಯೂ ಕೋವಿಡ್‌ ಟೆಸ್ಟ್‌ಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ನಡೆಸುವುದು, ಪ್ರೈಮರಿ ಮತ್ತು ಸೆಕೆಂಡರಿ ಕಾಂಟ್ಯಾಕ್ಟ್‌ ಟ್ರೆಸಿಂಗ್‌ ಹೆಚ್ಚಳಕ್ಕೆ ಕ್ರಮ, ಕೋವಿಡ್‌ ನಿಯಮ ಪಾಲಿಸದವರಿಗೆ ದಂಡ, ವ್ಯಾಕ್ಸಿನೇಷನ್‌ ಡ್ರೈವ್‌ ಹೆಚ್ಚಿಸುವುದು, ಕ್ಲಸ್ಟರ್‌ ಕೇಸ್‌ಗಳಿರುವ ಕಡೆ ಹೆಚ್ಚಿನ ಜಾಗೃತಿ ಕ್ರಮ ಕೈಗೊಳ್ಳುವುದು.

 

blank

ಹೌದು, ಬೆಂಗಳೂರು ನಗರದಲ್ಲಿ ಕೋವಿಡ್‌ ಸಂಖ್ಯೆ ಏರುತ್ತಿರುವಂತೆ ಬಿಬಿಎಂಪಿ ಅಧಿಕಾರಿಗಳ ನಿದ್ದೆಯೂ ಕೆಡುತ್ತಿದೆ. ಒಂದೆಡೆ ಆಯುಕ್ತರು ಸಭೆ ನಡೆಸಿ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಮತ್ತೊಂದೆಡೆ ಹೆಚ್ಚಿನ ಕೇಸ್‌ ದಾಖಲಾಗುತ್ತಿರುವ ವಾರ್ಡ್‌ಗಳ ಮೇಲೆ ಹದ್ದಿನ ಕಣ್ಣು ಇಡಲು ತಾಕೀತು ಮಾಡಲಾಗಿದೆ.

ಪ್ರಮುಖವಾಗಿ ನಗರ 10 ಝೋನ್‌ಗಳು ಡೇಂಜರ್‌ ಝೋನ್‌ಗಳಾಗಿ ಕಾಣಿಸಿಕೊಳ್ಳುತ್ತಿವೆ. ಅದರಲ್ಲಿ ಬೇಗೂರು-192 ವಾರ್ಡ್‌, ಹಗದೂರು-84ನೇ ವಾರ್ಡ್‌, ಹೊರಮಾವು-25ನೇ ವಾರ್ಡ್‌, ವರ್ತೂರು-149ನೇ ವಾರ್ಡ್‌, ಹೂಡಿ-54ನೇ ವಾರ್ಡ್‌, ಬೆಳ್ಳಂದೂರು-150ನೇ ವಾರ್ಡ್‌, ರಾಜರಾಜೇಶ್ವರಿ ನಗರ-160ನೇ ವಾರ್ಡ್‌, ಸಂಜಯ್‌ ನಗರ-19ನೇ ವಾರ್ಡ್‌, ಕಾಡುಗೋಡಿ-83ನೇ ವಾರ್ಡ್‌, ಉತ್ತರಹಳ್ಳಿ-184ನೇ ವಾರ್ಡ್‌ ಸೇರ್ಪಡೆಯಾಗಿವೆ.

ರಾಜ್ಯದಲ್ಲಿ ಇಲ್ಲಿಯವರೆಗೆ 29,01247 ಪಾಸಿಟಿವ್‌ ಕೇಸ್‌

ಒಟ್ಟು 36491 ಮಂದಿ ಸಾವು!

ಕಳೆದು ಒಂದೂವರೆ ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 29,01247 ಪಾಸಿಟಿವ್‌ ಪ್ರಕಣಗಳು ದಾಖಲಾಗಿವೆ. ಅದರಲ್ಲಿ 28,41479 ಮಂದಿ ಗುಣಮುಖರಾಗಿ ಡಿಸ್ಚಾರ್ಜ್‌ ಆಗಿದ್ದಾರೆ. ದುರಾದೃಷ್ಟವಶಾತ್‌ 36491 ಮಂದಿ ಸಾವನ್ನಪ್ಪಿದ್ದಾರೆ. ಈಗಲೂ 23253 ಸಕ್ರಿಯ ಪ್ರಕರಣ ಇವೆ. ಕಳೆದ ಒಂದು ವಾರದಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು ಭಯ ಹುಟ್ಟಿಸುತ್ತಿದೆ.

ಮೂರನೇ ಅಲೆ ಆರಂಭವಾಗಿ ಬಿಡ್ತಾ?

ಮೂರನೇ ಅಲೆ ಎದುರಿಸಲು ಸರ್ಕಾರ ಸಿದ್ಧವಾಗಿದೆಯಾ?

