ಚಿನ್ನದ ನೀರಜ್‍ಗೆ ಪ್ರಶಂಸೆಯ ಮಹಾಪೂರ – ಸರ್ಕಾರಗಳಿಂದ ಬಹುಮಾನಗಳ ಸುರಿಮಳೆ

– ಬಿಸಿಸಿಐ, ರೈಲ್ವೆ ಇಲಾಖೆಯಿಂದಲೂ ಭರ್ಜರಿ ಉಡುಗೊರೆ
– ಭರ್ಜರಿ ಬಹುಮಾನ ಘೋಷಣೆ ಮಾಡುತ್ತಿರುವ ಸರ್ಕಾರಗಳು

ನವದೆಹಲಿ: ಟೋಕಿಯೋ ಒಲಿಂಪಿಕ್ಸ್‍ನಲ್ಲಿ 100 ವರ್ಷಗಳ ನಂತರ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ನೀರಜ್ ಚೂಪ್ರಾ ಪಾತ್ರರಾಗಿದ್ದಾರೆ. ಈ ಹಿನ್ನೆಲೆ ವಿಶ್ವದ್ಯಾಂತ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದ್ದು, ಇವರ ಸಾಧನೆಗಾಗಿ ಸರ್ಕಾರ ಹಲವು ಕೊಡುಗೆಗಳನ್ನು ಘೋಷಿಸುತ್ತಿದೆ. ಹರಿಯಾಣ ಸಿಎಂ ಮನೋಹರ್‍ಲಾಲ್ ಖಟ್ಟರ್ ಹಾಗೂ ಆನಂದ್ ಮಹೀಂದ್ರ ಬಳಿಕ ರಾಜ್ಯ ಸರ್ಕಾರಗಳು, ಕ್ರೀಡಾ ಸಂಸ್ಥೆಗಳು ಹಾಗೂ ವಿವಿಧ ಸಂಸ್ಥೆಗಳು ಸಾಧಕರಿಗೆ ಭರ್ಜರಿ ಬಹುಮಾನ ನೀಡುತ್ತಿವೆ.

6 ಕೋಟಿ ಘೋಷಿಸಿದ ಹರಿಯಾಣ ಸರ್ಕಾರ
ಬರೋಬ್ಬರಿ 6 ಕೋಟಿ ನಗದು ಬಹುಮಾನದ ಜೊತೆಗೆ ನಿಯಮದಂತೆ ಸರ್ಕಾರದಲ್ಲಿ ಕ್ಲಾಸ್ ಒನ್ ಕೆಟಗರಿ ಕೆಲಸ ನೀಡುವುದಾಗಿ ಹರಿಯಾಣ ಸಿಎಂ ಘೊಷಿಸಿದ್ದಾರೆ. ಅಲ್ಲದೆ ಅಥ್ಲೆಟ್ಸ್‍ಗಳಿಗಾಗಿ ಪಂಚಕುಲದಲ್ಲಿ ಸೆಂಟರ್ ಆಫ್ ಎಕ್ಸೆಲೆನ್ಸ್ ಕಟ್ಟಡ ನಿರ್ಮಿಸುವುದಾಗಿ ತಿಳಿಸಿದ್ದಾರೆ. ಈ ಮೂಲಕ ನೀರಜ್‍ಗೆ ಗೌರವ ಸಲ್ಲಿಸಿದ್ದಾರೆ. ನೀರಜ್ ಅವರು ಬಯಸಿದರೆ ಹರಿಯಾಣ ಪ್ರದೇಶದ ಮುಖ್ಯಸ್ಥರನ್ನಾಗಿ ಮಾಡುವುದಾಗಿ ಹರಿಯಾಣ ಸಿಎಂ ಖಟ್ಟರ್ ತಿಳಿಸಿದ್ದಾರೆ. ಇದನ್ನೂ ಓದಿ: ರೈತನ ಮಗ 23 ವರ್ಷದ ನೀರಜ್ ಚೋಪ್ರಾ ಚಿನ್ನದ ಸಾಧನೆ

ಪಂಜಾಬ್ ಸರ್ಕಾರದಿಂದ 2.25 ಕೋಟಿ
ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು 2.25 ಕೋಟಿ ರೂ. ಘೋಷಿಸಿದ್ದು, ಭಾರತೀಯರು ಹೆಮ್ಮೆ ಪಡುವಂತಹ ವಿಚಾರವೆಂದು ಪ್ರಶಂಸಿದ್ದಾರೆ. ಬೆಳ್ಳಿ ಪದಕ ಗೆದ್ದವರಿಗೆ 1.5 ಕೋಟಿ ರೂ.ಗಳನ್ನು ಸಹ ಘೋಷಿಸಿದ್ದಾರೆ. ಇನ್ನು 26 ಅಥ್ಲಿಟ್ಸ್ ಆಟಗಾರರಿಗೆ 5 ಲಕ್ಷ ರೂ. ಘೋಷಿದ್ದಾರೆ.

