ಪಾಸಿಟಿವಿಟಿ ಹೆಚ್ಚಿರುವ ಕಡೆ ಮತ್ತೆ ಕಠಿಣ ನಿರ್ಬಂಧ -ಟಾಪ್ 10 ಸುದ್ದಿಗಳ ಕ್ವಿಕ್ ರೌಂಡ್​ಅಪ್

ಪಾಸಿಟಿವಿಟಿ ಹೆಚ್ಚಿರುವ ಕಡೆ ಮತ್ತೆ ಕಠಿಣ ನಿರ್ಬಂಧ -ಟಾಪ್ 10 ಸುದ್ದಿಗಳ ಕ್ವಿಕ್ ರೌಂಡ್​ಅಪ್

ಶಾಶ್ವತ ಪರಿಹಾರಕ್ಕಾಗಿ ಗ್ರಾಮಸ್ಥರ ಮನವಿ
ಭಾರೀ ಮಳೆಯಿಂದಾಗಿ ಬಾಗಲಕೋಟೆ ತತ್ತರಿಸಿಹೋಗಿದ್ದು, ಪ್ರವಾಹ ಸಂತ್ರಸ್ತರು ದಿಢೀರ್ ಪ್ರತಿಭಟನೆ ಮುಂದಾಗಿದ್ದಾರೆ. ಕೃಷ್ಣಾ ಪ್ರವಾಹಕ್ಕೆ ಜಲಾವೃತಗೊಂಡ ತಮದಡ್ಡಿ ಗ್ರಾಮದ ಜನರು ಪುನರ್ ವಸತಿ ಕೇಂದ್ರಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಜಮಖಂಡಿ-ಕಾಗವಾಡ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ರು. ಪ್ರತಿಬಾರಿಯೂ ಪ್ರವಾಹ ಬಂದರೆ ಇದೇ ಪರಿಸ್ಥಿತಿ. ಹೀಗಾಗಿ ಶಾಶ್ವತ ಪರಿಹಾರ ಕಲ್ಪಿಸಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ರು. ಹಳಿಂಗಳಿ ಗುಡ್ಡದಲ್ಲಿ 89 ಎಕರೆ ಪುನರ್ ವಸತಿ ಕೇಂದ್ರಕ್ಕೆ ಜಾಗ ಗುರುತಿಸಿದ್ದು, ಈವರೆಗೂ ಹಕ್ಕುಪತ್ರ ಕೊಟ್ಟಿಲ್ಲ ಅಂತಾ ಆರೋಪಿಸಿದ್ರು.

ಒಟ್ಟು 45 ಕೇಸ್ ದಾಖಲಿಸಿದ ಸಿಸಿಬಿ
ಬೆಂಗಳೂರಿನಲ್ಲಿ ಅಕ್ರಮ ಚಟುವಟಿಕೆಗಳ ಮೇಲೆ ಸಿಸಿಬಿ ಅಧಿಕಾರಿಗಳು ಹದ್ದಿನಕಣ್ಣಿಟ್ಟಿದ್ದಾರೆ. ಕಳೆದ ಒಂದು ತಿಂಗಳಿನಿಂದ ಸಿಸಿಬಿ ಅಧಿಕಾರಿಗಳು ಒಟ್ಟು 45 ಕೇಸ್ ದಾಖಲಿಸಿದ್ದಾರೆ. 20 ಜೂಜಾಟ, 25 ವೇಶ್ಯಾವಾಟಿಕೆ ಸೇರಿ ಒಟ್ಟು 45 ಕೇಸ್ ದಾಖಲು ಮಾಡಿದ್ದಾರೆ. ಅಲ್ಲದೆ ಒಟ್ಟು 291 ಆರೋಪಿಗಳ ಬಂಧಿಸಿದ್ದು, 91 ಮಹಿಳೆಯರನ್ನು ಸಿಸಿಬಿ ಪೊಲೀಸರು ರಕ್ಷಿಸಿದ್ದಾರೆ.

