1 ಕೆಜಿ ದ್ರಾಕ್ಷಿ 145 ರೂ.ಗೆ ಮಾರಾಟ – ರೈತರಿಗೆ ಸಂತಸ

– ದಿಲ್ ಖುಷ್ ಕೆಜಿಗೆ 90 ರೂ. ಮಾರಾಟ

ಚಿಕ್ಕಬಳ್ಳಾಪುರ: ಕೊರೊನಾ ಲಾಕ್‍ಡೌನ್‍ಗೆ ಸಿಲುಕಿ ದ್ರಾಕ್ಷಿಗೆ ಸೂಕ್ತ ಬೆಲೆಯಿಲ್ಲದೆ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಬೆಳೆದ ದ್ರಾಕ್ಷಿ ಹಣ್ಣನ್ನು ತಿಪ್ಪೆಗುಂಡಿಗೆ ಸುರಿದು ಮಣ್ಣು ಪಾಲು ಮಾಡಿದ್ದರು. ಆದ್ರೆ ಈಗ ಲಾಕ್‍ಡೌನ್ ಸಡಿಲಿಕೆ ನಂತರ ಜನ ಜೀವನ ಯಥಾಸ್ಥಿತಿಗೆ ಮರಳುತ್ತಿದ್ದಂತೆ, 1 ಕೆಜಿ ದ್ರಾಕ್ಷಿ ಹಣ್ಣಿನ ಬೆಲೆ ಹೆಚ್ಚಾಗಿದೆ. ಇದರಿಂದ ದ್ರಾಕ್ಷಿ ಬೆಳೆದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಚಿಕ್ಕಬಳ್ಳಾಪುರ ಬರದನಾಡಾದ್ರೂ ಇಲ್ಲಿನ ರೈತರು ವಿನೂತನ ತಂತ್ರಜ್ಞಾನ ಹಾಗೂ ಬುದ್ದಿವಂತಿಕೆಯನ್ನು ಬಳಸಿಕೊಂಡು, ತರೇವಾರಿ ಹಣ್ಣು, ತರಕಾರಿ ಹೂ ಬೆಳೆಯುವುದರಲ್ಲಿ ದೇಶದಲ್ಲೇ ಹೆಸರುವಾಸಿ. ಇನ್ನೂ ದ್ರಾಕ್ಷಿ ಬೆಳೆದು ದೇಶ ವಿದೇಶಕ್ಕೆ ರಪ್ತು ಮಾಡುವುದರಲ್ಲಿ ಚಿಕ್ಕಬಳ್ಳಾಪುರ ರೈತರದ್ದು ಎತ್ತಿದ ಕೈ. ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲೆ ಬರೋಬ್ಬರಿ ಎರಡು ಸಾವಿರದ ಐನೂರು ಹೆಕ್ಟರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯುತ್ತಾರೆ. ಕಳೆದೊಂದು ವರ್ಷದಿಂದ ಕೊರೊನಾ ಲಾಕ್‍ಡೌನ್ ಗೆ ಸಿಲುಕಿಗೆ ಬೆಳೆದ ದ್ರಾಕ್ಷಿಗೆ ಸೂಕ್ತ ಬೆಲೆ ಸಿಗದೆ ದ್ರಾಕ್ಷಿಯನ್ನು ತಿಪ್ಪೆಗುಂಡಿಗೆ ಸುರಿಯುಂತಾಗಿತ್ತು.

ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗ್ರಾಮದ ರೈತ ಕೆ.ಆರ್.ರೆಡ್ಡಿ ಎಂಬುವವರು 5 ಎಕರೆ ಪ್ರದೇಶದದಲ್ಲಿ ರೆಡ್ ಗ್ಲೋಬ್ ತಳಿ ದ್ರಾಕ್ಷಿಯನ್ನು ಬೆಳೆದಿದ್ದು, ಈ ಬಾರಿ ಉತ್ತಮ ಇಳುವರಿ ಬಂದಿದೆ. ವರ್ತಕರು ತೋಟಕ್ಕೆ ಬಂದು 1 ಕೆ.ಜಿ ದ್ರಾಕ್ಷಿಗೆ 145 ರೂಪಾಯಿ ನೀಡಿ ಖರೀದಿಸುತ್ತಿದ್ದಾರೆ. 5 ಎಕರೆಯಲ್ಲಿ ಸರಿಸುಮಾರು 50 ಟನ್ ದ್ರಾಕ್ಷಿ ಬೆಳೆದಿದ್ದು, ರೈತನಿಗೆ ಲಕ್ಷಾಂತರ ರೂಪಾಯಿ ಹರಿದುಬಂದಿದೆ. ಇದರಿಂದ ರೈತ ಕೆ ಆರ್ ರೆಡ್ಡಿಯವರು ಸಂತಸಗೊಂಡಿದ್ದಾರೆ.

