ಮೇಕೆದಾಟು ಯೋಜನೆಗೆ ಕಣಿವೆ ರಾಜ್ಯಗಳ ಅನುಮತಿ ಅಗತ್ಯ – ಕೇಂದ್ರದ ಉತ್ತರಕ್ಕೆ ಪ್ರಜ್ವಲ್ ಕೆಂಡಾಮಂಡಲ

ನವದೆಹಲಿ: ಮೇಕೆದಾಟು ಆಣೆಕಟ್ಟು ನಿರ್ಮಾಣಕ್ಕೆ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ಜೊತೆಗೆ ಕಣಿವೆ ರಾಜ್ಯಗಳಾದ ಕೇರಳ, ತಮಿಳುನಾಡು, ಪುದುಚೇರಿ ಅನುಮತಿ ಅಗತ್ಯ ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಹೇಳಿದ್ದಾರೆ.

ಮೇಕೆದಾಟು ಯೋಜನೆ ಈಗಿನ ಸ್ಥಿತಿಗತಿ ಬಗ್ಗೆ ಸಂಸದ ಪ್ರಜ್ವಲ್ ರೇವಣ್ಣ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಕರ್ನಾಟಕ ಸಲ್ಲಿಸಿದ್ದ ಮೇಕೆದಾಟು ಸಮಗ್ರ ಯೋಜನಾ ವರದಿಗೆ ಷರತ್ತು ಬದ್ಧ ಅನುಮತಿ ನೀಡಿದ್ದೇವೆ. ಆದರೆ ಇದು ಅಂತರರಾಜ್ಯ ಯೋಜನೆ ಆಗಿರೋದರಿಂದ ಕಣಿವೆ ರಾಜ್ಯಗಳ ಅನುಮತಿ ಬೇಕೆಂದು ಸಂಸತ್ತಿಗೆ ತಿಳಿಸಿದರು.

ಕರ್ನಾಟಕ ಡಿಪಿಆರ್ ಕೊಟ್ಟಾಗಲೇ ಇದನ್ನ ಸ್ಪಷ್ಟವಾಗಿ ತಿಳಿಸಿದ್ದೆವು. ಕಾವೇರಿ ನೀರು ನಿರ್ವಹಣಾ ಮಂಡಳಿಯ ಅನುಮತಿ ಕೂಡ ಕಡ್ಡಾಯ ಇದರ ಜೊತೆಗೆ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಸಮ್ಮತಿ ಇನ್ನೂ ಯೋಜನೆಗೆ ಸಿಕ್ಕಿಲ್ಲ ಎಂದ ಕೇಂದ್ರ ಸಚಿವರು ಹೇಳಿದರು.

ಕೇಂದ್ರ ಸಚಿವರ ಉತ್ತರಕ್ಕೆ ಸಂಸದ ಪ್ರಜ್ವಲ್ ರೇವಣ್ಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಮ್ಮ ನೆಲದಲ್ಲಿ ನಡೆಸುವ ಯೋಜನೆಗಳಿಗೆ ಕಣಿವೆ ರಾಜ್ಯಗಳ ಅನುಮತಿ ಯಾಕೆ ಬೇಕು? ಈ ರೀತಿಯ ಕಾನೂನು ಸುಪ್ರೀಂಕೋರ್ಟ್ ಅಥವಾ ನ್ಯಾಯಧಿಕರಣ ಆದೇಶದಲ್ಲಿ ಇಲ್ಲ. ಅನಾವಶ್ಯಕ ಗೊಂದಲ ಸೃಷಿಯಾಗುತ್ತಿದೆ ಎಂದು ಆರೋಪಿಸಿದರು.

