ಬಡವರ ಪಾಲಿನ ಹಣ ಮಧ್ಯವರ್ತಿಗಳ ಪಾಲಾಗದಿರಲು ಹೊಸ ಅಸ್ತ್ರ; ಏನಿದು ‘ಇ-ರುಪಿ’..?

ಬಡವರ ಪಾಲಿನ ಹಣ ಮಧ್ಯವರ್ತಿಗಳ ಪಾಲಾಗದಿರಲು ಹೊಸ ಅಸ್ತ್ರ; ಏನಿದು ‘ಇ-ರುಪಿ’..?

ನವದೆಹಲಿ: ಸರ್ಕಾರಗಳು ಹಲವು ಯೋಜನೆಗಳ ಹೆಸರಿನಲ್ಲಿ ಆರ್ಥಿಕ ನೆರವು ನೀಡಿದರೂ ಬಹುತೇಕ ಬಾರಿ ಈ ನೆರವು ಮಧ್ಯವರ್ತಿಗಳ ಜೇಬು ಸೇರಿಬಿಡುತ್ತದೆ.. ಈ ಸಮಸ್ಯೆಗೆ ಪರಿಹಾರ ಹುಡುಕುವುದು ಕಷ್ಟಸಾಧ್ಯ ಎನ್ನುವಂತಾಗಿತ್ತು. ಆದ್ರೀಗ ಕೇಂದ್ರ ಸರ್ಕಾರ ಹೊಸದೊಂದು ಮಾರ್ಗವನ್ನ ಕಂಡುಕೊಂಡಿದ್ದು ಅದಕ್ಕೆ ಇ-ರುಪಿ ಎಂದು ನಾಮಕರಣ ಮಾಡಿದೆ. ಇದೇ ಆಗಸ್ಟ್ 2 ರಂದು ಈ ಹೊಸ ಯೋಜನೆ ಜಾರಿಗೆ ಬರಲಿದ್ದು ಪ್ರಧಾನಿ ಮೋದಿ ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ.

ಏನಿದು ಇ-ರುಪಿ..?
ಪ್ರಧಾನಮಂತ್ರಿಗಳ ಕಚೇರಿಯ ಅಧಿಕೃತ ಮಾಹಿತಿ ಪ್ರಕಾರ ಇ-ರುಪಿ ನಗದುರಹಿತ, ಸಂಪರ್ಕರಹಿತ ಡಿಜಿಟಲ್ ಪೇಮೆಂಟ್​​ನ ಸಾಧನ. ಇದು ಕ್ಯೂಆರ್ ಕೋಡ್ ಅಥವಾ ಎಸ್​ಎಮ್​ಎಸ್​ ಸ್ಟ್ರಿಂಗ್ ಆಧಾರಿತ ಇ-ವೋಚರ್ ಆಗಿದ್ದು ನೇರವಾಗಿ ಫಲಾನುಭವಿಗಳ ಮೊಬೈಲ್​ಗೆ ತಲುಪಲಿದೆ. ಫಲನುಭವಿಗಳು ಈ ವೋಚರ್​ನ್ನು ಕಾರ್ಡ್​ ಇಲ್ಲದೆಯೂ ಡಿಜಿಟಲ್ ಪೇಮೆಂಟ್ ಆ್ಯಪ್ ಇಲ್ಲದೆಯೂ ಹಾಗೂ ಇಂಟರ್ನೆಟ್ ಬ್ಯಾಂಕಿಂಗ್​ನ ನೆರವಿಲ್ಲದೆಯೂ ಹಣ ಪಡೆಯಬಹುದಾಗಿದೆ. ಇದನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿದೆ.

ಇ-ರುಪಿ ಹೇಗೆ ಕೆಲಸ ಮಾಡುತ್ತೆ..?
ಇ-ರುಪಿ ನೆರವು ನೀಡುವ ಮತ್ತು ಪಡೆಯುವ ಫಲಾನುಭವಿಗಳನ್ನ ಡಿಜಿಟಲ್ ಮೂಲಕ ಸಂಪರ್ಕಿಸುತ್ತದೆ. ಈ ಮಧ್ಯೆ ಯಾವುದೇ ವ್ಯಕ್ತಿ ಇದರ ಮಧ್ಯೆ ತಲೆದೋರುವುದಿಲ್ಲ. ಫಲಾನುಭವಿಗಳು ಹಣ ಸಂದಾಯವಾದ ನಂತರವೇ ಈ ಪಾವತಿಯನ್ನು ಪಡೆಯಬಹುದಾಗಿದೆ. ಸಮಯಕ್ಕೆ ಸರಿಯಾಗಿ ಹಣ ಸಂದಾಯವಾಗುವುದರ ಜೊತೆಗೆ ಯಾವುದೇ ಮಧ್ಯವರ್ತಿ ಮಧ್ಯಪ್ರವೇಶಿಸುವುದನ್ನು ತಡೆಯುತ್ತದೆ.

ಇ-ರುಪಿಯನ್ನು ಎಲ್ಲಿ ಬಳಸಬಹುದು..?
ಇ-ರುಪಿ ಮೂಲಕ ಹಣ ವರ್ಗಾವಣೆ ಮಾಡುವುದನ್ನು ಸರ್ಕಾರದ ಯೋಜನೆಗಳಾದ ತಾಯಿ-ಮಕ್ಕಳ ಕಲ್ಯಾಣ ಯೋಜನೆ, ಟಿಬಿ ನಿರ್ಮೂಲನೆ ಕಾರ್ಯಕ್ರಮ, ಔಷಧಗಳು ಮತ್ತು ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ, ರಸಗೊಬ್ಬರ ಸಬ್ಸಿಡಿಗಳು, ಗೊಬ್ಬರ ಸಬ್ಸಿಡಿಗಳು, ಖಾಸಗಿ ಯೋಜನೆಗಳ ಅಡಿಯಲ್ಲಿ ಪೌಷ್ಟಿಕಾಂಶ ಒದಗಿಸುವ ಯೋಜನೆಗಳ ಅಡಿಯಲ್ಲೂ ಈ ಇ-ರುಪಿಯನ್ನು ಬಳಸಬಹುದಾಗಿದೆ.

Source: newsfirstlive.com Source link