ಶಾಸಕ ಜಮೀರ್‌ಗೆ ಇಡಿ ಶಾಕ್ – ಸತತ 23 ಗಂಟೆಗಳ ಕಾಲ ನಡೆದ ದಾಳಿ ಅಂತ್ಯ

ಬೆಂಗಳೂರು: ಗುರುವಾರ ಬೆಳಗ್ಗೆ ಕಾಂಗ್ರೆಸ್ ಶಾಸಕ ಜಮೀರ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದು, ಇದೀಗ ಅಂತ್ಯವಾಗಿದೆ.

ಈ ಮೂಲಕ ಸತತ 23 ಗಂಟೆಗಳ ಕಾಲದ ನಡೆದ ಇಡಿ ದಾಳಿ ಅಂತ್ಯವಾಗಿದೆ. ಜಮೀರ್ ಬಂಗಲೆಯಿಂದ ಅಧಿಕಾರಿಗಳು ತೆರಳಿದ್ದಾರೆ. ನಿನ್ನೆ ಬೆಳಗ್ಗೆಯಿಂದ ಇಂದು ಬೆಳಗ್ಗೆ 5 ಗಂಟೆವರೆಗೂ ನಡೆದ ದಾಳಿ ನಡೆಸಿದ್ದಾರೆ. ಈ ವೇಳೆ ಸಿಕ್ಕ ಹಲವು ದಾಖಲೆಗಳನ್ನು ಇಡಿ ಅಧಿಕಾರಿಗಳು ಕೊಂಡೊಯ್ದಿದ್ದಾರೆ.

ಇಡಿ ದಾಳಿ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಧೃವ ನಾರಾಯಣ್ ಸೇರಿದಂತೆ ಹಲವರು ಇದೊಂದು ರಾಜಕೀಯ ಪ್ರೇರಿತ ದಾಳಿ ಎಂದು ಆರೋಪಿಸಿದ್ದರು. ಇತ್ತ ಶಾಸಕ ನಿವಾಸದ ಮುಂದೆ ಜಮೀರ್ ಅಹ್ಮದ್ ಅವರ ಅಭಿಮಾನಿಗಳು ಸೇರಿ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ್ದರು. ಇದನ್ನೂ ಓದಿ: ಜಮೀರ್ ಆಸ್ತಿ 10 ವರ್ಷದ ಹಿಂದೆ ಎಷ್ಟಿತ್ತು? ಈಗ ಎಷ್ಟು ಏರಿಕೆಯಾಗಿದೆ?

ಜಮೀರ್ ಅಹ್ಮದ್ ಖಾನ್ ಅವರು ಐಎಂಎ ಗೋಲ್ಡ್‍ನಿಂದ 5 ಕೋಟಿ ಮೌಲ್ಯದ ಚಿನ್ನಾಭರಣ ಪಡೆದಿರುವ ಮಾಹಿತಿ ಹೊರಬಿದ್ದಿದೆ. ಮಗಳ ಮದುವೆಯ ಸಂದರ್ಭದಲ್ಲಿ ಜಮೀರ್ ಅವರು ಮನ್ಸೂರ್ ಬಳಿ 9 ಕೋಟಿ ಹಣ ಪಡೆದಿದ್ದಾರೆ. ಉಳಿದಿದ್ದ ಹಣವನ್ನು ಚಿನ್ನದ ರೂಪದಲ್ಲಿ ಪಡೆದುಕೊಂಡಿದ್ದರು. ಐಎಂಎ ಗೋಲ್ಡ್ ನಿಂದ 5 ಕೋಟಿ ಮೌಲ್ಯದ ಚಿನ್ನಾಭರಣ ಪಡೆದಿದ್ದ ಜಮೀರ್, ಬಡ್ಡಿಯ ರೂಪದಲ್ಲಿಯೂ ಕೂಡ ಹಣ ಪಡೆದುಕೊಂಡಿದ್ದರೆಂಬ ಮಾಹಿತಿ ತಿಳಿದುಬಂದಿತ್ತು.

Source: publictv.in Source link