22 ಬಾರಿ ಬಡ ಡ್ರೈವರ್ ಕೆನ್ನೆಗೆ ಬಾರಿಸಿದ ಯುವತಿ; ಆದ್ರೂ ಡ್ರೈವರ್​​ ವಿರುದ್ಧವೇ FIR..! ಮುಂದೇನಾಯ್ತು?

22 ಬಾರಿ ಬಡ ಡ್ರೈವರ್ ಕೆನ್ನೆಗೆ ಬಾರಿಸಿದ ಯುವತಿ; ಆದ್ರೂ ಡ್ರೈವರ್​​ ವಿರುದ್ಧವೇ FIR..! ಮುಂದೇನಾಯ್ತು?

ಲಖನೌ: ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣ ಟ್ವಿಟರ್​​ ಗಮನಿಸಿದವರಿಗೆ #ArrestLucknowGirl ಅನ್ನೋ ಹ್ಯಾಷ್​ಟ್ಯಾಗ್ ಟ್ರೆಂಡಿಂಗ್​​ನಲ್ಲಿ ಇದ್ದಿದ್ದು ಗಮನ ಸೆಳೆದೇ ಸೆಳೆದಿರುತ್ತೆ. ಅಷ್ಟಕ್ಕೂ ಈ ಲಖನೌ ಗರ್ಲ್ ಯಾರು? ಆಕೆಯನ್ನ ಏಕೆ ಅರೆಸ್ಟ್ ಮಾಡಬೇಕು? ಅನ್ನೋ ಪ್ರಶ್ನೆಯನ್ನ ಇಟ್ಟುಕೊಂಡು ಅದಕ್ಕೆ ಸಂಬಂಧಿಸಿದ ವಿಡಿಯೋಗಳನ್ನ ನೋಡಿದಾಗ ಖಂಡಿತ ಹಲವರಿಗೆ ಶಾಕ್ ಆಗದೇ ಇರೋದಿಲ್ಲ. ಯಾಕಂದ್ರೆ ಆ ವಿಡಿಯೋದಲ್ಲಿ ಯುವತಿಯೋರ್ವಳು ಕ್ಯಾಬ್​ ಡ್ರೈವರ್​​ನ ಕೆನ್ನೆಗೆ ಮಿತಿಯೇ ಇಲ್ಲದಂತೆ ಹೊಡೆಯುತ್ತಳೇ ಹೋಗ್ತಾಳೆ. ಆ ಡ್ರೈವರ್ ಯಾಕೆ ಮೇಡಂ? ಯಾಕೆ ಹೊಡಿತಿದ್ದೀರಿ? ಎಂದು ಕೇಳಿದ್ರೂ ಆ ಯುವತಿ ಬಾರಿಸೋದನ್ನ ನಿಲ್ಲಿಸೋದಿಲ್ಲ. ಸ್ಥಳದಲ್ಲೇ ಇದ್ದ ಟ್ರಾಫಿಕ್ ಪೊಲೀಸ್​​​ ಕೂಡ ಆ ಯುವತಿಯನ್ನ ತಡೆಯಲು ಹೋದ್ರೆ ಆಗಲೂ ಆಕೆ ಸುಮ್ಮನಾಗಲ್ಲ. ಅಷ್ಟೊತ್ತಿಗೆ ದಾರಿಹೋಕರು ಒಬ್ಬರು ಬಂದು ಆಕೆಯನ್ನ ತಡೆಯಲು ಹೋದರೆ ಅವರ ಮೇಲೂ ಆಕೆ ರೇಗಿರೋದು ಕಂಡು ಬರುತ್ತೆ. ಇಲ್ಲಿ ಇಷ್ಟೆಲ್ಲ ನಡೆಯುತ್ತಿದ್ದು ನಡು ರಸ್ತೆಯಲ್ಲೇ.. ಹೀಗಾಗಿ ದೊಡ್ಡ ಟ್ರಾಫಿಕ್​ ಜಾಮ್​ ಕೂಡ ಉಂಟಾಗುತ್ತೆ.. ಹಾಗಿದ್ದರೆ ಏನು ಈ ಘಟನೆ? ಯಾರು ಆ ಯುವತಿ? ಆಕೆಯನ್ನ ಬಂಧಿಸಿ ಅಂತಾ ಹ್ಯಾಷ್​ಟ್ಯಾಗ್ ಟ್ರೆಂಡ್ ಆಗಿದ್ದು ಯಾಕೆ ಅಂತ ನೋಡೋದಾದ್ರೆ..

