ಎಮ್ಮೆ, ಕೋಣೆ ಆಯ್ತು.. ಈಗ ಪ್ರಧಾನಿ ನಿವಾಸವೇ ಬಾಡಿಗೆಗೆ ಬಿಟ್ಟ ಪಾಕ್

ಎಮ್ಮೆ, ಕೋಣೆ ಆಯ್ತು.. ಈಗ ಪ್ರಧಾನಿ ನಿವಾಸವೇ ಬಾಡಿಗೆಗೆ ಬಿಟ್ಟ ಪಾಕ್

ಭಯೋತ್ಪಾದಕರಿಗೆ ಬೆಂಬಲ ನೀಡುತ್ತಾ ಭಾರತದ ವಿರುದ್ಧ ಚೂಬಿಡುತ್ತಿರುವ ಪಾಕಿಸ್ತಾನ ಆರ್ಥಿಕವಾಗಿ ದಿವಾಳಿಯಾಗಿದೆ. ಇದೇ ಕಾರಣಕ್ಕೆ ಸರ್ಕಾರಿ ಒಡೆತನದ ಎಮ್ಮೆಗಳು, ಐಷಾರಾಮಿ ಕಾರುಗಳನ್ನು ಹರಾಜು ಹಾಕಿತ್ತು. ಆದ್ರೆ, ಇದೀಗ ಪ್ರಧಾನಿ ಇಮ್ರಾನ್‌ ಖಾನ್‌ ನೇತೃತ್ವದ ಸರ್ಕಾರ ಮತ್ತೊಂದು ಹೆಜ್ಜೆ ಮುಂದೆ ಹೋಗಿದೆ. ಅದು ಪ್ರಧಾನಿ ಕಚೇರಿಯ ಕಟ್ಟಡವನ್ನೇ ಬಾಡಿಗೆ ಕೊಡುವುದಾಗಿ ಹೇಳಿದೆ. ಎಂಥಾ ಆಶ್ಚರ್ಯ ಅಲ್ವಾ?

ಭಾರತದ ವಿರುದ್ಧ ನಾಲ್ಕು ನೇರ ಯುದ್ಧದಲ್ಲಿ ಪಾಕಿಸ್ತಾನ ಸೋತು ಸುಣ್ಣವಾಗಿದೆ. ಇದರಿಂದ ಪಾಕಿಸ್ತಾನಕ್ಕೆ ಅರಿವಾಗಿದ್ದು ಏನು ಅಂದ್ರೆ, ಭಾರತದ ವಿರುದ್ಧ ನೇರ ಯುದ್ಧದಲ್ಲಿ ಗೆಲ್ಲಲು ಸಾಧ್ಯವೇ ಇಲ್ಲ ಎನ್ನುವುದು. ಅದಕ್ಕಾಗಿಯೇ ಪಾಕ್‌ ಕಂಡುಕೊಂಡ ಪರಿಯಾಯ ಮಾರ್ಗ ಎಂದರೆ ಭಯೋತ್ಪಾದನೆ. ಹೌದು, ಭಯೋತ್ಪಾದನೆ ಸಂಘಟನೆಗಳಿಗೆ ಬೆಂಬಲ ನೀಡುವುದು, ಭಾರತದ ವಿರುದ್ಧ ಚೂಬಿಡುವುದು ಮಾಡುತ್ತಿದೆ. ಇದೇ ಕಾರಣಕ್ಕೆ ಸಾವಿರಾರು ಕೋಟಿ ಹಣ ಸರ್ಕಾರದ ಭೊಕ್ಕಸಕ್ಕೆ ನಷ್ಟವಾಗುತ್ತಿದೆ. ಕಳೆದ ನಾಲ್ಕೈದು ವರ್ಷದಿಂದ ತೀವ್ರವಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದೆ. ಬೇಕಾಬಿಟ್ಟಿ ಸಾಲ ಮಾಡಿಕೊಂಡು ಬಡ್ಡಿಯನ್ನು ತೀರಿಸಲಾಗದೇ ವಿಲವಿಲ ಒದ್ದಾಡುತ್ತಿದೆ. ಹಾಗಾದ್ರೆ, ದಿವಾಳಿತನದಿಂದ ಕೊಂಚವಾದ್ರೂ ಹೊರಬರಲು ಪಾಕಿಸ್ತಾನ ಮಾಡಿದ್ದಾದರೂ ಏನು?

