ಈ ದೇಶದಲ್ಲಿ ಹಣ್ಣು, ತರಕಾರಿ ತಿಂದವರಿಗೆ ಸರ್ಕಾರದಿಂದ ಸಿಗುತ್ತೆ ಬಹುಮಾನ

ಈ ದೇಶದಲ್ಲಿ ಹಣ್ಣು, ತರಕಾರಿ ತಿಂದವರಿಗೆ ಸರ್ಕಾರದಿಂದ ಸಿಗುತ್ತೆ ಬಹುಮಾನ

ಹಣ್ಣು ತರಕಾರಿ ಸೇವಿಸಿ, ಪ್ರತಿನಿತ್ಯ ವ್ಯಾಯಾಮ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ. ಈ ಮಾತನ್ನು ಯಾರೇ ಹೇಳಿದ್ರೂ ಜನ ಕೇಳಲ್ಲ. ಹೀಗಾಗಿಯೇ ಬೊಜ್ಜಿನ ಸಮಸ್ಯೆಯಿಂದ ಜನ ಆಸ್ಪತ್ರೆ ಸೇರುತ್ತಾರೆ. ಆದ್ರೆ, ಅಂತಹ ಜನರಿಗಾಗಿಯೇ ಬ್ರಿಟನ್‌ ಸರ್ಕಾರ ಒಂದು ಹೊಸ ಯೋಜನೆ ರೂಪಿಸಲು ಸಜ್ಜಾಗುತ್ತಿದೆ.

ಯಾವುದನ್ನು ತಿನ್ನಬೇಕು, ಯಾವುದನ್ನು ತಿನ್ನಬಾರದು ಅನ್ನುವುದು ವಿಶ್ವದಲ್ಲಿ ಬಹುತೇಕ ಜನರಿಗೆ ಅರಿವೇ ಇರುವುದಿಲ್ಲ. ಒಮ್ಮೆ ಈ ಬಗ್ಗೆ ಅರಿವು ಮೂಡಿಸಿದ್ರೂ ಕಿವಿಗೆ ಹಾಕಿಕೊಳ್ಳಲ್ಲ. ಒಂದು ಕಿವಿಯಲ್ಲಿ ಕೇಳುತ್ತಾರೆ ಮತ್ತೊಂದು ಕಿವಿಯಲ್ಲಿ ಬಿಟ್ಟಾಕಿ ಬಿಡ್ತಾರೆ. ತಮಗೆ ಯಾವುದು ರುಚಿ ರುಚಿಯಾಗಿ ಕಾಣಿಸುತ್ತೋ ಅದನ್ನೇ ತಿನ್ನುತ್ತಾರೆ. ಇದೆಲ್ಲದರ ಪರಿಣಾಮ ಜನರು ಬೊಜ್ಜಿನ ಸಮಸ್ಯೆಗೆ ಸಿಲುಕುತ್ತಿದ್ದಾರೆ. ನಾನಾ ರೀತಿಯ ಕಾಯಿಲೆಗಳಿಗೆ ಆಹ್ವಾನ ನೀಡುತ್ತಿದ್ದಾರೆ. ಆಸ್ಪತ್ರೆ ಸೇರಿಕೊಂಡು ಚಿಕಿತ್ಸೆಗೆ ಹಣ ಇಲ್ಲದೇ ಪರದಾಡುತ್ತಿದ್ದಾರೆ.

blank

ಈ ಸಮಸ್ಯೆ ನೋಡಲು ಕಣ್ಣಿಗೆ ಕಾಣಿಸಲ್ಲ. ಅದೇನು ದೊಡ್ಡ ಸಮಸ್ಯೆಯೇ ಅಲ್ಲ ಅನಿಸಿ ಬಿಡುತ್ತೆ. ಆದ್ರೆ, ಅದರಿಂದಲೇ ಮಾನವ ಸಂಪನ್ಮೂಲ ವ್ಯರ್ಥವಾಗುತ್ತಿದೆ. ಲಕ್ಷಾಂತರ ಮಂದಿ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದು ಯಾವುದೇ ಒಂದು ರಾಷ್ಟ್ರದ ಸಮಸ್ಯೆ ಅಲ್ಲ. ಇಡೀ ವಿಶ್ವದ ಸಮಸ್ಯೆಯಾಗಿದೆ. ಆದ್ರೆ, ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಸರ್ಕಾರ ಇದಕ್ಕೆ ಬ್ರೇಕ್‌ ಹಾಕಲು ಮುಂದಾಗಿದೆ.

