ಬೊಮ್ಮಾಯಿ ಮೇಲೆ ಮುನಿಸು; ನೂತನ ಸಿಎಂ ಮೈಸೂರಿಗೆ ಬಂದರೂ ಸ್ವಾಗತಕ್ಕೆ ಬಾರದ ರಾಮದಾಸ್​​

ಬೊಮ್ಮಾಯಿ ಮೇಲೆ ಮುನಿಸು; ನೂತನ ಸಿಎಂ ಮೈಸೂರಿಗೆ ಬಂದರೂ ಸ್ವಾಗತಕ್ಕೆ ಬಾರದ ರಾಮದಾಸ್​​

ಮೈಸೂರು: ಬಸವರಾಜ ಬೊಮ್ಮಾಯಿ ಅವರು ಸಿಎಂ ಆದ ಬಳಿಕ ಮೊದಲ ಬಾರಿಗೆ ಇಂದು ಮೈಸೂರು ಜಿಲ್ಲೆಗೆ ಆಗಮಿಸಿದ್ದು, ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆದುಕೊಂಡಿದ್ದಾರೆ. ಆದರೆ ಜಿಲ್ಲೆಗೆ ಆಗಮಿಸಿದ್ದ ಸಿಎಂ ಅವರಿಗೆ ಸ್ವಾಗತ ಕೋರಲು ಸ್ವಪಕ್ಷದ ಶಾಸಕರೇ ಆಗಿರುವ ಎಸ್.ಎ.ರಾಮದಾಸ್ ಅವರು ಆಗಮಿಸಿರಲಿಲ್ಲ.

ಸಚಿವ ಸ್ಥಾನ ಸಿಗದ ಕಾರಣ ಮುನಿಸಿಕೊಂಡ ಶಾಸಕ ರಾಮದಾಸ್ ಅವರು ಆಪ್ತರ ಬಳಿ ತಮ್ಮ ಬೇಸರ ಹೊರಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಸಿಎಂ ಕಾರ್ಯಕ್ರಮಗಳಿಂದ ಇದುವರೆಗೂ ರಾಮದಾಸ್​​ ಅವರು ದೂರವೇ ಉಳಿದುಕೊಂಡಿದ್ದಾರೆ.

blank

ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದ ಶಾಸಕ ರಾಮದಾಸ್ ಅವರ ಹೆಸರು ರಾಜ್ಯದ ಪಟ್ಟಿಯಲ್ಲಿದ್ದರೂ ಕೊನೆಯ ಹಂತದಲ್ಲಿ ಪಟ್ಟಿಯಿಂದ ಕೈಬಿಡಲಾಗಿತ್ತು. ಇದರಿಂದ ಸಾಕಷ್ಟು ಬೇಸರ ಹೊರಹಾಕಿರೋ ರಾಮದಾಸ್ ಅವರು, ಕಳೆದ 25 ವರ್ಷದಿಂದ ಪಕ್ಷ ಸಂಘಟನೆಯಲ್ಲಿದ್ದೇನೆ. ಆದರು ನನಗೆ ಸಚಿವ ಸ್ಥಾನ ನೀಡಿಲ್ಲ ಎಂದು ಆಪ್ತರೊಂದಿಗೆ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಸಿಎಂ ಜಿಲ್ಲೆಗೆ ಆಗಮಿಸುತ್ತಿರುವ ಮಾಹಿತಿ ಇದ್ದರೂ ರಾಮದಾಸ್​​ ಅವರು ಇಂದು ಪೇಜ್ ಪ್ರಮುಖ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ರಮದ ನೆಪವೊಡ್ಡಿ ಸಿಎಂ‌ ಕಾರ್ಯಕ್ರಮಕ್ಕೆ ಅವರು ಗೈರಾಗುವ ಸಾಧ್ಯತೆ ಇದೆ.

ಈ ನಡುವೇ ಹಳೆ ಮೈಸೂರು ಭಾಗಕ್ಕೆ ಒಂದೇ ಒಂದು ಸಚಿವ ಸ್ಥಾನವೂ ನೀಡದ ಬಗ್ಗೆ ಪಕ್ಷದ ಕಾರ್ಯಕರ್ತರು ಮುಖಂಡರು ಕೂಡ ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದಲೇ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಅಭಿಮಾನಿಗಳ ಯಾವುದೇ ಒತ್ತಡಕ್ಕೂ ಪ್ರತಿಕ್ರಿಯೆ ನೀಡಿದ ರಾಮದಾಸ್​ ಅವರು ಮೌನವಹಿಸಿದ್ದಾರೆ.

Source: newsfirstlive.com Source link