ಬೇಸರಗೊಂಡ ಸಚಿವರನ್ನು ಸಿಎಂ ಬೊಮ್ಮಾಯಿ ಸಮಾಧಾನ ಮಾಡುತ್ತಾರೆ: ಸುನಿಲ್ ಕುಮಾರ್

– ನಾನು ಹಗರಣಗಳನ್ನು ಹೊರತೆಗೆಯಲು ಬಂದ ಸಚಿವ ಅಲ್ಲ

ಉಡುಪಿ: ಖಾತೆ ಹಂಚಿಕೆಯಲ್ಲಿ ಇಬ್ಬರು ಸಚಿವರಿಗೆ ಅಸಮಧಾನ ವಿಚಾರಕ್ಕೆ ಬೇಸರಗೊಂಡ ಸಚಿವರನ್ನು ಸಿಎಂ ಕರೆದು ಮಾತನಾಡುತ್ತಾರೆ. ಸಮಸ್ಯೆ ಬಗೆಹರಿಸಲು ಬಿಜೆಪಿಯಲ್ಲಿ ಆಂತರಿಕ ವ್ಯವಸ್ಥೆ ಇದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಹೇಳಿದರು.

ಬೇಸರ ಮತ್ತು ನೋವನ್ನು ಆಂತರಿಕವಾಗಿ ಕರೆದು ಪರಿಹರಿಸಲಾಗುತ್ತದೆ. ಬಿಜೆಪಿ ತನ್ನ ವ್ಯವಸ್ಥೆಯ ಒಳಗೆ ಅದನ್ನ ಸರಿಮಾಡುತ್ತದೆ. ದೇವೇಗೌಡರು ಮತ್ತು ಸಿಎಂ ಬೊಮ್ಮಾಯಿ ಭೇಟಿ ವಿಚಾರದ ಬಗ್ಗೆ ತಗಾದೆ ತೆಗೆದು ವಿರೋಧಿಸಿದ್ದ ಶಾಸಕ ಪ್ರೀತಂ ಗೌಡ ಬಗ್ಗೆ ನಾನು ಪ್ರತಿಕ್ರಿಯೆ ಕೊಡಲ್ಲ. ಯಾರ ಜೊತೆಗೂ ಕೂಡ ಫ್ರೆಂಡ್ ಶಿಪ್ ಇರಬಹುದು. ಆದರೆ ಬದ್ಧತೆ ಮತ್ತು ಕಾರ್ಯಶೈಲಿಯಲ್ಲಿ ವ್ಯತ್ಯಾಸಗಳು ಆಗಬಾರದು ಎಂದು ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ ಹೇಳಿದರು.

ದೇಶಾದ್ಯಂತ ನಾಳೆ ವಿದ್ಯುತ್ ಇಲಾಖೆಯ ಮುಷ್ಕರವಿದೆ. ಕೆಪಿಟಿಸಿಎಲ್ ಕಾರ್ಮಿಕ ಸಂಘಟನೆಗಳು ನನ್ನನ್ನು ಭೇಟಿಯಾಗಿವೆ. ಖಾಸಗೀಕರಣದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ ಎಂದಿದ್ದಾರೆ. ಶುಕ್ರವಾರ ಅಥವಾ ಶನಿವಾರ ನಾನು ಇಂಧನ ಇಲಾಖೆಯ ಅಧಿಕಾರ ವಹಿಸಿಕೊಳ್ಳಲಿದ್ದೇನೆ. ನಮ್ಮ ರಾಜ್ಯ ಮತ್ತು ಇಲಾಖೆಯ ಹಿತಾಸಕ್ತಿಯನ್ನು ನಾವು ಕಾಪಾಡುತ್ತೇವೆ. ಕೇಂದ್ರದ ಬಿಲ್ ಏನಿದೆ ಎಂಬುದನ್ನು ಪರಾಮರ್ಶಿಸುತ್ತೇನೆ. ಇಲಾಖೆಯ ಅಧಿಕಾರ ವಹಿಸಿಕೊಂಡ ನಂತರ ಈ ಬಗ್ಗೆ ಪ್ರತಿಕ್ರಿಯಿಸುತ್ತೇನೆ.

ನಾನು ಹಗರಣಗಳನ್ನು ಹೊರತೆಗೆಯಲು ಬಂದ ಸಚಿವ ಅಲ್ಲ, ಇಲಾಖೆಯಲ್ಲಿ ಸುಧಾರಣೆಗಳನ್ನು ಮಾಡಲು ಬಂದವನು. ಇಂಧನ ಇಲಾಖೆಯಲ್ಲಿ ಮತ್ತು ರಾಜ್ಯದಲ್ಲಿ ಸೀಮಿತ ಅವಧಿಯಲ್ಲಿ ಕೆಲಸ ಮಾಡಬೇಕಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಇಡಿ ದಾಳಿಗೆ ಜೆಡಿಎಸ್ ಕುಮ್ಮಕ್ಕು ಎಂಬ ಶಾಸಕ ಜಮೀರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಜಮೀರ್ ಬಹಿರಂಗವಾಗಿ ಯಾರದ್ದೋ ಮೇಲೆ ಆರೋಪ ಮಾಡುತ್ತಾರೆ. ಆಂತರಿಕವಾಗಿ ನನ್ನ ಪಾರ್ಟಿಯವರೇ ಮಾಡಿದ್ರೂ ಅಂತಾರೆ. ಏನಿದ್ದರೂ ಅವರವರ ಆಂತರಿಕ ಬೇಗುದಿ ಅಷ್ಟೇ. ಇದರಲ್ಲಿ ನಮ್ಮ ಪಕ್ಷದ ಯಾವುದೇ ಪಾತ್ರ ಇಲ್ಲ ಎಂದು ಸುನಿಲ್ ಕುಮಾರ್ ಹೇಳಿದರು. ಇದನ್ನೂ ಓದಿ: ಕೃಷಿ ಬಿಲ್- ವಿದ್ಯುತ್ ಬಿಲ್ ಹಿಂಪಡೆಯುವ ಒತ್ತಾಯ, ಕಾರ್ಮಿಕ ಸಂಘಟನೆ ಉಡುಪಿ ತಹಶಿಲ್ದಾರ್ ಕಚೇರಿ ಮುತ್ತಿಗೆ ಎಚ್ಚರಿಕೆ

Source: publictv.in Source link