ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ, ಕನ್ನಡಕ್ಕೆ ಧಕ್ಕೆ ಇಲ್ಲ- ಅಶ್ವಥ್ ನಾರಾಯಣ

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಉಪಕುಲಪತಿಗಳ ಜೊತೆ ಸೋಮವಾರ ಮಹತ್ವದ ಮಾತುಕತೆ ನಡೆಸಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು, ಈ ತಿಂಗಳ 23ರಿಂದಲೇ ಪದವಿ ಕಾಲೇಜುಗಳ ಪ್ರವೇಶ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಘೋಷಿಸಿದರು.

ಉಪ ಕುಲಪತಿಗಳ ಸಭೆ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸದಾಗಿ ರೂಪಿಸಲಾಗಿರುವ ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ಮೂಲಕ ದಾಖಲಾತಿ ಪ್ರಕ್ರಿಯೆ ಆರಂಭ ಮಾಡಲಾಗುವುದು. ಅದರ ಮಾದರಿಯನ್ನೂ ಉದ್ಘಾಟಿಸಲಾಗುವುದು ಎಂದು ತಿಳಿಸಿದರು.

ಶಿಕ್ಷಣ ನೀತಿ ಜಾರಿಗೆ ಕೇಂದ್ರ ಸರ್ಕಾರ 15 ವರ್ಷ ಕಾಲಾವಕಾಶ ನೀಡಿದ್ದು, ರಾಜ್ಯ ಸರ್ಕಾರ ಹತ್ತೇ ವರ್ಷಗಳಲ್ಲಿ ಅನುಷ್ಠಾನಕ್ಕೆ ತರಲು ನಿರ್ಧರಿಸಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಜಾರಿ ಮಾಡುವುದಕ್ಕೆ ಅಗಸ್ಟ್ 7ರಂದೇ ಆದೇಶ ಹೊರಡಿಸಲಾಗಿದ್ದು, ಅದರ ಮಾರ್ಗಸೂಚಿಯನ್ನೂ ಪ್ರಕಟಿಸಲಾಗಿದೆ ಎಂದು ತಿಳಿಸಿದರು.

blank

ಈ ಶಿಕ್ಷಣ ನೀತಿಯಲ್ಲಿ ಮಾತೃಭಾಷೆಗೆ ಹೆಚ್ಚು ಒತ್ತು ನೀಡಲಾಗಿದೆ. ಮೊದಲಿಗಿಂತ ಹೆಚ್ಚು ವಿಸ್ತೃತವಾಗಿ ಕನ್ನಡವನ್ನು ಕಲಿಯುವ ಅವಕಾಶ ಕಲ್ಪಿಸಲಾಗಿದೆ. ಯಾವುದೇ ಕಾರಣಕ್ಕೂ ಕನ್ನಡವನ್ನು ಉಪೇಕ್ಷೆ ಮಾಡಿಲ್ಲ. ಎರಡು ವರ್ಷಗಳ ಕನ್ನಡ ಕಲಿಕೆ ಇತ್ತು. ಹಾಗೆ ನೋಡಿದರೆ ಮೊದಲು ಕಡ್ಡಾಯ ಇರಲಿಲ್ಲ. ಈಗ ಕಡ್ಡಾಯ ಮಾಡಲಾಗಿದೆ ಎಂದು ಅವರು ಹೇಳಿದರು.

2021-22ರಿಂದಲೇ ಶಿಕ್ಷಣ ನೀತಿ ಜಾರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳ ವಿಷಯವಾರು ಮಾದರಿ ಪಠ್ಯಕ್ರಮಗಳನ್ನು ಸಿದ್ಧಪಡಿಸಲು ವಿಷಯ ತಜ್ಞರ 32 ಸಮಿತಿಗಳನ್ನು ರಚಿಸಲಾಗಿದೆ. ಈ ಪ್ರಕಾರವಾಗಿ 3 ವರ್ಷದ ಪದವಿ ಪ್ಲಸ್ 2 ವರ್ಷದ ಸ್ನಾತಕೋತ್ತರ ಅಥವಾ 4 ವರ್ಷದ ಆನರ್ಸ್ ಪದವಿ ಪ್ಲಸ್ 1 ವರ್ಷದ ಸ್ನಾತಕೋತ್ತರ ಪದವಿ ಅಧ್ಯಯನದ ಬಗ್ಗೆ ವಿಷಯವಾರು ಮಾದರಿ ಪಠ್ಯ ತಯಾರಿಸುವಂತೆ ಆಯಾ ಸಮಿತಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.

