ಪ್ರವಾಹದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ 5 ಲಕ್ಷ ರೂ. ಪರಿಹಾರ; ಸಿಎಂ ಬಸವರಾಜ್​​ ಬೊಮ್ಮಾಯಿ

ಪ್ರವಾಹದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ 5 ಲಕ್ಷ ರೂ. ಪರಿಹಾರ; ಸಿಎಂ ಬಸವರಾಜ್​​ ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಉಂಟಾದ ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಸಿಎಂ ಬಸವರಾಜ್​​​ ಬೊಮ್ಮಾಯಿ ನೇತೃತ್ವದ ಸರ್ಕಾರ ಪರಿಹಾರ ಘೋಷಣೆ ಮಾಡಿದೆ. ಶೇ.75ಕ್ಕಿಂತ ಹೆಚ್ಚು ಮನೆ ಹಾನಿಯಾಗಿದ್ದರೆ 5 ಲಕ್ಷ ರೂಪಾಯಿ ಮತ್ತು ಅರ್ಧ ಮನೆ ಬಿದ್ದವರಿಗೆ 3 ಲಕ್ಷ ರೂಪಾಯಿ ನೀಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಸಿಎಂ ಬಸವರಾಜ್​​ ಬೊಮ್ಮಾಯಿ, ಇವತ್ತು ಕೆಲವು ಕಡೆ ಮಳೆ ನಿಂತಿದೆ. ಆದ್ರೆ ಮಳೆ ನೀರು ಹಾಗೇ ಇದೆ. ಇದರಿಂದ 466 ಗ್ರಾಮಗಳಲ್ಲಿ ಸಮಸ್ಯೆ ಆಗಿದೆ. ಸುಮಾರು 13 ಜನ ಸಾವನ್ನಪ್ಪಿದ್ದಾರೆ, ಒಬ್ಬರು ನಾಪತ್ತೆ ಆಗಿದ್ದಾರೆ ಎಂದರು.

ಮಳೆಯಿಂದ ರಸ್ತೆಗಳು, ಸೇತುವೆಗಳು ಹಾಳಾಗಿವೆ. ಕೂಡಲೇ ಸರಿಪಡಿಸಲು ಸೂಚನೆ ನೀಡಲಾಗಿದೆ. ಅದಕ್ಕಾಗಿ ರಾಜ್ಯ ಸರ್ಕಾರ 500 ಕೋಟಿ ಬಿಡುಗಡೆ ಮಾಡಿದೆ. 150 ಕೋಟಿ ರುಪಾಯಿ ಎನ್​​ಡಿಆರ್​ಎಫ್​​​ ಅನುದಾನದಲ್ಲಿ ಬಳಕೆ ಮಾಡಲಾಗುತ್ತಿದೆ. 700 ಕೋಟಿಗೂ ಹೆಚ್ಚು ಜಿಲ್ಲಾಧಿಕಾರಿಗಳ ಬಳಿ ಇದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಎರಡೂ ಡೋಸ್ ವ್ಯಾಕ್ಸಿನ್ ಪಡೆದಿದ್ದರಷ್ಟೇ ರಾಜ್ಯಕ್ಕೆ ಪ್ರವೇಶ- ಸಿಎಂ ಬೊಮ್ಮಾಯಿ

ಕೂಡಲೇ 10 ಸಾವಿರ ನೀಡಲು ಸೂಚನೆ

ಇನ್ನು, ಬೆಳೆ ನಾಶದ ಸಮೀಕ್ಷೆ 15 ದಿನಗಳೊಳಗೆ ಆಗ್ಬೇಕು. ಮನೆ ಬಿದ್ದಿರೋರಿಗೆ ತಕ್ಷಣ 10 ಸಾವಿರ ಕೊಡೋದಕ್ಕೆ ಸೂಚನೆ ನೀಡಿದ್ದೇನೆ. ಹಾನಿ ಸಮೀಕ್ಷೆಗೆ ಕೇಂದ್ರ ತಂಡ ಕಳುಹಿಸುವಂತೆ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದೇನೆ. ಮುಂದಿನ ದೆಹಲಿ ಪ್ರವಾಸದ ವೇಳೆ ಭೇಟಿ ಮಾಡಿ ಮತ್ತೊಮ್ಮೆ ಪರಿಹಾರ ನೀಡಿ ಎಂದು ಮನವಿ ಮಾಡ್ತೇನೆ ಎಂದು ತಿಳಿಸಿದರು.

Source: newsfirstlive.com Source link