ಹಣ್ಣು, ತರಕಾರಿ, ಸೊಪ್ಪು ಸೇವಿಸಿದ್ರೆ ಪ್ರೋತ್ಸಾಹ
ಸರ್ಕಾರದಿಂದಲೇ ತಯಾರಾಗುತ್ತಿದೆ ಹೊಸ ಆ್ಯಪ್

ಹೌದು.. ಬ್ರಿಟನ್‌ ಸರ್ಕಾರ ಬೊಜ್ಜಿನ ಸಮಸ್ಯೆಗೆ ಬ್ರೇಕ್‌ ಹಾಕಲು ಮುಂದಾಗಿದೆ. ಅದೇನಂದ್ರೆ ಹೆಚ್ಚಿನ ಕ್ಯಾಲರಿ ಆಹಾರ ಸೇವಿಸುವವರಿಗಿಂತ ಹಣ್ಣು ತರಕಾರಿ ಖರೀದಿಸಿ ಸೇವಿಸುವವರಿಗೆ ಪ್ರೋತ್ಸಾಹ ನೀಡಲು ಮುಂದಾಗಿದೆ. ಇದೇ ಉದ್ದೇಶಕ್ಕೆ ಸರ್ಕಾರದಿಂದ ಹೊಸ ಆ್ಯಪ್‌ವೊಂದು ರಚನೆಯಾಗುತ್ತಿದೆ. ಆ ಆ್ಯಪ್‌ ಮೂಲಕ ಜನ ಯಾವ ವಸ್ತು ಖರೀದಿಸುತ್ತಾರೆ, ಯಾವ ಆಹಾರ ಸೇವಿಸುತ್ತಾರೆ ಅನ್ನೋದನ್ನು ಟ್ರ್ಯಾಕ್‌ ಮಾಡಲಾಗುತ್ತದೆ. ಆ ಮೂಲಕ ಜನ ಖರೀದಿಸುವ ಆಹಾರದ ಮೇಲೆ ಸರ್ಕಾರದಿಂದಲೇ ಸಂಪೂರ್ಣವಾಗಿ ಕಣ್ಗಾವಲು ಇಡಲಾಗುತ್ತದೆ.

ಇದನ್ನೂ ಓದಿ:ಪ್ರಾಕೃತಿಕ ವಿಕೋಪಕ್ಕೆ ನಲುಗಿದ ಬಾಂಗ್ಲಾ & ಆಫ್ಘಾನ್; 2500ಕ್ಕೂ ಅಧಿಕ ನಿರಾಶ್ರಿತ ಶಿಬಿರಗಳು ನೆಲಸಮ

