ರಾಯಚೂರಿನಲ್ಲಿ ಹೆಚ್ಚಾದ ಡೆಂಗ್ಯೂ ಪ್ರಕರಣ- 20 ಮಕ್ಕಳು ಆಸ್ಪತ್ರೆಗೆ ದಾಖಲು

ರಾಯಚೂರು: ಮಳೆ, ಪ್ರವಾಹ ನಿಂತ ಮೇಲೆ ಇದೀಗ ಅದರ ಎಫೆಕ್ಟ್ ಶುರುವಾಗಿದ್ದು, ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಚಿಕ್ಕಮಕ್ಕಳೇ ಹೆಚ್ಚು ಸಂಖ್ಯೆಯಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.

ಕೊರೊನಾ ಮೂರನೇ ಅಲೆಯ ಆತಂಕ, ಮಹಾರಾಷ್ಟ್ರದ ಸಂಪರ್ಕದ ಭೀತಿ ನಡುವೆ ರಾಯಚೂರಿನಲ್ಲಿ ಡೆಂಗ್ಯೂ ಜ್ವರ ಉಲ್ಬಣಗೊಂಡಿದೆ. ರಾಯಚೂರು ತಾಲೂಕಿನ ಶಕ್ತಿನಗರದಲ್ಲಿ ಅತೀ ಹೆಚ್ಚು ಮಕ್ಕಳಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿದೆ. ಮಳೆಗಾಲ ಹಿನ್ನೆಲೆ ಡೆಂಗ್ಯೂ ಹೆಚ್ಚಾಗಿದ್ದು, ಪೋಷಕರು ಆತಂಕಕ್ಕೊಳಗಾಗಿದ್ದಾರೆ. ಶಕ್ತಿ ನಗರದಲ್ಲಿ ಒಂದೇ ವಾರದಲ್ಲಿ 20 ಮಕ್ಕಳಿಗೆ ಜ್ವರ ಕಾಣಿಸಿಕೊಂಡಿದೆ. ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ನೂರಕ್ಕೂ ಹೆಚ್ಚು ಜನ ದಾಖಲಾಗಿದ್ದಾರೆ. ಸ್ವಚ್ಛತೆ ಕಾಪಾಡದೆ ಎಲ್ಲಂದರಲ್ಲಿ ನೀರು ನಿಂತಿರುವುದು, ಮಳೆ ನೀರು ಎಲ್ಲೆಡೆ ಸಂಗ್ರಹವಾಗಿರುವುದು ಸೊಳ್ಳೆಗಳ ಬೆಳವಣಿಗೆಗೆ ಕಾರಣವಾಗಿದೆ. ಇದರಿಂದ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿವೆ.

ಡೆಂಗ್ಯೂ ಜ್ವರ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ಹರಸಾಹಸ ನಡೆಸಿದೆ. ಜ್ವರ ಕಾಣಿಸಿಕೊಳ್ಳುವ ಮಕ್ಕಳ ಮೇಲೆ ನಿಗಾವಹಿಸಿದೆ. ಶಕ್ತಿ ನಗರದ ವಿವಿಧ ಬಡಾವಣೆಯಲ್ಲಿ ಹತ್ತಾರು ಜಾಗೃತಿ ಕಾರ್ಯಕ್ರಮಗಳನ್ನು ಸಹ ಆಯೋಜಿಸಿದ್ದು, ಆದರೂ ಹೊಸ ಪ್ರಕರಣಗಳು ಪತ್ತೆಯಾಗುಲೇ ಇವೆ. ಗ್ರಾಮ ಪಂಚಾಯಿತಿ ಮತ್ತು ಆರೋಗ್ಯ ಇಲಾಖೆ ನೇತೃತ್ವದಲ್ಲಿ ಜಾಗೃತಿ ಕಾರ್ಯಕ್ರಮ ಮಾಡಲಾಗುತ್ತಿದೆ. ಮಳೆಗಾಲದಲ್ಲಿ ಸಹಜವಾಗಿ ಡೆಂಗ್ಯೂ ಪ್ರಕರಣಗಳು ಕಾಣಿಸಿಕೊಳ್ಳುತ್ತವೆ. ಆದರೆ ಈ ಬಾರಿ ಹೆಚ್ಚು ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿವೆ.

blank

ಒಂದೆಡೆ ಕೊರೊನಾ ಮೂರನೇ ಅಲೆ ಆತಂಕ ಮಕ್ಕಳ ಪೋಷಕರಿಗೆ ಕಾಡುತ್ತಿರುವ ಹೊತ್ತಲ್ಲೇ ಡೆಂಗ್ಯೂ ಜ್ವರ ಬೆಚ್ಚಿಬೀಳಿಸುತ್ತಿದೆ. ಮನೆ ಮುಂದೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದೇ ಮೊದಲ ಪರಿಹಾರವಾಗಿರುವುದರಿಂದ ಎಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ. ಆರೋಗ್ಯ ಇಲಾಖೆ ಸಹ ಅಗತ್ಯ ಕ್ರಮ ಕೈಗೊಂಡು ಗ್ರಾಮೀಣ ಭಾಗದಲ್ಲಿ ಸೂಕ್ತ ಸಮಯಕ್ಕೆ ಚಿಕಿತ್ಸೆ ಸೌಲಭ್ಯ ಒದಗಿಸಬೇಕಿದೆ.

Source: publictv.in Source link