ಕಿಮ್ಸ್​​​ನಲ್ಲಿ ವೈದ್ಯರ ಕಳ್ಳಾಟ: ಇನ್ಮುಂದೆ ವೈದ್ಯರ ಮೇಲೆ ಕಣ್ಣಿಡಲಿದೆ ಜಿಯೋಫೆನ್ಸಿಂಗ್​

ಕಿಮ್ಸ್​​​ನಲ್ಲಿ ವೈದ್ಯರ ಕಳ್ಳಾಟ: ಇನ್ಮುಂದೆ ವೈದ್ಯರ ಮೇಲೆ ಕಣ್ಣಿಡಲಿದೆ ಜಿಯೋಫೆನ್ಸಿಂಗ್​

ಧಾರವಾಡ: ಹುಬ್ಬಳ್ಳಿಯ ಪ್ರತಿಷ್ಠಿತ ಕಿಮ್ಸ್ ಆಸ್ಪತ್ರೆ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದು, ಆಸ್ಪತ್ರೆ ಸಮಯದಲ್ಲಿ ಬೆರಳಚ್ಚು ನೀಡಿ (Thumb impression) ಆಸ್ಪತ್ರೆಯಿಂದ ನಾಪತ್ತೆಯಾಗುತ್ತಿದ್ದವರಿಗೆ ಶಾಕ್​ ನೀಡಿದೆ.

ಕೆಲವು ವೈದ್ಯರು ಆಸ್ಪತ್ರೆಯಲ್ಲಿ ಬೆರಳಚ್ಚು ನೀಡಿ ಕರ್ತವ್ಯಕ್ಕೆ ಹಾಜರಾಗದೇ ತಮ್ಮ ಖಾಸಗಿ ಆಸ್ಪತ್ರೆಗೆ ಹೋಗಿ ಕೆಲಸ ನಿರ್ವಹಿಸುತ್ತಿರುವ ಬಗ್ಗೆ ಕೆಲವು ಆರೋಪಗಳು ಇತ್ತೀಚಿನ ದಿನಗಳಲ್ಲಿ ಕೇಳಿ ಬಂದಿದ್ದವು. ಇನ್ನು ಈ ಆರೋಪ ಕುರಿತು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಕೂಡ ಆರೋಪ ಮಾಡಿದ್ದರು. ಇದರಿಂದ ಎಚ್ಚೆತ್ತುಕೊಂಡ ಆಸ್ಪತ್ರೆಯ ಆಡಳಿತ ಮಂಡಳಿ ವೈದ್ಯರ ಕಣ್ಣಾಮುಚ್ಚಾಲೆ ತಪ್ಪಿಸಲು ಹೊಸ ತಂತ್ರಜ್ಞಾನದ ಮೊರೆ ಹೋಗಿದ್ದಾರೆ.

ಬೆರಳಚ್ಚು ಹಾಜರಾತಿ ವಂಚಿಸಿ ಕೆಲವು ವೈದ್ಯರು ಲಕ್ಷ ಲಕ್ಷ ವೇತನ ಪಡೆಯುತ್ತಿದ್ದ ಆರೋಪ ಕೇಳಿ ಬಂದ ಬೆನ್ನಲ್ಲೇ ಕ್ಷೇತ್ರದ ಶಾಸಕ ಜಗದೀಶ್​ ಶೆಟ್ಟರ್​ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಆದೇಶಿಸಿದ್ದರು. ಈಗ ಆಡಳಿತ ಮಂಡಳಿ ಹೊಸ ತಂತ್ರಜ್ಞಾನದ ಮೊರೆಹೋಗಿದ್ದು ಟ್ಯಾಗ್ ಮೂಲಕ ಕೆಲಸದ ಸಮಯವನ್ನ ಪೂರ್ಣಗೊಳಿಸುವ ಜಿಯೋಫೆನ್ಸಿಂಗ್ ವ್ಯವಸ್ಥೆಯನ್ನು ಆಸ್ಪತ್ರೆಗೆ ಅಳವಡಿಸಿದ್ದಾರೆ.

ಜಿಯೋಫೆನ್ಸಿಂಗ್ ವರ್ಚುವಲ್​ ನಕ್ಷೆಯ ಪರಿಧಿಯಾಗಿದ್ದು, ಈ ಮೂಲಕ ವ್ಯಕ್ತಿಗಳ ದತ್ತಾಂಶವನ್ನು ನಿರಂತರವಾಗಿ ಪರಿಶೀಲಿಸಬಹುದು. ಜೊತೆಗೆ ಆಸ್ಪತ್ರೆಯಲ್ಲಿ ಸಿಸಿಟಿವಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಳವಡಿಸಲಾಗುತ್ತಿದ್ದು, ಕಣ್ತಪ್ಪಿಸಿ ಹೋಗುವ ವೈದ್ಯರ ಮೇಲೆ ಹದ್ದಿನ ಕಣ್ಣಿಡುವದಾಗಿ ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ.

Source: newsfirstlive.com Source link