ಗ್ರೀಸ್​​ ದೇಶದಲ್ಲೀಗ ಭೀಕರ ಕಾಡ್ಗಿಚ್ಚು.. ಮನೆಯಲ್ಲಿದ್ರು ಕಷ್ಟ, ಹೊರಗೆ ಹೋದ್ರು ಕಷ್ಟ

ಗ್ರೀಸ್​​ ದೇಶದಲ್ಲೀಗ ಭೀಕರ ಕಾಡ್ಗಿಚ್ಚು.. ಮನೆಯಲ್ಲಿದ್ರು ಕಷ್ಟ, ಹೊರಗೆ ಹೋದ್ರು ಕಷ್ಟ

ಗ್ರೀಸ್‌ ಅಂದ್ರೆ ನಮಗೆ ನೆನಪಾಗುವುದೇ ಅಲ್ಲಿಯ ಸುಂದರ ಪ್ರವಾಸಿ ತಾಣಗಳು, ಅತ್ಯಾಕರ್ಷಕ ಬೀಚ್‌ಗಳು. ಆದ್ರೆ, ಇದೀಗ ಇಡೀ ಗ್ರೀಸ್‌ ಬಿಕೋ ಎನ್ನುತ್ತಿದೆ. ಪ್ರವಾಸಿಗರು ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಸ್ಥಳೀಯರು ಮನೆ ಬಿಟ್ಟು ಹೊರ ಬರ್ತಾ ಇಲ್ಲ, ಮನೆಯಲ್ಲಿಯೂ ನೆಮ್ಮದಿಯಾಗಿ ಇರುತ್ತಿಲ್ಲ. ಹಾಗಾದ್ರೆ ಗ್ರೀಸ್‌ನಲ್ಲಿ ಏನಾಗ್ತಿದೆ ಅನ್ನೋದನ್ನು ಹೇಳ್ತೀವಿ ನೋಡಿ ಸ್ಪೆಷಲ್‌ ಸ್ಟೋರಿಯಲ್ಲಿ.

ರಜೆಯ ಅವಧಿಯಲ್ಲಿ ಗ್ರೀಸ್‌ ಪ್ರವಾಸಕ್ಕೆ ಹೋಗುವುದು ಅಲ್ಲಿಯ ಸುಂದರ ಪ್ರವಾಸಿ ಸ್ಥಳಗಳಲ್ಲಿ ಸುತ್ತಾಡುವುದು, ಅಲ್ಲಿಯೇ ಅಲ್ಪಕಾಲ ಉಳಿದುಕೊಳ್ಳುವುದು….ವಿಶ್ವದಲ್ಲಿರುವ ಬಹುತೇಕ ಪ್ರವಾಸಿ ಪ್ರೀಯರು ಇದನ್ನೇ ಮಾಡುತ್ತಾರೆ. ಯಾಕೆಂದ್ರೆ, ಅಲ್ಲಿಯ ಪ್ರವಾಸಿ ಸ್ಥಳಗಳೇ ಅಷ್ಟೊಂದು ಅದ್ಭುತವಾಗಿವೆ. ಸುಂದರವಾಗಿ ನಿರ್ಮಾಣವಾಗಿರೋ ಬೀಚ್‌ಗಳು ಎಂತವರನ್ನಾದರೂ ಮಂತ್ರಮುಗ್ಧರಾಗಿ ಮಾಡಿ ಬಿಡುತ್ತವೆ. ಜೀವನದಲ್ಲಿ ಒಮ್ಮೆಯಾದ್ರೂ ಗ್ರೀಸ್‌ನ ಬೀಜ್‌ಗಳಿಗೆ ಹೋಗಿ ಬರಬೇಕು ಅನ್ನೋ ಭಾವನೆ ಬರುತ್ತೆ. ಒಮ್ಮೆ ಪ್ರವಾಸಕ್ಕೆ ಹೋದವರು ಮತ್ತೊಮ್ಮೆ ಹೋಗಬೇಕು ಅಂತ ಪ್ಲಾನ್‌ ಹಾಕಿಕೊಳ್ಳುತ್ತಾರೆ. ಯಾಕೆಂದ್ರೆ ಗ್ರೀಸ್‌ನ ಬೀಚ್‌ಗಳು ಅಷ್ಟೊಂದು ಸುಂದರ, ಅತ್ಯಾಕರ್ಶಕವಾಗಿವೆ.

