ಬೀದರ್ ಪೊಲೀಸರ ಭರ್ಜರಿ ಬೇಟೆ; ₹59,20,000 ಮೌಲ್ಯದ 592 ಕೆ.ಜಿ ಗಾಂಜಾ ವಶಕ್ಕೆ

ಬೀದರ್ ಪೊಲೀಸರ ಭರ್ಜರಿ ಬೇಟೆ; ₹59,20,000 ಮೌಲ್ಯದ 592 ಕೆ.ಜಿ ಗಾಂಜಾ ವಶಕ್ಕೆ

ಬೀದರ್​: ಖಚಿತ ಮಾಹಿತಿ ಮೇರೆಗೆ ಗಡಿ ಜಿಲ್ಲೆ ಬೀದರ್​ನ ಪೊಲೀಸರು ಭರ್ಜರಿ ಬೇಟೆಯನ್ನೇ ಆಡಿದ್ದಾರೆ. ಬರೋಬ್ಬರಿ 59,20,000 ರೂಪಾಯಿ ಮೌಲ್ಯದ 592 ಕೆಜಿ ಗಾಂಜಾವನ್ನ ಪೊಲೀಸರು ಜಪ್ತಿ ಮಾಡಿದ್ದು ನಾಲ್ಕು ಜನರನ್ನ ವಶಕ್ಕೆ ಮಾಡಿದ್ದಾರೆ.

ಹೈದ್ರಾಬಾದ್​ನಿಂದ ಕಮಲನಗರಕ್ಕೆ ಈ ಗಾಂಜಾವನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ತೆಲಂಗಾಣ ಪಾಸಿಂಗ್ ಹೊಂದಿದ TS -12 UD-1094 ಟೆಂಪೋದಲ್ಲಿ ಔರಾದ ತಾಲೂಕಿನ ವಡಗಾಂವ್- ಕಂದಗೋಳ ರಸ್ತೆ ಪಕ್ಕದ “ಶಿವಾ ಫಂಕ್ಷನ್ ಹಾಲ್ ಬಳಿ ಖಚಿತ ಮಾಹಿತಿ ಆಧಾರದ ಮೇರೆಗೆ ರೈಡ್ ಮಾಡಲಾಗಿದೆ.

ದಾಳಿಯಲ್ಲಿ ಗಾಂಜಾ ಸಾಗಾಟಕ್ಕೆ ಬಳಕೆ ಮಾಡಲಾದ ಟೆಂಪು ಸೇರಿ ಒಟ್ಟು 64,20,000 ರುಪಾಯಿ ಮೌಲ್ಯದ ವಸ್ತುವನ್ನ ವಶಕ್ಕೆ ಪಡೆಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಲ್ಕಿ ತಾಲೂಕಿನ ಮುರಾಳ ಗ್ರಾಮದ  ಓಂಕಾರ, ಕೋನಮೇಳಕುಂದಾ ಗ್ರಾಮದ ಅನೀಲಕುಮಾರ್, ಭಾಲ್ಕಿ ಕಮಲನಗರದ ಹಾಜಿ ಪಾಶಾ ಹಾಗೂ ಭಾಲ್ಕಿ ಪಟ್ಟಣದ ಜನತಾ ನಗರದ ಅಸ್ಲಂನನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಡಿಎಲ್ ಹಾಗೂ ಹೆಚ್ಚುವರಿ ಪೊಲೀಸ್ ಅಧಿಕ್ಷಕ ಗೋಪಾಲ್ ಬ್ಯಾಕೋಡ್ ಮಾರ್ಗದರ್ಶನದಲ್ಲಿ ಭಾಲ್ಕಿ ಡಿ ದೇವರಾಜು ನೇತೃತ್ವದ ತಂಡದಿಂದ ಕಾರ್ಯಾಚರಣೆ ನಡೆಸಲಾಗಿದೆ. ಕಾರ್ಯಾಚರಣೆಯಲ್ಲಿ ರವೀಂದ್ರನಾಥ್ ಸಿಪಿಐ ಔರಾದ್, ಸಂತಪೂರ ಪಿಎಸ್ ಐ ಸಿದ್ದಲಿಂಗ, ಠಾಣಾ ಕುಶನೂರ ಪಿಎಸ್ ಐ ರಾಜಶೇಖರ್ ಸೇರಿದಂತೆ ಸಂತಪುರ ಪೊಲೀಸ್ ಠಾಣೆ ಸಿಬ್ಬಂದಿಗಳು ಭಾಗಿಯಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ಸಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Source: newsfirstlive.com Source link