ಹೆಲ್ಮೆಟ್ ಧರಿಸಿದ ದ್ವಿಚಕ್ರ ವಾಹನ ಸವಾರರಿಗೆ ತುಳಸಿ ಗಿಡ ನೀಡಿದ ಆರ್.ಟಿ.ಓ

ನೆಲಮಂಗಲ: ಹೆಲ್ಮೆಟ್ ಧರಿಸದವರಿಗೆ ಪೊಲೀಸರು ಫೈನ್ ಹಾಕಿದವರನ್ನು ನೋಡಿದ್ದೇವೆ, ಆದರೆ ಇಲೊಬ್ಬರು ಆರ್.ಟಿ.ಓ ಅಧಿಕಾರಿ ಹೆಲ್ಮೆಟ್ ಹಾಕಿರುವವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತುಳಸಿ ಗಿಡ ಕೊಟ್ಟು ಅಭಿನಂದಿಸಿದ್ದಾರೆ.

ರಸ್ತೆ ಸುರಕ್ಷತಾ ಅಭಿಯಾನದ ಅಂಗವಾಗಿ ನೆಲಮಂಗಲ ಪ್ರಾದೇಶಿಕ ಸಾರಿಗೆ ಕಛೇರಿವತಿಯಿಂದ ತುಮಕೂರು ರಸ್ತೆಯ ಜಾಸ್ ಟೋಲ್ ಬಳಿ ದ್ವಿಚಕ್ರ ವಾಹನ ಸವಾರರಿಗೆ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ. ಹೆಲ್ಮೆಟ್ ಧರಿಸಿ ವಾಹನ ಓಡಿಸುವುದರಿಂದ ಉಂಟಾಗುವ ಪ್ರಯೋಜನಗಳು ಮತ್ತು ಅಸುರಕ್ಷ ಹೆಲ್ಮೆಟ್ ಧರಿಸುವದರಿಂದ ಆಗುವ ತೊಂದರೆಗಳು ಮತ್ತು ಕೇಂದ್ರ ಮೋಟಾರು ವಾಹನಗಳ ನಿಯಮಗಳ ಬಗ್ಗೆ ಹಿರಿಯ ಮೋಟಾರು ವಾಹನ ನಿರೀಕ್ಷಕರಾದ ಡಾ. ಧನ್ವಂತರಿ ಒಡೆಯರ್ ಈ ಬಗ್ಗೆ ಅರಿವು ಮೂಡಿಸಿದ್ದಾರೆ. ಇದನ್ನೂ ಓದಿ: ಕುಂದಾಪುರದಿಂದ ಹೊರಟಿದೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪರಿಗೆ ಪತ್ರ

ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಸವಾರರು ವಾಹನ ಓಡಿಸಿದರೆ 3 ತಿಂಗಳು ಲೈಸನ್ಸ್ ರದ್ದು ಪಡಿಸಲಾಗುವುದು. ಕರ್ನಾಟಕ ಮೋಟಾರು ವಾಹನ ನಿಯಮಗಳ ಪ್ರಕಾರ 4 ವರ್ಷ ಮೇಲ್ಪಟ್ಟ ಎಲ್ಲ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿರಬೇಕು ಎಂದು ಅರಿವು ಮೂಡಿಸಿ, ಹೆಲ್ಮೆಟ್ ಧರಿಸದ 10 ಸವಾರರಿಗೆ ದಂಡ ವಿಧಿಸಿ ಸುರಕ್ಷಿತ ಹೆಲ್ಮೆಟ್ ಧರಿಸಿದ 58 ಸವಾರರಿಗೆ ತುಳಸಿ ಗಿಡ ನೀಡಿ ಅಭಿನಂದಿಸಿದರು.

ನೆಹರು ಯುವ ಕೇಂದ್ರದ ಸದಸ್ಯರಾದ ಶ್ರೀ ಮಂಜುನಾಥ್ ಮಾತನಾಡಿ ಅಸುರಕ್ಷಿತ ಹೆಲ್ಮೆಟ್ ಧರಿಸಬೇಡಿ ಎಂದು ಕಿವಿ ಮಾತು ಹೇಳಿದರು. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‍ನ ಗೋಪಾಲ್ ರವರು ತುಳಸಿ ಗಿಡ ನೀಡಿದರು. ಪರಿಸರ ಕ್ರಾಂತಿ ಸಂಸ್ಥೆಯ ಅಧ್ಯಕ್ಷರು ಹನುಮಂತರಾಜು ಪರಿಸರ ರಕ್ಷಣೆ ಬಗ್ಗೆ ಅರಿವು ಮೂಡಿಸಿದರು.

Source: publictv.in Source link