ಬಿಜೆಪಿ ಕಾರ್ಯಕರ್ತನ ಮೈ ಮುಟ್ಟಿದರೆ, ಒಂದಕ್ಕೆ ಎರಡು ತೆಗೆದುಬಿಡಿ: ಈಶ್ವರಪ್ಪ

ಶಿವಮೊಗ್ಗ: ಆಗ ಎಲ್ಲ ಸಂದರ್ಭದಲ್ಲಿಯೂ ಸಮಾಧಾನವಾಗಿರಿ ಎಂದು ಹೇಳುತ್ತಿದ್ದೆವು. ಆದರೆ ಇಂದು ಹಾಗಲ್ಲ ಅವರು ಅವರ ಧಾಟಿಯಲ್ಲೇ ಪ್ರತಿಕ್ರಿಯಿಸಬೇಕು. ಫೇಸ್ ವಿತ್ ದಿ ಸೇಮ್ ಸ್ಟಿಕ್. ಯಾವುದರಲ್ಲಿ ಹೊಡೆಯುತ್ತಾರೆಯೋ ಅದರಲ್ಲೇ ಹೊಡೆದು ಒಂದಕ್ಕೆರಡು ತೆಗೆದು ಬಿಡಿ ಎಂದು ಹೇಳುವ ಮೂಲಕ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

ಈ ಕುರಿತು ಬಿಜೆಪಿ ನಗರ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಅವರು, ಅಂದು ಯಾವುದೇ ಸಂದರ್ಭದಲ್ಲಿ ಸಮಾಧಾನದಿಂದಿರಿ ಎಂದು ಹೇಳುತ್ತಿದ್ದೆವು. ಆದರೆ ಈಗ ಹಾಗಲ್ಲ ಯಾವುದರಲ್ಲಿ ಹೊಡೆಯುತ್ತಾರೆಯೋ ಅದರಲ್ಲೇ ತಿರುಗಿಸಿ ಹೊಡೆದು, ಒಂದಕ್ಕೆರಡು ತೆಗೆದು ಬಿಡಿ. ಹೇಳುವುದು ಬೇಡ ಅಷ್ಟು ಶಕ್ತಿಶಾಲಿಯಾಗಿ ಬೆಳೆದಿದ್ದೇವೆ. ಈಗ ನಮ್ಮ ತಂಟೆಗೆ ಯಾರೂ ಬರುವುದಿಲ್ಲ. ಕೇರಳ ಸಹ ಇದನ್ನು ಹೇಳುತ್ತಿದೆ. ಅಷ್ಟರಮಟ್ಟಿಗೆ ನಾವು ಬೆಳೆದಿದ್ದೇವೆ. ಕೇರಳದಲ್ಲಿ ಚುನಾವಣೆಯಲ್ಲಿ ನಾವು ಗೆಲ್ಲದಿರಬಹುದು. ಆದರೆ ಹಿಂದುತ್ವದ ದೊಡ್ಡ ಅಲೆ ಏಳುತ್ತಿದೆ ಎಂದರು.

ತಮಿಳುನಾಡಿನಲ್ಲಿ ಘಟಾನುಘಟಿ ನಾಯಕರು ಸೋತರು. ನಟ ಕಮಲ್ ಹಸನ್ ಅವರನ್ನು ಸೋಲಿಸಿದ್ದು ಒಬ್ಬ ಬಿಜೆಪಿಯ ಮಹಿಳೆ. ಇದಕ್ಕೆ ಕಾರಣ ಹಿಂದಿನಿಂದ ನಮ್ಮ ಸಂಘಟನೆಯನ್ನು ಬಲಪಡಿಸಿರುವುದು ಕಾರಣ, ಹಲವು ತಪಸ್ವಿಗಳು ಪಕ್ಷವನ್ನು ಕಟ್ಟಿದ್ದಾರೆ ಎಂದರು.

