ಟರ್ಕಿಯಲ್ಲಿ ಇನ್ನೂ ನಿಯಂತ್ರಣಕ್ಕೆ ಬಾರದ ರಣರಕ್ಕಸ ಕಾಡ್ಗಿಚ್ಚು.. ಗ್ರಾಮಗಳಲ್ಲಿ ಬೀಳ್ತಿದೆ ಬೂದಿಯ ಮಳೆ!

ಟರ್ಕಿಯಲ್ಲಿ ಇನ್ನೂ ನಿಯಂತ್ರಣಕ್ಕೆ ಬಾರದ ರಣರಕ್ಕಸ ಕಾಡ್ಗಿಚ್ಚು.. ಗ್ರಾಮಗಳಲ್ಲಿ ಬೀಳ್ತಿದೆ ಬೂದಿಯ ಮಳೆ!

ಚಿಕ್ಕಪುಟ್ಟ ಅರಣ್ಯಕ್ಕೆ ಕಾಡ್ಗಿಚ್ಚು ಬಿದ್ದರೆ ಅಗ್ನಿ ಶಾಮಕ ದಳದವರು ನಂದಿಸುತ್ತಾರೆ. ಇನ್ನು ಸ್ವಲ ಜಾಸ್ತಿ ಕಾಡ್ಗಿಚ್ಚು ವ್ಯಾಪಿಸಿದ್ರೆ ಹೆಲಿಕಾಪ್ಟರ್‌ ಬಳಸಿ, ವಿಮಾನ ಬಳಸಿ ನಂದಿಸುತ್ತಾರೆ. ಆದ್ರೆ, ಅದ್ಯಾವುದರಿಂದಲೂ ನಂದಿಸಲಾಗದ ರಣಭೀಕರ ಕಾಡ್ಗಿಚ್ಚು ಟರ್ಕಿಯಲ್ಲಿ ಕಾಣಿಸಿಕೊಂಡಿದೆ.

ನಮ್ಮ ರಾಜ್ಯದ ಕಪ್ಪತಗುಡ್ಡ, ಬಂಡೀಪುರ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಆಗಾಗ ಕಾಣಿಸಿಕೊಳ್ಳುವುದನ್ನು ನೋಡಿದ್ದೇವೆ. ಪ್ರಾಣಿ, ಪಕ್ಷಿಗಳು ಜೀವಕಳೆದುಕೊಂಡಿದ್ದನ್ನು ನೋಡಿದ್ದೇವೆ. ಜೀವ ಉಳಿಸಿಕೊಳ್ಳಲು ಪ್ರಾಣಿಗಳು ದಿಕ್ಕೇ ತೋಚದೆ ಓಡಿದ್ದನ್ನು ನೋಡಿದ್ದೇವೆ. ಆದ್ರೆ, ಅದನ್ನು ಅಗ್ನಿ ಶಾಮಕ ದಳದವರು ಯಶಸ್ವಿಯಾಗಿ ನಂದಿಸಿದ್ದಾರೆ. ಆ ಮೂಲಕ ಹೆಚ್ಚಿನ ಅರಣ್ಯ ನಾಶವಾಗದಂತೆ, ಜನವಸತಿ ಪ್ರದೇಶದತ್ತ ಕಾಡ್ಗಿಚ್ಚು ವ್ಯಾಪಿಸದಂತೆ ತಡೆದಿದ್ದಾರೆ. ಆದ್ರೆ, ಈಗ ನಾವು ಹೇಳ್ತಾ ಇರೋದು ಸಾಮಾನ್ಯ ಕಾಡ್ಗಿಚ್ಚಿನ ಬಗ್ಗೆ ಅಲ್ಲ.