ಬೆಂಗಳೂರು ಮತ್ತು ರಾಜ್ಯದಲ್ಲಿ ಕೋವಿಡ್‌ ಕೇಸ್‌ಗಳ ಸಂಖ್ಯೆ ಏರಿಕೆಯಾಗಿರುವುದು ನೋಡಿದ್ರೆ ಮೂರನೇ ಅಲೇ ಆರಂಭವಾಗಿ ಬಿಡ್ತಾ ಅನ್ನೋ ಅನುಮಾನ ಬರುತ್ತೆ. ಆದ್ರೆ, ಸರ್ಕಾರ ಮೂರನೇ ಅಲೆಯನ್ನು ಎದುರಿಸಲು ಸಿದ್ಧವಾಗಿಯಾ ಅನ್ನುವ ಪ್ರಶ್ನೆ ಮೂಡುತ್ತಿದೆ. ಮೂರನೇ ಅಲೆಯಲ್ಲಿ ಅಷ್ಟೊಂದು ಸಮಸ್ಯೆಯಾಗದು ಅಂತ ತಜ್ಞರು ಹೇಳುತ್ತಾರೆ. ಸರ್ಕಾರ ಕೂಡ ಆಕ್ಸಿಜನ್‌ ಸೇರಿದಂತೆ ಅಗತ್ಯ ಪ್ರಮಾಣದಲ್ಲಿ ಸಿದ್ಧತೆ ಮಾಡಿಕೊಂಡಿದೆ ಅಂತ ಹೇಳಲಾಗುತ್ತಿದೆ. ಆದ್ರೆ, ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ ಅನ್ನುವುದರ ಮೇಲೆ ಮೂರನೇ ಅಲೆ ನಿಯಂತ್ರಣ ನಿಂತಿದೆ.

ಮೊದಲ ಡೋಸ್‌ ಮೂರು ಕೋಟಿ ಸನಿಹಕ್ಕೆ..

ಎರಡು ಡೋಸ್‌ ಪಡೆದವರ ಸಂಖ್ಯೆ ಕೇವಲ 62 ಲಕ್ಷ.

ವ್ಯಾಕ್ಸಿನೇಷನ್‌ ಡ್ರೈವ್‌ ಅನ್ನು ರಾಜ್ಯದಲ್ಲಿ ವೇಗವಾಗಿಯೇ ನಡೆಸಲಾಗುತ್ತಿದೆ. ಆದ್ರೆ, ಅದು ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ. ರಾಜ್ಯದಲ್ಲಿ ಸುಮಾರು 6.41 ಕೋಟಿ ಜನಸಂಖ್ಯೆ ಇದೆ. ಅದರಲ್ಲಿ ಇಲ್ಲಿಯವರೆಗೆ 2 ಕೋಟಿ 95 ಲಕ್ಷ ಮಂದಿಗೆ ಮಾತ್ರ ಮೊದಲ ಡೋಸ್‌ ನೀಡಲಾಗಿದೆ. ಇನ್ನು ಎರಡೂ ಡೋಸ್‌ ಪಡೆದವರ ಸಂಖ್ಯೆ ಕೇವಲ 62 ಲಕ್ಷ ಮಂದಿ ಮಾತ್ರ. ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸಬೇಕು ಅಂದ್ರೆ ವ್ಯಾಕ್ಸಿನೇಷನ್‌ ಡ್ರೈವ್‌ ಅನ್ನು ಇನ್ನಷ್ಟು ವೇಗವಾಗಿ ನಡೆಸುವ ಹೊಣೆ ರಾಜ್ಯ ಸರ್ಕಾರದ್ದಾಗಿದೆ.

blank

ರಾಜ್ಯದಲ್ಲಿ ದಿಢೀರ್‌ ಅಂತ ಕೋವಿಡ್‌ ದೈನಂದಿನ ಸಂಖ್ಯೆ ಏರಿಕೆಯಾಗಿರುವುದು ನೋಡಿದ್ರೆ ಮೂರನೇ ಅಲೆಯ ಆರಂಭದ ಸೂಚನೆ ಸಿಗುತ್ತಿದೆ. ಮೂರನೇ ಅಲೆ ಎದುರಿಸಲು ಸರ್ಕಾರ ಸರ್ವ ರೀತಿಯಲ್ಲಿಯೂ ಸಜ್ಜಾಗಬೇಕು. ಜನ ಕೂಡ ಕೋವಿಡ್‌ ನಿಯಮ ಪಾಲಿಸಬೇಕು ಜೊತೆಗೆ ವ್ಯಾಕ್ಸಿನ್‌ ಹಾಕಿಸಿಕೊಳ್ಳಬೇಕು.

The post ರಾಜ್ಯದಲ್ಲಿ ಮತ್ತೆ ಕೊರೊನಾ ಆತಂಕ; ಒಂದೇ ವಾರದಲ್ಲಿ ಶೇ.1.16ಕ್ಕೆ ಏರಿದ ಪಾಸಿಟಿವಿಟಿ ರೇಟ್‌ appeared first on News First Kannada.

Source: newsfirstlive.com

Source link