ಬಿಎಸ್‍ಪಿಯಿಂದ ನನಗೆ ಮೋಸವಾಗಿದೆ, ನನ್ನಿಂದ ಬಿಎಸ್‍ಪಿಗೆ ಮೋಸ ಆಗಿಲ್ಲ: ಎನ್. ಮಹೇಶ್

ಮೈಸೂರು: ಬಿಎಸ್‍ಪಿ ಪಕ್ಷದಿಂದ ನನಗೆ ಮೋಸವಾಗಿದೆ. ನನ್ನಿಂದ ಬಿಎಸ್‍ಪಿಗೆ ಮೋಸ ಆಗಿಲ್ಲ ಎಂದು ಗುರುವಾರ ಬಿಜೆಪಿ ಸೇರಿದ ಚಾಮರಾಜನಗರದ ಕೊಳ್ಳೆಗಾಲದ ಶಾಸಕ ಎನ್. ಮಹೇಶ್ ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಎಸ್‍ಪಿ ನನ್ನ ತಾಯಿ ಪಕ್ಷ ಎಂದು ಹೇಳಿದ್ದೆ. ಆದರೆ ತಾಯಿಯೇ ಮಗನಿಗೆ ಮೋಸ ಮಾಡಿದಾಗ ಮಗ ಏನು ಮಾಡಬೇಕು. ಮಗ ಅನಾಥನಾಗಿದ್ದ. ಹೀಗಾಗಿ ರಾಜಕೀಯವಾಗಿ ದಾರಿ ಕಂಡುಕೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ನನ್ನನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿರುವವರು ಯಾರು ಎಂಬುದು ನನಗೆ ಗೊತ್ತಿದೆ. ಬಿಎಸ್‍ಪಿ ಗೆಳೆಯರಿಗೆ ನಾನು ಹೇಳುವುದಿಷ್ಟು. ನನ್ನನ್ನು ಟ್ರೋಲ್ ಮಾಡಿಕೊಂಡು ಸಮಯ ವ್ಯರ್ಥ ಮಾಡಬೇಡಿ. ಆ ಸಮಯವನ್ನು ಬಿಎಸ್‍ಪಿ ಪಕ್ಷ ಕಟ್ಟಲು ಬಳಸಿ. ನನ್ನನ್ನು ಟ್ರೋಲ್ ಮಾಡುತ್ತಿರುವವರಿಗೆ ಮಲೆ ಮಹದೇಶ್ವರ ಸ್ವಾಮಿ ಒಳೆಯದ್ದನ್ನು ಮಾಡಲಿ ಎಂದು ಹೇಳಿದ್ದಾರೆ.

ಅವತ್ತಿನ ರಾಜಕೀಯ ಸಂದರ್ಭಕ್ಕೆ ಹೇಳಿದ ಮಾತನ್ನು ಇವತ್ತಿನ ನೆಲೆಯಲ್ಲಿ ನಿಂತು ನೋಡಬಾರದು. ಹೋರಾಟಗಳ ವೇಳೆ ಹೇಳಿದ ಮಾತೇ ಬೇರೆ. ಅಧಿಕಾರ ಸ್ಥಾನಗಳಿಗೆ ಬಂದಾಗಿನ ಮಾತೇ ಬೇರೆ ಎಂಬುದು ನನಗೆ ಅರ್ಥವಾಗಿದೆ. ನಮ್ಮ ಮತ ಬ್ಯಾಂಕ್ ಯಾವುದು ನಮ್ಮನ್ನು ಬಿಟ್ಟು ಹೋಗಿಲ್ಲ. ನನಗೆ ಬಿಜೆಪಿ ಸೇರುವುದು ಬಿಟ್ಟು ಬೇರೆ ದಾರಿಯೇ ಇರಲಿಲ್ಲ. ಕಾಂಗ್ರೆಸ್ ನಲ್ಲಿ ಸ್ಥಾನ ಖಾಲಿ ಇಲ್ಲ. ಇಲ್ಲದಿದ್ದರೆ ಚುನಾವಣಾ ರಾಜಕಾರಣ ಬಿಡಬೇಕಿತ್ತು. ಹೀಗಾಗಿ ಬಿಜೆಪಿ ಸೇರಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ:ಇಡಿ ಅಧಿಕಾರಿಗಳ ದಾಳಿಗೆ ಕಾರಣವಾಯ್ತಾ ಜಮೀರ್ ಮಗಳ ಮದುವೆ?

Source: publictv.in Source link