41 ವರ್ಷಗಳ ಬಳಿಕ ಒಲಿಂಪಿಕ್ಸ್‌ ಪದಕ ಗೆದ್ದ ಭಾರತದ ರೋಚಕ ಹೋರಾಟ ಹೇಗಿತ್ತು ಗೊತ್ತಾ?

41 ವರ್ಷಗಳ ಬಳಿಕ ಒಲಿಂಪಿಕ್ಸ್‌ ಪದಕ ಗೆದ್ದ ಭಾರತದ ರೋಚಕ ಹೋರಾಟ ಹೇಗಿತ್ತು ಗೊತ್ತಾ?

ಆಗಸ್ಟ್‌ 5, 2021 ಈ ದಿನ ಭಾರತಕ್ಕೆ ಭಾವನಾತ್ಮಕ ದಿನ. ಯಾಕಂದ್ರೆ ರಾಷ್ಟ್ರೀಯ ಕ್ರೀಡೆ ಹಾಕಿಯಲ್ಲಿ ಭಾರತ ತಂಡ ಒಲಿಂಪಿಕ್ಸ್‌ ಪದಕ ಗೆದ್ದು ವಿಜಯಪತಾಕೆ ಹಾರಿಸಿದೆ. 41 ವರ್ಷಗಳ ಕಾಲ ಇದೊಂದು ಕ್ಷಣಕ್ಕಾಗಿ ಇಡೀ ಭಾರತವೇ ಕಾಯುತ್ತಿತ್ತು. ಅಂತೂ ಆ ದಿನ ಇಂದೇ ಬಂದಿತ್ತು. ಕಂಚಿನ ಪದಕ ಗೆಲ್ಲುವ ಜೊತೆಗೆ ನೂರಾರು ಕೋಟಿ ಹೃದಯ ಗೆದ್ದಿದ್ದಾರೆ.

ಅದೊಂದು ಕಾಲ ಇತ್ತು. ಅಂದ್ರೆ ಅದು 1928 ರಿಂದ 1980ರ ಅವಧಿ. ಈ ಅವಧಿಯಲ್ಲಿ ಭಾರತದ ಪುರುಷರ ಹಾಕಿ ತಂಡ ಸ್ಟಿಕ್‌ ಹಿಡಿದು ಅಂಕಣಕ್ಕೆ ಇಳಿಯಿತು ಅಂದ್ರೆ ಪದಕ ಗ್ಯಾರಂಟಿಯಾಗಿತ್ತು. ಎದುರಾಳಿ ಆಟಗಾರರು ಗೆಲುವಿನ ಕನಸನ್ನೇ ಬಿಟ್ಟು ಬಿಡ್ತಾ ಇದ್ರು. ಭಾರತವನ್ನು ಬಗ್ಗುಬಡಿಯಲಾಗದು ಅಂತ ಹತಾಶರಾಗಿ ಇರ್ತಾ ಇದ್ರು. ಇದೇ ಅವಧಿಯಲ್ಲಿ ಅಂದ್ರೆ 1928 ರಿಂದ 1980 ರ ಅವಧಿಯಲ್ಲಿ ಭಾರತ ತಂಡ ಒಲಿಂಪಿಕ್ಸ್‌ನಲ್ಲಿ 8 ಚಿನ್ನ, 1 ಬೆಳ್ಳಿ, 2 ಕಂಚಿನ ಪದಕ ಗೆದ್ದಿತ್ತು. ಹೌದು, ಅಂತಹವೊಂದು ವೈಭವದ ಕಾಲ ಭಾರತದ ಹಾಕಿಗೆ ಇತ್ತು. ಆದ್ರೆ, 1980 ನಂತರ ನಿಧಾನಕ್ಕೆ ಭಾರತ ತಂಡದ ಪ್ರದರ್ಶನ ಕುಸಿಯುತ್ತಾ ಸಾಗಿತ್ತು. ದುಃಖದ ವಿಚಾರ ಅಂದ್ರೆ 1980ರ ಬಳಿಕ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್‌ ಪ್ರವೇಶ ಕೂಡ ಸಾಧ್ಯವಾಗಿರಲಿಲ್ಲ. ಆದ್ರೆ, ಆ ನಿರಾಸೆಯನ್ನು ಭಾರತ ತಂಡ ಇಂದು ಕೊನೆಗಾಣಿಸಿದೆ. ನೂರಾರು ಕೋಟಿ ಭಾರತೀಯರ ಹೃದಯ ಗೆದ್ದಿದೆ.

