ಐಷಾರಾಮಿ ಕಾರಿನ ತೆರಿಗೆ ಕಟ್ಟದ ಸ್ಟಾರ್ ನಟ ಧನುಷ್​ಗೆ ಮದ್ರಾಸ್ ಹೈಕೋರ್ಟ್​ ತಪರಾಕಿ

ಐಷಾರಾಮಿ ಕಾರಿನ ತೆರಿಗೆ ಕಟ್ಟದ ಸ್ಟಾರ್ ನಟ ಧನುಷ್​ಗೆ ಮದ್ರಾಸ್ ಹೈಕೋರ್ಟ್​ ತಪರಾಕಿ

ದಳಪತಿ ವಿಜಯ್​​ ಬಳಿಕ ಇದೀಗ ಮತ್ತೊಬ್ಬ ತಮಿಳುನಾಡಿನ ಸ್ಟಾರ್ ನಟ ಧನುಷ್​ಗೆ ಮದ್ರಾಸ್​ ಹೈಕೋರ್ಟ್​ ಛೀಮಾರಿ ಹಾಕಿದೆ. ಐಷಾರಾಮಿ ರೋಲ್ಸ್​ ರಾಯ್ಸ್​ ಕಾರಿನ ತೆರಿಗೆ ತುಂಬದೇ ವಿನಾಯಿತಿ ಕೇಳಿದ್ದ ಧನುಷ್​​ಗೆ ಕೋರ್ಟ್​ ತಪರಾಕಿ ಬಾರಿಸಿದೆ. ಅಲ್ಲದೇ ಬಾಕಿ ಇರುವ 30, 30, 757 ರೂಪಾಯಿ ತೆರಿಗೆ ಹಣವನ್ನ 48 ಗಂಟೆಯೊಳಗೆ ತುಂಬುವಂತೆ ಸೂಚನೆ ನೀಡಿದೆ.

2015ರಲ್ಲಿ ಧನುಷ್ ವಿದೇಶದಿಂದ ಐಷಾರಾಮಿ ಕಾರು ಖರೀದಿ ಮಾಡಿದ್ದರು. ಇದಕ್ಕೆ ಅವರು 60 ಲಕ್ಷ ರೂಪಾಯಿ ಎಂಟ್ರಿ ಟ್ಯಾಕ್ಸ್​ ಪಾವತಿ ಮಾಡಬೇಕಿತ್ತು. ಧನುಷ್ ಅರ್ಧದಷ್ಟು ತೆರಿಗೆ ಪಾವತಿಸಿ ಉಳಿದಿದ್ದಕ್ಕೆ ವಿನಾಯಿತಿ ನೀಡುವಂತೆ ಕೋರಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಮದ್ರಾಸ್​ ಕೋರ್ಟ್​, ತೆರಿಗೆ ವಿನಾಯಿತಿ ನೀಡೋಕೆ ಸಾಧ್ಯವೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಇದನ್ನೂ ಓದಿ: ತಮಿಳು ನಟ ವಿಜಯ್​​​ಗೆ ತಟ್ಟಿದ ಐಟಿ ಇಲಾಖೆ ಬಿಸಿ, ಸಿನಿಮಾ ಸೆಟ್​ನಿಂದಲೇ ವಿಚಾರಣೆಗೆ..!

ವಿಚಾರಣೆ ವೇಳೆ ಧನುಷ್ ಪರ ವಕೀಲರು.. ​ಶೇಕಡಾ 50 ತೆರಿಗೆಯನ್ನು ತುಂಬಲಾಗಿದೆ. ಉಳಿದ ತೆರಿಗೆಯನ್ನು ಪಾವತಿಸೋಕೆ ಬಯಸಿದ್ದಾರೆ. ಹೀಗಾಗಿ, ಈ ಹಿಂದೆ ಸಲ್ಲಿಸಲಾಗಿದ್ದ ಅರ್ಜಿಯನ್ನ ಹಿಂಪಡೆಯೋಕೆ ಅವಕಾಶ ನೀಡಬೇಕು ಅಂತಾ ​ವಕೀಲರು ಕೋರಿದರು.

ವಕೀಲರ ವಾದವನ್ನ ಒಪ್ಪದ ಕೋರ್ಟ್​, ನಿಮ್ಮ ಉದ್ದೇಶ ನಿಜವಾಗಿದ್ದರೆ ನೀವು ತೆರಿಗೆಯನ್ನು ಈಗಾಗಲೇ ಪಾವತಿಸುತ್ತಿದ್ದಿರಿ. ಈಗ ಅರ್ಜಿ ವಿಚಾರಣೆಗೆ ಬಂದಾಗ ಅದನ್ನು ಹಿಂತೆಗೆದುಕೊಳ್ಳುವ ಬಗ್ಗೆ ಮಾತನಾಡುತ್ತಿದ್ದೀರಿ. ದಿನಗೂಲಿ ಕಾರ್ಮಿಕರು ಕೂಡ ತಾವು ಖರೀದಿಸುವ ಪ್ರತಿ ಲೀಟರ್ ಪೆಟ್ರೋಲ್‌ಗೆ ತೆರಿಗೆ ಪಾವತಿಸುತ್ತಿದ್ದಾರೆ. ಈ ವ್ಯಕ್ತಿಗಳ್ಯಾರೂ ತೆರಿಗೆ ವಿನಾಯಿತಿ ಕೋರಿ ಹೈಕೋರ್ಟ್ ಅನ್ನು ಸಂಪರ್ಕಿಸಿಲ್ಲ. ನೀವು ಸಲ್ಲಿಸಿರುವ ಅರ್ಜಿ ವಾಪಸ್ ನೀಡಲು ಸಾಧ್ಯವೇ ಇಲ್ಲ ಎಂದು ಛೀಮಾರಿ ಹಾಕಿದೆ.

Source: newsfirstlive.com Source link