blank

ದಿನನಿತ್ಯದ ಖರ್ಚು ವೆಚ್ಚಕ್ಕೂ ಪಾಕ್‌ನಲ್ಲಿ ಸಂಕಷ್ಟ
ಗಾಯದ ಮೇಲೆ ಬರೆಹಾಕಿದ ಕೊರೊನಾ ಸೋಂಕು

ಪಾಕಿಸ್ತಾನ ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿ ಬಿಟ್ಟಿದೆ. ದಿನನಿತ್ಯದ ವೆಚ್ಚವನ್ನು ನಿರ್ವಹಿಸಲು ಅದಕ್ಕೆ ಸಾಧ್ಯವಾಗುತ್ತಿಲ್ಲ. ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಆಗುತ್ತಿಲ್ಲ. ಸರ್ಕಾರಿ ನಿವಾಸ, ಸರ್ಕಾರಿ ಕಚೇರಿಗಳನ್ನು ನಿರ್ವಹಣೆ ಮಾಡಲು ಆಗುತ್ತಿಲ್ಲ. ಇನ್ನು ಅಭಿವೃದ್ಧಿ ಕಾರ್ಯವಂತೂ ದೂರದ ಮಾತಾಗಿ ಬಿಟ್ಟಿದೆ. ಕಳೆದ ಮೂರ್ನಾಲ್ಕು ವರ್ಷದಿಂದ ಪಾಕಿಸ್ತಾನದಲ್ಲಿ ಇದೇ ರೀತಿಯ ಪರಿಸ್ಥಿತಿ ಇದೆ. ಬಾಯಿ ಬಿಟ್ರೆ ಕಾಶ್ಮೀರದ ಬಗ್ಗೆ ಮಾತಾಡುತ್ತಿದ್ದ ಪಾಕಿಸ್ತಾನ ಈಗ ಕಾಶ್ಮೀರದ ಬಗ್ಗೆ ತುಟಿಕ್‌ ಪಿಟಿಕ್‌ ಅನ್ನುತ್ತಿಲ್ಲ. ಭಾರತದ ಬಗ್ಗೆ ಉಸಿರೆತ್ತುತ್ತಿಲ್ಲ.. ಇಂತಹ ಸಂಕಷ್ಟದಲ್ಲಿಯೇ ಕಾಣಿಸಿಕೊಂಡ ಕೊರೊನಾ ಸೋಂಕು ಪಾಕಿಸ್ತಾನಕ್ಕೆ ಆದ ಗಾಯದ ಮೇಲೆ ಬರೆ ಎಳೆದುಬಿಟ್ಟಿದೆ.

ಪ್ರಧಾನಿ ನಿವಾಸವನ್ನೇ ಬಾಡಿಗೆಗೆ ಇಟ್ಟ ಪಾಕ್‌
ಸಾಂಸ್ಕೃತಿಕ, ಶೈಕ್ಷಣಿಕ, ಫ್ಯಾಷನ್‌ ಕೆಲಸಕ್ಕೆ ಬಾಡಿಗೆ
ಗೌವರ್ನರ್‌ಗೆ ಅಧಿಕೃತ ನಿವಾಸ ತೆರೆಯಲು ಸೂಚನೆ

