ಶತಕೋಟಿ ಭಾರತೀಯರ ಕನಸು ನನಸು – ಚಿನ್ನ ಗೆದ್ದ ನೀರಜ್

ಟೋಕಿಯೋ: ಶತಕೋಟಿ ಭಾರತೀಯರ ಕನಸು ನನಸಾಗಿದೆ‌. ಒಲಿಂಪಿಕ್ಸ್ ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕವನ್ನು ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.

ಎರಡನೇ ಎಸೆತದಲ್ಲೇ 87.58 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಚಿನ್ನಕ್ಕೆ ಗುರಿಯಿಟ್ಟರು. ಇಲ್ಲಿಯವರೆಗೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತ ಯಾವುದೇ ಪದಕ ಗೆದ್ದಿರಲಿಲ್ಲ. ಈಗ ನಿರಾಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ‌.

2008ರ ಬೀಜಿಂಗ್ ಒಲಿಂಪಿಕ್ಸ್ ಶೂಟಿಂಗ್ ಸ್ಪರ್ಧೆಯಲ್ಲಿ ಅಭಿನವ್ ಬಿಂದ್ರಾ ಚಿನ್ನ ಗೆದ್ದಿದ್ದರು. ಇದೀಗ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ ಎರಡನೇ ಆಟಗಾರನಾಗಿ ನೀರಜ್ ಚೋಪ್ರಾ ಹೊರಹೊಮ್ಮಿದ್ದಾರೆ.

 

ಜಾವೆಲಿನ್‌ ಥ್ರೋ ಪುರುಷರ ವಿಭಾಗದ ಫೈನಲ್‌ಗೆ ಅರ್ಹತೆ ಪಡೆಯಲು ಕನಿಷ್ಠ 83.50 ಮೀಟರ್‌ ಜಾವೆಲಿನ್ ಎಸೆಯಬೇಕು ಅಥವಾ ಅರ್ಹತಾ ಸುತ್ತಿನಲ್ಲಿ ಉತ್ತಮ ಪ್ರದರ್ಶನ ತೋರಿದ ಅಗ್ರ 12 ಜಾವೆಲಿನ್‌ ಥ್ರೋ ಪಟುಗಳನ್ನು ಆರಿಸಲಾಗುತ್ತದೆ.

 

ನೀರಜ್‌ ಚೋಪ್ರಾ ಗುಂಪು ‘ಎ’ ಹಂತದ ಅರ್ಹತಾ ಸುತ್ತಿನಲ್ಲಿ 15ನೇ ಸ್ಥಾನದಲ್ಲಿದ್ದರು. ಆದರೆ ತನ್ಮ ಮೊದಲ ಪ್ರಯತ್ನದಲ್ಲಿಯೇ ನೀರಜ್‌ 86.59 ಮೀ. ದೂರಕ್ಕೆ ಜಾವೆಲಿನ್‌ ಎಸೆದು ಅಗ್ರಸ್ಥಾನ ಪಡೆದಿದ್ದರು. ಫೈನಲ್‌ನಲ್ಲೂ ಅವರು ತಮ್ಮ ಈ ಲಯವನ್ನೇ ಮುಂದುವರಿಸಲಿ ಎಂದು ಶತಕೋಟಿ ಭಾರತೀಯರು ಪ್ರಾರ್ಥಿಸಿದ್ದರು.

Source: publictv.in Source link