ಪಾಕಿಸ್ತಾನದಲ್ಲಿ ಸಿದ್ಧಿ ವಿನಾಯಕ ಮಂದಿರ ಧ್ವಂಸ ಮಾಡಿದ ಉದ್ರಿಕ್ತ ಗುಂಪು

ಪಾಕಿಸ್ತಾನದಲ್ಲಿ ಸಿದ್ಧಿ ವಿನಾಯಕ ಮಂದಿರ ಧ್ವಂಸ ಮಾಡಿದ ಉದ್ರಿಕ್ತ ಗುಂಪು

ಪಾಕಿಸ್ತಾನದಲ್ಲಿ ಹಿಂದೂ ದೇವಾಲಯಗಳ ಮೇಲೆ ನಡೆಯುತ್ತಿರುವ ದಾಳಿ ಮುಂದುವರಿದಿದ್ದು, ಇದೀಗ ಭೋಂಗ್ ಟೌನ್​​ನಲ್ಲಿರುವ ಸಿದ್ಧಿವಿನಾಯಕ ದೇವಾಲಯದ ಮೇಲೆ ಮಾಬ್ ಅಟ್ಯಾಕ್ ಆಗಿದೆ. ಪವಿತ್ರ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ ಆರೋಪ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಕೋರ್ಟ್​ ಹಿಂದೂ ಕುಟುಂಬದ ಅಪ್ರಾಪ್ತ ಬಾಲಕನಿಗೆ ಜಾಮೀನು ನೀಡಿತ್ತು. ಇದರಿಂದ ಆಕ್ರೋಶಗೊಂಡ ಅಲ್ಲಿನ ಬಹುಸಂಖ್ಯಾತರ ಗುಂಪು, ಭೋಂಗ್​​ ಟೌನ್​​ನಲ್ಲಿರುವ ಗಣೇಶ ದೇವಾಲಯದ ಮೇಲೆ ದಾಳಿ ಮಾಡಿ, ಧ್ವಂಸ ಮಾಡಿದೆ. ಮಾತ್ರವಲ್ಲ ಚೀನಾ-ಪಾಕಿಸ್ತಾನ ಎಕಾನಿಮಿಕ್ ಕಾರಿಡಾರ್​ನ ಪ್ರಮುಖ ಎಂ-5 (Sukkur-Multan Motorway) ರಸ್ತೆಯನ್ನ ತಡೆದು ಪ್ರತಿಭಟನೆ ನಡೆಸಿರುವ ವರದಿಯಾಗಿದೆ.

ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ಕೂಡಲೇ ಅಲ್ಲಿನ ಜಿಲ್ಲಾಡಳಿತದ ಸೂಚನೆಯಂತೆ ಡೆಪ್ಯೂಟಿ ಕಮಿಷನರ್ ಡಾ. ಖೌರಮ್ ಶೆಹಜಾದ್ ಮತ್ತು ಜಿಲ್ಲಾ ಪೊಲೀಸ್ ಅಧಿಕಾರಿ ಅಸಾದ್ ಸರ್ಫರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಫೀಜ್ ಮಹಮ್ಮದ್ ಇಬ್ರಾಹಿಂ ಅನ್ನೋ ಮೌಲ್ವಿ ಪವಿತ್ರ ಸ್ಥಳದಲ್ಲಿ ಹಿಂದೂ ಬಾಲಕ ಮೂತ್ರ ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪಾಕಿಸ್ತಾನ್ ಪಿನಲ್ ಕೋಡ್​​ ಪ್ರಕಾರ ಜುಲೈ 24 ರಂದು ಬಾಲಕನ ವಿರುದ್ಧ ಅಲ್ಲಿನ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಇನ್ನು ಈ ಪ್ರಕರಣ ಸಂಬಂಧ ಈಗಾಗಲೇ ಅಲ್ಲನ ಹಿಂದೂ ಪ್ರಮುಖರು ಸೆಮಿನರಿ ಆಡಳಿತ ಮಂಡಳಿ ಬಳಿ ಕ್ಷಮೆ ಕೋರಿದ್ದರು. ಅಲ್ಲದೇ ಮೂತ್ರ ಮಾಡಿದ್ದಾನೆ ಎನ್ನಲಾಗಿರುವ ವ್ಯಕ್ತಿ, ಅಪ್ರಾಪ್ತನಾಗಿದ್ದು, ಮಾನಸಿಕ ಅಸ್ವಸ್ಥ ಅಂತಲೂ ಸಹ ತಿಳಿಸಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ಬಳಿಕ ಅಲ್ಲಿನ ಕೆಳ ನ್ಯಾಯಾಲಯವು ಅಪ್ರಾಪ್ತನಿಗೆ ಜಾಮೀನು ಮಂಜೂರು ಮಾಡಿತ್ತು. ಇದರಿಂದ ಆಕ್ರೋಶಗೊಂಡು ದೇವಾಲಯಕ್ಕೆ ನುಗ್ಗಿ, ಮೂರ್ತಿಗಳನ್ನ ಧ್ವಂಸ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ರಹೀಮ್ ಯಾರ್​ ಖಾನ್​ನ ಭೋಂಗ್​​ನಲ್ಲಿರುವ ಗಣೇಶ ಗುಡಿಗೆ ನುಗ್ಗಿ ದಾಂಧಲೆ ಎಬ್ಬಿಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Source: newsfirstlive.com Source link