ಕೇರಳದಲ್ಲಿ ಮತ್ತೆ 2 ಝೀಕಾ ವೈರಸ್​ ಪತ್ತೆ
ಕೇರಳ ರಾಜ್ಯದಲ್ಲಿ ಇನ್ನೂ ಇಬ್ಬರು ಮಂದಿಯಲ್ಲಿ ಝೀಕಾ ವೈರಸ್​ ದೃಢಪಟ್ಟಿದೆ ಅಂತಾ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್​ ಮಾಹಿತಿ ನೀಡಿದ್ದಾರೆ. ಸದ್ಯ ಕೇರಳ ರಾಜ್ಯದಲ್ಲಿ ಕೊರೊನಾ ಕೇಸ್​​ಗಳ ಗಣನೀಯವಾಗಿ ಏರಿಕೆ ಕಂಡಿದ್ದು, ಇದರ ನಡುವೆಯೇ ಝೀಕಾ ವೈರಸ್​​ನ ಹಾವಳಿಯು ಕೇರಳ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ಇನ್ನು ಕೇರಳದಲ್ಲಿ ಝೀಕಾ ವೈರಸ್​ ಸೋಂಕು ಪತ್ತೆಯಾದವರ ಸಂಖ್ಯೆ 63 ಅಂತಾ ಹೇಳಲಾಗಿದ್ದು, ಪ್ರಸ್ತುತ 3 ಸಕ್ರಿಯ ಪ್ರಕರಣಗಳಿವೆ.

ಮಹಾರಾಷ್ಟ್ರಕ್ಕೂ ಲಗ್ಗೆಯಿಟ್ಟ ಝೀಕಾ ವೈರಸ್​​
ಕೇರಳದಲ್ಲಿ ಅಟ್ಟಹಾಸ ಮೆರೆದಿದ್ದ ಝೀಕಾ ವೈರಸ್​​ ಈಗ ಮಹಾರಾಷ್ಟ್ರಕ್ಕೂ ಕಾಲಿಟ್ಟಿದೆ. ಪುಣೆ ಜಿಲ್ಲೆಯು ಪುರಂದರ್​ ತಾಲೂಕಿನ ಬೆಲ್ಸರ್​ ಗ್ರಾಮದ 50 ವರ್ಷದ ಮಹಿಳೆಯಲ್ಲಿ ಈ ಝೀಕಾ ವೈರಸ್​ ಪತ್ತೆಯಾಗಿದೆ. ಕಳೆದ ಒಂದು ತಿಂಗಳಿನಿಂದ ಜ್ವರದಿಂದ ಬಳಲುತ್ತಿದ್ದ ಮಹಿಳೆಯ ಸ್ಯಾಂಪಲ್​​ ಅನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಿಕೊಡಲಾಗಿತ್ತು. ಪರೀಕ್ಷೆಯಲ್ಲಿ ಝೀಕಾ ವೈರಸ್​ ಇರುವುದು ಪತ್ತೆಯಾಗಿದೆ. ಇನ್ನು ಸೋಂಕಿತ ಮಹಿಳೆಯ ಕುಟುಂಬ ಸದಸ್ಯರಿಗೆ ಯಾವುದೇ ರೋಗ ಲಕ್ಷಣ ಕಂಡುಬಂದಿಲ್ಲ ಎಂದು ತಿಳಿದುಬಂದಿದೆ.

