ನಮ್ಮ ಕಡೆಯಿಂದ ಸರ್ಕಾರಕ್ಕೆ ಯಾವುದೇ ಆತಂಕ ಇಲ್ಲ- ಸಿಎಂಗೆ ಹೆಚ್.​ಡಿ. ದೇವೇಗೌಡ ಅಭಯ

ನಮ್ಮ ಕಡೆಯಿಂದ ಸರ್ಕಾರಕ್ಕೆ ಯಾವುದೇ ಆತಂಕ ಇಲ್ಲ- ಸಿಎಂಗೆ ಹೆಚ್.​ಡಿ. ದೇವೇಗೌಡ ಅಭಯ

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿದ್ದೇನೆ ನಿಮ್ಮ ಆಶೀರ್ವಾದ ಬೇಕು ಎಂದು ಸಿಎಂ ಬಸವರಾಜ್​​​​ ಬೊಮ್ಮಾಯಿ ಕಾಲ್​​ ಮಾಡಿದ್ದರು ಎಂದು ಮಾಜಿ ಪ್ರಧಾನಿ ಹೆಚ್​​.ಡಿ ದೇವೇಗೌಡರು ಹೇಳಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ದೇವೇಗೌಡರು, ಶನಿವಾರ ರಾತ್ರಿ ದೂರವಾಣಿ ಕರೆ ಮಾಡಿ ಮನೆಗೆ ಬರುತ್ತೇನೆ ಎಂದರು ಸಿಎಂ. ಹನ್ನೊಂದು ಗಂಟೆ ಮೇಲೆ ಬನ್ನಿ ಎಂದು ಹೇಳಿದೆ ಎಂದರು.

ನಾನು ಹೊರಗೆ ಬರಲು ಆಗೋದಿಲ್ಲ. ಹಾಗಾಗಿ ರೇವಣ್ಣರನ್ನ ಕರೆಸಿದ್ದೆ. ಮುಖ್ಯಮಂತ್ರಿಗಳನ್ನ ಬರಮಾಡಿಕೊಳ್ಳಲು ರೇವಣ್ಣ ಹೋಗಿದ್ದರು. ಬಸವರಾಜ್ ಬೊಮ್ಮಾಯಿ ತಂದೆ ನಾವೆಲ್ಲಾ ಒಟ್ಟಿಗೆ ಕೆಲಸ ಮಾಡಿದ್ದೇವೆ. ಎಸ್.ಆರ್ ಬೊಮ್ಮಾಯಿ, ಜೆ.ಹೆಚ್ ಪಟೇಲ್ ಎಲ್ಲರೂ ಅಗಲಿ ಹೋಗಿದ್ದಾರೆ. ನನ್ನ ಆಶೀರ್ವಾದ ಪಡೆಯಲು ಬರುತ್ತೇನೆ ಎಂದು ಬೊಮ್ಮಾಯಿ ಹೇಳಿದ್ದು ಖುಷಿಯಾಯ್ತು ಎಂದು ಸಂತಸಪಟ್ಟರು.

