‘ಗೃಹ ಬಳಕೆ ವಸ್ತುಗಳ ಮೇಲೆ 50% ಡಿಸ್ಕೌಂಟ್’ -ಲಕ್ಷ ಲಕ್ಷ ಸಂಗ್ರಹಿಸಿ ಎಸ್ಕೇಪ್ ಆಗಿದ್ದವ ಅಂದರ್

‘ಗೃಹ ಬಳಕೆ ವಸ್ತುಗಳ ಮೇಲೆ 50% ಡಿಸ್ಕೌಂಟ್’ -ಲಕ್ಷ ಲಕ್ಷ ಸಂಗ್ರಹಿಸಿ ಎಸ್ಕೇಪ್ ಆಗಿದ್ದವ ಅಂದರ್

ಯಾದಗಿರಿ: ಕಮ್ಮಿ ಬೆಲೆಗೆ ಏನಾದ್ರೂ ಸಿಗುತ್ತೆ ಅಂದ್ರೆ ಜನ ತಾ ಮುಂದು ನಾ ಮುಂದು ಅಂತಾ ಖರೀದಿಗೆ ಮುಂದಾಗುತ್ತಾರೆ. ಅದರಲ್ಲೂ 50 ಪರ್ಸೆಂಟ್​ ಡಿಸ್ಕೌಂಟ್ ಅಂದ್ರೆ ಕೇಳ್ಬೇಕಾ, ಸಿಕ್ಕೀದ್ದೇ ಚಾನ್ಸು. ಮಿಸ್​ ಆದ್ರೆ ಬಿಗ್ ಲಾಸ್ಸು ಅಂತಾ ಖರೀದಿಗೆ ಕ್ಯೂ ನಿಲ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಖದೀಮನೊಬ್ಬ ಕಡಿಮೆ ಬೆಲೆಗೆ ಗೃಹ ಬಳಕೆ ವಸ್ತುಗಳನ್ನ ಕೊಡ್ತಿನಿ ಅಂತ ಜನರಿಗೆ ಲಕ್ಷ ಲಕ್ಷ ರೂಪಾಯಿ ಮಕ್ಮಲ್ ಟೋಪಿ ಹಾಕಿದ್ದಾನೆ.

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದಲ್ಲಿ ಘಟನೆ ನಡೆದಿದೆ. ನಾಲ್ಕು ರಾಜ್ಯಗಳ ಜನರಿಗೆ ಲಕ್ಷಾಂತರ ರೂಪಾಯಿ ಮೋಸ ಮಾಡಿರೋ ಆರೋಪಿ ಹೆಸರು ರಾಜನ್, ಈತ ಮೂಲತಃ ತಮಿಳುನಾಡಿನವ ಎಂಬ ಪೊಲೀಸರ ವಿಚಾರಣೆಯಲ್ಲಿ ಬೆಳಕಿಗೆ ಬಂದದೆ.

ರಾಜನ್ ಐದು ವರ್ಷಗಳ ಹಿಂದೆ ಗೋಗಿ ಗ್ರಾಮಕ್ಕೆ ಆಗಮಿಸಿ ಗೃಹ ಬಳಕೆ ವಸ್ತುಗಳ ಅಂಗಡಿ ಆರಂಭ ಮಾಡಿದ್ದ. ಕಡಿಮೆ ಬೆಲೆಗೆ ವಸ್ತುಗಳನ್ನು ನೀಡೋದಾಗಿ ಜನರನ್ನು ನಂಬಿಸಿ ಲಕ್ಷ ಲಕ್ಷ ರೂಪಾಯಿ ವಂಚಿಸಿದ್ದಾನೆ.