‘ಪಾಸಿಟಿವಿಟಿ ಹೆಚ್ಚಿರುವ ಕಡೆ ಕಠಿಣ ನಿರ್ಬಂಧ ಹೇರಿ’
ದೇಶದ 46 ಜಿಲ್ಲೆಗಳಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇಕಡ 10 ರಷ್ಟಿದ್ದು, ಈ ಪ್ರದೇಶಗಳಲ್ಲಿ ಕಠಿಣ ನಿರ್ಬಂಧಗಳನ್ನು ವಿಧಿಸುವಂತೆ ಕೇಂದ್ರ ಸರ್ಕಾರ ಸಲಹೆ ನೀಡಿದೆ. ಕೊರೊನಾ ಪಾಸಿಟಿವಿಟಿ ದರ ಏರಿಕೆಯಾಗುತ್ತಿರುವ 10 ರಾಜ್ಯಗಳ ಕೇಂದ್ರಿತ ಪರಿಶೀಲನೆ ಸಭೆ ಬಳಿಕ ಈ ನಿರ್ದೇಶನವನ್ನು ಕೇಂದ್ರ ಸರ್ಕಾರ ನೀಡಿದೆ. ಇನ್ನು ಕೇರಳ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಒಡಿಶಾ, ಮಿಜೊರಾಮ್, ಅಸ್ಸಾಂ, ಮೇಘಾಲಯ, ಆಂಧ್ರಪ್ರದೇಶ ಹಾಗೂ ಮಣಿಪುರಗಳಲ್ಲಿ ಶೇಕಡ 80 ರಷ್ಟು ಸಕ್ರಿಯ ಪ್ರಕರಣಗಳಿವೆ. ಅಲ್ಲದೆ 53 ಜಿಲ್ಲೆಗಳಲ್ಲಿ ಶೇ.5-10 ರಷ್ಟು ಪಾಸಿಟಿವಿಟಿ ವರದಿಯಾಗುತ್ತಿದ್ದು, ಕೊರೊನಾ ನಿಯಂತ್ರಣದಲ್ಲಿಲ್ಲ ಅಂತಾ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಕೇಂದ್ರ ಸರ್ಕಾರದಿಂದ 48.78 ಕೋಟಿ ಲಸಿಕೆ ವಿತರಣೆ
ದೇಶದಲ್ಲಿ ಈವರೆಗೆ 48.78 ಕೋಟಿ ಡೋಸ್ ಕೊರೊನಾ ಲಸಿಕೆ ವಿತರಿಸಲಾಗಿದೆ ಅಂತಾ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ. ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 46 ಕೋಟಿ 15 ಲಕ್ಷದ 18 ಸಾವಿರದ 479 ಮಂದಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ತಿಳಿಸಿದೆ. ಅಲ್ಲದೆ ಭಾವಚಿತ್ರವುಳ್ಳ ಗುರುತಿನ ಚೀಟಿ ದಾಖಲೆ ಇಲ್ಲದ ಜನರಿಗೆ ಕೋವಿನ್ ಅಪ್ಲಿಕೇಷನ್ ಮೂಲಕ ಲಸಿಕೆ ನೀಡಲಾಗಿದೆ ಅಂತಾ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವೆ ಭಾರತಿ ಪವಾರ್ ತಿಳಿಸಿದ್ದಾರೆ.

₹133 ಕೋಟಿಗೂ ಹೆಚ್ಚು ತೆರಿಗೆ ಹಣ ಪೋಲು
ಪೆಗಾಸಸ್ ಬೇಹುಗಾರಿಕೆ ಹಗರಣ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಮತ್ತು ಪ್ರತಿಪಕ್ಷಗಳ ನಡುವೆ ಉಂಟಾಗಿರುವ ಬಿಕ್ಕಟ್ಟು ಶಮನಗೊಳ್ಳುವ ಲಕ್ಷಣ ಕಾಣ್ತಿಲ್ಲ. ಈ ನಡುವೆ ಕಲಾಪದ ವ್ಯತ್ಯಯಗಳಿಂದಾಗಿ 133 ಕೋಟಿ ರೂಪಾಯಿಗೂ ಹೆಚ್ಚು ತೆರಿಗೆ ಹಣ ಪೋಲಾಗಿದೆ ಅಂತಾ ಸರ್ಕಾರದ ಮೂಲಗಳು ಮಾಹಿತಿ ನೀಡಿವೆ. ಜು.19ರಂದು ಸಂಸತ್ತು ಸಮಾವೇಶಗೊಂಡಾಗಿನಿಂದ ಪೆಗಾಸಸ್ ಹಗರಣದ ಕುರಿತು ಚರ್ಚೆ ಮತ್ತು ಸರ್ವೋಚ್ಚ ನ್ಯಾಯಾಲಯದ ಹಾಲಿ ಅಥವಾ ಮಾಜಿ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ತನಿಖೆಗೆ ಪ್ರತಿಪಕ್ಷಗಳು ಆಗ್ರಹಿಸುತ್ತಿವೆ.

ನಾಳೆಯಿಂದ ಪಂಜಾಬ್‌ನ ಶಾಲಾ-ಕಾಲೇಜು ಆರಂಭ
ಪಂಜಾಬ್​ ರಾಜ್ಯದಲ್ಲಿ ಕೊರೊನಾ ಕಂಟ್ರೋಲ್​ಗೆ ಬಂದ ಕಾರಣ ಶಾಲಾ- ಕಾಲೇಜುಗಳನ್ನು ಆರಂಭಿಸಲು ತಯಾರಿ ನಡೆಸಿದೆ. ಹೀಗಾಗಿ ನಾಳೆಯಿಂದ ರಾಜ್ಯದಲ್ಲಿ ಎಲ್ಲಾ ಶಾಲಾ ಕಾಲೇಜುಗಳಲ್ಲಿ ತರಗತಿಗಳನ್ನ ನಡೆಸುವುದಾಗಿ ಪಂಜಾಬ್​ ಸರ್ಕಾರ ಆದೇಶ ಹೊರಡಿಸಿದೆ. ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಿ ತರಗತಿಗಳನ್ನು ನಡೆಸಬೇಕು ಅಂತಾ ಶಿಕ್ಷಣ ಇಲಾಖೆ ಎಲ್ಲಾ ಶಾಲಾ – ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.