ಒಂದು ವಾರದ ಹಿಂದೆಯೇ ಟರ್ಕಿಯಲ್ಲಿ ಕಾಡ್ಗಿಚ್ಚು
ಪ್ರತಿ ದಿನ ಹೆಚ್ಚುತ್ತಾ ಹೋದ ಕಾಡ್ಗಿಚ್ಚು

ಟರ್ಕಿಯ ದಕ್ಷಿಣ ಕರಾವಳಿ ಪ್ರದೇಶದ ಅರಣ್ಯದಲ್ಲಿ ಒಂದು ವಾರದ ಹಿಂದೆಯೇ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ಆದರೆ ಅದೇನು ಅಷ್ಟು ಭೀಕರವಾಗಿ ಇರಲಿಲ್ಲ. ಕಾಡ್ಗಿಚ್ಚು ಕಾಣಿಸಿಕೊಂಡ ಅರಣ್ಯದ ಅಕ್ಕಪಕ್ಕದ ಗ್ರಾಮಸ್ಥರು ನೆಮ್ಮದಿಯಾಗಿಯೇ ಇದ್ರು. ಆದಷ್ಟು ಬೇಗ ಕಾಡ್ಗಿಚ್ಚು ನಂದಲಿ, ಪ್ರಾಣಿ ಪಕ್ಷಿಗಳ ರಕ್ಷಣೆಯಾಗಲಿ ಅಂತ ಅಂದುಕೊಳ್ತಿದ್ರು. ಅಗ್ನಿ ಶಾಮಕ ದಳದವರು ಬೆಂಕಿ ನಂದಿಸುವಲ್ಲಿ ನಿರತರಾಗಿದ್ರು. ಆದ್ರೆ, ದಿನಕಳೆದಂತೆ ಆಗಿದ್ದೇ ಬೇರೆ. ಒಂದು ಕಡೆ ಬೆಂಕಿ ನಂದಿಸುತ್ತಿದ್ದಂತೆ ಮತ್ತೊಂದು ಕಡೆ ಬೆಂಕಿ ಆವರಿಸಿಕೊಂಡು ಬಿಟ್ಟಿದೆ.

blank

300 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಕಾಡ್ಗಿಚ್ಚು
ನೂರಾರು ಪ್ರಾಣಿಗಳ ಮಾರಣ ಹೋಮ
25ಕ್ಕೂ ಹೆಚ್ಚು ಗ್ರಾಮಗಳಲ್ಲಿ ವ್ಯಾಪಿಸಿದ ಕಾಡ್ಗಿಚ್ಚು

ಹೌದು, ಒಂದು ವಾರದ ಹಿಂದೆ ಆರಂಭವಾದ ಕಾಡ್ಗಿಚ್ಚು ಭೀಕರವಾಗಿ ಆವರಿಸಿಕೊಂಡು ಬಿಟ್ಟಿದೆ. ಲಕ್ಷಾಂತರ ಮರ ಗಿಡಗಳು ಬೆಂಕಿಗೆ ಭಸ್ಮವಾಗಿವೆ. ತಮ್ಮ ಪಾಡಿಗೆ ತಾವು ಇದ್ದ ಪ್ರಾಣಿ ಪಕ್ಷಿಗಳು ಮಾರಣ ಹೋಮವಾಗಿವೆ. ಒಂದು ಅಂದಾಜಿನ ಪ್ರಕಾರ ನೂರಕ್ಕೂ ಹೆಚ್ಚು ಕಾಡು ಪ್ರಾಣಿಗಳು ಸಜೀವ ದಹನವಾಗಿರೋ ಸಾಧ್ಯತೆ ಇದೆ. ಬೆಂಕಿಯ ಕೆನ್ನಾಲಿಗೆ ಆಕಾಶದೆತ್ತರಕ್ಕೆ ಹೋಗುತ್ತಿದೆ. ಕೆಲವು ಕಡೆ ಇಡೀ ಅರಣ್ಯ ಪ್ರದೇಶದಲ್ಲಿಯೇ ಹೊಗೆ ಆವರಿಸಿಕೊಂಡು ಬಿಟ್ಟಿದೆ. ಮೆಡಿಟೆರೇನಿಯನ್‌, ಏಜಿಯನ್‌, ಮಾನ್ವಗತ್‌, ಅಕ್ಸೇಕಿ.. ಸೇರಿದಂತೆ ವಿವಿಧೆಡೆ ಕಾಡ್ಗಿಚ್ಚು ಭೀಕರವಾಗಿದೆ. ಸುಮಾರು 25ಕ್ಕೂ ಹೆಚ್ಚು ಗ್ರಾಮಗಳಲ್ಲಿ ವ್ಯಾಪಿಸಿಕೊಂಡು ಬಿಟ್ಟಿದೆ.