ವಾಕಿಂಗ್​​ ಹೋಗ್ತಿದ್ದ ಯುವತಿ:

ಕಿವಿಯಲ್ಲಿ ಹೆಡ್​​ಫೋನ್​ ಹಾಕಿಕೊಂಡು ಯುವತಿ ವಾಕಿಂಗ್ ಹೋಗ್ತಿದ್ದರಂತೆ. ಈ ವೇಳೆ ಹಿಂದಿನಿಂದ ಬಂದ ಡ್ರೈವರ್​ ಒಂದೆರಡು ಬಾರಿ ಹಾರ್ನ್ ಹಾಕಿದ್ದನಂತೆ. ಬಳಿಕ ಆಕೆ ಹಿಂದೆ ಸಡನ್ ಆಗಿ ಬ್ರೇಕ್ ಹಾಕಿದ್ದಾನೆ. ಆ ಕ್ಷಣ ಅಲ್ಲಿ ಏನಾಯ್ತೋ ಗೊತ್ತಿಲ್ಲ.. ಅದು ಪೊಲೀಸರ ತನಿಖೆಯಿಂದಲೇ ಹೊರಬರಬೇಕು. ಆದ್ರೆ, ತದನಂತರದಲ್ಲಿ ರೌದ್ರ ರೂಪ ತಾಳುವ ಯುವತಿ ಬಡ ಕ್ಯಾಬ್​​ ಡ್ರೈವರ್​​​​ ಅಲಿ ಸಿದ್ದಿಕಿ ಕಪಾಳಕ್ಕೆ ಬಾರಿಸಲು ಆರಂಭಿಸುತ್ತಾಳೆ. ಇನ್ನು ಸಿದ್ದಿಕಿ ಹೇಳೋ ಪ್ರಕಾರ, ಈ ಘಟನೆ ಜುಲೈ 30ರಂದು ಇಲ್ಲಿನ ನಹಾರಿಯಾ ಚೌರಾಹಾದ ಟ್ರಾಫಿಕ್​ ಸಿಗ್ನಲ್ ಬಳಿ ನಡೆದಿತ್ತಂತೆ. ಅಲ್ಲದೇ ಆ ಯುವತಿ ಸಿದ್ದಿಕಿಯವರ ಫೋನ್​ ಕಸಿದುಕೊಂಡು ಪೀಸ್ ಪೀಸ್ ಮಾಡ್ತಾರೆ. ಬಳಿಕ ಕಾರಿನ ಸೈಡ್ ಮಿರರ್​ನು ಸಹ ಮುರಿದ್ದಿದ್ದಾರಂತೆ. ಅಲ್ಲದೇ, ಅವರು ಸಿಗ್ನಲ್​​ನಿಂದ ತುಸು ದೂರದಲ್ಲಿ ಇರುವಾಗಲೇ ನಾನು ಬ್ರೇಕ್​​ ಹಾಕಿದ್ದ್ದೆ. ಕೂಡಲೇ ನನ್ನ ಕಾರಿನ ಕಿಟಕಿ ಬಳಿ ಬಂದು ಕೆಳಗಿಳಿಯುವಂತೆ ಗದರಿಸಿದಳು. ನಾನು ಏನಾಯ್ತು ಮೇಡಂ ಎಂದು ಕೇಳಲು ಕೆಳಗಿಳಿದರೆ ನನ್ನ ಕೆನ್ನೆಗೆ 20ಕ್ಕೂ ಹೆಚ್ಚು ಬಾರಿ ಬಾರಿಸಿದರು. ಇದು ನನಗೆ ಅತೀವ ನೋವು ತಂದಿದೆ. ಈಕೆ ವಿರುದ್ಧ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಿ ಎಂದು ಕ್ಯಾಬ್​​ ಚಾಲಕ ಪೊಲೀಸರಿಗೆ ಮನವಿ ಕೂಡ ಮಾಡಿಕೊಂಡಿದ್ದಾರೆ.