41 ವರ್ಷಗಳ ಬಳಿಕ ಒಲಿಂಪಿಕ್ಸ್‌ ಪದಕ ಗೆದ್ದ ಭಾರತ
ಆ ರೋಚಕ ಹೋರಾಟ ಹೇಗಿತ್ತು ಗೊತ್ತಾ?
ಬಲಿಷ್ಠ ಜರ್ಮನಿ ವಿರುದ್ಧ 5-4 ಗೋಲಿನಿಂದ ಜಯ

ಇದನ್ನೂ ಓದಿ: ಪುರುಷರ ಹಾಕಿಯಲ್ಲಿ ಭಾರತಕ್ಕೆ ಕಂಚಿನ ಪದಕ -41 ವರ್ಷಗಳ ಬಳಿಕ ಒಲಿಂಪಿಕ್ಸ್​ನಲ್ಲಿ ಟೀಂ ಇಂಡಿಯಾ ಸಾಧನೆ

41 ವರ್ಷಗಳ ನಂತರ ಭಾರತ ಹಾಕಿ ತಂಡ ಸೆಮಿಫೈನಲ್‌ ಪ್ರವೇಶಿಸಿತ್ತು. ಮನ್‌ಪ್ರೀತ್‌ ಸಿಂಗ್‌ ನೇತೃತ್ವದ ಭಾರತ ತಂಡ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದೇ ಗೆಲ್ಲುತ್ತದೆ ಅನ್ನೋ ಭರವಸೆ ಇತ್ತು. ಆದ್ರೆ, ಸೆಮೀಸ್‌ನಲ್ಲಿ ಬೆಲ್ಜಿಯಂ ವಿರುದ್ದ 5-2 ಗೋಲುಗಳಿಂದ ಸೋತು ಚಿನ್ನದ ಪದಕದ ರೇಸ್‌ನಿಂದ ಹೊರಬಿದ್ದಿತ್ತು. ಹೀಗಾಗಿ ಭಾರತಕ್ಕೆ ಪದಕ ಗೆಲ್ಲಲು ಇದ್ದ ಕೊನೆಯ ಅವಕಾಶ ಅಂದ್ರೆ ಕಂಚಿನ ಪದಕ್ಕಾಗಿ ನಡೆಯುವ ಪಂದ್ಯವಾಗಿತ್ತು. ಹೌದು, ಒಲಿಂಪಿಕ್ಸ್‌ನಲ್ಲಿ ಎರಡು ಸೆಮಿಫೈನಲ್‌ ಸೋತ ತಂಡಗಳನ್ನು ಕಂಚಿನ ಪದಕಕ್ಕಾಗಿ ಆಡಿಸಲಾಗುತ್ತೆ. ಹೀಗಾಗಿ ಬೆಲ್ಜಿಯಂ ವಿರುದ್ಧ ಸೋತ ಭಾರತ ಮತ್ತು ಆಸ್ಟೇಲಿಯಾ ವಿರುದ್ಧ ಸೋತ ಜರ್ಮನಿ ತಂಡಗಳು ಮುಖಾಮುಖಿಯಾಗಿದ್ವು. ಈ ಹೋರಾಟದಲ್ಲಿ ಭಾರತ 5-4 ಗೋಲುಗಳಿಂದ ಗೆಲುವು ಸಾಧಿಸಿ ಕಂಚಿನ ಪದಕ ಗೆದ್ದಿದ್ದೆ. ಈ ಮೂಲಕ ಬರೋಬ್ಬರಿ 41 ವರ್ಷಗಳ ನಂತರ ಒಲಿಂಪಿಕ್ಸ್‌ನಲ್ಲಿ ಭಾರತದ ಪುರುಷರ ಹಾಕಿ ತಂಡ ಪದಕ ಗೆದ್ದು ಇತಿಹಾಸ ನಿರ್ಮಿಸಿದೆ. ಭಾರತ ತಂಡದ ರೋಚಕ ಹೋರಾಟ ಹೇಗಿತ್ತು ಗೊತ್ತಾ?

