ಭೂ-ಹಗರಣ: ಶಾಸಕ ರಾಮದಾಸ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಕೋರ್ಟ್​​ ಆದೇಶ

ಭೂ-ಹಗರಣ: ಶಾಸಕ ರಾಮದಾಸ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಕೋರ್ಟ್​​ ಆದೇಶ

ಮೈಸೂರು: ಮಳಲವಾಡಿ ಭೂ ಹಗರಣ ಆರೋಪ ಪ್ರಕರಣದಲ್ಲಿ ಕೆ.ಆರ್. ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್‌ಗೆ ಮತ್ತೆ ಸಂಕಷ್ಟ ಶುರುವಾಗಿದೆ. ಪ್ರಕರಣ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕ್ರಿಮಿನಲ್ ಕೇಸ್ ದಾಖಲಿಸಲು ಸೂಚನೆ ನೀಡಿದೆ.

ಸೆಕ್ಷನ್ 420, 468 ಅಡಿ ಕೇಸ್ ದಾಖಲಿಸಲು ಕೋರ್ಟ್ ನಿರ್ದೇಶನ ನೀಡಿದೆ. 2008ರಲ್ಲಿ ಲಕ್ಷ್ಮೀಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಭೂಹಗರಣ ಸಂಬಂಧ ರಾಮದಾಸ್ ವಿರುದ್ಧ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರು ಬಿ.ರಿಪೋರ್ಟ್​ ಸಲ್ಲಿಸಿದ್ದರು.

ಪೊಲೀಸರು ಸಲ್ಲಿಸಿದ್ದ ಬಿ-ರಿಪೋರ್ಟ್ ಅನ್ನ ಅಧೀನ ನ್ಯಾಯಾಲಯವು ಅಂಗೀಕರಿಸಿತ್ತು. ಇದನ್ನ ಪ್ರಶ್ನಿಸಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ಅರ್ಜಿ ಸಲ್ಲಿಸಿದ್ದರು. ಅಷ್ಟರಲ್ಲೇ ರಾಮದಾಸ್ ಶಾಸಕರಾಗಿ ಆಯ್ಕೆಯಾಗಿದ್ದರು.

ನಂತರ ಪ್ರಕರಣವು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ಗೆ ವರ್ಗಾವಣೆಯಾಗಿತ್ತು. 2019ರಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಲು ವಿಶೇಷ ಕೋರ್ಟ್ ಆದೇಶಿಸಿತ್ತು. ವಿಶೇಷ ಕೋರ್ಟ್‌ನ ಆದೇಶ ಪ್ರಶ್ನಿಸಿ ರಾಮದಾಸ್ ತಡೆಯಾಜ್ಞೆ ತಂದಿದ್ದರು. ಇತ್ತೀಚೆಗೆ ರಾಮದಾಸ್ ಅರ್ಜಿಯನ್ನು ವಜಾ ಮಾಡಿ ತಡೆಯಾಜ್ಞೆಯನ್ನ ತೆರವು ಮಾಡಿತ್ತು. ಮತ್ತೆ ವಿಚಾರಣೆ ಮುಂದುವರಿಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಿಂದ ಶಾಸಕ ರಾಮದಾಸ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಸೂಚನೆ ನೀಡಿದೆ. 1994ರಲ್ಲಿ ಭೂ ಹಗರಣದ ಬಗ್ಗೆ ತನಿಖೆ ನಡೆಸಿ ರಾಮದಾಸ್ ವಿರುದ್ಧ ಅಂದಿನ‌ ಮೈಸೂರು ಡಿಸಿ ತ.ಮ. ವಿಜಯಭಾಸ್ಕರ್ ವರದಿ ಸಲ್ಲಿಸಿದ್ದರು.

Source: newsfirstlive.com Source link