ಭೀಮನ ಅಮಾವಾಸ್ಯೆ – ಬೆಂಗಳೂರು ದೇವಾಲಯಗಳಲ್ಲಿ ಜನಜಾತ್ರೆ – ಶಕ್ತಿ ದೇವತೆಗಳ ಮೊರೆ ಹೋದ ಜನ

ಬೆಂಗಳೂರು: ಇಂದು ಆಷಾಢ ಮಾಸದ ಕೊನೆಯ ದಿನ. ಆಷಾಡ ಮಾಸದ ಅಮಾವಾಸ್ಯೆ ಅಷ್ಟೇ ಅಲ್ಲದೇ ಭೀಮನ ಅಮಾವಾಸ್ಯೆ ಕೂಡ ಆಗಿರುವುದರಿಂದ ಸಾಮಾನ್ಯವಾಗಿ ಶಕ್ತಿ ದೇವತೆಗಳ ದರ್ಶನ ಮಾಡುವುದು ವಾಡಿಕೆ. ಅದರಲ್ಲೂ ಆಷಾಡ ಮಾಸದ ಭೀಮನ ಅಮಾವಾಸ್ಯೆ ದಿನ ಶಕ್ತಿ ದೇವತೆಗಳ ಆರಾಧನೆ ಮಾಡುವುದರಿಂದ ಒಳ್ಳೆಯದಾಗುತ್ತದೆ ಎನ್ನುವುದು ಭಕ್ತರ ನಂಬಿಕೆ. ಈ ಹಿನ್ನೆಲೆ ಬೆಂಗಳೂರಿನಲ್ಲಿಂದು ಹಲವಾರು ಶಕ್ತಿ ದೇವತೆಗಳ ದೇವಾಲಯಕ್ಕೆ ಭಕ್ತರ ಸಾಗರವೇ ಹರಿದು ಬರುತ್ತಿದೆ.

ಬೆಂಗಳೂರಿನ ಕೆಂಪೇಗೌಡನಗರದ ಬಳಿ ಇರುವ ಬೃಂದಾವನನಗರದ ಶ್ರೀ ಬಂಡೆಮಹಾಂಕಾಳಿ ದೇವಾಲಯಕ್ಕೆ ಸಾವಿರಾರು ಭಕ್ತರು ದೇವಿ ಮಹಾಂಕಾಳಿಯ ದರ್ಶನ ಪಡೆಯಲು ಸಾಲುಗಟ್ಟಿ ನಿಂತಿದ್ದಾರೆ. ಮತ್ತೊಂದೆಡೆ ನಗರದ ಅಣ್ಣಮ್ಮ ತಾಯಿ ದೇವಾಲಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದು, ಸಾಮಾಜಿಕ ಅಂತರ ಪರಿಪಾಲನೆ ಆಗುತ್ತಿಲ್ಲ. ಇತ್ತ ಮಾಗಡಿ ರಸ್ತೆಯ ಅಂಗಾಳ ಪರಮೇಶ್ವರಿ ದೇವಾಲಯದಲ್ಲಿಯೂ ಕೂಡ ಕೊರೊನಾ ರೂಲ್ಸ್ ಗೆ ಬಿಡುಗಾಸಿನ ಕಿಮ್ಮತ್ತಿಲ್ಲದೇ ಜನ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ದೇವಿಯ ದರ್ಶನಕ್ಕೆ ಮುಗಿಬಿದ್ದಿದ್ದಾರೆ.

ನಗರದ ಪ್ರಸಿದ್ಧ ಬನಶಂಕರಿ ದೇವಾಲಯದಲ್ಲಿ ಮಕ್ಕಳು, ವಯಸ್ಸಾದವರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜಾತ್ರೆಯಂತೆ ಜನ ತುಂಬಿದ್ದಾರೆ. ಅಲ್ಲದೇ ದೇವಾಲಯದ ಸಿಬ್ಬಂದಿ ಕೊರೊನಾ ನಿಯಮಗಳನ್ನು ಪಾಲಿಸಿ ಅಂತ ಮೈಕ್‍ನಲ್ಲಿ ಅನೌನ್ಸ್ ಮೆಂಟ್ ಮಾಡುತ್ತಿದ್ದರೂ ಜನ ಅದನ್ನು ಕೊಂಚವು ಕಿವಿಗೆ ಹಾಕಿಕೊಳ್ಳುತ್ತಿಲ್ಲ.

