ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ: ಶಾಸಕ ಜ್ಯೋತಿಗಣೇಶ್

– ಯತ್ನಾಳ್ ಹೇಳಿಕೆಗೆ ಮೂರು ಕಾಸಿನ ಕಿಮ್ಮತ್ತು ಇಲ್ಲ

ತುಮಕೂರು: ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ನನಗೆ ಸಚಿವ ಸ್ಥಾನ ಬೇಡ ಎಂದು ತುಮಕೂರು ನಗರ ಬಿಜೆಪಿ ಶಾಸಕ ಜ್ಯೋತಿಗಣೇಶ್ ಹೇಳಿದ್ದಾರೆ.

ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಪಕ್ಷದಲ್ಲಿ ಸೇವೆ ಮಾಡಿದ ನೂರಾರು ಹಿರಿಯ ನಾಯಕರಿದ್ದಾರೆ. ಅಂಥವರನ್ನು ಗುರುತಿಸಿ ಪಕ್ಷ ಸಚಿವ ಸ್ಥಾನ ಕೊಡಲಿ, ಅಭಿಮಾನಿಗಳು ಯಾರೂ ನನ್ನ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಮಾಡಬಾರದು ಎಂದು ಮನವಿ ಮಾಡಿದ್ದಾರೆ.

ಜೆ.ಸಿ ಮಾಧುಸ್ವಾಮಿ ಉತ್ತಮ ಸಂಸದೀಯ ಪಟು, ಮಾಧುಸ್ವಾಮಿ, ಬಿ.ಸಿ ನಾಗೇಶ್ ಜಿಲ್ಲೆಯಲ್ಲಿ ಹಿರಿಯರಿದ್ದಾರೆ. ಅವರಿಗೆ ಸಚಿವ ಸ್ಥಾನ ಕೊಡಬೇಕು ಎಂದರು. ಇದೇ ವೇಳೆ ಬಸವರಾಜ್ ಯತ್ನಾಳ್ ಬಗ್ಗೆ ಮಾತನಾಡಿದ ಜ್ಯೋತಿಗಣೇಶ್, ಯತ್ನಾಳ್ ಗೆ ಬುದ್ಧಿ ಭ್ರಮಣೆಯಾಗಿದೆ. ಹಾಗಾಗಿ ಅವರು ಯಡಿಯೂರಪ್ಪರ ಬಗ್ಗೆ ಪದೇ ಪದೇ ಅವಹೇಳನಕಾರಿಯಾಗಿ ಮಾತನಾಡುತ್ತಾರೆ ಎಂದು ಕಿಡಿಕಾರಿದ್ದಾರೆ.

ಯತ್ನಾಳ್ ಹೇಳಿಕೆ ಅವರಿಗೆ ಶೋಭೆ ತರುವಂಥದಲ್ಲ. 2016-2017 ರ ಹೊತ್ತಲ್ಲಿ ಇದೇ ಯತ್ನಾಳ್ ಯಡಿಯೂರಪ್ಪ ಇಲ್ಲದೇ ಇದ್ದರೆ, ಬಿಜೆಪಿಗೆ 3 ಸ್ಥಾನನೂ ಬರುವುದಿಲ್ಲ ಎಂದಿದ್ದರು. ಈಗ ಅವರ ವಿರುದ್ಧ ಮಾತನಾಡುತ್ತಾರೆ. ಯತ್ನಾಳ್ ಹೇಳಿಕೆಗೆ ಮೂರು ಕಾಸಿನ ಕಿಮ್ಮತ್ತು ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಹೊಸ ಬಾಂಬ್ ಸಿಡಿಸಿದ ಯತ್ನಾಳ್

The post ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ: ಶಾಸಕ ಜ್ಯೋತಿಗಣೇಶ್ appeared first on Public TV.

Source: publictv.in

Source link