ಮನೆ ಬಿಟ್ಟು ಹೊರಬರ್ತಾ ಇಲ್ಲ ಗ್ರೀಸ್‌ ಜನ
ಹೊರಬಂದ್ರೆ ನೀರಿರುವ ಸ್ಥಳಕ್ಕೆ ಹೋಗ್ತಾರೆ

ಹೌದು, ಜನ ಹೊರಗೆ ಬರ್ತಾ ಇಲ್ಲ ಅಂದ್ರೆ ಕೊರೊನಾ ಅಂತಕ ಇರಬೇಕು. ಇಲ್ಲವೇ ಸೋಂಕು ನಿಯಂತ್ರಣಕ್ಕೆ ನಿರ್ಬಂಧ ಹೇರಿರಬೇಕು ಅಂದಕ್ಕಾಗಿಯೇ ಜನ ಹೊರ ಬರ್ತಾ ಇಲ್ಲ ಅಂದುಕೊಳ್ಳಬೇಡಿ. ಯಾಕಂದ್ರೆ ನಾವು ಹೇಳ್ತಾ ಇರೋ ವಿಷ್ಯಕ್ಕೂ ಕೊರೊನಾ ನಿರ್ಬಂಧಕ್ಕೂ ಸಂಬಂಧವೇ ಇಲ್ಲ. ಆದ್ರೆ, ಜನ ಮಾತ್ರ ಮನೆ ಬಿಟ್ಟು ಹೊರ ಬರ್ತಾ ಇಲ್ಲ. ಆಫೀಸ್‌ ಹೋಗುವವರು ಬೆಳಗ್ಗೆ ಹೋಗಿದ್ರೆ, ಸಂಜೆ ಸೂರ್ಯ ಮುಳುಗುವ ಸಮಯಕ್ಕೆ ವಾಪಸ್‌ ಆಗುತ್ತಾರೆ. ಅನಗತ್ಯವಾಗಿ ಸಂಚಾರವೇ ಇಲ್ಲ. ತರಕಾರಿ ಸೇರಿದಂತೆ ಅಗತ್ಯ ವಸ್ತುಗಳು ಬೇಕಾದ್ರೆ ಬೆಳ್ಳಂಬೆಳಗ್ಗೆ ಇಲ್ಲವೇ ಸೂರ್ಯ ಮುಳುಗಿದ ನಂತರ ಹೊರ ಹೋಗಿ ತರ್ತಾರೆ. ಆಕಸ್ಮಾತ್‌ ಮಧ್ಯಾಹ್ನದ ವೇಳೆ ಮನೆಯಿಂದ ಹೊರ ಬಿದ್ರು ಅಂದ್ರೆ, ತಲೆಯಲ್ಲಿ ಒಂದು ಕ್ಯಾಪ್‌ ಇರುತ್ತೆ, ಕೈಯಲ್ಲಿ ಒಂದು ಛತ್ರಿ ಇರುತ್ತೆ. ಇನ್ನು ಮನೆಯಲ್ಲಿ ಕೂತು ಬೇಜಾರಾಯಿತು ಅಂತ ಹೆಂಡತಿ ಮಕ್ಕಳ ಜೊತೆ ಸುತ್ತಾಡಲು ಹೋಗಬೇಕು ಅಂದ್ರೆ ನೀರಲ್ಲಿ ಆಟ ಆಡುವ ಸ್ಥಳವನ್ನೇ ಹುಡುಕಿ ಹೋಗುತ್ತಾರೆ. ಇದರಿಂದಾಗಿ ಅಥೇನ್ಸ್‌ ಸೇರಿದಂತೆ ಗ್ರೀಸ್‌ನ ಅನೇಕ ನಗರಗಳಲ್ಲಿ ಜನಸಂಚಾರ ಕಳೆದ ಒಂದು ವಾರದಿಂದ ತುಂಬಾ ವಿರಳವಾಗಿ ಬಿಟ್ಟಿದೆ. ವಾಹನ ಸಂಚರವೂ ಇಲ್ಲದೇ ನಗರಳು ಬಿಕೋ ಎನ್ನುತ್ತಿವೆ. ಹಾಗಾದ್ರೆ ಗ್ರೀಸ್‌ಗೆ ಏನಾಯ್ತು?