ಹೌದು, ಒಬ್ಬ ವ್ಯಕ್ತಿ ಯಾವ ಪ್ರಮಾಣದಲ್ಲಿ ಹಣ್ಣು ತರಕಾರಿ ಖರೀದಿಸುತ್ತಾನೋ ಅದನ್ನು ಆಧರಿಸಿ ವಿವಿಧ ರೀತಿಯ ರಿಯಾಯಿತಿ, ರಿವಾರ್ಡ್‌ ಪಾಯಿಂಟ್‌ಗಳು ಸಿಗಲಿವೆ. ಆ ಪಾಯಿಂಟ್‌ಗಳನ್ನು ಗ್ರಾಹಕನಾದವನು ಬೇರೆ ಬೇರೆ ವಸ್ತುಗಳನ್ನು ಖರೀದಿಸಲು ಅನುಕೂಲ ಮಾಡಿಕೊಡಲಾಗುತ್ತದೆ. ಕೆಲವು ಶಾಪಿಂಗ್‌ ವಸ್ತುಗಳ ಮೇಲೆಯೂ ರಿಯಾಯಿತಿ ನೀಡಲಾಗುತ್ತದೆ. ಆದ್ರೆ, ಕೊಬ್ಬಿನ ಅಂಶ ಹೆಚ್ಚಿರುವ ಆಹಾರ ಸೇವಿಸಿದ್ರೆ ಇರೋ ರಿವಾರ್ಡ್‌ ಪಾಯಿಂಟ್‌ಗಳು ಮೈನಸ್‌ ಆಗುತ್ತವೆ. ಅಂತಹವರಿಗೆ ಸರ್ಕಾರದಿಂದ ಯಾವುದೇ ಪ್ರೋತ್ಸಾಹ ಧನ ಸಿಗುವುದಿಲ್ಲ.

 ಬೊಜ್ಜಿನ ಸಮಸ್ಯೆಯಿಂದ ಪಾರಾಗಲು ಈ ತಂತ್ರ
ಬ್ರಿಟನ್‌ನಲ್ಲಿ ಹೆಚ್ಚಾಗುತ್ತಿದೆ ಬೊಜ್ಜಿನ ಸಮಸ್ಯೆ.

ಕಳೆದ ಕೆಲವು ವರ್ಷಗಳಿಂದ ಬ್ರಿಟನ್‌ನಲ್ಲಿ ಬೊಜ್ಜಿನ ಸಮಸ್ಯೆ ಭಾರೀ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದೆ. 16 ರಿಂದ 24 ವರ್ಷದವರಲ್ಲಿ ಶೇಕಡಾ 13 ರಷ್ಟು, 25 ರಿಂದ 34 ವರ್ಷದೊಳಗಿನವರಲ್ಲಿ ಶೇಕಡಾ 23 ರಷ್ಟು, 35 ರಿಂದ 44 ವರ್ಷದೊಳಗಿನವರಲ್ಲಿ ಶೇಕಡಾ 30 ರಷ್ಟು, 45 ರಿಂದ 54 ವರ್ಷದೊಳಗಿನವರಲ್ಲಿ ಶೇಕಡಾ 33 ರಷ್ಟು, 55 ರಿಂದ 64 ವರ್ಷದೊಳಗಿನವರಲ್ಲಿ ಶೇಕಡಾ 34 ರಷ್ಟು, 65 ರಿಂದ 74 ವರ್ಷದೊಳಗಿನವರಲ್ಲಿ ಶೇಕಡಾ 36 ರಷ್ಟು ಮತ್ತು 75ಕ್ಕೂ ಮೇಲ್ಪಟ್ಟ ವಯಸ್ಸಿನವರಲ್ಲಿ ಶೇಕಡಾ 26 ರಷ್ಟು ಜನರಲ್ಲಿ ಅಧಿಕ ಪ್ರಮಾಣದ ಬೊಜ್ಜಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.

ಮಕ್ಕಳಲ್ಲಿಯೂ ಬೊಜ್ಜಿನ ಸಂಖ್ಯೆ ಏರಿಕೆ
ಪ್ರತಿ ಮೂರು ಮಕ್ಕಳಲ್ಲಿ ಒಬ್ಬರಿಗೆ ಬೊಜ್ಜಿನ ಸಮಸ್ಯೆ
2020ರಲ್ಲಿ ಬೊಜ್ಜಿನ ಸಮಸ್ಯೆಯಿಂದ 10 ಲಕ್ಷ ಜನ ಆಸ್ಪತ್ರೆಗೆ ದಾಖಲು

ಹೌದು, ಬ್ರಿಟನ್‌ ಸರ್ಕಾರಕ್ಕೆ ದೊಡ್ಡ ಆಘಾತ ತಂದಿರುವುದು ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ಏರಿಕೆಯಾಗುತ್ತಿರುವುದಾಗಿದೆ. ಕಳೆದ ಕೆಲವು ವರ್ಷಗಳಿಂದ ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ಏರಿಕೆಯಾಗುತ್ತಲೇ ಇದೆ. ಪ್ರತಿ ಮೂರು ಮಕ್ಕಳಲ್ಲಿ ಒಬ್ಬ ಮಗುವಿಗೆ ಬೊಜ್ಜಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.