ಮೊದಲ ಕ್ವಾರ್ಟರ್‌ನಲ್ಲಿ ಮುನ್ನಡೆ ಸಾಧಿಸಿದ್ದ ಜರ್ಮನಿ
ಪಂದ್ಯ ಆರಂಭದ ಎರಡೇ ನಿಮಿಷದಲ್ಲಿ ಜರ್ಮನಿಗೆ ಗೋಲು

ಹೌದು, ಗೆಲ್ಲುವ ಆತ್ಮವಿಶ್ವಾಸದಲ್ಲಿಯೇ ಭಾರತ ತಂಡ ಕಣಕ್ಕೆ ಇಳಿದಿತ್ತು. ಆದ್ರೆ, ಗೆಲುವು ಅಷ್ಟು ಸುಲಭದಾಗಿರಲಿಲ್ಲ. ಯಾಕೆಂದ್ರೆ ಎದುರಾಳಿಯಾಗಿ ಇದ್ದದ್ದು ಜರ್ಮನಿ ತಂಡವಾಗಿತ್ತು. ಜರ್ಮನಿ ತಂಡ ಇಲ್ಲಿಯವರೆಗೆ ಒಲಿಂಪಿಕ್ಸ್‌ನಲ್ಲಿ 4 ಚಿನ್ನ, 3 ಬೆಳ್ಳಿ, 4 ಕಂಚಿನ ಪದಕ ಗೆದ್ದಿರೋ ತಂಡ. 2008 ಮತ್ತು 2012 ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರೇ 2016ರಲ್ಲಿ ನಡೆದ ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಪಡೆದಿತ್ತು. ಟೋಕಿಯೋ ಒಲಿಂಪಿಕ್ಸ್‌ಗೂ ಮುನ್ನ ಜರ್ಮನಿ ಪ್ರಚಂಡ ಫಾರ್ಮ್‌ನಲ್ಲಿಯೇ ಇತ್ತು. ಹೀಗಾಗಿ ಭಾರತಕ್ಕೆ ಕಠಿಣ ಸವಾಲು ಎದುರಾಗಿತ್ತು. ಕಂಚಿನ ಪದಕದ ಪಂದ್ಯ ಆರಂಭವಾಗಿ 2ನೇ ನಿಮಿಷದಲ್ಲಿಯೇ ಜರ್ಮನಿ ಗೋಲು ಸಿಡಿಸಿತ್ತು. ಅನಂತರ ಭಾರತ ಗೋಲಿಗೆ ಯತ್ನಿಸಿದರೂ ಪ್ರಯತ್ನ ಫಲ ನೀಡಲಿಲ್ಲ. ಅಂತಿಮವಾಗಿ ಮೊದಲ ಕ್ವಾರ್ಟರ್‌ನಲ್ಲಿ ಜರ್ಮನಿ 1-0 ಗೋಲಿನಿಂದ ಮುನ್ನಡೆ ಸಾಧಿಸಿತ್ತು.

ಎರಡನೇ ಕ್ವಾರ್ಟರ್‌ನಲ್ಲಿ ಸಿಡಿದೆದ್ದ ಭಾರತ
ಮೂರು ಗೋಲು ಬಾರಿಸಿ ಸಮಬಲ ಸಾಧಿಸಿದ ಭಾರತ
3-3 ಗೋಲುಗಳಿಂದ ಎರಡನೇ ಕ್ವಾರ್ಟರ್‌ ಅಂತ್ಯ

ಇದನ್ನೂ ಓದಿ: ಒಲಿಂಪಿಕ್ಸ್​​ಗಿಂತಲೂ ಟ್ರೆಂಡಿಂಗ್​; ಸ್ಪರ್ಧೆ ಮುಖ್ಯವಲ್ಲ ಈ ಬ್ಯೂಟಿಗೆ ಎಲ್ಲ ಪದಕ ಕೊಡ್ಲೇಬೇಕ್ ಅಂತಿರೋ ಜನ