ಭಾರೀ ಪ್ರಮಾಣದಲ್ಲಿ ಉಷ್ಣಾಂಶ ಏರಿಕೆ
ಸರಾಸರಿ 45 ಡಿಗ್ರಿ ಉಷ್ಣಾಂಶ ದಾಖಲು

blank

ಹೌದು, ಗ್ರೀಸ್‌ ಜನರು ಯಾಕೆ ಮನೆ ಬಿಟ್ಟು ಹೊರಗೆ ಬರ್ತಾ ಇಲ್ಲಾ ಮತ್ತು ಮನೆಯಲ್ಲಿಯೇ ಇದ್ರೂ ನೆಮ್ಮದಿಯಾಗಿ ಇರಲ್ಲ ಅಂದ್ರೆ ಅದಕ್ಕೆ ಕಾರಣ ಉಷ್ಣಾಂಶ ಏರಿಕೆಯಾಗಿದೆ. ಹೌದು, ಕಳೆದ ಎರಡು ವಾರದಿಂದ ಗ್ರೀಸ್‌ನಾದ್ಯಂತ ಭಾರೀ ಪ್ರಮಾಣದಲ್ಲಿ ಉಷ್ಣಾಂಶ ಏರಿಕೆಯಾಗ್ತಾ ಇದೆ. ಸರಾಸರಿ 45 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಇದರಿಂದಾಗಿ ಮಧ್ಯಾಹ್ನದ ವೇಳೆ ಮನೆ ಬಿಟ್ಟು ಹೊರ ಬೀಳುತ್ತಾ ಇಲ್ಲ. ಮನೆಯಲ್ಲಿಯೇ ಇದ್ರು ಬೆವರು ಇಳಿಯುತ್ತಾ ಇರುತ್ತಾರೆ. ಎಸಿ, ಪ್ಯಾನ್‌ಗಳನ್ನು ಆನ್‌ ಮಾಡಿಕೊಂಡೆ ಕೂರುತ್ತಾರೆ. ಯಾವುದಾದ್ರೂ ಅಗತ್ಯ ವಸ್ತು ಬೇಕು ಅಂದ್ರೂ ಮಧ್ಯಾಹ್ನದ ಸಮಯದಲ್ಲಿ ಮಾತ್ರ ರಸ್ತೆಗೆ ಇಳಿಯಲ್ಲ. ಅತ್ತ ಸುತ್ತಾಡಲು ಆಗದೆ, ಮನೆಯಲ್ಲಿಯೂ ನೆಮ್ಮದಿಯಾಗಿ ಕೂಳಿತುಕೊಳ್ಳಲಾಗದೆ ಒಂದು ರೀತಿಯ ಚಿತ್ರ ಹಿಂಸೆಯನ್ನು ಗ್ರೀಸ್‌ ಜನ ಅನುಭವಿಸುತ್ತಿದ್ದಾರೆ.