ಮೇಕೆದಾಟು ಕುರಿತು ಮಾತನಾಡಿರುವ ಅವರು, ಮೇಕೆದಾಟು ವಿಚಾರದಲ್ಲಿ ತಮಿಳುನಾಡಿನವರು ಅವರ ರಾಜಕಾರಣ ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪು ಅನುಸರಿಸಿಕೊಂಡು ಮೇಕೆದಾಟು ಯೋಜನೆ ಮಾಡಿಯೇ ತೀರುತ್ತೇವೆ. ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆ ನಿಲ್ಲಿಸುವುದಿಲ್ಲ. ಅಣ್ಣಾಮಲೈ ಉಪವಾಸ ಆದರೂ ಮಾಡಲಿ, ಏನಾದ್ರೂ ಮಾಡಲಿ. ಅದು ನಮಗೆ ಸಂಬಂಧವಿಲ್ಲ. ಅವರ ರಾಜ್ಯಕ್ಕೆ ಏನು ಆಗಬೇಕು ಎಂಬುದರ ಬಗ್ಗೆ ಅವರು ರಾಜಕಾರಣಿಯಾಗಿ ಯೋಚನೆ ಮಾಡುತ್ತಿದ್ದಾರೆ, ಅದು ತಪ್ಪಲ್ಲ. ಅವರ ರಾಜ್ಯಕ್ಕೆ ಒಳ್ಳೆದಾಗುವ ದಿಕ್ಕಿನಲ್ಲಿ ಹೋರಾಟ ಮಾಡಿ, ಅಲ್ಲಿ ಪಕ್ಷ ಕಟ್ಟಿಕೊಳ್ಳಲಿ. ಆದರೆ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆಯೂ ಅವರು ಗಮನ ಇಟ್ಟುಕೊಳ್ಳಬೇಕು. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಮೇಕೆದಾಟು ಯೋಜನೆ ನಿಲ್ಲುವುದಿಲ್ಲ ಎಂದು ತಿಳಿಸಿದರು.

blank

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೇವೇಗೌಡರು ಜೆಡಿಎಸ್ ನಾಯಕರು ಅಂತಾ ಭೇಟಿ ಆಗಿಲ್ಲ. ಹಿರಿಯ ರಾಜಕಾರಣಿ, ಮಾಜಿ ಪ್ರಧಾನಿಗಳು, ರೈತ ನಾಯಕರು. ಅವರು ಒಳ್ಳೊಳ್ಳೆ ಕೆಲಸ ಏನು ಮಾಡಿದ್ದಾರೋ ಅದನ್ನು ಧಾರೆ ಎರೆಯಲಿ, ಆಶೀರ್ವಾದ ಮಾಡಲಿ ಎಂಬ ಉದ್ದೇಶದಿಂದ ಬೊಮ್ಮಾಯಿ ಅವರು ಭೇಟಿ ಆಗಿದ್ದಾರೆ. ಹಾಸನದಂತಹ ಜಿಲ್ಲೆಯಲ್ಲಿ ದೇವೇಗೌಡರು, ರೇವಣ್ಣ, ಕುಮಾರಸ್ವಾಮಿ ಅವರ ಶಕ್ತಿಮೀರಿ ಸಾಮಾನ್ಯ ಕಾರ್ಯಕರ್ತ ಪ್ರೀತಂಗೌಡ ಶಾಸಕರಾಗಿದ್ದಾರೆ. ಸತತವಾಗಿ ಸಂಘಟನೆ ಕಟ್ಟಬೇಕು ಎಂಬ ಪ್ರಯತ್ನ ನಡೆಯುತ್ತಿದೆ. ಈ ಸಂದರ್ಭದಲ್ಲಿ ಬೊಮ್ಮಾಯಿ ಅವರು ದೇವೇಗೌಡರ ಭೇಟಿ ಆಗಿರುವುದು ಅವರಿಗೆ ಸಮಾಧಾನ ತಂದಿಲ್ಲ. ಹೀಗಾಗಿ ಪ್ರೀತಂ ಗೌಡ ಮಾತನಾಡಿದ್ದಾರೆ ಎಂದರು.

blank

ಜೆಡಿಎಸ್ ನಾಯಕರೆಂದು ಭೇಟಿಯಾಗಿಲ್ಲ, ಮಾಜಿ ಪ್ರಧಾನಮಂತ್ರಿ ಎಂದು ಭಾವಿಸಿ ಭೇಟಿ ಆಗಿದ್ದಾರೆ ಎಂಬ ಮನವರಿಕೆಯನ್ನ ಪ್ರೀತಂಗೌಡರಿಗೆ ಮಾಡಿಸುತ್ತೇವೆ. ಯಾವುದೇ ಕಾರಣಕ್ಕೂ ನಮ್ಮ ರಾಜಕಾರಣಕ್ಕೆ, ಬಿಜೆಪಿ ಚಟುವಟಿಕೆಗೆ ಬೊಮ್ಮಾಯಿ, ದೇವೇಗೌಡರ ಭೇಟಿ ತೊಂದರೆ ಆಗಲ್ಲ ಎಂಬುದನ್ನು ತಿಳಿಸುತ್ತೇವೆ ಎಂದರು.

Source: publictv.in Source link