ಪಾಕಿಸ್ತಾನ ಪ್ರಧಾನಿಯವರ ಅಧಿಕೃತ ನಿವಾಸ, ನೋಡಲು ಸುಂದರವಾಗಿ ವಿಸ್ತಾರವಾಗಿ ಇದೆ. ಇದರ ನಿರ್ವಹಣೆಗೆ ವಾರ್ಷಿಕವಾಗಿ 47 ಕೋಟಿ ರೂಪಾಯಿ ವೆಚ್ಚವಾಗುತ್ತದೆ ಅಂತೆ. ಆರ್ಥಿಕ ಸಂಕಷ್ಟದಲ್ಲಿರೋ ಪಾಕಿಸ್ತಾನಕ್ಕೆ ಈ ನಿವಾಸದ ವೆಚ್ಚ ಬರಿಸಲು ಸಾಧ್ಯವಾಗುತ್ತಿಲ್ಲ. ಇನ್ನು ಬೇರೆ ದಾರಿ ಕಾಣದೇ ಈ ನಿವಾಸವನ್ನೇ ಬಾಡಿಗೆ ನೀಡಲು ಮುಂದಾಗಿದೆ. ಹೌದು, ಪ್ರಧಾನಿ ಇಮ್ರಾನ್‌ ಖಾನ್‌ ನೇತೃತ್ವದ ಸಚಿವ ಸಂಪುಟದಲ್ಲಿ ಇಂತಹವೊಂದು ನಿರ್ಧಾರ ಕೈಗೊಳ್ಳಲಾಗಿದೆ. ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಫ್ಯಾಷನ್ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಈ ಪ್ರಧಾನಿ ನಿವಾಸ ಬಾಡಿಗೆಗೆ ಸಿಗಲಿದೆ. ಸರ್ಕಾರದ ನಿಯಮಗಳನ್ನು ಉಲ್ಲಂಘಿಸದೇ ಈ ಕಟ್ಟಡ ಬಳಸಿಕೊಳ್ಳಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದರ ಜೊತೆಗೆ ಗೌವರ್ನರ್‌ಗಳಿಗೆ ಅಧಿಕೃತ ನಿವಾಸವನ್ನು ತೊರೆಯಲು ಸೂಚನೆ ನೀಡಲಾಗಿದೆ. ಹೀಗಾಗಿ ಗೌವರ್ನರ್‌ ನಿವಾಸಗಳನ್ನು ಬಾಡಿಗೆಗೆ ನೀಡಲಾಗುತ್ತಾ ಅನ್ನುವ ಅನುಮಾನವೂ ಆರಂಭವಾಗಿದೆ.

ಇದನ್ನೂ ಓದಿ: ಪಾಕಿಸ್ತಾನದಿಂದ ಭಾರತಕ್ಕೆ ಚೀಟಿ​​​ ತಂದ ಪಾರಿವಾಳ; ಏನಿದರ ‘ನಂಬರ್’ ರಹಸ್ಯ?

blank

2019ರಲ್ಲಿಯೇ ಪ್ರಧಾನಿ ನಿವಾಸ ತೊರೆದಿದ್ದ ಇಮ್ರಾನ್‌
ವಿಶ್ವವಿದ್ಯಾಲಯವಾಗಿ ಪರಿವರ್ತಿಸುತ್ತೇವೆ ಎಂದಿದ್ದ ಪಾಕ್‌

ಪಾಕಿಸ್ತಾನದಲ್ಲಿ ಒಟ್ಟು 342 ಲೋಕಸಭಾ ಕ್ಷೇತ್ರಗಳಿವೆ. ಸ್ಪಷ್ಟಬಹುಮತ ಬರಬೇಕು ಅಂದ್ರೆ 172 ಸ್ಥಾನಗಳನ್ನು ಗೆಲ್ಲಬೇಕಾಗುತ್ತದೆ. 2018ರಲ್ಲಿ ನಡೆದ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರುವುದಿಲ್ಲ. ಆದ್ರೆ, ಇಮ್ರಾನ್‌ ಖಾನ್‌ ನೇತೃತ್ವದ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ಪಕ್ಷ 149 ಸ್ಥಾನ ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತದೆ. ನಂತರ ಸಮ್ಮಿಶ್ರ ಸರ್ಕಾರ ರಚನೆಯಾಗುತ್ತದೆ. ಇಮ್ರಾನ್‌ ಖಾನ್‌ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಆದ್ರೆ, ಇಮ್ರಾನ್‌ ಪ್ರಧಾನಿ ಸ್ಥಾನ ಸ್ವೀಕರಿಸುವ ಮುನ್ನವೇ ಪಾಕಿಸ್ತಾನದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿರುತ್ತೆ. ಇಮ್ರಾನ್‌ ಖಾನ್‌ ಅವಧಿಯಲ್ಲಿ ಅದು ಮತ್ತಷ್ಟು ಭೀಕರ ಪರಿಸ್ಥಿಗೆ ಬರುತ್ತದೆ. ಹೀಗಾಗಿಯೇ 2019ರಲ್ಲಿಯೇ ಅಂದ್ರೆ ಪ್ರಧಾನಿಯಾಗಿ ಒಂದೇ ವರ್ಷದಲ್ಲಿ ಸರ್ಕಾರದ ಅಧಿಕೃತ ನಿವಾಸವನ್ನು ತೊರೆದು ತಮ್ಮ ಸ್ವಂತ ನಿವಾಸಕ್ಕೆ ತೆರಳುತ್ತಾರೆ. ಬಳಿಕ ಆ ನಿವಾಸವನ್ನು ವಿಶ್ವವಿದ್ಯಾಲಯವಾಗಿ ಪರಿವರ್ತಿಸುವುದಾಗಿ ಪಾಕಿಸ್ತಾನ ಸರ್ಕಾರ ಹೇಳಿತ್ತು.