ಮನೆಯಿಂದ ಹೊರ ಹೋದ್ರೆ ನೀರಿನಲ್ಲಿ ಆಟ
ಮಾರುಕಟ್ಟೆಯಲ್ಲಿ ಕ್ಯಾಪ್‌ ವ್ಯಾಪಾರ ಜೋರು

ಉಷ್ಣಾಂಶ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಜನರು ಮಧ್ಯಾಹ್ನದ ಸಮಯದಲ್ಲಿ ಮನೆ ಬಿಟ್ಟು ಹೊರಡುವುದಿಲ್ಲ. ಒಮ್ಮೆ ಹೊರಟರೂ ತಲೆಯಲ್ಲಿ ಒಂದು ಕ್ಯಾಪ್‌ ಇದ್ದೇ ಇರುತ್ತೆ. ಕೆಲವರು ಛತ್ರಿ ಹಿಡಿದುಕೊಂಡು ಸಂಚಾರ ಮಾಡುತ್ತಾರೆ. ಇದೇ ಕಾರಣಕ್ಕೆ ಅಥೇನ್ಸ್‌ನ ಗಲ್ಲಿ ಗಲ್ಲಿಯಲ್ಲಿಯೂ ಕ್ಯಾಪ್‌ ವ್ಯಾಪಾರ ಜೋರಾಗಿಯೇ ನಡೆಯುತ್ತಿದೆ. ನಮ್ಮ ದೇಶದಲ್ಲಿ ವ್ಯಕ್ತಿಗಳು ಕಡ್ಡಾಯವಾಗಿ ಮಾಸ್ಕ್‌ ಧರಿಸುವಂತೆ ಅಲ್ಲಿಯ ಜನ ಕ್ಯಾಪ್‌ ಧರಿಸುತ್ತಾರೆ. ಕುಟುಂಬದವರ ಜೊತೆ ಮನೆಯಿಂದ ಹೊರಹೋಗಬೇಕು ಅನಿಸಿದರೆ ಹೆಚ್ಚಿನದಾಗಿ ಬೀಚ್‌ಗಳಿಗೆ ಭೇಟಿ ನೀಡುತ್ತಾರೆ. ನೀರಿನಲ್ಲಿ ಆಟ ಆಡುತ್ತಾ ಕಾಲ ಕಳೆಯುತ್ತಾರೆ. ಎಲ್ಲಿಗೂ ಹೋಗದೇ ಮನೆಯಲ್ಲಿಯೇ ಇದ್ದರೆ ಪ್ಯಾನ್‌, ಎಸಿ ಆನ್‌ ಮಾಡಿಕೊಂಡೇ ಇರುತ್ತಾರೆ.

ಮಧ್ಯಾಹ್ನ, ರಾತ್ರಿ ಕಡಿಮೆ ವಿದ್ಯುತ್‌ ಬಳಸಲು ಸೂಚನೆ
ಈಗಾಗಲೇ ಅನೇಕ ವಿದ್ಯುತ್‌ ಗ್ರಿಡ್‌ಗಳು ನಾಶ

ಹೌದು, ಉಷ್ಣಾಂಶ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು ವಿದ್ಯುತ್‌ ಗ್ರಿಡ್‌ಗಳ ಮೇಲೆ ಪರಿಣಾಮ ಬೀರುತ್ತಿದೆ. ಇತ್ತೀಚೆಗೆ ಅನೇಕ ಗ್ರಿಡ್‌ಗಳು ನಾಶವಾಗಿವೆ. ಇದರಿಂದಾಗಿ ವಿದ್ಯುತ್‌ ವ್ಯತ್ಯಯ ಮತ್ತೆ ಮತ್ತೆ ಮರುಕಳಿಸುತ್ತಲೇ ಇದೆ. ಇದೇ ಕಾರಣಕ್ಕೆ ಗ್ರೀಸ್‌ ಸರ್ಕಾರ ಜನರಲ್ಲಿ ಒಂದು ಮನವಿಯನ್ನು ಮಾಡಿಕೊಂಡಿದೆ. ಅದೇನಂದ್ರೆ ಮಧ್ಯಾಹ್ನ ಮತ್ತು ರಾತ್ರಿ ವೇಳೆ ವಿದ್ಯುತ್‌ ಅನ್ನು ಕಡಿಮೆ ಪ್ರಮಾಣದಲ್ಲಿ ಬಳಸಿ ಅಂತ. ಹೌದು, ಮಧ್ಯಾಹ್ನ ಮತ್ತು ರಾತ್ರಿ ವೇಳೆ ವಿದ್ಯುತ್‌ ಕಡಿಮೆ ಪ್ರಮಾಣದಲ್ಲಿ ಬಳಸುವುದರಿಂದ ವಿದ್ಯುತ್‌ ಗ್ರಿಟ್‌ಗಳ ಮೇಲೆ ಒತ್ತಡ ಕಡಿಮೆಯಾಗುತ್ತದೆ. ಹೀಗಾಗಿ ಗ್ರಿಡ್‌ನಲ್ಲಿ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆ ಇರುವುದಿಲ್ಲ. ಇನ್ನು ಸರ್ಕಾರದ ಅದೇಶದಂತೆ ರಾತ್ರಿ ವೇಳೆ ಜನರು ಕಡಿಮೆ ವಿದ್ಯುತ್‌ ಬಳಕೆ ಮಾಡುತ್ತಿದ್ದಾರೆ. ಆದ್ರೆ, ಮಧ್ಯಾಹ್ನದ ವೇಳೆ ವಿದ್ಯುತ್‌ ಬಳಕೆ ಕಡಿಮೆಯಾಗುತ್ತಿಲ್ಲ ಅಂತ ವರದಿ ಹೇಳುತ್ತಿದೆ.