ಮಣಿಪುರ ಸರ್ಕಾರದಿಂದ 1 ಕೋಟಿ
ಮಣಿಪುರ ಸಿಎಂ ಎನ್.ಬಿರೇನ್ ಸಿಂಗ್ ಅವರು ಚೋಪ್ರಾ ಅವರಿಗೆ 1 ಕೋಟಿ ರೂ. ಬಹುಮಾನ ನೀಡುವ ಮೂಲಕ ಗೌರವಿಸಿದ್ದಾರೆ. ಈ ಕುರಿತು ಟ್ವೀಟ್ ಮೂಲಕ ತಿಳಿಸಿ ಶುಭಾಶಯ ಕೋರಿದ್ದಾರೆ. ಇದನ್ನೂ ಓದಿ: ಹರಿಯಾಣ ಸರ್ಕಾರ 6 ಕೋಟಿ, ಆನಂದ್ ಮಹೀಂದ್ರ ಕಾರ್ ಗಿಫ್ಟ್- ಚಿನ್ನದ ನೀರಜ್‍ಗೆ ಭರ್ಜರಿ ಉಡುಗೊರೆ

ಬಿಸಿಸಿಐನಿಂದ ಎಲ್ಲ ಆಟಗಾರರಿಗೂ ಗೌರವ
ಬಿಸಿಸಿಐ ಕೂಡ ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಅವರಿಗೆ 1 ಕೋಟಿ ರೂ. ನೀಡುವುದಾಗಿ ಹೇಳಿದ್ದು, ಕಂಚಿನ ಪದಕ ವಿಜೇತರಾದ ಪಿವಿ ಸಿಂಧು ಅವರಿಗೆ 50 ಲಕ್ಷ ರೂ. ಚಾನು, ರವಿ ಧಾಹಿಯಾ ಮತ್ತು ಭಜರಂಗ್ ಪುನಿಯಾ ಅವರಿಗೆ 25 ಲಕ್ಷ ರೂ. ನೀಡುವುದಾಗಿ ಘೋಷಣೆ ಮಾಡಿದೆ. ಅಲ್ಲದೆ ಪುರುಷರ ಹಾಕಿ ತಂಡಕ್ಕೆ 1.25 ಕೋಟಿ ರೂ. ಕೊಟ್ಟು ಆಟಗಾರರನ್ನು ಗೌರವಿಸಿ ಎಲ್ಲರನ್ನೂ ಐಪಿಎಲ್‍ನ ಫೈನಲ್‍ಗೆ ಆಹ್ವಾನಿಸಲಾಗಿದೆ. ಐಪಿಎಲ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಸಹ ನೀರಜ್ ಅವರಿಗೆ 1 ಕೋಟಿ ರೂ. ನೀಡುವುದಾಗಿ ತಿಳಿಸಿದೆ.

ಇಂಡಿಗೊದಿಂದ ವರ್ಷ ಉಚಿತ ಟಿಕೆಟ್
ವಿಮಾನಯಾನ ಸಂಸ್ಥೆ ಇಂಡಿಗೋ ನೀರಜ್ ಅವರಿಗೆ ಒಂದು ವರ್ಷಗಳ ಕಾಲ, ಅಂದರೆ ಮುಂದಿನ ವರ್ಷ ಆಗಸ್ಟ್ 8ರ ವರೆಗೂ ಉಚಿತವಾಗಿ ಪ್ರಯಾಣ ಮಾಡಲು ಟಿಕೆಟ್‍ನ್ನು ಘೋಷಣೆ ಮಾಡಿದೆ.

ಮಹೀಂದ್ರಾದಿಂದ ಉಚಿತ ಎಸ್‍ಯುವಿ
ಮಹೀಂದ್ರಾ ಸಂಸ್ಥೆಯ ಮುಖ್ಯಸ್ಥ ಆನಂದ್ ಮಹೀಂದ್ರಾ ನೀರಜ್ ಅವರಿಗೆ ಮಹೀಂದ್ರಾ ನ್ಯೂ ಎಕ್ಸ್‍ಯುವಿ 700 ಅನ್ನು ಉಡುಗೊರೆಯಾಗಿ ನೀಡುವುದಾಗಿ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಚಿನ್ನದ ಹುಡುಗನಿಗೆ ಬಹುಮಾನ ಘೋಷಿಸಿದ್ದಾರೆ.