2019ರಲ್ಲಿ ಮದುವೆ ಸಮಾರಂಭಗಳ ಹಾಲ್‌ ಆಗಿ ನಿರ್ಮಾಣ
ಕೊರೊನಾದಿಂದಾಗಿ ಮದುವೆ ಸಮಾರಂಭಗಳೇ ನಿಂತು ಹೋದ್ವು

ಪ್ರಧಾನಿ ಇಮ್ರಾನ್‌ ಖಾನ್‌ ಈ ನಿವಾಸವನ್ನು ತೊರೆದಾಗ ವಿಶ್ವವಿದ್ಯಾಲಯವಾಗಿ ಪರಿವರ್ತಿಸುತ್ತೇವೆ ಅಂತ ಹೇಳಿದ್ದೇನೋ ನಿಜ. ಆದ್ರೆ, ಮದುವೆ ಸಮಾರಂಭದ ಹಾಲ್‌ ಆಗಿ ಉಪಯೋಗಿಸಿಕೊಳ್ಳಲು ಅನುಕೂಲ ಮಾಡಿಕೊಡಲಾಗಿತ್ತು. 2019ರಲ್ಲಿ ಪಾಕಿಸ್ತಾನ ಸೇನಾ ಬ್ರಿಗೇಡಿಯರ್ ವಾಸೀಮ್ ಪುತ್ರಿ ಮದುವೆ ಸಮಾರಂಭ ಕೂಡ ಇಲ್ಲೇ ನಡೆದಿತ್ತು. ಹಲವು ರಾಜಕೀಯ ನಾಯಕರ ಮದುವೆ ಸಮಾರಂಭಕ್ಕೆ ಪ್ರಧಾನಿ ನಿವಾಸ ಸಾಕ್ಷಿಯಾಗಿತ್ತು. ಇದರಿಂದ 2019ರಲ್ಲಿ ಉತ್ತಮ ಆದಾಯವೇ ಬಂದಿತ್ತು. ಆದ್ರೆ, ಇದಕ್ಕೆ ಬ್ರೇಕ್‌ ನೀಡಿದ್ದು, ಕೊರೊನಾ ಸೋಂಕು. ಹೌದು, ಸೋಂಕು ನಿಯಂತ್ರಣಕ್ಕೆ ಲಾಕ್‌ಡೌನ್‌ ನಂತಹ ನಿರ್ಬಂಧ ಹೇರಿದ ಮೇಲೆ ಮದುವೆ ಸಮಾರಂಭಗಳೇ ಕಡಿಮೆಯಾಗಿ ಬಿಟ್ಟಿದ್ದವು. ಇದೇ ಕಾರಣಕ್ಕೆ ಇದೀಗ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಫ್ಯಾಷನ್ ಕಾರ್ಯಕ್ರಮಗಳಿಗೂ ಬಾಡಿಗೆ ನೀಡುವುದಾಗಿ ಪ್ರಕಟಿಸಿದೆ.

2018ರಲ್ಲಿ ಪ್ರಧಾನಿ ನಿವಾಸದಲ್ಲಿದ್ದ ಎಮ್ಮೆಗಳ ಮಾರಾಟ
ಎಮ್ಮೆ ಮಾರಾಟದಿಂದ ಬಂದಿತ್ತು 23 ಲಕ್ಷ ರೂಪಾಯಿ ಆದಾಯ

