ಭದ್ರೆಯ ಒಡಲಲ್ಲಿ 4 ದಿನಗಳ ಬಳಿಕ ಸಿಕ್ತು ಬೆಂಗಳೂರು ವೈದ್ಯನ ಮೃತದೇಹ

ಚಿಕ್ಕಮಗಳೂರು: ಫೋಟೋ ತೆಗೆಯುವ ವೇಳೆ ಕಾಲು ಜಾರಿ ಭದ್ರಾ ನದಿಗೆ ಬಿದ್ದು ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ವೈದ್ಯನ ಮೃತದೇಹ ನಾಲ್ಕು ದಿನಗಳ ಬಳಿಕ ಕಳಸ ತಾಲೂಕಿನ ಹಳುವಳ್ಳಿ ಗ್ರಾಮದಲ್ಲಿ ಪತ್ತೆಯಾಗಿದೆ.

ಮೃತನನ್ನ 36 ವರ್ಷದ ರುದ್ರೇಶ್ ಎಂದು ಗುರುತಿಸಲಾಗಿದೆ. ನಾಲ್ಕು ದಿನದ ಹಿಂದೆ ಜಿಲ್ಲೆಯ ಕಳಸ ಭಾಗಕ್ಕೆ ಪ್ರವಾಸಕ್ಕೆಂದು ಬಂದಿದ್ದ ರುದ್ರೇಶ್ ಸ್ಥಳೀಯ ಹೋಂ ಸ್ಟೇನಲ್ಲಿ ತಂಗಿದ್ದರು. ಈ ವೇಳೆ ಭದ್ರಾ ನದಿಯ ವಸಿಷ್ಠ ತೀರ್ಥದಲ್ಲಿ ಫೋಟೋ ತೆಗೆಯುವಾಗ ಕಾಲು ಜಾರಿ ಬಿದ್ದು ನಾಪತ್ತೆಯಾಗಿದ್ದರು. ಮೃತದೇಹ ಕೂಡ ಸಿಕ್ಕಿರಲಿಲ್ಲ. ಕಳೆದ ನಾಲ್ಕು ದಿನಗಳಿಂದ ಎಸ್.ಡಿ.ಆರ್.ಎಫ್, ಮುಳುಗು ತಜ್ಞರು, ಅಗ್ನಿಶಾಮಕ ಸಿಬ್ಬಂದಿ, ಶೌರ್ಯ ಸಿಬ್ಬಂದಿ ಹಾಗೂ ಸ್ಥಳೀಯರು ಹುಡುಕಾಟ ನಡೆಸಿದ್ದರು. ಮೃತದೇಹ ಪತ್ತೆಯಾಗಿರಲಿಲ್ಲ.

ಸುಮಾರು 70 ಜನ ಸಿಬ್ಬಂದಿ ನಾಲ್ಕು ದಿನದಿಂದ ನಿರಂತರವಾಗಿ ಹುಡುಕಿದ ಪರಿಣಾಮ ಬುಧವಾರ ಮೃತದೇಹ ಪತ್ತೆಯಾಗಿದೆ. ಅವರು ಬಿದ್ದ ಜಾಗದಿಂದ ಸುಮಾರು ಐದು ಕಿ.ಮೀ. ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಆಗಾಗ್ಗೆ ಮಳೆ ಸುರಿಯುತ್ತಲೇ ಇದೆ. ಕಳಸ ಭಾಗದ ಕುದುರೆಮುಖ ಸುತ್ತಮುತ್ತ ಮಳೆ ಕಡಿಮೆ ಆಗಿಲ್ಲ. ಭದ್ರಾ ನದಿ ಕೂಡ ವೇಗವಾಗಿ ಹರಿಯುತ್ತಿದೆ. ವೇಗವಾಗಿ ಹರಿಯುತ್ತಿರೋ ಭದ್ರೆಯ ಒಡಲಲ್ಲೇ ನಾಲ್ಕು ದಿನದಿಂದ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಸಲಾಗಿತ್ತು. ಇದನ್ನೂ ಓದಿ: ಇನ್‍ಸೈಡ್ ಸ್ಟೋರಿ – ಕೊನೆಯ ಹಂತದಲ್ಲಿ ವಿಜಯೇಂದ್ರಗೆ ಸಚಿವ ಸ್ಥಾನ ತಪ್ಪಿದ್ದೇಗೆ?

ಪ್ರವಾಸಿಗರಿಗೆ ಹಾಗೂ ನದಿ ದಡದಲ್ಲಿ ನಿಲ್ಲುವವರಿಗೆ ಸ್ಥಳಿಯರು ಮನವಿ ಮಾಡುತ್ತಲೇ ಇರುತ್ತಾರೆ. ತುಂಬಾ ಹತ್ತಿರ ಹೋಗಬೇಡಿ. ಬಂಡೆಗಳು ಜಾರುತ್ತವೆ. ಈ ಹಿಂದೆ ತುಂಬಾ ಅನಾಹುತಗಳು ನಡೆದಿವೆ. ಹತ್ತಿರ ಹೋಗಬೇಡಿ ಎಂದು ಎಷ್ಟೇ ಮನವಿ ಮಾಡಿದರೂ ಪ್ರವಾಸಿಗರು ಸ್ಥಳೀಯರ ಮಾತು ಕೇಳದೇ ಜಾಗದ ಪರಿಚಯ ಇಲ್ಲದೇ ಹೋಗಿ ಈ ರೀತಿ ಅನಾಹುತ ಮಾಡಿಕೊಳ್ಳುತ್ತಾರೆ ಎಂದು ಸ್ಥಳೀಯರು ನೊಂದುಕೊಳ್ಳುತ್ತಿದ್ದಾರೆ. ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಂತ್ರಿಸ್ಥಾನ ನೀಡದಿದ್ರೆ ಮತ್ತೊಂದು ಆಪರೇಷನ್ ನಡೆಸುವ ಎಚ್ಚರಿಕೆ ನೀಡಿದರಂತೆ ಎಂಟಿಬಿ ನಾಗರಾಜ್!

Source: publictv.in Source link