ಸಿದ್ದರಾಮಯ್ಯಗೆ ಯಾಕೆ ಬಿಜೆಪಿ ಉಸಾಬರಿ? – ಸುಧಾಕರ್ ಪ್ರಶ್ನೆ

– ಸಿದ್ದರಾಮಯ್ಯ ಕನಸು ನನಸಾಗಲ್ಲ

ಚಿಕ್ಕಬಳ್ಳಾಪುರ: ಸಿಎಂ ಬದಲಾವಣೆ ಹಾಗೂ ಸಂಪುಟ ರಚನೆಯಿಂದ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾಗಲಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಚಿಕ್ಕಬಳ್ಳಾಪುರದಲ್ಲಿ ಸಚಿವ ಸುಧಾಕರ್ ತಿರುಗೇಟು ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕನಸು ನನಸಾಗಲ್ಲ. ಸಿದ್ದರಾಮಯ್ಯನವರು ಕನಸು ಕಾಣುತ್ತಲೇ ಇರಲಿ. ಅವರ ಕನಸು ಯಾವತ್ತು ನನಸಾಗಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಸಿಎಂ ಬದಲಾವಣೆ ಸಂಪುಟ ರಚನೆ ಮಾಡಿದ್ದು, ಬೆಟ್ಟ ಅಗೆದು ಇಲಿ ಹಿಡಿದ್ರು ಎಂಬ ಹೇಳಿಕೆಗೆ, ಸಿಎಂ ಬದಲಾವಣೆ ಸಂಪುಟ ರಚನೆ ಬಿಜೆಪಿ ಪಕ್ಷದ ತೀರ್ಮಾನ. ನಮ್ಮ ಪಕ್ಷ ಹಾಗೂ ನಾಯಕರ ತೀರ್ಮಾನ. ಸಿದ್ದರಾಮಯ್ಯನವರಿಗೆ ಯಾಕೆ ಈ ಉಸಾಬರಿ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಅವರಿಗೇನು ಈ ವಿಚಾರ ಅಗತ್ಯ ಇಲ್ಲ. ಈ ಸರ್ಕಾರ ಆಡಳಿತ ಹೇಗೆ ಕೊಡುತ್ತದೆ ಅಂತ ವ್ಯಾಖ್ಯಾನ ಕೊಡಲಿ. 2-3 ತಿಂಗಳು ಸಿಎಂ ಹೇಗೆ ವ್ಯವಹರಿಸುತ್ತಾರೆ ಅಂತ ನೋಡುತ್ತೇವೆ ಎಂದು ಹೇಳಿದರು. ಆದರೆ ಈಗ ಎರಡೇ ದಿನಕ್ಕೆ ಈ ರೀತಿ ಮಾತಾನಾಡುತ್ತಿದ್ದಾರೆ ಅಂತ ಸಿದ್ದರಾಮಯ್ಯನವರ ವಿರುದ್ಧ ಮಾತನಾಡಿದ್ದಾರೆ.

ಇದೇ ವೇಳೆ ಸಚಿವ ಸಂಪುಟ ರಚನೆಯಿಂದ ಅಸಮಾಧಾನಿತರಾದವರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ಸಿಗಲಿದೆ. ಎಲ್ಲಾ ಶಾಸಕರಿಗೆ ಮಂತ್ರಿಯಾಗಬೇಕು ಎಂಬ ಆಸೆ ಇರುತ್ತೆ. ಅದಕ್ಕೆ ಅರ್ಹತೆ ಆಕಾಂಕ್ಷೆ ಸಹ ಇರುತ್ತೆ. ಆದರೆ ಎಲ್ಲರನ್ನೂ ಸಂಪುಟದಲ್ಲಿ ಸೇರಿಸಿಕೊಳ್ಳಲು ಅಸಾಧ್ಯ. ಪ್ರಾದೇಶಿಕ ಸಮತೋಲನ, ಜಾತಿವಾರು ಅವಕಾಶದ ಆಧಾರದ ಮೇಲೆ ಸಿಎಂ ಹಾಗೂ ಬಿಜೆಪಿ ನಾಯಕರು ಸಂಪುಟ ರಚನೆ ಮಾಡಿದ್ದಾರೆ. ಅವಕಾಶ ವಂಚಿತರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನ ಮಾನ ಸಿಗಲಿದ್ದು, ಅವರ ಆಕಾಂಕ್ಷೆ ಫಲಿಸುತ್ತೆ ಎಂದಿದ್ದಾರೆ. ಇದನ್ನೂ ಓದಿ:ಇಡಿಯವರು ಅವರ ಕೆಲಸ ಮಾಡ್ಲೇಬಾರದಾ: ಮಾಧುಸ್ವಾಮಿ ಪ್ರಶ್ನೆ

Source: publictv.in Source link