blank

ಇನ್ನೊಂದೆಡೆ ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯ ದೇವಾಲಯಕ್ಕೂ ಭಕ್ತ ಸಾಗರವೇ ಹರಿದು ಬಂದಿದ್ದು, ಗಾಳಿ ಆಂಜನೇಯ ಸ್ವಾಮಿಯ ದರ್ಶನ ಪಡೆಯಲು ಜನ ಮುಗಿ ಬೀಳುತ್ತಿದ್ದಾರೆ. ಒಂದೂವರೆ ಕಿ.ಮೀಗೂ ಹೆಚ್ಚು ದೂರ ಭಕ್ತರು ಸಾಲು ಗಟ್ಟಿ ನಿಂತಿದ್ದಾರೆ. ಪೋಷಕರು ದೇವಾಲಯಕ್ಕೆ ಚಿಕ್ಕ, ಚಿಕ್ಕ ಮಕ್ಕಳನ್ನು ಕರೆದುಕೊಂಡು ಬಂದು ಕೊರೊನಾ ರೂಲ್ಸ್ ಗಳನ್ನು ಬ್ರೇಕ್ ಮಾಡುತ್ತಿದ್ದಾರೆ.

blank

ಒಟ್ಟಾರೆ ಕೊರೊನಾ ಕಂಟ್ರೋಲ್ ಮಾಡಲೇಬೇಕಾದ ಸಮಯದಲ್ಲಿ ಜನ ಹೀಗೆ ದೇವರ ಹೆಸರಿನಲ್ಲಿ ನಿಯಮಗಳನ್ನು ಮೀರಿ ದರ್ಶನಕ್ಕೆ ನಿಂತಿರುವುದು ಆತಂಕವನ್ನು ಸೃಷ್ಟಿ ಮಾಡುತ್ತಿದೆ. ಮನೆಮಂದಿಯೆಲ್ಲ ದೇವರ ದರ್ಶನಕ್ಕೆ ಬರುತ್ತಿದ್ದು, ಸಾಮಾಜಿಕ ಅಂತರವೇ ಇಲ್ಲದೇ ಸರಿಯಾಗಿ ಮಾಸ್ಕ್ ಕೂಡ ಹಾಕದೇ ಇರುವುದು ಮೂರನೇ ಅಲೆಯ ಆರಂಭಕ್ಕೆ ಕಾರಣವಾಗುವ ಸಾಧ್ಯತೆಗಳಿವೆ.

blank

ಅಮಾವಾಸ್ಯೆ ದಿನ ದೇವರ ದರ್ಶನ ಮಾಡಿದರೆ ಒಳಿತು ನಿಜ. ಆದರೆ ಇನ್ನೂ ಕೊರೊನಾ ಮುಗಿದಿಲ್ಲ, ಕೊರೊನಾ ನಿಯಮಗಳನ್ನು ಪಾಲನೆ ಮಾಡಿಕೊಂಡು ದೇವರ ದರ್ಶನ ಮಾಡುವುದು ಎಲ್ಲರಿಗೂ ಸೇಫ್. ಕೊರೊನಾ ಕಂಟ್ರೋಲ್ ಮಾಡುವ ಶಕ್ತಿ ಇರುವುದು ಜನರ ಕೈಯಲ್ಲಿಯೇ ಇದೆ. ಜನ ಮಾತ್ರ ಇದನ್ನೆಲ್ಲಾ ಮರೆತು, ಕೊರೊನಾ ಇಲ್ಲವೇನೋ ಎಂಬಂತೆ ವರ್ತಿಸುತ್ತಿರುವುದು ವಿಪರ್ಯಾಸವಾಗಿದೆ. ಇದನ್ನೂ ಓದಿ:ಕೊರೊನಾ 3ನೇ ಅಲೆ ಭೀತಿ – ಆರತಿ ಉಕ್ಕಡ, ಮಹದೇಶ್ವರ ಬೆಟ್ಟಕ್ಕೆ ಭಕ್ತರ ನಿಷೇಧ

Source: publictv.in Source link