ಇದನ್ನೂ ಓದಿ:ಶಿಲ್ಪಾಶೆಟ್ಟಿ ಪತಿಗೆ ಮತ್ತಷ್ಟು ಸಂಕಷ್ಟ: ‘ಪ್ಲಾನ್​ ಬಿ’ ರಹಸ್ಯ ಬಿಚ್ಚಿಟ್ಟ ವಾಟ್ಸ್​ಆ್ಯಪ್​ ಚಾಟ್​​..!

ಅಷ್ಟೇ ಅಲ್ಲ, ಪ್ರತಿ ವರ್ಷ ಬೊಜ್ಜಿನ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. 2020ರಲ್ಲಿ ಸುಮಾರು 10 ಲಕ್ಷ ಮಂದಿ ಬೊಜ್ಜು ಸಂಬಂಧಿತ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶೀಘ್ರದಲ್ಲಿಯೇ ಆ್ಯಪ್‌ ಅನಾವರಣ..
ಸರ್ಕಾರದ ಜೊತೆ ಖಾಸಗಿ ಕಂಪನಿಗಳು ಕೈಜೋಡಿಸಲಿವೆ..

blank ಬ್ರಿಟನ್‌ ಸರ್ಕಾರ ಈಗಾಗಲೇ ಅಪ್ಲಿಕೇಷನ್‌ ಸಿದ್ಧಪಡಿಸುತ್ತಿದೆ. ಹೊಸ ಆ್ಯಪ್‌ ಶೀಘ್ರದಲ್ಲಿಯೇ ಅನಾವರಣಗೊಳಿಸಲು ಸಜ್ಜಾಗಿದೆ. ವಿಶೇಷ ಅಂದ್ರೆ, ಈ ಮಹತ್ವದ ಕಾರ್ಯಕ್ಕೆ ಸರ್ಕಾರದ ಜೊತೆ ಖಾಸಗಿ ಕಂಪನಿಗಳು ಕೈಜೋಡಿಸುತ್ತಿವೆ. ವಿವಿಧ ರೀತಿಯ ರಿಯಾಯಿತಿಯ ವಸ್ತುಗಳು ಗ್ರಾಹಕರಿಗೆ ಸಿಗಲಿವೆ. ವ್ಯಾಯಾಮ ಅಭ್ಯಾಸಕ್ಕೆ ಹೋಗುವ ಜನರಿಗೂ ಈ ಆ್ಯಪ್‌ ಮೂಲಕವೇ ಪ್ರೋತ್ಸಾಹ ಧನ ಸಿಗಲಿದೆ.

ಅಧಿಕ ಬೊಜ್ಜಿನಿಂದ ಬರುತ್ತೆ ಅಕಾಲಿಕ ಮರಣ..
ಬೊಜ್ಜು ಸಂಬಂಧಿತ ಕಾಯಿಲೆಯಿಂದಲೇ ಶೇ.8 ರಷ್ಟು ಜನ ಮರಣ