ಇದನ್ನೂ ಓದಿ: ದಶಕಗಳಿಂದ ಅಭಿವೃದ್ದಿ ಕಾಣದ ಹಳ್ಳಿಗೆ ರಸ್ತೆ ತಂದ ಭಾರತದ ಮಹಿಳಾ ಬಾಕ್ಸರ್ ಗೆಲುವು

ಸೋಮಣ್ಣ ಕೂಡ ಸಿಎಂ ಜೊತೆಯಲ್ಲೇ ಇದ್ದರು. ಒಳ್ಳೆಯ ಕೆಲಸ ಮಾಡಿ ನಮ್ಮ ಸಹಕಾರ ಇರಲಿದೆ ಅಂತಾ ಹೇಳಿದ್ದೇನೆ. ಯಡಿಯೂರಪ್ಪರನ್ನ ತೆಗೆಯಬೇಕು ಅಂತಾ ನಾವೇನು ಹೇಳಿರಲಿಲ್ಲ. ಕೇಂದ್ರದ ಬಿಜೆಪಿ ನಾಯಕರು 75 ವರ್ಷ ಮೇಲ್ಪಟ್ಟವರಿಗೆ ಅವಕಾಶ ನೀಡಿರಲಿಲ್ಲ. ಯಡಿಯೂರಪ್ಪ ವಿಚಾರದಲ್ಲಿ ಅದು ವಿಶೇಷ ಸಂದರ್ಭ. ಹಾಗಾಗಿ ರಾಜೀನಾಮೆಯನ್ನ ಪಡೆದುಕೊಂಡಿದ್ದಾರೆ ಎಂದು ಹೇಳಿದರು.

ನನ್ನ ಮೊಮ್ಮಗ ಅದಕ್ಕೆ ಇರೋದು

ಮಂತ್ರಿ ಮಂಡಲ ಭರ್ತಿ ಮಾಡುವುದು ನಮಗೆ ಸಂಬಂಧಿಸಿದ್ದಲ್ಲ. ನೀರಾವರಿ ವಿಷಯದ ಬಗ್ಗೆ ಸಲಹೆ ಕೇಳಿದ್ರೆ ಗೊತ್ತಿರುವಷ್ಟು ಮಾಹಿತಿ ನೀಡುತ್ತೇನೆ. ಎಲ್ಲಾ ಎಂಪಿಗಳ ಸಭೆ ಕರೆದಾಗ ಹೋಗಲು ಸಾಧ್ಯವಾಗೋದಿಲ್ಲ. ಅದೇ ಕಾರಣಕ್ಕೆ ನನ್ನ ಮೊಮ್ಮಗ ಹೋಗುತ್ತಾನೆ. ನಮ್ಮ ಕಡೆಯಿಂದ ಸರ್ಕಾರಕ್ಕೆ ಯಾವುದೇ ಆತಂಕ ಇಲ್ಲ. ಒಳ್ಳೆಯದಾಗಲಿ ಅಂತಾ ಆಶಿಸುತ್ತೇನೆ ಎಂದರು.

ಎಲ್ಲರೂ ಸಿಎಂ ಆಗಲು ಸಾಧ್ಯವಿಲ್ಲ

ಎಲ್ಲರೂ ಸಿಎಂ ಆಗಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಜೊತೆ ಬಹಳ ಜನ ಹೋಗಿದ್ದಾರೆ. ಎಲ್ಲರೂ‌ ಸಿಎಂ, ಮಂತ್ರಿಗಳು ಆಗಲು ಸಾಧ್ಯವಿಲ್ಲ. ಬಸವರಾಜ್ ಬೊಮ್ಮಾಯಿ‌ ಈಗ ಸಿಎಂ ಆಗಿದ್ದಾರೆ. ಈ ‌ಮೊದಲು ಯಡಿಯೂರಪ್ಪ, ಶೆಟ್ಟರ್, ಸದಾನಂದಗೌಡ ಅವಧಿಯಲ್ಲಿ ಸಚಿವರಾಗಿದ್ದಾರೆ. ಬಿಜೆಪಿಯಲ್ಲಿ ಅದಕ್ಕಿಂತಲೂ ಯಡಿಯೂರಪ್ಪ ಜೊತೆ ನಡೆದುಕೊಂಡ ರೀತಿ‌ ನೋಡಿ ಕೊನೆಗೆ ಹೈಕಮಾಂಡ್ ಒಪ್ಪಿಕೊಂಡು ಅವಕಾಶ ನೀಡಿದೆ. ಸಿಎಂಗೆ ಕೆಲಸ ಮಾಡಲು ಹೆಚ್ಚು ಉತ್ಸಾಹ ಇದೆ ಎಂದು ಭರವಸೆ ನೀಡಿದರು.

Source: newsfirstlive.com Source link