ಚಿನ್ನ ಗೆದ್ದ ಬಳಿಕ ರಾಷ್ಟ್ರಗೀತೆ ವೇಳೆ ನೀರಜ್ ಕಣ್ಣೀರು, ಪದಕವನ್ನು ಮಿಲ್ಕಾ ಸಿಂಗ್‍ಗೆ ಸಮರ್ಪಿಸಿದ ಸಾಧಕ

ಟೋಕಿಯೋ: ಜಾವಲಿನ್ ಎಸೆತದಲ್ಲಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ಭಾರತಕ್ಕೆ ಚಿನ್ನದ ಪದಕ ತಂದು ಕೊಟ್ಟ ನೀರಜ್ ಚೋಪ್ರಾ ಭಾವುಕರಾಗಿದ್ದು, ಚಿನ್ನದ ಪದಕ ಸ್ವೀಕರಿಸಿದ ಬಳಿಕ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟಿದ್ದಾರೆ. ಅಲ್ಲದೆ ಗೆದ್ದ ಪದಕವನ್ನು ಮಿಲ್ಕಾ ಸಿಂಗ್‍ಗೆ ಸಮರ್ಪಿಸುವುದಾಗಿ ತಿಳಿಸಿದ್ದಾರೆ.

ಶನಿವಾರ ನೀರಜ್ ಚೋಪ್ರಾ ಅವರು ಜಾವಲಿನ್ ಎಸೆತದಲ್ಲಿ ಚಿನ್ನದ ಪದಕ ತಂದುಕೊಡುವ ಮೂಲಕ ಭಾರತಕ್ಕೆ 7ನೇ ಸ್ವರ್ಣ ಪದಕವನ್ನು ಭಾರತಾಂಬೆಯ ಮುಡಿಗೇರಿಸಿದ್ದಾರೆ. ತಮ್ಮ ಸಾಧನೆ ಬಳಿಕ ನೀರಜ್ ಚೋಪ್ರಾ ಮಾಧ್ಯಮದವರ ಜೊತೆಗೆ ಮಾತನಾಡಿದ್ದು, ನಾನು ಚಿನ್ನದ ಪದಕದ ಬಗ್ಗೆ ಚಿಂತಿಸಿರಲಿಲ್ಲ. ನಾನು ಒಲಿಂಪಿಕ್ ದಾಖಲೆಯನ್ನು ಮುರಿಯಲು ಬಯಸಿದ್ದೆ, ಹೀಗಾಗಿ ಇದು ಸಾಧ್ಯವಾಗಿದೆ. ಈ ದಿನ ವಿಶೇಷವಾಗಿ ಏನಾದರೂ ಮಾಡಲು ಬಯಸಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಹರಿಯಾಣ ಸರ್ಕಾರ 6 ಕೋಟಿ, ಆನಂದ್ ಮಹೀಂದ್ರ ಕಾರ್ ಗಿಫ್ಟ್- ಚಿನ್ನದ ನೀರಜ್‍ಗೆ ಭರ್ಜರಿ ಉಡುಗೊರೆ

ನನ್ನ ಗೋಲ್ಡ್ ಮೆಡಲ್ ನ್ನು ಮಿಲ್ಕಾ ಸಿಂಗ್ ಅವರಿಗೆ ಸಮರ್ಪಿಸುತ್ತೇನೆ. ಅಲ್ಲದೆ ಗೋಲ್ಡ್ ಮೆಡಲ್ ಜೊತೆ ವೈಯಕ್ತಿಕವಾಗಿ ಅವರನ್ನು ಭೇಟಿಯಾಗಲು ಬಯಸಿದ್ದೆ. ಪಿ.ಟಿ.ಉಷಾ ಹಾಗೂ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವ ಸಮೀಪಕ್ಕೆ ಬಂದ ಇತರ ಭಾರತೀಯ ಕ್ರೀಡಾಪಟುಗಳಿಗೆ ಈ ಚಿನ್ನದ ಪದಕವನ್ನು ಅರ್ಪಿಸುತ್ತೇನೆ. ಪದಕ ನೀಡುವ ಸಮಾರಂಭದ ಸಂದರ್ಭದಲ್ಲಿ ರಾಷ್ಟ್ರಗೀತೆ ನನಗೆ ಪ್ರಪಂಚವೇ ಕಣ್ಣ ಮುಂದೆ ಬಂತು. ಅಲ್ಲದೆ ತುಂಬಾ ಅಳು ಬಂತು ಎಂದು ಹೇಳಿದ್ದಾರೆ. ಇದನ್ನೂ ಓದಿ: ರೈತನ ಮಗ 23 ವರ್ಷದ ನೀರಜ್ ಚೋಪ್ರಾ ಚಿನ್ನದ ಸಾಧನೆ

ನೀರಜ್ ಚೋಪ್ರಾ ಶನಿವಾರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಎರಡನೇ ಎಸೆತದಲ್ಲೇ 87.58 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಮೂಲಕ ಅಥ್ಲೆಟಿಕ್ ಲೋಕ ನಿಬ್ಬೆರಗಾಗುವಂತೆ ಮಾಡಿದ್ದಾರೆ. ಅಲ್ಲದೆ ಹೊಸ ದಾಖಲೆಯನ್ನು ಬರೆದಿದ್ದಾರೆ.

Source: publictv.in Source link