ನೀರಜ್​ ಚೋಪ್ರಾಗೆ ಅದ್ಧೂರಿ ಸ್ವಾಗತ -ಈ ಹೊತ್ತಿನ ಟಾಪ್​​ 10 ಸುದ್ದಿಗಳ ಕ್ವಿಕ್​ರೌಂಡಪ್​

ನೀರಜ್​ ಚೋಪ್ರಾಗೆ ಅದ್ಧೂರಿ ಸ್ವಾಗತ -ಈ ಹೊತ್ತಿನ ಟಾಪ್​​ 10 ಸುದ್ದಿಗಳ ಕ್ವಿಕ್​ರೌಂಡಪ್​

1. ‘ಕ್ರೇನ್​ ಆಪರೇಟರ್​ ತಪ್ಪಿನಿಂದಾಗಿ ಅವಘಡ ಸಂಭವಿಸಿದೆ’

blank

ಲವ್​ ಯು ರಚ್ಚು ಸಿನಿಮಾದ ಸಾಹಸ ದೃಶ್ಯ ಚಿತ್ರೀಕರಣದ ವೇಳೆ ಕ್ರೇನ್ ಆಪರೇಟರ್ ಮಾಡಿದ ತಪ್ಪಿನಿಂದಾಗಿ ಫೈಟರ್ ವಿನೋದ್ ಸಾವನ್ನಪ್ಪಿದ್ದಾರೆ ಅಂತಾ ಮತ್ತೋರ್ವ ಫೈಟರ್ ರಂಜಿತ್ ಹೇಳಿದ್ದಾರೆ. ಅವಘಡದಲ್ಲಿ ರಂಜಿತ್​ ಸಹ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೂಟಿಂಗ್ ಸಮಯದಲ್ಲಿ ಸ್ಟಂಟ್ ಚೆನ್ನಾಗಿಯೇ ನಡೆಯುತ್ತಿತ್ತು. ಬೆಳಗ್ಗೆ ಒಂದು ಸಾರಿ ಕ್ರೇನ್ ಆಪರೇಟರ್ ಮರಕ್ಕೆ ಕ್ರೇನ್ ಟಚ್ ಮಾಡಿದ್ದ. ಆಗಲೇ ನಾವು ಕ್ರೇನ್ ಆಪರೇಟರ್​ಗೆ ಎಚ್ಚರಿಕೆ ನೀಡಿದ್ವಿ. ಆದರೆ ಕ್ರೇನ್ ಆಪರೇಟರ್ ಬೇಜವಾಬ್ದಾರಿಯಿಂದ ಹೈಟೆನ್ಷನ್​ ವೈರ್​ಗೆ ಕ್ರೇನ್ ಟಚ್​ ಮಾಡಿದ್ದರಿಂದ ಅವಘಡ ಸಂಭವಿಸಿದೆ ಅಂತಾ ರಂಜಿತ್ ಹೇಳಿದ್ದಾರೆ.

2. ಸುನೀಲ್ ಪುರಾಣಿಕ್ ವಿರುದ್ಧ ಭ್ರಷ್ಟಾಚಾರದ ಆರೋಪ

blank

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ನಟ ಕಮ್ ನಿರ್ಮಾಪಕ ಮದನ್ ಪಟೇಲ್ ಸುನೀಲ್ ಪುರಾಣಿಕ್ ವಿರುದ್ಧ ಆರೋಪ ಮಾಡಿದ್ದು, ಪುರಾಣಿಕ್ ಫಿಲ್ಮ್ ಫೆಸ್ಟಿವಲ್ ಆಯೋಜನೆಯಲ್ಲಿ ಕೋಟಿ ಕೋಟಿ ರೂಪಾಯಿ ಅವ್ಯವಹಾರ ಮಾಡಿದ್ದಾರೆ. ಸರ್ಕಾರದ ಹಣವನ್ನು ಪೋಲು ಮಾಡಲಾಗಿದೆ. ಎರಡೂವರೆ ಕೋಟಿಗೂ ಅಧಿಕ ಹಣ ದುರ್ಬಳಕೆಯಾಗಿದೆ ಅಂತಾ ಆರೋಪಿಸಿದ್ದಾರೆ. ಇನ್ನು ಸುನೀಲ್ ಪುರಾಣಿಕ್ ವಿರುದ್ಧ ಮದನ್ ಪಟೇಲ್ ಭ್ರಷ್ಟಾಚಾರ ನಿಗ್ರಹ ದಳಕ್ಕೂ ದೂರು ನೀಡಿರೋದಾಗಿ ಹೇಳಿದ್ದಾರೆ.

3. ‘ದೆಹಲಿಗೆ ಹೋಗುವುದರಲ್ಲಿ ತಪ್ಪೇನಿದೆ?’

blank

ಪರಿಷತ್ ಸದಸ್ಯ ​ ಸಿ.ಪಿ. ಯೋಗೇಶ್ವರ್​ ದೆಹಲಿಗೆ ಹೋಗಿರುವ ವಿಚಾರವಾಗಿ ಸಚಿವ ಮುರುಗೇಶ್ ನಿರಾಣಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಮೈಸೂರಿನ ಸುತ್ತೂರಿನಲ್ಲಿ ಮಾತನಾಡಿದ ಮುರುಗೇಶ್ ನಿರಾಣಿ, ಯೋಗೇಶ್ವರ್ ದೆಹಲಿಗೆ ಹೋಗಿರುವ ವಿಚಾರ ಗೊತ್ತಿಲ್ಲ..ನಾನು ಕೂಡ ದೆಹಲಿಗೆ ಹೋಗಿದ್ದೇನೆ ಅಂತ ಸುದ್ದಿ ಹರಿದಾಡಿತ್ತು. ಆದರೆ ನಾನು ಇಲ್ಲೆ ಇದ್ದೇನೆ. ಯೋಗೇಶ್ವರ್ ದೆಹಲಿಗೆ ಹೋಗಿದ್ದರೆ ಅವರ ವೈಯುಕ್ತಿಕ ವಿಚಾರಕ್ಕೆ ಹೋಗಿರಬಹುದು ಅಂತಾ ಹೇಳಿದ್ರು.