ಜನವಸತಿ ಪ್ರದೇಶಕ್ಕೂ ವ್ಯಾಪಿಸಿದ ಕಾಡ್ಗಿಚ್ಚು
ನೂರಾರು ಮನೆಗಳು ಭಸ್ಮ, ನಾಲ್ಕು ಜನ ಸಾವು
200ಕ್ಕೂ ಅಧಿಕ ಮಂದಿಗೆ ಗಾಯ

ದಟ್ಟ ಅರಣ್ಯದಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚು ಅರಣ್ಯದಂಚಿನಲ್ಲಿರೋ ಗ್ರಾಮಗಳಿಗೂ ವ್ಯಾಪಿಸಿದೆ. ಇದರ ಪರಿಣಾಮ ನೂರಾರು ಮನೆಗಳು ಸುಟ್ಟು ಭಸ್ಮವಾಗಿವೆ. ತಮ್ಮ ಜೀವ ಉಳಿಸಿಕೊಳ್ಳಲು ಜನ ಎದ್ನೋ ಬಿದ್ನೋ ಅಂತ ಓಡಿದ್ದಾರೆ. ಸಾಕು ಪ್ರಾಣಿಗಳು ಮಾತ್ರ ಅತಂತ್ರ ಸ್ಥಿತಿಯಲ್ಲಿವೆ. ಮೂಕ ಪ್ರಾಣಿಗಳ ವೇದನೆ ಯಾರಿಗೂ ಕೇಳಿಸುತ್ತಿಲ್ಲ. ಕೆಲವು ಪ್ರದೇಶಗಳಲ್ಲಿ ರಾತ್ರಿ ವೇಳೆ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ನೆಮ್ಮದಿಯಿಂದ ನಿದ್ದೆಗೆ ಹೋಗಿದ್ದ ಜನ ರಾತ್ರಿ ವೇಳೆ ಬೆಂಕಿ ಕಂಡು ಹೌಹಾರಿದ್ದಾರೆ.

ಇಲ್ಲೇ ಇದ್ದರೆ ತಮ್ಮ ಜೀವ ಹೋಗುವುದು ಗ್ಯಾರಂಟಿ ಅಂತ ರಾತ್ರೋರಾತ್ರಿ ಕಾಲ್ಕಿತ್ತಿದ್ದಾರೆ. ಕೆಲವರು ತಮ್ಮ ಸಾಕು ಪ್ರಾಣಿಗಳನ್ನು ಜೊತೆಗೆ ಕರೆದುಕೊಂಡು ಹೋಗಿದ್ದಾರೆ. ಇನ್ನು ಕೆಲವು ತಮ್ಮ ಸಾಕು ಪ್ರಾಣಿಗಳನ್ನು ತೆಗೆದುಕೊಂಡು ಹೋಗಲಾಗದೇ ದುಃಖಿಸುತ್ತಿದ್ದಾರೆ. ಒಂದು ವಾರದ ಅವಧಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

25ಕ್ಕೂ ಹೆಚ್ಚು ಗ್ರಾಮಗಳಲ್ಲಿ ಜನರ ಸ್ಥಳಾಂತರ
ಗ್ರಾಮಗಳಲ್ಲಿ ಬೀಳುತ್ತಿದೆ ಬೂದಿಯ ಮಳೆ

ಕಾಡ್ಗಿಚ್ಚಿನ ಭೀಕರತೆ ಹೇಗಿದೆ ಅಂದ್ರೆ, ಅರಣ್ಯ ಪ್ರದೇಶದಂಚಿನಲ್ಲಿರೋ ಗ್ರಾಮಗಳಲ್ಲಿ ಬೂದಿಯ ಮಳೆ ಬೀಳುತ್ತಿದೆ. ಇಲ್ಲಿಯವರೆಗೆ ಮಳೆಯನ್ನು ನೋಡಿರದ ಗ್ರಾಮಸ್ಥರು ಇದೇ ಮೊದಲ ಬಾರಿಗೆ ಬೂದಿಯ ಮಳೆ ನೋಡುತ್ತಿದ್ದಾರೆ. ಏನು ಮಾಡಬೇಕು ಅಂತ ದಿಕ್ಕು ತೊಚದೇ ಜೀವ ಉಳಿಸಿಕೊಳ್ಳಲು ಓಡಿದ್ದಾರೆ. ಗ್ರಾಮದ ತುಂಬಾ ಹೊಗೆ ಆವರಿಸಿಕೊಂಡು ಬಿಟ್ಟಿದೆ. ಯಾರಾದ್ರೂ ಇದ್ರೆ ಉಸಿರುಕಟ್ಟಿ ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಮೂಕ ಪ್ರಾಣಿಗಳ ಕಥೆ ಹೇಳೋದೆ ಬೇಡ.