blank

ಈ ಎಲ್ಲ ವಿಷಯವಾರು ಸಮಿತಿಗಳು ಸಲ್ಲಿಸುವ ವರದಿಗಳ ಆಧಾರದ ಆಯಾ ವಿಷಯದ ಪಠ್ಯ ರಚನೆಯಾಗಲಿದ್ದು, ಇದೇ ಅಗಸ್ಟ್ 31ರೊಳಗೆ ಪಠ್ಯ ಸಿದ್ಧಪಡಿಸುವಂತೆ ಸೂಚಿಸಲಾಗಿದ್ದು, ಈ ಬಗ್ಗೆ ಉಪ ಕುಲಪತಿಗಳ ಜತೆ ವಿಷದವಾಗಿ ಚರ್ಚೆ ನಡೆಸಿಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಶಿಕ್ಷಣ ನೀತಿಯ ಬಗ್ಗೆ ಕೆಲವರು ಕೆಲ ಅನುಮಾನ, ಪ್ರಶ್ನೆಗಳನ್ನು ಎತ್ತುತ್ತಿದ್ದು, ಎಲ್ಲಕ್ಕೂ ಈಗಾಗಲೇ ಉತ್ತರ ನೀಡಲಾಗಿದೆ. ಮತ್ತೆ ಬೇಕಿದ್ದರೂ ಸರಕಾರ ಉತ್ತರ ನೀಡಲು ಸಿದ್ಧವಿದೆ ಎಂದ ಅವರು ಪ್ರಧಾನಿ ನರೇಂದ್ರ ಮೋದಿ ಅವರು 38 ವರ್ಷಗಳ ನಂತರ ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತರುವ ಸಂಕಲ್ಪ ಮಾಡಿದರು. ಈ ನೀತಿಯನ್ನು ರೂಪಿಸುವ ಮುನ್ನ ಎಲ್ಲ ವಿವಿಗಳ ಉಪ ಕುಲಪತಿಗಳು, ವಿಷಯವಾರು ತಜ್ಞರು, ವಿಜ್ಞಾನಿಗಳು, ತಂತ್ರಜ್ಞರು, ಭಾಷಾತಜ್ಞರು ಸೇರಿ ಎಲ್ಲ ಕ್ಷೇತ್ರಗಳ ಮುಂಚೂಣಿ ವ್ಯಕ್ತಿಗಳ ಅಭಿಪ್ರಾಯ ಪಡೆಯಲಾಗಿದೆ. ಐದು ವರ್ಷಗಳ ಕಾಲ ಅಧ್ಯಯನ ನಡೆಸಿದ ಕರಡು ನಂತರ ಕೇಂದ್ರಕ್ಕೆ ಅಂತಿಮ ವರದಿ ಸಲ್ಲಿಸಲಾಯಿತು ಎಂದರು.

ಕೇಂದ್ರವು ಶಿಕ್ಷಣ ನೀತಿಯನ್ನು ಪ್ರಕಟಿಸಿದ ಕೂಡಲೇ ರಾಜ್ಯ ಸರಕಾರ ನೀತಿಯನ್ನು ಅಂಗೀಕರಿಸಿತಲ್ಲದೆ, ಸಂಪುಟದ ಒಪ್ಪಿಗೆ ಸಿಕ್ಕ ಕೂಡಲೇ ಸದನದ ಒಳಗೆ ಹೊರಗೆ ವ್ಯಾಪಕ ಚರ್ಚೆ ನಡೆಸಲಾಯಿತು. ವಿದ್ಯಾರ್ಥಿಗಳು ತಮಗಿಷ್ಟವಾದ ಕೋರ್ಸ್ ಗಳನ್ನು ಮುಕ್ತವಾಗಿ ಆಯ್ಕೆ ಮಾಡಿಕೊಳ್ಳುವ ಬಹುಆಯ್ಕೆಯ ಮತ್ತು ಬಹುಶಿಸ್ತೀಯ ವ್ಯವಸ್ಥೆ ಶಿಕ್ಷಣ ನೀತಿಯಲ್ಲಿದೆ. ಜತೆಗೆ, 40% ಡಿಜಿಟಲ್ ಕಲಿಕೆಗೂ ಅವಕಾಶ ಮಾಡಿಕೊಡಲಾಗುತ್ತದೆ. ಡಿಜಿಟಲ್ ಕಲಿಕೆ ಅನ್ನುವುದು ಕಡ್ಡಾಯವಲ್ಲ. ಅಗತ್ಯ ಇದ್ದವರು ಮಾತ್ರ ಪಡೆಯಬಹುದು. ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ಅವರು ಅವರು ವಿವರಿಸಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಎತ್ತಿರುವ ಎಲ್ಲ ಪ್ರಶ್ನೆಗಳಿಗೆ ಈಗಾಗಲೇ ಉತ್ತರ ನೀಡಿದ್ದೇವೆ. ಅಗತ್ಯಬಿದ್ದರೆ, ಮತ್ತಷ್ಟು ವಿವರ ನೀಡಲಾಗುವುದು. ಇದರಲ್ಲಿ ಮುಚ್ಚುಮರೆ ಏನಿಲ್ಲ. ಅತ್ಯಂತ ಪಾರದರ್ಶಕವಾಗಿ, ರಾಷ್ಟ್ರದ ಹಿತದೃಷ್ಟಿಯಿಂದ ಜಾರಿಗೆ ಬರುತ್ತಿರುವ ಶಿಕ್ಷಣ ನೀತಿ. ಮುಖ್ಯವಾಗಿ ಕನ್ನಡದ ಕಲಿಕೆಯ ಬಗ್ಗೆ ಸಿದ್ದರಾಮಯ್ಯ ಹೇಳಿರುವ ಮಾತು ಸತ್ಯಕ್ಕೆ ದೂರವಾದದ್ದು ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

blank

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಆಗುತ್ತಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಬೇಡಿಕೆ ಇಡುತ್ತೇವೆ. ಉನ್ನತ ಶಿಕ್ಷಣ ಸುಧಾರಣೆಗೆ ಕನಿಷ್ಠ 3000 ಕೋಟಿಯಾದರೂ ಬೇಕು. ವರ್ಷಕ್ಕೊಂದು ಸಾವಿರ ಕೋಟಿ ಕೊಟ್ಟರೆ ಒಳ್ಳೆಯದು. ಈ ಬಗ್ಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

Source: publictv.in Source link