ಉಷ್ಣಾಂಶ ಏರಿಕೆ ಅನಿರೀಕ್ಷಿತವಲ್ಲ
1987 ರಿಂದ ಉಷ್ಣಾಂಶ ಏರುತ್ತಲೇ ಇದೆ

ಉಷ್ಣಾಂಶ ಏರಿಕೆ ಬಗ್ಗೆ ಬ್ರಿಸ್ಟಲ್‌ ವಿಶ್ವವಿದ್ಯಾಲಯದ ಹವಾಮಾನ ತಜ್ಞ ಡ್ಯಾನ್‌ ಮಿಚೆಲ್‌ ಪ್ರತಿಕ್ರಿಯಿಸಿದ್ದು, ಕಳೆದ ಒಂದೆರೆಡು ವಾರದಿಂದ ಗ್ರೀಸ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಉಷ್ಣಾಂಶ ಏರಿಕೆ ಅನಿರೀಕ್ಷಿತ ಅಲ್ಲವೇ ಅಲ್ಲ. ಹವಮಾನದಲ್ಲಿ ಆಗುತ್ತಿರುವ ಬದಲಾವಣೆಯಿಂದಾಗಿ ವರ್ಷದಿಂದ ವರ್ಷಕ್ಕೆ ಉಷ್ಣಾಂಶ ಏರಿಕೆಯಾಗುತ್ತಲೇ ಇದೆ. ಸಾಮಾನ್ಯವಾಗಿ 2005 ರಿಂದ ವಿಶ್ವದಲ್ಲಿ ಶಾಖದ ಪ್ರಮಾಣ ಹೆಚ್ಚಾಗುತ್ತಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಅಪಾಯವನ್ನು ಉಂಟು ಮಾಡಲಿದೆ ಎಂದು ತಿಳಿಸಿದ್ದಾರೆ. ಇನ್ನು ಗ್ರೀಸ್‌ನಲ್ಲಿ ಉಷ್ಣಾಂಶ ಏರಿಕೆ ಒಂದೆರೆಡು ವರ್ಷಗಳಿಂದ ಕಂಡುಬರುತ್ತಿರುವ ಸಮಸ್ಯೆ ಅಲ್ಲ. 1987 ರಿಂದಲೂ ಉಷ್ಣಾಂಶದಲ್ಲಿ ಏರಿಕೆ ಕಾಣುತ್ತಲೇ ಸಾಗುತ್ತಿದೆ.

