ದೇಶಕ್ಕೆ ಕೊರೊನಾ ಮೂರನೇ ಅಲೆ ಭೀತಿ; ಏನಿದು ಅಕ್ಟೋಬರ್ 15 ಮರ್ಮ?

ದೇಶಕ್ಕೆ ಕೊರೊನಾ ಮೂರನೇ ಅಲೆ ಭೀತಿ; ಏನಿದು ಅಕ್ಟೋಬರ್ 15 ಮರ್ಮ?

ಕೊರೊನಾ ಸೋಂಕಿನ ಎರಡನೇ ಅಲೆ ಕಲ್ಪನೆಯನ್ನೂ ಮಾಡಿಕೊಳ್ಳದಂಥ ಪೆಟ್ಟನ್ನು ದೇಶಕ್ಕೆ ನೀಡಿತ್ತು. ಒಂದೇ ದಿನ ಬರೋಬ್ಬರಿ 4 ಲಕ್ಷ ಕೇಸ್​​ಗಳು ದಾಖಲಾಗಿದ್ದು ದೊಡ್ಡ ಆಘಾತವನ್ನೇ ಉಂಟು ಮಾಡಿತ್ತು. ಜೊತೆಗೆ ಔಷಧ ಕೊರತೆ, ಬೆಡ್​ಗಳ ಕೊರತೆ, ಆಸ್ಪತ್ರೆಗಳ ಕೊರತೆ, ಐಸಿಯೂ ಕೊರತೆ, ಇಂಜೆಕ್ಷನ್​ಗಳ ಕೊರತೆ, ಆಕ್ಸಿಜನ್ ಕೊರತೆ ಹೀಗೆ ಕೊರತೆಗಳ ಸರಮಾಲೆಯೂ ಭಯಾನಕ ವಾತಾವರಣ ಸೃಷ್ಟಿ ಮಾಡಿತ್ತು. ಹೀಗಾಗಿ, ಸಹಜವಾಗಿ ಜನಮಾನಸವೆಲ್ಲ 3 ನೇ ಅಲೆ ಬರೋದು ಬೇಡಪ್ಪ ಎಂದು ಬೇಡಿಕೊಳ್ಳುತ್ತಿದೆ. ಆದ್ರೂ, ಹಲವಾರು ಜನರ ಬೇಜವಾಬ್ದಾರಿ ನಡವಳಿಕೆ ಅಂಥ ಆತಂಕ ದಿಟವಾಗುವ ಸಾಧ್ಯತೆಯನ್ನು ತೆರದಿಟ್ಟಿದೆ. ಈ ಬಗ್ಗೆ ದೇಶದ ಎರಡು ಪ್ರತಿಷ್ಠಿತ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಗಳು ಮಹತ್ವದ ಮಾಹಿತಿಯನ್ನು ನೀಡಿದ್ದು ಜನರು ಎಚ್ಚರಗೊಳ್ಳಬೇಕು ಎಂದು ತಿಳಿಸಿವೆ.

ಅಕ್ಟೋಬರ್ 15ರ ಮರ್ಮವೇನು?

ಇಂಡಿಯನ್​​ ಇನ್​​​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾನ್​ಪುರದ ಪ್ರೊಫೆಸರ್ ಮಹಿಂದ್ರ ಅಗ್ರವಾಲ್ ಹಾಗೂ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್ ಟೆಕ್ನಾಲಜಿ ಹೈದರಾಬಾದ್​​ನ ಪ್ರೊಫೆಸರ್ ಮಥುಕಮಳ್ಳಿ ವಿದ್ಯಾಸಾಗರ್ ಅವರ ತಂಡ ನಡೆಸಿದ ಅಧ್ಯಯನದಲ್ಲಿ ಹಲವು ಮಾಹಿತಿಗಳು ಲಭ್ಯವಾಗಿವೆ. ಸಧ್ಯ ದೇಶದಲ್ಲಿ ನೀಡಲಾಗ್ತಿರೋ ಕೊರೊನಾ ವ್ಯಾಕ್ಸಿನ್ ಮತ್ತು ಸೆರೋ ಸರ್ವೆ ಮಾಹಿತಿ ಆಧಾರದ ಮೇಲೆ ಮ್ಯಾಥೆಮೆಟಿಕಲ್ ಮಾಡೆಲ್ ಬಳಸಿ ಈ ತಂಡಗಳು ಅಧ್ಯಯನ ನಡೆಸಿವೆ.

ಇವರು ನಡೆಸಿದ ಅಧ್ಯಯನದ ಪ್ರಕಾರ ದೇಶದಲ್ಲಿ ಅಕ್ಟೋಬರ್ ವೇಳೆಗೆ ಮೂರನೇ ಅಲೆ ಪೀಕ್​ ಮುಟ್ಟಲಿದೆ ಎನ್ನಲಾಗಿದೆ. ಅಂದ್ರೆ ಅತ್ಯಂತ ಕೆಟ್ಟ ಸಿನಾರಿಯೋದಲ್ಲಿ ಅಕ್ಟೋಬರ್ 15ರ ವೇಳೆಗೆ ದೇಶದಲ್ಲಿ ಪ್ರತಿ ನಿತ್ಯ 1 ಲಕ್ಷದ 50 ಸಾವಿರ ಪ್ರಕರಣಗಳು ದಾಖಲಾಗಲಿವೆ. ಸೋಂಕನ್ನು ಉತ್ಮವಾಗಿ ಕಟ್ಟಿಹಾಕಿದಲ್ಲಿ ಈ ಸಂಖ್ಯೆ 1 ಲಕ್ಷದವರೆಗೆ ಮುಟ್ಟಲಿದೆ. ಇನ್ನೂ ಒಂದು ವೇಳೆ ಅತ್ಯಂತ ಕಠಿಣವಾದ ಕ್ರಮಗಳನ್ನು ತೆಗೆದುಕೊಂಡು ಸೋಂಕು ನಿಯಂತ್ರಿಸಿದರೆ ಈ ಸಂಖ್ಯೆ ಇಂದಿನಂತೆಯೇ ಸರಿ ಸುಮಾರು 50 ಸಾವಿರ ಕೇಸ್​ಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ.

ಆದ್ರೆ ಈ ಬಾರಿ ಕೂಡ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳೇ ಈ ಆಶಾಭಾವನೆಗೆ ತಣ್ಣೀರು ಎರಚಲಿವೆ ಅಂತಾ ಈ ಅಧ್ಯಯನ ತಿಳಿಸಿದೆ. ಹೀಗಾಗಿ, ಈ ಎರಡೂ ರಾಜ್ಯಗಳಲ್ಲಿ ಸೋಂಕನ್ನು ನಿಯಂತ್ರಿಸಬೇಕಿರೋದು ಅತ್ಯಂತ ಮಹತ್ವದ ಸಂಗತಿಯಾಗಲಿದೆ.

Source: newsfirstlive.com Source link