blank

ಕಳೆದ ಎರಡು ವರ್ಷಗಳಿದ ಉತ್ತಮ ಬೆಲೆ ಇಲ್ಲದೆ ನಷ್ಟ ಅನುಭವಿಸುವಂತಾಗಿತ್ತು. ಈ ಬಾರಿ ಕಂಡು ಕೇಳರಿಯದ ಬೆಲೆ ಸಿಕ್ಕಿದ್ದು ಸಾಕಷ್ಟು ಸಂತಸ ತಂದಿದೆ ಅಂತ ರೈತ ಕೆ ಆರ್ ರೆಡ್ಡಿ ಪಬ್ಲಿಕ್ ಟಿವಿ ಜೊತೆ ಸಂತಸ ಹಂಚಿಕೊಂಡಿದ್ದಾರೆ. ಇನ್ನೂ ರೆಡ್ ಗ್ಲೋಬ್ ದ್ರಾಕ್ಷಿ 145 ರೂಪಾಯಿ ಆದ್ರೆ ದಿಲ್ ಖುಷ್ ಬೆಲೆಯೂ ಸಹ ಹೆಚ್ಚಾಗಿದೆ. ಚಿಕ್ಕಬಳ್ಳಾಪುರ ತಾಲೂಕಿನ ಆಂಜನೇಯರೆಡ್ಡಿಯವರು ಸಹ ಎರಡು ಎಕರೆ ಪ್ರದೇಶದಲ್ಲಿ ದಿಲ್ ಕುಶ್ ದ್ರಾಕ್ಷಿ ಬೆಳೆದಿದ್ದು ಎರಡು ಎಕರೆಗೆ ಬರೋಬ್ಬರಿ ಸರಿಸುಮಾರು 40 ಟನ್ ದ್ರಾಕ್ಷಿ ಆಗೊ ನಿರೀಕ್ಷೆಯಿದೆ. ಈಗಾಗಲೇ ಮುಕ್ಕಾಲು ಭಾಗ ತೋಟವನ್ನು ವರ್ತಕರು ಕಟಾವು ಮಾಡಿದ್ದು ಕೆ.ಜಿ ಗೆ 90 ರೂಪಾಯಿ ಬೆಲೆಗೆ ಮಾರಾಟ ಮಾಡಿದ್ದಾರೆ.

blank

ಸದ್ಯ ಈಗ ದ್ರಾಕ್ಷಿ ಬೆಳೆಯಲು ಸಿಜನ್ ಅಲ್ಲ, ಅನ್ ಸೀಜನ್. ಸ್ವಾಭಾವಿಕವಾಗಿ ಈಗ ದ್ರಾಕ್ಷಿ ಬೆಳೆಯಲ್ಲ, ಆದ್ರೆ ಚಿಕ್ಕಬಳ್ಳಾಪುರದ ಕೆಲವು ಬುದ್ದಿವಂತ ರೈತರು, ತೋಟಗಾರಿಕೆ ಇಲಾಖೆ ಮಾರ್ಗದರ್ಶನದಲ್ಲಿ ಅಕಾಲಿಕವಾಗಿ ದ್ರಾಕ್ಷಿ ಫಸಲು ಬರುವ ಹಾಗೆ ತಂತ್ರಜ್ಞಾನ ಬಳಸಿಕೊಂಡು ದ್ರಾಕ್ಷಿ ಬೆಳೆದಿದ್ದಾರೆ. ಇದರಿಂದ ದ್ರಾಕ್ಷಿಗೆ ಬೆಲೆ ಬಂದಿದೆ ರೈತರಂತೂ ಸಖತ್ ಖುಷಿಯಾಗಿದ್ದಾರೆ. ಇನ್ನೂ ಈ ದ್ರಾಕ್ಷಿ ಈಶಾನ್ಯ ರಾಜ್ಯಗಳು ಸೇರಿ ನೆರೆಯ ದೇಶಗಳಾದ ನೇಪಾಳ, ಬಾಂಗ್ಲಾದೇಶ ಸೇರಿ ಇತರೆ ದೇಶಗಳಿಗೆ ರಫ್ತಾಗಲಿದೆ.

The post 1 ಕೆಜಿ ದ್ರಾಕ್ಷಿ 145 ರೂ.ಗೆ ಮಾರಾಟ – ರೈತರಿಗೆ ಸಂತಸ appeared first on Public TV.

Source: publictv.in

Source link