ಭಾರತದ ತಂಡದ ಮೊದಲು ಗೋಲು. ಪಂದ್ಯ ಆರಂಭವಾಗಿ 17 ನಿಮಿಷವಾಗಿತ್ತು. ಪಾಸ್‌ ಆಗಿ ತಮ್ಮ ಬಳಿ ಬಂದ ಚೆಂಡನ್ನು ಸಿಮ್ರಾನ್‌ಜೀತ್‌ ಸಿಂಗ್‌ ಕ್ಷಣಾರ್ಧದಲ್ಲಿಯೇ ಗೋಲಾಗಿಸುತ್ತಾರೆ. ಜರ್ಮನಿ ಆಟಗಾರ ಚೆಂಡನ್ನು ತನ್ನ ಹಿಡಿತಕ್ಕೆ ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ. ಜರ್ಮನಿಯ ಗೋಲ್‌ ಕೀಪರ್‌ಗೆ ಕೂಡ ತಡೆ ನೀಡಲು ಸಾಧ್ಯವಾಗುವುದಿಲ್ಲ. ಪಂದ್ಯದಲ್ಲಿ ಇದು ಭಾರತ ದಾಖಲಿಸಿದ ಮೊದಲು ಗೋಲು. ಅನಂತರ 24 ಮತ್ತು 25ನೇ ನಿಮಿಷದಲ್ಲಿ ಜರ್ಮನಿ ಆಟಗಾರರು ಒಂದರ ಹಿಂದೆ ಒಂದು ಗೋಲು ಸಿಡಿಸಿ ಅಂತರವನ್ನು 3-1ಕ್ಕೆ ಹೆಚ್ಚಿಸಿಕೊಳ್ಳುತ್ತಾರೆ. ಆದ್ರೆ, ಇದಕ್ಕೆ ಭಾರತ ಕುಗ್ಗುವುದಿಲ್ಲ. ತಕ್ಕ ತಿರುಗೇಟು ನೀಡಲು ಸಜ್ಜಾಗಿ ಬಿಡುತ್ತದೆ.
ಪಂದ್ಯ ಆರಂಭವಾಗಿ 27ನೇ ನಿಮಿಷವಾಗಿರುತ್ತೆ. ಈ ಹಂತದಲ್ಲಿ ಜರ್ಮನಿ ಆಟಗಾರ ಪಾಸಾಗಿ ಬಂದ ಚೆಂಡಿಗೆ ಕಾಲನ್ನು ಅಡ್ಡ ನೀಡುತ್ತಾನೆ. ಯಾವುದೇ ಆಟಗಾರ ಉದ್ದೇಶಪೂರ್ವಕವಾಗಿ ಹೀಗೆ ಮಾಡುವುದಿಲ್ಲ. ಆದ್ರೆ, ಚೆಂಡನ್ನು ರಕ್ಷಣಾ ಆಟಗಾರರು ತಮ್ಮ ವಶಕ್ಕೆ ಪಡೆಯುವಾಗ ಹೀಗಾಗಿ ಬಿಡುತ್ತದೆ. ಇದರಿಂದಾಗಿ ಭಾರತಕ್ಕೆ ಪೆನಾಲ್ಟಿ ಕಾರ್ನರ್‌ ಅವಕಾಶ ಸಿಗುತ್ತದೆ. ಅದನ್ನು ಸದುಪಯೋಗ ಪಡಿಸಿಕೊಂಡ ಹಾರ್ದಿಕ್‌ ಸಿಂಗ್‌ ಗೋಲಾಗಿಸುತ್ತಾರೆ.

ಭಾರತ ತಂಡ ಎರಡನೇ ಗೋಲು ಸಿಡಿಸಿದ ಮರು ಕ್ಷಣದಲ್ಲಿಯೇ ಅಂದ್ರೆ 29ನೇ ನಿಮಿಷದಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್‌ ಅವಕಾಶವೊಂದು ದೊರೆಯುತ್ತದೆ. ಜರ್ಮನಿ ಆಟಗಾರರು ಚೆಂಡನ್ನು ಭಾರತೀಯ ಆಟಗಾರರ ಹಾಕಿ ಸ್ಟಿಕ್‌ನಿಂದ ಕಸಿಯುವಾಗ ಎಡವಿ ಬಿಡ್ತಾರೆ. ಹೀಗಾಗಿ ಅಂಪೈರ್‌ ಭಾರತಕ್ಕೆ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ನೀಡುತ್ತಾರೆ. ಭಾರತ ತಂಡದ ನಾಯಕ ಹರ್ಮನ್‌ ಪ್ರೀತ್‌ ಸಿಂಗ್‌ ಜರ್ಮನಿಯ ಕೋಟೆಯನ್ನು ಭೇದಿಸಿ ಚೆಂಡನ್ನು ಗೋಲಿನ ಬಲೆಯೊಳಗೆ ಸೇರಿಸುತ್ತಾರೆ. ಈ ಮೂಲಕ ಉಭಯ ತಂಡಗಳು 3-3 ಗೋಲುಗಳಿಂದ ಸಮಬಲ ಸಾಧಿಸುತ್ತವೆ. ಭಾರತ ತಂಡಕ್ಕೆ ಟರ್ನಿಂಗ್‌ ಪಾಯಿಂಟ್‌ ನೀಡಿದ್ದೇ 2ನೇ ಕ್ವಾರ್ಟರ್‌ ಆಗಿರುತ್ತದೆ.