ಹೋಟೆಲ್‌ಗಳಲ್ಲಿ ಸಿಕ್ಕಿಕೊಂಡಿದ್ದಾರೆ ಪ್ರವಾಸಿಗರು
100ಕ್ಕೂ ಅಧಿಕ ರಷ್ಯಾ ಪ್ರವಾಸಿಗರ ರಕ್ಷಣೆ

ಟರ್ಕಿಯ ದಕ್ಷಿಣ ಕರಾವಳಿ ಮತ್ತು ಇಲ್ಲಿಯ ಅಕ್ಕಪಕ್ಕದ ಸ್ಥಳಗಳು ಪ್ರವಾಸಿಗರಿಗೆ ಸ್ವರ್ಗ ಇದ್ದಂತೆ. ಹೀಗಾಗಿ ಟರ್ಕಿ ಪ್ರವಾಸಕ್ಕೆ ಹೋಗುವ ಪ್ರವಾಸಿಗರು ದಕ್ಷಿಣ ಕರಾವಳಿ ಪ್ರದೇಶಕ್ಕೂ ಹೋಗುತ್ತಾರೆ. ಅಲ್ಲಿಯ ಸುಂದರ ಪರಸರ, ಕರಾವಳಿ ಪ್ರದೇಶವನ್ನು ನೋಡಿ ಮೈಮರೆಯುತ್ತಾರೆ.

ಆದ್ರೆ, ಈಗ ಪ್ರವಾಸಕ್ಕೆ ಬಂದವರು ಕಾಡ್ಗಿಚ್ಚಿನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಡ್ಗಿಚ್ಚು ಕಾಣಿಸಿಕೊಂಡ ಪ್ರದೇಶದಲ್ಲಿರೋ ಹೋಟೆಲ್‌ಗಳಲ್ಲಿಯೇ ಉಳಿದುಕೊಂಡಿದ್ದಾರೆ. ಇದೀಗ ಅವರನ್ನು ರಕ್ಷಣೆ ಮಾಡುವ ಕೆಲಸವೂ ನಡೆಯುತ್ತಿದೆ. ಹೋಟೆಲ್‌ವೊಂದರಲ್ಲಿ ಉಳಿದುಕೊಂಡಿದ್ದ ರಷ್ಯಾದ 100 ಕ್ಕೂ ಹೆಚ್ಚು ಪ್ರವಾಸಿಗರನ್ನು ಶನಿವಾರ ರಕ್ಷಣೆ ಮಾಡಲಾಗಿದೆ.

ಕಾಡ್ಗಿಚ್ಚು ನಂದಿಸಲು 6 ವಿಮಾನ ಬಳಕೆ
9 ಡ್ರೋನ್‌, 45 ಹೆಲಿಕಾಪ್ಟರ್‌ ಬಳಕೆ
680 ಅಗ್ನಿಶಾಮಕ ವಾಹನ, 4000 ಅಗ್ನಿಶಾಮಕ ಸಿಬ್ಬಂದಿ ಬಳಕೆ

ಕಾಡ್ಗಿಚ್ಚಿನ ಭೀಕರತೆ ಹೇಗಿದೆ ಅನ್ನೋದು ಕಾಡ್ಗಿಚ್ಚು ನಂದಿಸಲು ಮಾಡುತ್ತಿರುವ ಹರಸಾಹಸವೇ ತೋರಿಸುತ್ತಿದೆ. ಹೌದು, ಸುಮಾರು 300ಕ್ಕೂ ಹೆಚ್ಚು ಎಕರೆಯ ಬೇರೆ ಬೇರೆ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿರೋದ್ರಿಂದ ನಂದಿಸಲು ಸಾಧ್ಯವಾಗುತ್ತಿಲ್ಲ. 6 ವಿಮಾನವನ್ನು ಬಳಿಸಿ ಅವುಗಳ ಮೂಲಕ ಬೆಂಕಿ ನಂದಿಸುವ ಕೆಲಸ ನಡೆಯುತ್ತಿದೆ.

