ಯುವ ಪ್ರೇಮಿಗಳೇ ದರೊಡೆಕೋರರ ಟಾರ್ಗೆಟ್- ಪೊಲೀಸರ ಸೋಗಿನಲ್ಲಿ ದೋಚುತ್ತಿದ್ದ ಮೂವರ ಬಂಧನ

ಬೆಂಗಳೂರು: ಪೊಲೀಸರ ಸೋಗಿನಲ್ಲಿ ಪ್ರೇಮಿಗಳು ಹಾಗೂ ಒಂಟಿಯಾಗಿ ಓಡಾಡುವವರನ್ನು ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಮೂವರನ್ನು ತಲಘಟ್ಟಪುರ ಪೋಲೀಸರು ಬಂಧಿಸಿದ್ದಾರೆ.

ತಲಘಟ್ಟಪುರದ ನಿವಾಸಿ ಶಿವಕುಮಾರ್, ಪ್ರವೀಣ್ ಕುಮಾರ್, ರಘು ಬಂಧಿತರು. ಆರೋಪಿಗಳಿಂದ 3.10 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ, 1.50 ಲಕ್ಷ ರೂ., 1 ಬೇಡಿ, 1 ಕಾರುನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ದರೋಡೆ, ಸುಲುಗೆ ಹಾಗೂ ರಾಬರಿಗಳಂತಹ ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದರು.

ನಗರದ ಹೊರವಲಯದ ರಸ್ತೆಗಳಲ್ಲಿ ಕಾರನ್ನು ನಿಲ್ಲಿಸಿಕೊಂಡು ನಿಂತಿರುವ ಯುವ ಪ್ರೇಮಿಗಳ ಬಳಿ ಹೋಗಿ ತಾವು ಪೊಲೀಸರು ಎಂದು ಹೇಳಿ ನಕಲಿ ಪೊಲೀಸ್ ಗುರುತಿನ ಚೀಟಿ, ನಕಲಿ ಹ್ಯಾಂಡ್‍ಕಪ್ ತೋರಿಸಿ ಅವರಿಂದ ಚಿನ್ನದ ಸರ, ಹಣ ಹಾಗೂ ಮೊಬೈಲ್‍ಗಳನ್ನು ಸುಲಿಗೆ ಮಾಡಿ ಪರಾರಿಯಾಗುತ್ತಿದ್ದರು. ಆರೋಪಿಗಳ ವಿರುದ್ಧ ಈ ಹಿಂದೆ ತಲಘಟ್ಟಪುರ, ರಾಮನಗರ, ಕಗ್ಗಲೀಪುರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರ ಬಂದರೂ ಮತ್ತೆ ಹಳೆ ಚಾಳಿ ಮುಂದುವರೆಸುತ್ತಿದ್ದರು.

ಬೈಕ್ ಕಳವು ದೂರಿನಿಂದ ಆರೋಪಿಗಳು ಪತ್ತೆ
ಬನಶಂಕರಿ 6ನೇ ಹಂತದ ನಿವಾಸಿ ನಾಗಭೂಷಣ್ ಏಪ್ರಿಲ್ 19ರಂದು 45 ಸಾವಿರ ರೂ. ಬೆಲೆ ಬಾಳುವ ಸುಜುಕಿ ಆ್ಯಕ್ಸಿಸ್ ನ್ನು ಮನೆ ಮುಂದೆ ನಿಲ್ಲಿಸಿದ್ದರು. ಈ ವೇಳೆ ಸ್ಕೂಟರ್ ಕಳ್ಳತನವಾಗಿತ್ತು. ಈ ಬಗ್ಗೆ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದರು. ದೂರಿನನ್ವಯ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಮೂವರು ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಇವರನ್ನು ವಿಚಾರಣೆ ನಡೆಸಿದಾಗ ಪೊಲೀಸರ ಸೋಗಿನಲ್ಲಿ ದರೋಡೆ ಮಾಡುತ್ತಿದ್ದ ಸಂಗತಿ ಗೊತ್ತಾಗಿದೆ.

ರಾಮನಗರದ ಬೆಜರಹಳ್ಳಿಕಟ್ಟೆ ಗೇಟ್‍ನಿಂದ ಮಂಚೇಗೌಡನ ದೊಡ್ಡಿಗೆ ಹೋಗುವ ರಸ್ತೆ ಬಳಿ ಮಹೇಶ್ ಎಂಬುವವರನ್ನು ಇತ್ತೀಚೆಗೆ ಆರೋಪಿಗಳು ಅಡ್ಡಗಟ್ಟಿದ್ದರು. ಈ ಪೈಕಿ ರಘು ತನ್ನ ಹಳೆ ಹೋಂಗಾರ್ಡ್ ಐಡಿಕಾರ್ಡ್ ಜೆರಾಕ್ಸ್ ಪ್ರತಿ ಹಾಗೂ ಬೇಡಿಯನ್ನು ತೋರಿಸಿ ಹಣ ಕೊಡುವಂತೆ ಕೇಳಿದ್ದ. ಕೊಡದೇ ಇದ್ದಾಗ ಬಟನ್ ಚಾಕು ತೋರಿಸಿ, ಬೆದರಿಸಿ ಮಹೇಶ್ ಅವರನ್ನು ಕಾರಿನಲ್ಲಿ ಕೂರಿಸಿಕೊಂಡು ವಿವಿಧ ಎಟಿಎಂ ಕೇಂದ್ರಗಳಿಗೆ ಕರೆದೊಯ್ದು ಲಕ್ಷಾಂತರ ರೂ. ದೋಚಿದ್ದರು.

Source: publictv.in Source link