ಕುಸ್ತಿಯಲ್ಲಿ ಬಜರಂಗ್ ಪುನಿಯಾ ಸಾಧನೆ
ಕಂಚಿನ ಪದಕ ಗೆದ್ದ ಕುಸ್ತಿಪಟು ಬಜರಂಗ್ ಪುನಿಯಾ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಇವರಿಗೂ ಸಹ ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಶೇ.50ರ ರಿಯಾಯಿತಿಯಲ್ಲಿ 2.5 ಕೋಟಿ ರೂ. ಮತ್ತು ಭೂಮಿಯೊಂದಿಗೆ ಸರ್ಕಾರಿ ಉದ್ಯೋಗವನ್ನು ಘೋಷಿಸಿದ್ದಾರೆ. ಇದರ ಜೊತೆಗೆ ರೈಲ್ವೆ ಇಲಾಖೆ 1 ಕೋಟಿ ರೂ. ಬಿಸಿಸಿಐ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ತಲಾ 25 ಲಕ್ಷ ರೂ. ಬಹುಮಾನ ಘೋಷಿಸಿವೆ. ಇದರ ಜೊತೆಗೆ ಭಾರತೀಯ ಒಲಿಂಪಿಕ್ ಸಂಸ್ಥೆ(ಐಒಎ) ಚಿನ್ನ ಗೆದ್ದವರಿಗೆ 75 ಲಕ್ಷ ರೂ. ಬೆಳ್ಳಿ ಗೆದ್ದವರಿಗೆ 40 ಲಕ್ಷ ರೂ. ಮತ್ತು ಕಂಚಿನ ಪದಕ ಗೆದ್ದವರಿಗೆ 25 ಲಕ್ಷ ಬಹುಮಾನ ಘೋಷಿಸಿದೆ.

blank

ರೈಲ್ವೇ ಇಲಾಖೆಯಿಂದ ಆಟಗಾರರಿಗೆ, ಕೋಚ್‍ಗೆ ಭರ್ಜರಿ ಗಿಫ್ಟ್
ರೈಲ್ವೇ ಇಲಾಖೆ ಚಿನ್ನದ ಪದಕ ಗೆದ್ದ ಆಟಗಾರನಿಗೆ 3 ಕೋಟಿ ರೂ. ಮತ್ತು ಅವರ ಕೋಚ್‍ಗೆ 25 ಲಕ್ಷ ರೂ. ನಗದು ಬಹುಮಾನ ಘೋಷಿಸಿದೆ. ಬೆಳ್ಳಿ ಗೆದ್ದ ಆಟಗಾರನಿಗೆ 2 ಕೋಟಿ ರೂ. ಮತ್ತು ಕೋಚ್‍ಗೆ 20 ಲಕ್ಷ ರೂ. ಹಾಗೂ ಕಂಚು ಗೆದ್ದ ಆಟಗಾರರಿಗೆ 1 ಕೋಟಿ ರೂ. ಮತ್ತು ಕೋಚ್‍ಗೆ 15 ಲಕ್ಷ ರೂ. ಬಹುಮಾನ ನೀಡುತ್ತಿದೆ. ಅಲ್ಲದೆ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದ ಎಲ್ಲ ಆಟಗಾರರಿಗೆ 7.5 ಲಕ್ಷ ರೂ. ಕೊಡಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.

blank

ಪದಕ ವಿಜೇತರೇ ಸ್ವಾತಂತ್ರ್ಯೋತ್ಸವದ ಅತಿಥಿಗಳು
ಕೆಂಪು ಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವದ ವಿಶೇಷ ಅತಿಥಿಗಳನ್ನಾಗಿ ಒಲಿಂಪಿಕ್ಸ್ ನಲ್ಲಿ ಪದಕ ವಿಜೇತರರನ್ನು ಪ್ರಧಾನಿ ನರೇಂದ್ರ ಮೋದಿ ಆಹ್ವಾನಿಸಿದ್ದಾರೆ. ಅಲ್ಲದೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಿವಾಸಕ್ಕೆ ಆಹ್ವಾನಿಸಿ ಮಾತನಾಡಿಸಲಿದ್ದಾರೆ.

Source: publictv.in Source link