ಚಾಲಕನ ವಿರುದ್ಧವೇ FIR

ವಿಡಿಯೋದಲ್ಲಿ ಸ್ಪಷ್ಟವಾಗಿ ಆ ಯುವತಿಯೇ ಕ್ಯಾಬ್ ಡ್ರೈವರ್​ ಮೇಲೆ ಹಲ್ಲೆ ಮಾಡ್ತಿರೋದು ಕಂಡು ಬರುತ್ತೆ. ಹೀಗಿದ್ದೂ, ಲಖನೌ ಪೊಲೀಸರು ಬಳಿಕ ಆ ಡ್ರೈವರ್ ವಿರುದ್ಧವೇ ಎಫ್​ಐಆರ್ ದಾಖಲಿಸುತ್ತಾರೆ. ಈ ಸಂಗತಿ ಬಹಿರಂಗವಾಗುತ್ತಿದ್ದಂತೆಯೇ ಟ್ವಿಟರ್ ಬಳಕೆದಾರರು ಕೆರಳುತ್ತಾರೆ. ಪುರುಷರು, ಮಹಿಳೆಯರು, ಯುವಕರು, ಯುವತಿಯರು ಅನ್ನೋ ಭೇದವಿಲ್ಲದೇ, #ArrestLucknowGirl ಅನ್ನೋ ಹ್ಯಾಷ್​​ಟ್ಯಾಗ್​​ ಚಲಾಯಿಸುತ್ತಾರೆ. ಆ  ಯುವತಿ ಕಾನೂನು ಕೈಗೆ ತೆಗೆದುಕೊಂಡಿದ್ದು ತಪ್ಪು.. ಹಾಗೆ ಹಲ್ಲೆ ಮಾಡಿದ್ದು ಅಕ್ಷಮ್ಯ ಅಂತ ತಮ್ಮದೇ ಆದ ರೀತಿಯಲ್ಲಿ ಉತ್ತರ ಪ್ರದೇಶ ಪೊಲೀಸರ ಮೇಲೆ ಒತ್ತಡ ಹೇರುತ್ತಾರೆ. ಬಳಿಕ ನಡೆದಿದ್ದೇ ಬೇರೆ.

ಯುವತಿ ವಿರುದ್ಧ ಕ್ರಮ?

ಕ್ಯಾಬ್​ ಡ್ರೈವರ್​​​ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವಾಗ ಉತ್ತರ ಪ್ರದೇಶ ಪೊಲೀಸರ ಮೇಲೆ ಸಾಮಾಜದ ಎಲ್ಲ ವರ್ಗಗಳಿಂದ ಒತ್ತಡ ಹೆಚ್ಚಾಯ್ತೋ.. ಆಗ ಅವರೂ ಕ್ರಮಕ್ಕೆ ಮುಂದಾಗಿದ್ದಾರೆ. ಇಂದು ಆ ಯುವತಿ ವಿರುದ್ಧ ಕೂಡ ಕೇಸ್​ ಅನ್ನು ಪೊಲೀಸರು ದಾಖಲಿಸಿದ್ದು, ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಆದ್ರೆ ಈ ನಡುವೆ ಒಂದು ವೇಳೆ ಸಾಮಾಜಿಕ ಜಾಲ ತಾಣ ಈ ಸಂಗತಿಯನ್ನ ಗಮನಿಸದೇ ಇದ್ದರೆ? ಆ ಯುವತಿ ಹಲ್ಲೆ ನಡೆಸಿದ್ದು ವಿಡಿಯೋ ರೆಕಾರ್ಡ್​ ಆಗದೇ ಇದ್ದಿದ್ದರೆ ಚಾಲಕನ ಸ್ಥಿತಿ ಏನಾಗ್ತಿತ್ತು? ಅಂತಾ ಕೂಡ ಹಲವರು ಪ್ರಶ್ನಿಸಿದ್ದಾರೆ.

ಆದ್ರೆ ಈ ಪ್ರಕರಣ ಇಷ್ಟೆಲ್ಲ ರೂಪ ಪಡೆದುಕೊಂಡಿದ್ದರೂ ಆ ಯುವತಿ ಇನ್ನೂ ಯಾವುದೇ ಹೇಳಿಕೆಯನ್ನ ನೀಡಿಲ್ಲ.. ಹೀಗಾಗಿ, ಆಕೆ ಹಾಗೆ ಹಲ್ಲೆ ಮಾಡಿದ್ದು ಯಾಕೆ? ಅನ್ನೋ ಪ್ರಶ್ನೆ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಆದರೂ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಅನ್ನೋ ಹಾಗೆ ಈ ಪ್ರಕರಣದಲ್ಲಿ ಚಾಲಕನ ತಪ್ಪಿದ್ದರೆ ಚಾಲಕನ ವಿರುದ್ಧ, ಯುವತಿ ತಪ್ಪಿದ್ದರೆ ಯುವತಿ ವಿರುದ್ಧ ಕಠಿಣ ಕ್ರಮವಾಗಬೇಕು. ಆಗ ಇಂಥ ಘಟನೆಗಳು ಖಂಡಿತ ಮರುಕಳಿಸೋದಿಲ್ಲ. ಆದರೂ, ಯಾರೂ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಬಾರದು. ಬದಲಿಗೆ ಪೊಲೀಸರ ಸಹಾಯ ಪಡೆಯಬೇಕು ಅನ್ನೋದು ನಾಗರಿಕ ಸಮಾಜದಲ್ಲಿ ಅಪೇಕ್ಷಣೀಯ.

Source: newsfirstlive.com Source link