3ನೇ ಕ್ವಾರ್ಟರ್‌ನಲ್ಲಿ ನಡೆಯಿತು ರೋಚಕ ಕಾಳಗ
ಭಾರತದ ಪರ ಮತ್ತೆ ಎರಡು ಗೋಲು ದಾಖಲು
ಭಾರತ ತಂಡ ಮೇಲುಗೈ ಸಾಧಿಸಿದ್ದೇ 3ನೇ ಕ್ವಾರ್ಟರ್‌ನಲ್ಲಿ

ಎರಡನೇ ಕ್ವಾರ್ಟರ್‌ನಲ್ಲಿ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿದ್ದ ಭಾರತ ಮೂರನೇ ಕ್ವಾರ್ಟರ್‌ನಲ್ಲಿ ಮೇಲುಗೈ ಸಾಧಿಸಿತ್ತು. ಹೌದು, ಪ್ರತಿ ಹಂತದಲ್ಲಿಯೂ ಭಾರತೀಯ ಆಟಗಾರರು ಭರ್ಜರಿ ಪ್ರದರ್ಶನ ನೀಡಿದರು. ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿದರು. ಇದರ ಫಲವಾಗಿ 31ನೇ ನಿಮಿಷದಲ್ಲಿ ರುಪಿಂದರ್‌ ಪಾಲ್‌ ಸಿಂಗ್‌ ಶೂಟ್‌ ಪೆನಾಲ್ಟಿ ಸ್ಟ್ರೋಕ್‌ ಗೋಲು ಸಿಡಿಸುತ್ತಾರೆ. ಅನಂತರ 34ನೇ ನಿಮಿಷದಲ್ಲಿ ಸಿಮ್ರಾನ್‌ಜೀತ್‌ ಸಿಂಗ್‌ ಜರ್ಮನಿ ತಂಡದ ಕೋಟೆಯನ್ನು ಭೇದಿಸಿ ಗೋಲು ಬಾರಿಸುತ್ತಾರೆ. ಅಲ್ಲಿಗೆ ಭಾರತ 5-3 ಗೋಲುಗಳಿಂದ ಮುನ್ನಡೆ ಸಾಧಿಸುತ್ತದೆ. ಈ ಹಂತದಲ್ಲಿ ಭಾರತೀಯ ತಂಡಕ್ಕೆ ಕಂಚಿನ ಪದಕ ಗೆಲ್ಲುವ ಭರವಸೆ ಮೂಡಿರುತ್ತದೆ. ಅನಂತರ ನಡೆದ ಅಂತಿಮ ಕ್ವಾರ್ಟರ್‌ನಲ್ಲಿ ಅಂದ್ರೆ ನಾಲ್ಕನೇ ಕ್ವಾರ್ಟರ್‌ನಲ್ಲಿ ಜರ್ಮನಿ ಒಂದು ಗೋಲು ಸಿಡಿಸುತ್ತದೆ. ಆದ್ರೆ, ಭಾರತದ ಗೆಲುವಿನ ಓಟಕ್ಕೆ ಅದು ತಡೆ ನೀಡುವುದಿಲ್ಲ. ಅಂತಿವಾಗಿ ಭಾರತ ತಂಡ 5-4 ಗೋಲುಗಳಿಂದ ವಿಜಯಪತಾಕೆ ಹಾರಿಸುತ್ತದೆ.

ಗುಂಪುಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತ
ಕ್ವಾರ್ಟರ್‌ ಫೈನಲ್‌ನಲ್ಲಿ ಬ್ರಿಟನ್‌ ಸೋಲಿಸಿ ಸೆಮೀಸ್‌ಗೆ ಲಗ್ಗೆ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಪುರುಷರ ಹಾಕಿ ತಂಡ ಅದ್ಭುತ ಪ್ರದರ್ಶನವನ್ನೇ ನೀಡಿದೆ. A ಗುಂಪಿನಲ್ಲಿ ಸ್ಥಾನ ಪಡೆದಿದ್ದ ಭಾರತ ತಾನಾಡಿದ 5 ಪಂದ್ಯಗಳಲ್ಲಿ 1 ಪಂದ್ಯ ಮಾತ್ರ ಸೋತಿತ್ತು. ಉಳಿದ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಒಟ್ಟು 12 ಅಂಕ ಸಂಪಾದಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತ್ತು. ಇನ್ನು ಕ್ವಾರ್ಟರ್‌ ಫೈನಲ್‌ನಲ್ಲಿ ನಡೆದ ಜಿದ್ದಾಜಿದ್ದಿನ ಹೋರಾಟದಲ್ಲಿ 3-1 ಗೋಲುಗಳಿಂದ ಬ್ರಿಟನ್‌ ತಂಡವನ್ನು ಮಣಿಸಿ ಸೆಮಿಫೈನಲ್‌ಗೆ ಲಗ್ಗೆ ಹಾಕಿತ್ತು. ಒಲಿಂಪಿಕ್ಸ್‌ ಇತಿಹಾಸದಲ್ಲಿಯೇ ಭಾರತ ಬರೋಬ್ಬರಿ 41 ವರ್ಷಗಳ ನಂತರ ದಾಖಲೆ ನಿರ್ಮಿಸಿತ್ತು. ಆದ್ರೆ, ಸೆಮಿಫೈನಲ್‌ನಲ್ಲಿ ಬೆಲ್ಜಿಯಂ ವಿರುದ್ಧ 5-2 ಗೋಲುಗಳಿಂದ ಸೋತ್ತಿತ್ತು.

ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಸಿಕ್ಕಿದೆ 8 ಚಿನ್ನ
ಹಾಕಿಯಲ್ಲಿ ಗತವೈಭವ ಮತ್ತೆ ಮರುಕಳಿಸುತ್ತಾ?

ಒಲಿಂಪಿಕ್ಸ್‌ನಲ್ಲಿ ಭಾರತದ ಹಾಕಿ ತಂಡದ ಹೆಜ್ಜೆ ಮರೆಯಲಾಗದ್ದು. 1928 ರಿಂದ 1980ರ ವರೆಗೆ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತ 8 ಚಿನ್ನದ ಪದಕ ಗೆದ್ದಿತ್ತು. ಉಳಿದಂತೆ ಒಂದು ಬೆಳ್ಳಿಯ ಪದಕ, 2 ಕಂಚಿನ ಪದಕ ಗೆದ್ದಿತ್ತು. ಇದೀಗ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್‌ ಹಾಕಿಯಲ್ಲಿ ಭಾರತ ಗೆದ್ದ ಕಂಚಿನ ಪದಕದ ಸಂಖ್ಯೆ 3ಕ್ಕೆ ಏರಿದರೆ, ಒಲಿಂಪಿಕ್ಸ್‌ನಲ್ಲಿ ಪುರುಷರ ಹಾಕಿ ತಂಡ ಗೆದ್ದ ಒಟ್ಟು ಪದಕಗಳ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಇತೀಚಿನ ವರ್ಷಗಳಲ್ಲಿ ಮನ್‌ಪ್ರೀತ್‌ ಸಿಂಗ್‌ ನೇತೃತ್ವದ ಭಾರತ ತಂಡ ಅದ್ಭುತ ಪ್ರದರ್ಶನವನ್ನೇ ನೀಡುತ್ತಿದೆ. ಇದನ್ನು ನೋಡಿದರೆ ಭಾರತದ ಹಾಕಿ ತಂಡದ ವೈಭವ ಮತ್ತೆ ಮರುಳಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಭಾರತದ ಪುರುಷರ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ 41 ವರ್ಷಗಳ ನಂತರ ಪದಕ ಗೆದ್ದಿದೆ. ಪದಕ ತಂದ ಎಲ್ಲಾ ಕ್ರೀಡಾಪಟುಗಳಿಗೂ ಶುಭಹಾರೈಕೆ. ಮುಂಬರುವ ದಿನಗಳಲ್ಲಿ ಭಾರತ ತಂಡ ಇನ್ನಷ್ಟು ಪ್ರಬಲವಾಗಲಿ, ಭಾರತಕ್ಕೆ ಇನ್ನಷ್ಟು ಪದಕ ತರುವಂತಾಗಲಿ ಅಂತ ಹಾರೈಸೋಣ. ಜೈ ಹೋ.

Source: newsfirstlive.com Source link