ಮೊದಮೊದಲು ಜನರಿಗೆ ಕಡಿಮೆ ಬೆಲೆಗೆ ವಸ್ತು ಮಾರಾಟ
ರಾಜನ್ ಮೊದಮೊದಲು ಜನರಿಗೆ ಕಡಿಮೆ ಬೆಲೆಗೆ ಗೃಹ ಬಳಕೆ ವಸ್ತುಗಳನ್ನು ಮಾರಾಟ ಮಾಡಿದ್ದಾನೆ. ಹಣ ನೀಡಿ ಅಂದೇ ವಸ್ತು ಖರೀದಿಸಿದರೆ 10 ಪರ್ಸೆಂಟ್ ವಿನಾಯತಿ ನೀಡೋದಾಗಿ ಹಾಗೂ ಹಣ ನೀಡಿ ಒಂದು ತಿಂಗಳ ಬಳಿಕ ವಸ್ತು ಖರೀದಿಸಿದರೆ 50 ಪರ್ಸೆಂಟ್ ಡಿಸ್ಕೌಂಟ್ ನೀಡ್ತೇನೆ ಅಂತಾ ಜನರನ್ನು ನಂಬಿಸಿದ್ದಾನೆ. ಈತನ ಮಾತನ್ನು ನಂಬಿರ ಜನರು ವಸ್ತುಗಳ ಖರೀದಿಗೆ ಮುಂಗಡ ಹಣ ನೀಡಿದ್ದಾರೆ. ಜನರಿಂದ ಲಕ್ಷಾಂತರ ರೂಪಾಯಿ ಜಮಾ ಮಾಡಿಕೊಂಡು ರಾಜನ್ ಎಸ್ಕೇಪ್ ಆಗಿದ್ದ.

blank

ಈತನಿಂದ ಮೋಸ ಹೋಗಿದ್ದ ಗೋಗಿ ಗ್ರಾಮಸ್ಥರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ಆಂಧ್ರಪ್ರೇಶದ ಅನಂತಪುರಂ ಜಿಲ್ಲೆಯಲ್ಲಿ ರಾಜನ್​ನನ್ನು ಬಂಧಿಸಿದ್ದಾರೆ. ಆಂಧ್ರದ ಅನಂತಪುರಂ ಜಿಲ್ಲೆಯಲ್ಲೂ ಆರೋಪಿ ಅಂಗಡಿ ಹಾಕಿಕೊಂಡು ಜನರಿಗೆ ಮೋಸ ಮಾಡಲು ಯತ್ನಿಸುತ್ತಿದ್ದ. ರಾಜನ್ ಕರ್ನಾಟಕದಲ್ಲಿ ಮಾತ್ರವಲ್ಲ, ಆಂಧ್ರ ಪ್ರದೇಶ, ಉತ್ತರ ಪ್ರದೇಶ ತೆಲಂಗಾಣದಲ್ಲೂ ವಂಚನೆ ಮಾಡಿರೋದು ತನಿಖೆ ವೇಳೆ ಪತ್ತೆಯಾಗಿದೆ. ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ರಾಜನ್​ ಬಂಧನದ ವೇಳೆ ಆತನ ಅಂಗಡಿಯಲ್ಲಿದ್ದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆ ವಸ್ತುಗಳನ್ನು ಮೋಸ ಹೋದ ಜನರಿಗೆ ನೀಡುತ್ತಿದ್ದಾರೆ. ಅದೇನೆ ಇರಲಿ ಕಡಿಮೆ ರೇಟ್​ಗೆ ಸಿಗುತ್ತೆ ಅಂತಾ ಹಿಂದೂ ಮುಂದೂ ಯೋಚಿಸದೇ ಖರೀದಿಗೆ ಮುಂದಾಗೋ ಮುನ್ನ ಎಚ್ಚರಿಕೆ ವಹಿಸಿ. ಇಲ್ಲಾ ಅಂದ್ರೆ ಹಣವೂ ಕಳೆದುಕೊಂಡು ವಸ್ತುಗಳು ಸಿಗದೇ ಮೂರ್ಖರಾಗಬೇಕಾಗುತ್ತೆ.

Source: newsfirstlive.com Source link