ಮೇಕೆದಾಟು ಯೋಜನೆ ಕುಡಿಯುವ ನೀರಿನ ಯೋಜನೆ, ಇಲ್ಲಿ ವಿದ್ಯುತ್ ಕೂಡ ಉತ್ಪಾದನೆ ಮಾಡಲಿದೆ. ಕಾವೇರಿ ನದಿಯಲ್ಲಿರುವ ಹೆಚ್ಚುವರಿ ನೀರು ಬಳಸಿಕೊಳ್ಳುವ ಉದ್ದೇಶ ಹೊಂದಿದ್ದು ಕರ್ನಾಟಕ ವಿದ್ಯುತ್ ಉತ್ಪಾದನೆ ಮಾಡಿದ ಬಳಿಕ ತಮಿಳುನಾಡಿಗೆ ನೀರು ಬಿಡಲಿದೆ. ಇದರಿಂದ ಯಾವುದೇ ನೀರಿನ ಕೊರತೆಯಾಗುವುದಿಲ್ಲ, ಆದರೆ ನೀರಿನ ಕೊರತೆ ಎಂದು ಸುಳ್ಳು ಹೇಳಲಾಗುತ್ತಿದೆ ಎಂದರು.

ಒಂದು ವೇಳೆ ನೀರಿಕ ಕೊರತೆಯಾದರೆ ಕೋರ್ಟ್ ಮೊರೆ ಹೋಗಲಿ ಆದರೆ ಯೋಜನೆ ವಿರೋಧಿಸುವುದು ಸರಿಯಲ್ಲ, ರಾಜ್ಯ ಸರ್ಕಾರ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳಬೇಕು. ಮಗು ಚೂಟಿ ತೊಟ್ಟಿಲು ತೂಗುವ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕಿದ್ದು ಸರ್ವ ಪಕ್ಷದ ಸದಸ್ಯರ ನಿಯೋಗದ ಮೂಲಕ ಕೇಂದ್ರಕ್ಕೆ ಮನವಿ ನೀಡಬೇಕು ಎಂದು ಆಗ್ರಹಿಸಿದರು.

blank

ಇದೇ ವೇಳೆ ಯೋಜನೆ ವಿರೋಧಿಸಿ ಅಣ್ಣಾಮಲೈ ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ತಿರುಗೇಟು ನೀಡಿದ ಪ್ರಜ್ವಲ್ ರೇವಣ್ಣ, ಅಣ್ಣಾಮಲೈ ಏನಾದರೂ ಮಾಡಿಕೊಳ್ಳಲಿ, ನಾವು ರಾಜ್ಯದಲ್ಲಿ ಕೈ ಕೊಟ್ಟಿ ಕೂತಿಲ್ಲ. ನಾವು ಬಲಿಷ್ಠವಾಗಿದ್ದೇವೆ. ಕೇಂದ್ರ ನ್ಯಾಯದ ಪರವಾಗಿ ನಿಲ್ಲಬೇಕು ಎಂದರು.

ನಮ್ಮ ಹಕ್ಕಿನ ನೀರನ್ನು ನಾವು ಸಂಗ್ರಹ ಮಾಡಿತ್ತಿದ್ದೇವೆ. ನೀರು ತಮಿಳುನಾಡಿನಿಂದ ತಂದು ಯೋಜನೆ ಮಾಡ್ತಿಲ್ಲ. ಅಣ್ಣಾಮಲೈ ಇದನ್ನು ಮೊದಲು ತಿಳಿದುಕೊಳ್ಳಬೇಕು. ಅಭಿಮಾನ ಇಟ್ಟುಕೊಂಡಿದ್ದ ರಾಜ್ಯದ ಜನರು ಅಣ್ಣಾಮಲೈ ಹೇಗೆ ಎನ್ನುವುದು ಅರ್ಥ ಮಾಡಿಕೊಳ್ಳಬೇಕು. ಅಣ್ಣಾಮಲೈಗೆ ಹೈಕಮಾಂಡ್ ಬುದ್ಧಿ ಹೇಳಬೇಕು. ಯಾರು ಏನೇ ಮಾಡಿದರೂ ಯೋಜನೆ ಕೈಬಿಡಲ್ಲ. ನಮ್ಮ ಪಕ್ಷದ ನಿಲುವು ಡ್ಯಾಂ ಪರವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೋರಾಟ ಮಾಡುತ್ತೇವೆ ಎಂದು ಅವರು ಹೇಳಿದರು.

Source: publictv.in Source link