ಕುಸಿಯುತ್ತಿವೆ ಸೇತುವೆ ಕಲ್ಲುಗಳು- ಕೊಪ್ಪದ ಏಳೆಂಟು ಹಳ್ಳಿಯ ಜನರಲ್ಲಿ ಆತಂಕ

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಪ್ರಮಾಣ ಬಹುತೇಕ ತಗ್ಗಿದೆ. ಆಗಾಗ್ಗೆ ಮಲೆನಾಡಿನ ಅಲ್ಲಲ್ಲೇ ಐದತ್ತು ನಿಮಿಷಗಳ ಕಾಲ ಭಾರೀ ಮಳೆ ಸುರಿಯುತ್ತೆ. ಮತ್ತೆ ಬಿಡುವು ನೀಡುತ್ತಿದ್ದಾನೆ ವರುಣದೇವ. ಆದರೆ ಮಳೆ ಪ್ರಮಾಣ ಬಹುತೇಕ ತಗ್ಗಿದ್ದರೂ ಸೇತುವೆ ಶಿಥಿಲಾವಸ್ಥೆ ತಲುಪಿ ಗ್ರಾಮಗಳ ಸಂಪರ್ಕವನ್ನೇ ಕಳೆದುಕೊಳ್ಳುವ ಆತಂಕ ಮಲೆನಾಡಿಗರಲ್ಲಿ ಮನೆ ಮಾಡಿದೆ.

ಜಿಲ್ಲೆಯ ಕೊಪ್ಪ ತಾಲೂಕಿನ ಶಾಂತಿಗ್ರಾಮ ಸೇತುವೆಯ ತಳಪಾಯದ ಒಂದೊಂದೇ ಕಲ್ಲುಗಳು ಕಳಚಿ ಬೀಳುತ್ತಿದ್ದು, ಸೇತುವೆ ಸಂಪೂರ್ಣ ಕುಸಿಯುವ ಭೀತಿ ನಿರ್ಮಾಣವಾಗಿದೆ. ನಿನ್ನೆಯಿಂದಲೂ ಸೇತುವೆಯ ಒಂದೊಂದೇ ಕಲ್ಲುಗಳು ಕಳಚಿ ಬೀಳುತ್ತಿವೆ. ಮಲೆನಾಡ ಜನವಸತಿ ಪ್ರದೇಶದಲ್ಲಿ ಮಳೆ ಪ್ರಮಾಣ ತಗ್ಗಿದ್ದರೂ ಘಟ್ಟ ಪ್ರದೇಶದಲ್ಲಿ ಮಳೆ ಸುರಿಯುತ್ತಿರುವುದರಿಂದ ಹಳ್ಳಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ನೀರಿನ ವೇಗವಾದ ಹರಿವಿನಿಂದ ದಿನಕಳೆದಂತೆ ಸೇತುವೆಗಳು ದುರ್ಬಲಗೊಳ್ಳುತ್ತಿವೆ. ಇದನ್ನೂ ಓದಿ: ಜಿಲ್ಲೆಯಲ್ಲಿ 15 ದಿನದ ಹಿಂದೆ ಧಾರಾಕಾರ ಮಳೆ – ತೀರ್ಥಹಳ್ಳಿಯ ಕುರುವಳ್ಳಿ ಸಮೀಪ ಕುಸಿಯುತ್ತಿರುವ ಧರೆ

ಶಾಂತಿಗ್ರಾಮದ ಈ ಸೇತುವೆ ಜಲಾವೃತಗೊಂಡರೆ ಕೊಗ್ರೆ-ಶಾಂತಿಗ್ರಾಮದ ಸಂಪರ್ಕ ಕೊಂಡಿಯೇ ಕಳಚಿ ಬಿದ್ದಂತೆ. ಮಳೆಯಿಂದ ಮನೆ, ರಸ್ತೆ, ಬೆಟ್ಟ-ಗುಡ್ಡಗಳ ಕುಸಿತದಿಂದ ಕಂಗಾಲಾಗಿರುವ ಜನ, ಇದೀಗ ಸೇತುವೆಯೂ ತನ್ನ ಸಾಮರ್ಥ್ಯ ಕಳೆದುಕೊಳ್ಳುತ್ತಿರುವುದರಿಂದ ಮತ್ತಷ್ಟು ಕಂಗಾಲಾಗಿದ್ದಾರೆ. ಈ ಸೇತುವೆ ಕುಸಿದು ಬಿದ್ದರೆ ಹೊರನಾಡು-ಶೃಂಗೇರಿ-ಕೊಗ್ರೆ ಗ್ರಾಮಕ್ಕೆ ಹತ್ತಾರು ಕಿ.ಮೀ. ಸುತ್ತಿಕೊಂಡು ಬರಬೇಕಾದ ಸ್ಥಿತಿ ನಿರ್ಮಾಣವಾಗಲಿದೆ.

ಹತ್ತಾರು ಹಳ್ಳಿಗೆ ಸಂಪರ್ಕ ಕಲ್ಪಿಸುವ ಈ ಬೈಪಾಸ್ ರಸ್ತೆ ಸೇತುವೆ ಮುಖ್ಯ ಪಿಲ್ಲರ್ ನ ಒಂದು ಭಾಗದಿಂದ ಕುಸಿತ ಆರಂಭವಾಗಿದೆ. ಈ ಸೇತುವೆ ಕುಸಿದರೆ ಕೇವಲ ಕೊಗ್ರೆ-ಶಾಂತಿಪುರ ಗ್ರಾಮವಷ್ಟೆ ಅಲ್ಲದೆ ಬಿ.ಎಂ.ರೋಡ್, ಕೋಟೆತೋಟ, ಬೈರೇದೇವರು, ಹೆಗ್ಗಾರು ಕೂಡಿಗೆ ಸಂಪರ್ಕವೂ ಬಂದ್ ಆಗಲಿದೆ. ಹೀಗಾಗಿ ಕೂಡಲೇ ಅಧಿಕಾರಿಗಳು ಇತ್ತ ಗಮನ ಹರಿಸಿ ಕುಸಿತ ಈಗ ಆರಂಭವಾಗಿದೆ. ಈಗಲೇ ಅದಕ್ಕೊಂದು ಬಂದೋಬಸ್ತ್ ಮಾಡಿದರೆ ಸೇತುವೆ ಬಾಳಿಕೆ ಬರಬಹುದು. ಅಧಿಕಾರಿಗಳು ಸೇತುವೆಯನ್ನ ವೀಕ್ಷಿಸಿ ದುರಸ್ಥಿ ಮಾಡಬೇಕೆಂದು ಮಲೆನಾಡಿಗರು ಆಗ್ರಹಿಸಿದ್ದಾರೆ.

Source: publictv.in Source link