blank

ಹೌದು, ಪಾಕಿಸ್ತಾನ ಆರ್ಥಿಕವಾಗಿ ಎಷ್ಟು ದಿವಾಳಿಯಾಗಿದೆ ಅನ್ನೋದಕ್ಕೆ ಎಮ್ಮೆಗಳ ಮಾರಾಟವೇ ಸಾಕ್ಷಿಯಾಗಿತ್ತು. ಈ ಹಿಂದಿನ ಪ್ರಧಾನಿಯಾಗಿದ್ದ ನವಾಜ್‌ ಶರೀಫ್‌ ಪ್ರಧಾನಿ ನಿವಾಸದಲ್ಲಿ ಎಮ್ಮೆಗಳನ್ನು ಸಾಕಿದ್ದರು. ಆದ್ರೆ, ಅನಂತರ ಅಧಿಕಾರಕ್ಕೆ ಬಂದ ಇಮ್ರಾನ್‌ ಖಾನ್‌ ಸರ್ಕಾರ ಆರ್ಥಿಕ ಸಂಕಷ್ಟದಿಂದ ಪಾರಾಗಲು ಏನೇನು ಮಾಡಬೇಕು ಅನ್ನೋದನ್ನು ಪಟ್ಟಿ ಮಾಡಿತ್ತು. ಅದರಲ್ಲಿ ಪ್ರಧಾನಿ ನಿವಾಸದಲ್ಲಿದ್ದ ಎಮ್ಮೆಗಳ ಮಾರಾಟವೂ ಸೇರಿತ್ತು. ಹಾಗೇ 8 ಎಮ್ಮೆಗಳನ್ನು ಹರಾಜು ಕರೆದು ಮಾರಾಟ ಮಾಡಲಾಗಿತ್ತು. ಅದರಿಂದ ಸುಮಾರು 23 ಲಕ್ಷ ಆದಾಯ ಪಾಕಿಸ್ತಾನ ಸರ್ಕಾರಕ್ಕೆ ಬಂದಿತ್ತು. ಇದು ಪಾಕಿಸ್ತಾನ ಸರ್ಕಾರದ ಆರ್ಥಿಕ ದಿವಾಳಿತನಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.

ಸರ್ಕಾರಿ ಸೌಲಭ್ಯಗಳು ಒಂದೊಂದಾಗಿಯೇ ಹರಾಜು
61 ಐಷಾರಾಮಿ ಕಾರುಗಳ ಮಾರಾಟವೂ ಆಗಿತ್ತು

ಎಮ್ಮೆಗಳನ್ನು ಮಾರಾಟ ಮಾಡಿದ ನಂತರ ಸರ್ಕಾರ ಅಷ್ಟಕ್ಕೆ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಆರ್ಥಿಕ ಸಂಕಷ್ಟದಿಂದ ಪಾರಾಗಲು ಮತ್ತೇನು ಮಾಡಬಹುದು ಅಂತ ನೋಡಿದೆ. ಈ ಸಂದರ್ಭದಲ್ಲಿ ಅವರ ಕಣ್ಣಿಗೆ ಬಿದ್ದಿದ್ದು, ಸರ್ಕಾರದ ಮಾಲಿಕತ್ವದ ಐಷಾರಾಮಿ ಕಾರುಗಳು. ಅದನ್ನು ಮಾರಾಟ ಮಾಡಿದ್ರೆ ಸ್ವಲ್ಪ ಮಟ್ಟಿಗಿನ ಆದಾಯವನ್ನು ಗಳಿಸಿಬಹುದು ಅನ್ನೋದು ಸರ್ಕಾರದ ಗಮನಕ್ಕೆ ಬಂದಿತ್ತು. ತಕ್ಷಣವೇ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಯ್ತು. ಹಾಗೇ 61 ಐಷಾರಾಮಿ ಕಾರುಗಳನ್ನು ಹರಾಜಿಗೆ ಹಾಕಲಾಗಿತ್ತು. ಬರೋಬ್ಬರಿ 20 ಕೋಟಿ ರಾಪಾಯಿಗೆ ಕಾರುಗಳು ಹರಾಜು ಆಗಿದ್ದವು. ಅನಂತರ ಕೂಡ ಸರ್ಕಾರಿ ಮಾಲಿಕತ್ವದ ಅನೇಕ ಆಸ್ತಿಗಳನ್ನು ಹರಾಜು ಹಾಕಲಾಗಿತ್ತು.