ಉಷ್ಣಾಂಶ ಹೆಚ್ಚಳದಿಂದ ಕಾಡ್ಗಿಚ್ಚು
ಗ್ರೀಸ್‌, ಇಟಲಿ, ಟರ್ಕಿಯಲ್ಲಿಯೂ ತಾಪಮಾನ ಏರಿಕೆ

ಗ್ರೀಸ್‌ನಲ್ಲಿ ಮಾತ್ರ ಉಷ್ಣಾಂಶ ಏರಿಕೆ ಕಾಣುತ್ತಿಲ್ಲ. ಗ್ರೀಸ್‌ ಸಮೀಪ ಇರುವ ಇಟಲಿ, ಟರ್ಕಿಯಲ್ಲಿಯೂ ಕೂಡ ಭಾರೀ ಪ್ರಮಾಣದಲ್ಲಿ ಉಷ್ಣಾಂಶ ಏರಿಕೆ ಕಾಣಿಸಿಕೊಳ್ಳುತ್ತಿದೆ. ಇಟಲಿ, ಟರ್ಕಿ ಜನ ಕೂಡ ಉಷ್ಣಾಂಶ ಏರಿಕೆಯಿಂದ ಕಂಗಾಲಾಗಿದ್ದಾರೆ. ಉಷ್ಣಾಂಶ ಏರಿಕೆಯ ಮತ್ತೊಂದು ದುಷ್ಪರಿಣಾಮ ಅಂದ್ರೆ ಕಾಡ್ಗಿಚ್ಚು ಆರಂಭವಾಗುತ್ತಿರುವುದು. ಇದರಿಂದ ಅಪಾರ ಪ್ರಮಾಣದ ಅರಣ್ಯ ನಾಶವಾಗುತ್ತಿದೆ. ಪ್ರಾಣಿ ಪಕ್ಷಿಗಳು ಜೀವ ಕಳೆದುಕೊಳ್ಳುತ್ತಿವೆ. ಅರಣ್ಯದಂಚಿನಲ್ಲಿರೋ ಗ್ರಾಮಸ್ಥರು ಸ್ಥಳಾಂತರ ಮಾಡುತ್ತಿದ್ದಾರೆ. ಹೌದು, ಉಷ್ಣಾಂಶ ಏರಿಕೆ ಈ ರೀತಿಯಾಗಿ ದುಷ್ಪರಿಣಾಮ ಬೀರುತ್ತಿದೆ. ಇತ್ತೀಚೆಗೆ ಅಥೇನ್ಸ್‌ ಪಶ್ಚಿಮದಲ್ಲಿರೋ ಅರಣ್ಯದಲ್ಲಿಯೂ ಕಾಡ್ಗಿಚ್ಚು ಕಾಣಿಸಿಕೊಂಡು ಅರಣ್ಯನಾಶವಾಗಿತ್ತು. ಉಷ್ಣಾಂಶ ಏರಿಕೆಯಿಂದಲೇ ಗ್ರೀಸ್‌, ಟರ್ಕಿ, ಇಟಲಿಯಲ್ಲಿ ಭಾರೀ ಪ್ರಮಾಣದಲ್ಲಿ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತಿದೆ.
ಟರ್ಕಿಯಲ್ಲಿ ಕಾಣಿಸಿಕೊಂಡ ಭೀಕರ ಕಾಡ್ಗಿಚ್ಚಿನಿಂದ ಉಷ್ಣಾಂಶ ಏರಿಕೆ?

