13, 14 ಕಾಡಾನೆಗಳ ದಾಳಿ- ನೂರಾರು ಎಕರೆ ಕಾಫಿ, ಅಡಿಕೆ, ಬಾಳೆ ಧ್ವಂಸ

– 3 ಬಾರಿ ಕರೆ ಮಾಡಿದರೂ ಅಧಿಕಾರಿಗಳು ಬರಲೇ ಇಲ್ಲ

ಚಿಕ್ಕಮಗಳೂರು: ಒಂದಲ್ಲ, ಎರಡಲ್ಲ ಮರಿಗಳು ಸೇರಿದಂತೆ ಬರೋಬ್ಬರಿ 13 ರಿಂದ 14 ಕಾಡಾನೆಗಳ ಹಿಂಡು ತೋಟಕ್ಕೆ ಲಗ್ಗೆ ಇಟ್ಟು ದಾಂದಲೆ ನಡೆಸಿ ನೂರಾರು ಎಕರೆ ಬೆಳೆಯನ್ನ ನಾಶ ಮಾಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಾರ್‌ಬೈಲ್ ಗ್ರಾಮದಲ್ಲಿ ನಡೆದಿದೆ.

ಕಾರ್‌ಬೈಲ್ ಹಾಗೂ ಸುತ್ತಲಿನ ನೂರಾರು ಎಕರೆಯಲ್ಲಿದ್ದ ಕಾಫಿ-ಮೆಣಸು-ಅಡಿಕೆ ಹಾಗೂ ಬಾಳೆ ನಾಶವಾಗಿದೆ. ಅಷ್ಟು ದೊಡ್ಡ ಆನೆಗಳ ಗುಂಪು ದಾಳಿ ಮಾಡುವುದಿರಲಿ, ತೋಟದಲ್ಲಿ ಸುಮ್ಮನೆ ನಡೆದು ಹೋದರೂ ಬೆಳೆ ಸಂಪೂರ್ಣ ನಾಶವಾಗುತ್ತದೆ. ಕಾರ್‌ಬೈಲ್ ಹಾಗೂ ಸುತ್ತಲಿನ ಪುಟ್ಟರಾಜು, ಪ್ರಕಾಶ್, ಸೋಮೇಗೌಡ, ಭಾಗ್ಯಮ್ಮ ಹಾಗೂ ಪ್ರಹ್ಲಾದ್ ಗೌಡ ಸೇರಿದಂತೆ ಹತ್ತಾರು ಜನರ ತೋಟಗಳ ಪರಿಸ್ಥಿತಿ ಇದೇ ಆಗಿದೆ.

ಆನೆಗಳ ದಾಳಿಯಿಂದ ತೋಟದ ಸ್ಥಿತಿ ಕಂಡ ಸ್ಥಳೀಯರು ಅರಣ್ಯ ಇಲಾಖೆಗೆ ಮೂರ್ನಾಲ್ಕು ಬಾರಿ ಕರೆ ಮಾಡಿದ್ದು, ಯಾರೂ ಬಂದಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮೂರ್ನಾಲ್ಕು ಬಾರಿ ಕರೆ ಮಾಡಿದ್ದೇವೆ. ಬರುತ್ತೇವೆಂದು ಅಧಿಕಾರಿಗಳು ಬಂದಿಲ್ಲ. ಸರ್ಕಾರ ರೈತರು ಹಾಗೂ ರೈತರ ಸಮಸ್ಯೆಗಳತ್ತ ಗಮನ ಹರಿಸಬೇಕು. ಕೂಡಲೇ ಅರಣ್ಯ ಇಲಾಖೆ ಆನೆಗಳನ್ನ ಕಾಡಿಗಟ್ಟಿ ಬೆಳೆ ನಾಶಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಗಿಡದಲ್ಲೇ ಕೊಳೆಯುತ್ತಿದೆ ಕಾಫಿ – ಆತಂಕದಲ್ಲಿ ಬೆಳೆಗಾರರು

ಮಲೆನಾಡಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದೆ. ಕೆಲ ವರ್ಷಗಳ ಹಿಂದೆ ಮೂಡಿಗೆರೆ ತಾಲೂಕಿನ ಸಾರಾಗೋಡು, ಕುಂದೂರು, ಗೌಡಹಳ್ಳಿ ಸೇರಿದಂತೆ ಕೆಲಭಾಗದಲ್ಲಿ ಆನೆ ಹಾವಳಿ ಯತೇಚ್ಛವಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಆ ಗ್ರಾಮಗಳು ಸೇರಿದಂತೆ ತಾಲೂಕಿನ ಬಹುತೇಕ ಕಾಡಂಚಿನ ಗ್ರಾಮಗಳಲ್ಲಿ ಆನೆ ಹಾವಳಿ ಮಿತಿ ಮೀರಿದೆ. ಅರಣ್ಯ ಅಧಿಕಾರಿಗಳು ಕಾಡಾನೆ ಹಾವಳಿ ತಪ್ಪಿಸಬೇಕು. ವರ್ಷಕ್ಕೆ ಒಂದೆರಡು ಬಾರಿ ದಾಳಿಯಾದರೆ ಹೇಗೋ ಸುಧಾರಿಸಿಕೊಳ್ಳಬಹುದು. ತಿಂಗಳಿಗೆ ಮೂರ್ನಾಲ್ಕು ಬಾರಿ ತೋಟಗಳಿಗೆ ಲಗ್ಗೆ ಇಟ್ಟಿರೆ ಬೆಳೆ ಉಳಿಯೋದಾದರೂ ಹೇಗೆ? ನಾವು ಬದುಕೋದಾದರೂ ಹೇಗೆ ಎಂದು ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಪ್ರಶ್ನಿಸಿ, ಆನೆ ಹಾವಳಿ ತಪ್ಪಿಸುವಂತೆ ಆಗ್ರಹಿಸಿದ್ದಾರೆ.

Source: publictv.in Source link