ಹಣಕ್ಕಾಗಿ ಕತ್ತೆಗಳ ಸಾಕಾಣಿಕೆಗೆ ಒತ್ತು ನೀಡಿತ್ತು
ಚೀನಾಗೆ ಮಾರಾಟ ಮಾಡಿ ಕೋಟಿ ಕೋಟಿ ಹಣ ಗಳಿಸಿತ್ತು

ಕಳೆದ ಎರಡು ತಿಂಗಳ ಹಿಂದೆ ಪಾಕಿಸ್ತಾನ ಸಂಸತ್‌ನಲ್ಲಿ ಒಂದು ಗದ್ದಲವಾಗಿತ್ತು. ಅದೇನಂದ್ರೆ ಕತ್ತೆಗಳ ವಿಚಾರಕ್ಕೆ ಆಗಿತ್ತು. ಪಾಕಿಸ್ತಾನದಲ್ಲಿ ಉಳಿದ ಎಲ್ಲಾ ಪ್ರಾಣಿಗಳಿಗಿಂತ ಕತ್ತೆಗಳ ಸಂಖ್ಯೆ ಮಾತ್ರ ಭಾರೀ ಏರಿಕೆಯಾಗಿದೆ ಅಂತ ಪ್ರತಿಪಕ್ಷಗಳು ಗದ್ದಲ ಎಬ್ಬಿಸಿದ್ದವು. ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು ಡಾಂಕಿ ಪ್ರಧಾನಿ ಅಂತ ಘೋಷಣೆ ಕೂಗಲಾಗಿತ್ತು. ಹೌದು, ಪಾಕಿಸ್ತಾನದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಕತ್ತೆಗಳ ಸಂಖ್ಯೆ ಬಾರಿ ಏರಿಕೆಯಾಗಿದೆ. ಯಾಕೆಂದ್ರೆ ಕತ್ತೆಗಳ ಸಾಗಾಣಿಕೆಗೆ ಸರ್ಕಾರವೇ ಪ್ರೋತ್ಸಾಹ ನೀಡುತ್ತಿತ್ತು. ಅದಕ್ಕಾಗಿ ನಮ್ಮಲ್ಲಿ ಕುರಿ, ಕೋಳಿ, ದನಗಳನ್ನು ಸಾಕುವಂತೆ ಅಲ್ಲಿ ಕತ್ತೆಗಳನ್ನು ಸಾಕಲಾಗಿತ್ತು. ಹಾಗೇ ಸಾಕಿರುವ ಕತ್ತೆಗಳನ್ನು ಚೀನಾಕೆ ಸರಬರಾಜು ಮಾಡುತ್ತಿತ್ತು. ಚೀನಾ ಮಾಂಸಕ್ಕೆ ಔಷಧ ತಯಾರಿಕೆಗೆ ಬಳಸಿಕೊಳ್ಳುತ್ತಿತ್ತು. ಇದರಿಂದ ನೂರಾರು ಕೋಟಿ ಹಣ ಚೀನಾದಿಂದ ಪಾಕಿಸ್ತಾನಕ್ಕೆ ಹರಿದು ಬರುತ್ತಿದೆ.

ಪಾಕಿಸ್ತಾನ ಸರ್ಕಾರ ಭಯೋತ್ಪಾದಕರಿಗೆ ಆಹಾರ ಹಾಕುವುದನ್ನು ಬಿಟ್ಟು ಅಭಿವೃದ್ಧಿ ಕೆಲಸದ ಕಡೆ ದೃಷ್ಟಿ ಹರಿಸಿದ್ರೆ ಹೀಗಾಗುತ್ತಿರಲಿಲ್ಲ. ಮಾಡಿದ್ದುಣ್ಣೋ ಮಾರಾಯ ಅನ್ನೋ ಹಾಗೆ ತಾನು ಮಾಡಿದ ಪಾಪ ಕೃತ್ಯದಿಂದಲೇ ಪಾಕಿಸ್ತಾನ ದಿವಾಳಿಯಾಗಿದೆ.

ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್​: ಫೈನಲ್​​​ಗೆ ಲಗ್ಗೆ ಇಟ್ಟ ಕುಸ್ತಿ ಪಟು ರವಿ ದಹಿಯಾ.. ಚಿನ್ನಕ್ಕಾಗಿ ಹೋರಾಟ

Source: newsfirstlive.com Source link