ಕಾಡ್ಗಿಚ್ಚು ನಂದಿಸಲು ಟರ್ಕಿಯಿಂದ ಹರಸಾಹಸ

ಗ್ರೀಸ್‌ ಸನಿಹದಲ್ಲೇ ಇರೋ ಟರ್ಕಿಯಲ್ಲಿ ಕಳೆದ ವಾರ ಭೀಕರ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. 6 ವಿಮಾನ, 45 ಹೆಲಿಕಾಪ್ಟರ್‌, ಸುಮಾರು 500 ಅಗ್ನಿ ಶಾಮಕ ವಾಹನಗಳು ಕಾಡ್ಗಿಚ್ಚು ನಂದಿಸಲು ಶ್ರಮಪಟ್ಟಿವೆ. ನೂರಾರು ಎಕರೆ ಪ್ರದೇಶ ಕಾಡ್ಗಿಚ್ಚಿಗೆ ಭಸ್ಮವಾಗಿ ಬಿಟ್ಟಿದೆ. ಅರಣ್ಯದಂಚಿನಲ್ಲಿರೋ ಗ್ರಾಮಗಳಿಗೂ ಕಾಡ್ಗಿಚ್ಚು ಆವರಿಸಿಕೊಂಡು ಜನ ರಾತ್ರೋ ರಾತ್ರಿ ಓಡಿ ಹೋಗಿದ್ದಾರೆ. ನೂರಾರು ಪ್ರಾಣಿ ಪಕ್ಷಿಗಳು ಬೆಂಕಿಗೆ ಸಜೀವ ದಹನವಾಗಿವೆ. ಎಷ್ಟೋ ಮನೆಗಳು ಭಸ್ಮವಾಗಿವೆ. ನಾಲ್ಕೈಂದು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ವಿಪರೀತ ಕಾಡ್ಗಿಚ್ಚಿನಿಂದಾಗಿ ಗ್ರಾಮಗಳಲ್ಲಿ ಬೂದಿ ಮಳೆಯೇ ಸುರಿದಿತ್ತು. ಇದರಿಂದಾಗಿಯೇ ಟರ್ಕಿಯ ಸಮೀಪ ಇರು ಗ್ರೀಸ್‌ನಲ್ಲಿ ಉಷ್ಣಾಂಶ ಏರಿಕೆಯಾಗುತ್ತಿದೆ ಅಂತ ತಜ್ಞರು ಹೇಳುತ್ತಿದ್ದಾರೆ.

ಮೂರು ದಶಕದ ನಂತರ ಗರಿಷ್ಠ ಮಟ್ಟಕ್ಕೆ ಹೋದ ಉಷ್ಣಾಂಶ
1987ರಲ್ಲಿ ಬಿಸಿಲಿನ ತಾಪಕ್ಕೆ ಸಾವಿರಕ್ಕೂ ಅಧಿಕ ಜನ ಸಾವು

blank

ಗ್ರೀಸ್‌ನಲ್ಲಿ ದಾಖಲಾಗುತ್ತಿರುವ ಉಷ್ಣಾಂಶ ಜನರನ್ನು ನಿಂತಲ್ಲಿ ನಿಲ್ಲಲು ಕೊಡುತ್ತಿಲ್ಲ. ಮೂರು ದಶಕದ ಹಿಂದೆ ಅಂದ್ರೆ 1987ರಲ್ಲಿ ಕೂಡ ಇದೇ ರೀತಿಯಾಗಿ ಉಷ್ಣಾಂಶ ಏರಿಕೆಯಾಗಿತ್ತು. ಅಂದು ಜನ ಬಿಸಿಲು ಏರಿಕೆಯ ಸಮಯದಲ್ಲಿ ಮನೆ ಬಿಟ್ಟು ಹೊರಗೆ ಹೋಗ್ತಾ ಇರಲಿಲ್ಲ. ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಬೆಳಗ್ಗೆ ಸೂರ್ಯ ಉದಯಿಸುವ ಸಮಯದಲ್ಲಿ ಮತ್ತು ಸೂರ್ಯ ಮುಳುಗಿದ ನಂತರ ತೆಗೆದುಕೊಂಡು ಹೋಗ್ತಾ ಇದ್ದರಂತೆ. ಹೀಗಾಗಿ ಅಥೇನ್ಸ್‌ ನಗರವೇ ಜನರಿಲ್ಲದೇ ಬಿಕೋ ಎನ್ನುತ್ತಿತ್ತಂತೆ. ಅಂದು ಸುಮಾರು ಒಂದು ಸಾವಿರಕ್ಕೂ ಅಧಿಕ ಜನ ಬಿಸಿಲಿನ ತಾಪಕ್ಕೆ ಸಾವನ್ನಪ್ಪಿದ್ರು. ಸಾವಿರಾರು ಜನ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದಿದ್ರು. ಅನಂತರದಲ್ಲಿ 2019ರಲ್ಲಿ ಕೂಡ ಉಷ್ಣಾಂಶದಲ್ಲಿ ಏರಿಕೆಯಾಗಿತ್ತು. ಆದ್ರೆ, ಇದೀಗ ಏರಿಕೆಯಾದ ಉಷ್ಣಾಂಶದಷ್ಟು ಏರಿಕೆಯಾಗಿರಲಿಲ್ಲ.

