ಜೋಗ ವೀಕ್ಷಣೆಗೆ ಕೊರೊನಾ ನೆಗೆಟಿವ್ ವರದಿ ಕಡ್ಡಾಯ

ಶಿವಮೊಗ್ಗ: ಕೊರೊನಾ ಮೂರನೇ ಅಲೆ ಭೀತಿ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ವಿಶ್ವ ವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ಬರಬೇಕಾದರೆ ಎರಡು ದಿನ ಮುಂಚಿತವಾಗಿ ಪಡೆದಿರುವ ಆರ್ ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯಗೊಳಿಸಿ ಜಿಲ್ಲಾಡಳಿತ ಆದೇಶಿಸಿದೆ.

ಜಿಲ್ಲೆಯ ಪ್ರವಾಸಿ ತಾಣಗಳಾದ ಜೋಗ ಜಲಪಾತ, ಸಕ್ಕರೆ ಬೈಲು, ಹುಲಿ ಮತ್ತು ಸಿಂಹಧಾಮ ಸೇರಿದಂತೆ ಇತರೆ ಪ್ರವಾಸಿ ತಾಣಗಳಿಗೆ ವಾರಾಂತ್ಯದ ದಿನಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ರಾಜ್ಯದಲ್ಲಿ ಮೂರನೇ ಅಲೆ ಭೀತಿ ಈಗಾಗಲೇ ಆರಂಭವಾಗಿದ್ದು, ಪ್ರವಾಸಿಗರು ಇದು ಯಾವುದನ್ನು ಲೆಕ್ಕಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಮಾಸ್ಕ್ ಧರಿಸದೇ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿಂದು 1,785 ಕೊರೊನಾ ಕೇಸ್, 25 ಸಾವು

ಇದೆಲ್ಲವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ, ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ಕಠಿಣ ನಿಲುವು ಕೈಗೊಂಡಿದೆ. ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರ ಆರ್ ಟಿಪಿಸಿಆರ್ ನೆಗೆಟಿವ್ ವರದಿ ಇದ್ದರೆ ಮಾತ್ರ ಪ್ರವೇಶ ನೀಡಲಾಗುವುದು. ಇಲ್ಲದಿದ್ದರೆ ಮುಲಾಜಿಲ್ಲದೇ ವಾಪಸ್ ಕಳುಹಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Source: publictv.in Source link