ಹರಾಜಿಗೆ ಸಜ್ಜಾಯ್ತು 40 ವರ್ಷಗಳ ಹಳೆಯ ಕೇಕ್​
ಸಾಮಾನ್ಯವಾಗಿ ಕೇಕ್​ನಂತಹ ಸಿಹಿತಿಂಡಿಗಳನ್ನ ದೀರ್ಘಕಾಲದವರೆಗೆ ಸಂಗ್ರಹ ಮಾಡೋಕೆ ಸಾಧ್ಯವಿಲ್ಲ, ಆದ್ರೆ, ಬ್ರಿಟನ್‌ನ ರಾಜಕುಮಾರ ಚಾರ್ಲ್ಸ್ ಮತ್ತು ರಾಜಕುಮಾರಿ ಡಯಾನಾ ಮದುವೆಯಲ್ಲಿ ಕತ್ತರಿಸಲಾಗಿದ್ದ ಕೇಕ್​ನ ತುಣುಕೊಂದು 40 ವರ್ಷಗಳ ನಂತರ ಹರಾಜಿಗೆ ಸಜ್ಜಾಗಿ ನಿಂತಿದೆ. 1981ರಲ್ಲಿ ಮದುವೆಯಲ್ಲಿ ಮೋಯಿರಾ ಸ್ಮಿತ್‌ ಎನ್ನುವವರಿಗೆ ಡಯಾನ ಕೇಕ್​ ಪೀಸ್​ ನೀಡಿದ್ರು. ಬಳಿಕ ಆಕೆ ಅದನ್ನ ಸಂಗ್ರಹಿಸಿ 2008ರಲ್ಲಿ ಮತ್ತೊಬ್ಬರಿಗೆ ಮಾರಾಟ ಮಾಡಿದ್ರು. ಸದ್ಯ ಈ ಕೇಕ್​ ಪೀಸ್‌ ಅನ್ನು ಆಗಸ್ಟ್​ 11 ರಂದು ಹರಾಜು ಮಾಡಲಾಗುತ್ತಿದ್ದು, ನೂರು ಡಾಲರ್​ಗೆ ಹರಾಜಾಗುವ ಸಾಧ್ಯತೆ ಇದೆ.

ತೆರೆ ಮೇಲೆ ಬರಲಿದೆ ‘ಚಾನು’ ಜೀವನಾಧಾರಿತ ಸಿನಿಮಾ
ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು ಅವರ ಜೀವನಾಧಾರಿತ ಮಣಿಪುರಿ ಚಿತ್ರ ನಿರ್ಮಾಣವಾಗಲಿದೆ. ಚಿತ್ರದ ಕುರಿತ ಒಪ್ಪಂದಕ್ಕೆ ಚಾನು ಕಡೆಯವರು ಮತ್ತು ಇಂಫಾಲ್ ಮೂಲದ ‘ಸ್ಯೂಟಿ ಫಿಲ್ಮ್ಸ್ ಪ್ರೊಡಕ್ಷನ್’ ಸಂಸ್ಥೆಯವರು ಸಹಿ ಮಾಡಿದ್ದಾರೆ. ಇಂಫಾಲ್ ಪೂರ್ವ ಜಿಲ್ಲೆಯ ನೋಂಗ್‌ಪೋಕ್ ಕಾಕ್ಚಿಂಗ್ ಹಳ್ಳಿಯಲ್ಲಿರುವ ಚಾನು ನಿವಾಸದಲ್ಲಿ ಈ ಒಪ್ಪಂದ ಏರ್ಪಟ್ಟಿದೆ ಅಂತಾ ಚಿತ್ರ ನಿರ್ಮಾಣ ಕಂಪನಿ ಮುಖ್ಯಸ್ಥ ಮನೋಬಿ ಎಂ. ಎಂ. ತಿಳಿಸಿದ್ದಾರೆ. ಇನ್ನು ಈ ಚಿತ್ರವು ಇಂಗ್ಲಿಷ್‌ ಮತ್ತು ಭಾರತದ ಇತರ ಭಾಷೆಗಳಿಗೆ ಡಬ್‌ ಆಗಲಿದೆ ಅಂತಾನೂ ತಿಳಿಸಿದ್ದಾರೆ.

Source: newsfirstlive.com Source link