‘ಮುಖ್ಯಮಂತ್ರಿ ಆಗ್ಬೇಕು ಅಂತಾ ನಾನು ಗಡ್ಡ ಬಿಟ್ಟಿಲ್ಲ’ -ಸಿ.ಟಿ ರವಿ

‘ಮುಖ್ಯಮಂತ್ರಿ ಆಗ್ಬೇಕು ಅಂತಾ ನಾನು ಗಡ್ಡ ಬಿಟ್ಟಿಲ್ಲ’ -ಸಿ.ಟಿ ರವಿ

ಚಿಕ್ಕಮಗಳೂರು: ರಾಜ್ಯದ ಮುಖ್ಯಮಂತ್ರಿಯಾಗಬೇಕು ಅಂತಾ ನಾನು ಗಡ್ಡ ಬಿಟ್ಟಿಲ್ಲ. ಕಾಲೇಜು ದಿನಗಳ ಆರಂಭದಿಂದಲೂ ನಾನು ಗಡ್ಡ ಬಿಟ್ಟಿದ್ದೇನೆ. ಗಡ್ಡ ನನ್ನ ಐಡೆಂಟಿಟಿಯ ಒಂದು ಭಾಗ ಅಷ್ಟೇ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿ.ಟಿ. ರವಿ.. 15 ದಿನ ಮುಖ್ಯಮಂತ್ರಿ ರೇಸ್ ವಿಚಾರಲ್ಲಿ ಮಾಧ್ಯಮದಲ್ಲಿ ನನ್ನ ಹೆಸರು ಬರುತ್ತಿತ್ತು. ನಾನು ಒಬ್ಬನೇ ಅಲ್ಲ, ಹಲವರ ಹೆಸರು ಬರುತ್ತಿತ್ತು. ಸಿಎಂ ಆಗಲು ಯೋಗನೂ ಇರಬೇಕಲ್ವಾ..? ಈಗ ಬೊಮ್ಮಾಯಿ ಅವರಿಗೆ ಯೋಗ ಕೂಡಿ ಬಂದಿದೆ. ಅವರು ಒಳ್ಳೆಯ ಕೆಲಸ ಮಾಡುತ್ತಾರೆ ಎಂಬ ನಿರೀಕ್ಷೆ ಇದೆ. ಅವರಿಗೆ ಎಲ್ಲಾ ರೀತಿಯ ಸಹಕಾರವನ್ನು ಕೊಡುತ್ತೇವೆ.. ಅವರು ನಮ್ಮ ಸ್ನೇಹಿತರು ಎಂದು ತಿಳಿಸಿದರು.

blank

ಇದೇ ವೇಳೆ ವಿಜಯನಗರದ ಮೈಲಾರಲಿಂಗ ಭವಿಷ್ಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ರವಿ ಅವರು, ನನಗೆ ಅದರ ಬಗ್ಗೆ ಗೊತ್ತಿಲ್ಲ. ನಾನಂತೂ ಮುಖ್ಯಮಂತ್ರಿ ಆಗಬೇಕು ಅನ್ನೋದಕ್ಕೆ ಗಡ್ಡ ಬಿಟ್ಟಿದ್ದಲ್ಲ. ಕಾಲೇಜು ದಿನಗಳಿಂದಲೂ‌ ನಿರಂತರವಾಗಿ ಗಡ್ಡ ಬಿಟ್ಟು ಕೊಂಡು ಬಂದಿದ್ದೇನೆ. ಗಡ್ಡದಾರಿ ಅಂತಾ ಅವ್ರು ಹೇಳಿದ್ದು ನಿಜವಾಗಿದ್ರೆ.. ಬಹಳ ಜನ ಗಡ್ಡ ಬಿಡಬಹುದು. ಯಾರು ಯಾರು ಮುಖ್ಯಮಂತ್ರಿಯಾಗಬೇಕು ಅಂತಾ ಆಕಾಂಕ್ಷಿ ಇರ್ತಾರೋ ಅವರೆಲ್ಲಾ ಗಡ್ಡ ಬಿಡೋಕೆ ಪ್ರಾರಂಭಿಸಬಹುದು ಎಂದರು.

ಸಂಪುಟ ವಿಸ್ತರಣೆ ಮಾಡಿದರೆ ರಾಜ್ಯದ ಹಿತವನ್ನು ಆದ್ಯತೆ ಇಟ್ಟುಕೊಂಡು ಮಾಡುತ್ತಾರೆ. ಸಾಮಾಜಿಕ ನ್ಯಾಯ, ಪ್ರಾದೇಶಿಕ ಸಮತೋಲನ ಎರಡನ್ನು ಕಾಪಾಡಿಕೊಂಡು ವಿಸ್ತರಣೆ ಮಾಡುತ್ತಾರೆ. ಒಳ್ಳೆಯ ಸಂಪುಟ ರಚನೆ ಮಾಡಿ ಅವರ ನೇತೃತ್ವದಲ್ಲಿ ಮತ್ತೆ ಚುನಾವಣೆ ಗೆದ್ದು ಬರಬೇಕು. ಆ ರೀತಿ ವಿಸ್ತರಣೆ ಮಾಡ್ತಾರೆ ಅನ್ನೋ ನಂಬಿಕೆ ಇದೆ ಎಂದರು.

blank

ಮೇಕೆದಾಟು ಯೋಜನೆಗೆ ಅಣ್ಣಾಮಲೈ ಉಪವಾಸ ಕುರಿತಂತೆ ಪ್ರತಿಕ್ರಿಯೆ ನೀಡಿದ ಸಿ.ಟಿ ರವಿ, ಎರಡು ರಾಜ್ಯದ ಹಿತವನ್ನು ಇಟ್ಟುಕೊಂಡು ಮಾಡಬೇಕು. ಬೆಂಗಳೂರಿನಲ್ಲಿ 30 ರಷ್ಟು ತಮಿಳುನಾಡಿನವರೇ ಇದ್ದಾರೆ. ದೇಶದ ತುಂಬೆಲ್ಲ ಜನರು ಬೆಂಗಳೂರಿನಲ್ಲಿದ್ದಾರೆ. ನಿಮಗೂ ಅನುಕೂಲವಾಗಬೇಕು, ಕರ್ನಾಟಕಕ್ಕೂ ಅನುಕೂಲವಾಗುವಂತೆ ಮಧ್ಯಮ ಮಾರ್ಗದಲ್ಲಿ ಮೇಕೆದಾಟು ಮಾಡಬೇಕು. ಎರಡು ರಾಜ್ಯದ ಮುಖ್ಯಮಂತ್ರಿಗಳಿಗೆ ರಾಜಕಾರಣ ಮಾಡದೆ ವಾಸ್ತವಿಕ ನೆಲೆಯಲ್ಲಿ ಯೋಚನೆ ಮಾಡಲಿ ಎಂದು ಸಲಹೆ ನೀಡಿದರು.

Source: newsfirstlive.com Source link