9 ಮಾನವ ರಹಿತ ವೈಮಾನಿಕ ವಾಹನಗಳು, ಒಂದು ಮಾನವ ರಹಿತ ಹೆಲಿಕಾಪ್ಟರ್‌ ಸೇರಿದಂತೆ 45 ಹೆಲಿಕಾಪ್ಟರ್‌ಗಳನ್ನು ಬಳಿಸಿಕೊಳ್ಳಲಾಗುತ್ತಿದೆ. ವಿಮಾನ, ಹೆಲಿಕಾಪ್ಟರ್‌ಗಳಲ್ಲಿ ನೀರನ್ನು ತುಂಬಿಸಿಕೊಂಡು ಹೋಗಿ ಕಾಡ್ಗಿಚ್ಚಿನ ಪ್ರದೇಶದಲ್ಲಿ ಸುರಿಯಲಾಗುತ್ತಿದೆ. ಇನ್ನು 680 ಅಗ್ನಿಶಾಮಕ ವಾಹನವನ್ನು ಬೆಂಕಿ ನಂದಿಸುವ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. 4000 ಸಾವಿಕ್ಕೂ ಹೆಚ್ಚು ಅಗ್ನಿ ಶಾಮಕ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಎಷ್ಟೋ ಕಡೆ ಅಗ್ನಿ ಶಾಮಕ ದಳದ ವಾಹನಕ್ಕೆ ಬೆಂಕಿ ಹತ್ತಿಕೊಂಡ ಘಟನೆಯೂ ನಡೆದಿದೆ.

ಕಾಡ್ಗಿಚ್ಚಿಗೆ ಕಾರಣ ಏನು ಗೊತ್ತಾ?
ಬೆಂಕಿ ನಂದಿಸಲು ಸಾಧ್ಯವಾಗುವುದಿಲ್ವ?

ಮೊದಲಿಗೆ ಕರಾವಳಿ ಪ್ರದೇಶದಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚು ನಂತರ ಬೇರೆ ಬೇರೆ ಪ್ರದೇಶದಲ್ಲಿಯೂ ಕಾಣಿಸಿಕೊಂಡಿದೆ. ಆದ್ರೆ, ಕಾಡ್ಗಿಚ್ಚಿಗೆ ಮೂಲ ಕಾರಣ ಏನು ಅನ್ನೋದು ತಿಳಿದು ಬಂದಿಲ್ಲ. ಸರ್ಕಾರ ತನಿಖೆಗೆ ಒಪ್ಪಿಗೆ ನೀಡಿದೆ. ಈ ಹಿಂದೆ ಕೂಡ ಟರ್ಕಿಯಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ಆದ್ರೆ, ಅದು ಇಷ್ಟೊಂದು ಭೀಕರವಾಗಿರಲಿಲ್ಲ. ಎಷ್ಟೋ ಪ್ರಾಣಿ, ಪಕ್ಷಿಗಳು ಜೀವಂತ ದಹನವಾಗಿರೋದು ನೋಡಿದ್ರೆ ಎಂಥವರ ಮನಸ್ಸಾದ್ರೂ ಕರಗದೆ ಇರದು. ಯಾವಾಗ ಬೆಂಕಿ ನಂದಿಸಲಾಗುತ್ತೆ ಅನ್ನೋದಕ್ಕೆ ಉತ್ತರವಿಲ್ಲ. ಅರಣ್ಯ ಇಲಾಖೆ, ಅಗ್ನಿ ಶಾಮಕ ದಳ ಸತತ ಪ್ರಯತ್ನ ನಡೆಸುತ್ತಲೇ ಇದೆ.

Source: newsfirstlive.com Source link