ಹೌದು, ಇದು ಅಚ್ಚರಿಯಾದರೂ ಸತ್ಯವಾಗಿದೆ. ಅಧಿಕ ಬೊಜ್ಜು ಹೊಂದಿರುವವರಲ್ಲಿ ಅಕಾಲಿಕ ಮರಣ ಕಾಣಿಸಿಕೊಳ್ಳುತ್ತಿದೆ. 2017ರಲ್ಲಿ ನಡೆದ ಸರ್ವೆ ಪ್ರಕಾರ ವಿಶ್ವದಲ್ಲಿ 47 ಲಕ್ಷ ಮಂದಿ ಬೊಜ್ಜಿನ ಸಮಸ್ಯೆಯಿಂದ ಮರಣಹೊಂದಿದ್ದಾರೆ. ಸರ್ವೆ ಪ್ರಕಾರ ಪ್ರತಿ ವರ್ಷ ಸಾವಿನ್ನಪ್ಪುವವರಲ್ಲಿ ಶೇಕಡಾ 8 ರಷ್ಟು ಮಂದಿ ಬೊಜ್ಜು ಸಂಬಂಧಿತ ಕಾಯಿಲೆಯಿಂದಲೇ ಸಾವನ್ನಪ್ಪುತ್ತಿದ್ದಾರೆ.

ಭಾರತದಲ್ಲಿ 135 ದಶಲಕ್ಷ ಜನರಲ್ಲಿ ಬೊಜ್ಜಿನ ಸಮಸ್ಯೆ..
ಅಧಿಕ ಬೊಜ್ಜಿನಿಂದ ಹೃದಯ ಸಂಬಂಧಿ ಕಾಯಿಲೆ ಅಟ್ಯಾಕ್‌..

ಭಾರತದಲ್ಲಿಯೂ ಅಧಿಕ ಬೊಜ್ಜಿನ ಸಮಸ್ಯೆ ಎದುರಿಸುವವರು ಇದ್ದಾರೆ. ಇತ್ತೀಚಿನ ಒಂದು ಸರ್ವೇ ಪ್ರಕಾರ ಭಾರತದಲ್ಲಿ 135 ದಶಲಕ್ಷ ಜನರಲ್ಲಿ ಬೊಜ್ಜಿನ ಸಮಸ್ಯೆ ಕಾಣಿಸಿಕೊಂಡಿದೆ. ಅಧಿಕ ಬೊಜ್ಜಿನಿಂದ ಹೃದಯ ಸಂಬಂಧಿ ಕಾಯಿಲೆ, ಅಧಿಕ ರಕ್ತದೊತ್ತಡ, ಮರೆವಿನ ಕಾಯಿಲೆಗಳು ಅಟ್ಯಾಕ್‌ ಆಗುತ್ತಿವೆ. ಒಳ್ಳೆಯ ಆಹಾರ ಸೇವಿಸಿ, ವ್ಯಾಯಾಮ ಮಾಡಿ ಫಿಟ್‌ ಆಗಿ ಇರಿ ಅಂತ ಎಷ್ಟೇ ಜಾಗೃತಿ ಮೂಡಿಸಿದ್ರೂ ಅದು ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ ಆಗುತ್ತಿದೆ. ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದರಿಂದ ಏನೂ ಪ್ರಯೋಜನವಾಗುತ್ತಿಲ್ಲ ಅನ್ನುವುದು ಬ್ರಿಟನ್‌ ಅರಿವಿಗೆ ಬಂದಿದೆ. ಹೀಗಾಗಿಯೇ ಬೋರಿಸ್‌ ಜಾನ್ಸನ್‌ ಸರ್ಕಾರ ಜನರ ಆಹಾರದ ಮೇಲೆ ಕಣ್ಣಿಡಲು ಸಜ್ಜಾಗಿದೆ. ಅದು, ಯಾವ ರೀತಿಯಲ್ಲಿ ಯಶಸ್ವಿಯಾಗುತ್ತೆ ಅನ್ನೋದನ್ನು ಕಾದು ನೋಡೋಣ.

ಇದನ್ನೂ ಓದಿ: ಟರ್ಕಿಯಲ್ಲಿ ಇನ್ನೂ ನಿಯಂತ್ರಣಕ್ಕೆ ಬಾರದ ರಣರಕ್ಕಸ ಕಾಡ್ಗಿಚ್ಚು.. ಗ್ರಾಮಗಳಲ್ಲಿ ಬೀಳ್ತಿದೆ ಬೂದಿಯ ಮಳೆ!

Source: newsfirstlive.com Source link