ಗ್ರೀಸ್‌ನಲ್ಲಿ ಜುಲೈನಲ್ಲಿ ಕಾಣಿಸಿಕೊಂಡಿತ್ತು ಭೀಕರ ನೆರೆಹಾವಳಿ
ಸುಮಾರು 180 ಕ್ಕೂ ಅಧಿಕ ಜನ ಕಣ್ಮರೆ
ನೆರೆಹಾವಳಿ ಬೆನ್ನಲ್ಲಿಯೇ ಉಷ್ಣಾಂಶ ಏರಿಕೆ

ಹೌದು, ಜುಲೈ ಅಂತ್ಯದಿಂದ ಗ್ರೀಸ್‌ನಲ್ಲಿ ಉಷ್ಣಾಂಶ ಏರುತ್ತಲೇ ಇದೆ. ಆದ್ರೆ, ಅದಕ್ಕೂ ಮುನ್ನ ಅಂದ್ರೆ, ಜುಲೈನಲ್ಲಿ ಭಾರೀ ಪ್ರಮಾಣದ ಪ್ರವಾಹ ಕಾಣಿಸಿಕೊಂಡಿತ್ತು. ಸುಮಾರು 180ಕ್ಕೂ ಹೆಚ್ಚಿನ ಜನ ಕಣ್ಣರೆಯಾಗಿದ್ರು. ರಸ್ತೆಯಲ್ಲಿಯೇ ನೀರು ನದಿಯಂತೆ ಹರಿದಿತ್ತು. ಕಾರು, ಬೈಕ್‌ಗಳು ಕೊಚ್ಚಿಕೊಂಡು ಹೋಗಿದ್ದವು. ಎಷ್ಟೋ ಮನೆಗಳಿಗೆ ನೀರು ನುಗ್ಗಿ ಅನಾಹುತ ಸೃಷ್ಟಿಯಾಗಿತ್ತು. ಜನ ಅಸಾಯಕರಾಗಿ ಕಣ್ಣೀರು ಹಾಕಿದ್ರು. ದುರಾದೃಷ್ಟವಶಾಕ್‌ ಅಷ್ಟೊಂದು ಭೀಕರ ಪ್ರವಾಹ ಕಾಣಿಸಿಕೊಂಡ ಬೆನ್ನಲಿಯೇ ಉಷ್ಣಾಂಶ ಭಾರೀ ಪ್ರಮಾಣದಲ್ಲಿ ಏರುತ್ತಿದೆ. ಇದು ಗ್ರೀಸ್‌ ಜನರನ್ನು ಹೈರಾಣಾಗಿಸಿದೆ.

ತಜ್ಞರು ಹೇಳುವ ಪ್ರಕಾರ ಗ್ರೀಸ್‌ನಲ್ಲಿ ಇನ್ನಷ್ಟು ಉಷ್ಣಾಂಶ ಏರಿಕೆಯಾಗುತ್ತದೆಯಂತೆ. ಪ್ರವಾಸಿಗರನ್ನು ಸೂಚಿಗಲ್ಲಿನಂತೆ ಸೆಳೆಯುತ್ತಿದ್ದ ಗ್ರೀಸ್‌ ಅಪಾಯಕ್ಕೆ ಸಿಲುಕಿದೆ. ಅಲ್ಲಿಯ ಜನರಿಗೆ ಮನೆಯಲ್ಲಿ ಇದ್ದರೂ ನೆಮ್ಮದಿ ಇಲ್ಲ, ಹೊರಗೆ ಹೋದರೂ ನೆಮ್ಮದಿ ಇಲ್ಲದಂತಾಗಿದೆ.

Source: newsfirstlive.com Source link