4. ಆ.​12ರವರೆಗೆ ಕರಾವಳಿ ಭಾಗದಲ್ಲಿ ಭಾರೀ ಮಳೆ ಸಾಧ್ಯತೆ

blank
ಆಗಸ್ಟ್​​ 12ರವರೆಗೆ ಕರಾವಳಿ ಭಾಗದ ಹಲವೆಡೆ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆಯಾಗುಬ ಸಾಧ್ಯತೆ ಇದೆಯೆಂದು ಹವಾಮಾನ ಇಲಾಖೆ ತಿಳಿಸಿದೆ. ಆಗ್ನೇಯ ಅರಬ್ಬಿ ಸಮುದ್ರ, ಕೇರಳ ಕರಾವಳಿ ಮತ್ತು ಲಕ್ಷದ್ವೀಪ ಪ್ರದೇಶದಲ್ಲಿ ಗಾಳಿಯ ವೇಗ ಹೆಚ್ಚಾಗುವ ಸಾಧ್ಯತೆ ಇದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಇನ್ನೂ ಬೆಂಗಳೂರು ಸೇರಿದಂತೆ ಹಲವೆಡೆ ಮೋಡ ಕವಿದ ವಾತಾವರಣವಿರಲಿದೆ.

5. ಕಾಯಿಲೆಗೆ ಸೆಡ್ಡು ಹೊಡೆದು ಟಾಪರ್ ಆದ ವಿದ್ಯಾರ್ಥಿನಿ

blank
ಹೃದಯದ ಕಾಯಿಲೆ ಹಾಗೂ ಉಸಿರಾಟದ ಕಾಯಿಲೆ ಇದ್ದರೂ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದು 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ವಿದ್ಯಾರ್ಥಿನಿಯೊಬ್ಬಳು ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ. ಬಾಗಲಕೋಟೆ ತಾಲೂಕಿನ ಮುಚಖಂಡಿ ತಾಂಡಾದ ದುರ್ಗಾದೇವಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಗಂಗಮ್ಮ ಈ ಸಾಧನೆ ಮಾಡಿದ್ದಾಳೆ. ಕಳೆದ ಕೆಲವು ವರ್ಷಗಳಿಂದ ಈಕೆ ಹೃದಯ ಖಾಯಿಲೆಯಿಂದ ಬಳಲುತ್ತಿದ್ದರೂ ಕೂಡ ಶೃದ್ದೆಯಿಂದ ವಿದ್ಯಾಭ್ಯಾಸ ಮಾಡಿ ಈ ಸಾಧನೆ ಮಾಡಿದ್ದಾಳೆ.

6 . ಪ್ಲಾಸ್ಟಿಕ್​ ತ್ರಿವರ್ಣ ಧ್ವಜ ತಯಾರಿಕೆಗೆ ನಿಷೇಧ
ಕರ್ನಾಟಕದಲ್ಲಿ ಪ್ಲಾಸ್ಟಿಕ್​​ನಿಂದ ರಾಷ್ಟ್ರೀಯ ಧ್ವಜ ತಯಾರಿಸುವುದನ್ನು ನಿಷೇಧಿಸಲಾಗಿದ್ದು, ಈ ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚಿಸಿದೆ. ಪ್ಲಾಸ್ಟಿಕ್​ ಧ್ವಜ ತಯಾರಿಕೆ, ಸಂಗ್ರಹಣೆ, ಮಾರಾಟ ಮಾಡುವುದನ್ನು ರಾಜ್ಯಾದ್ಯಾಂತ ನಿಷೇಧಿಸಲಾಗಿದೆ. ಈ ರೀತಿಯ ಚಟುವಟಿಕೆಗಳು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.

7. ರಾಹುಲ್​ ಗಾಂಧಿ ವಿರುದ್ಧ ಪಿಐಎಲ್ ಸಲ್ಲಿಕೆ

blank
ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆ ಮತ್ತು ಆಕೆಯ ಕುಟುಂಬದ ಪೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ದೆಹಲಿ ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ. ದೆಹಲಿ ಬಿಜೆಪಿಯ ನಾಯಕ ಮಂಕರಂದ್ ಮಡ್ಲೇಕರ್ ಅವರು ವಕೀಲರಾದ ಪಂಕಜ್ ಸಿಂಗ್ ಮತ್ತು ಗೌತಮ್ ಅವರ ಮೂಲಕ ಈ ಅರ್ಜಿ ಸಲ್ಲಿಸಿದ್ದಾರೆ. ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ, ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟಿದ್ದ ಸಂತ್ರಸ್ತೆ ಹಾಗೂ ಸಂತ್ರಸ್ತೆ ಕುಟುಂಬದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

8. ‘ಭೂಮಿಯ ತಾಪಮಾನ ವಿಪರೀತ ಹೆಚ್ಚಾಗುತ್ತಿದೆ’
ಭೂಮಿಯ ತಾಪಮಾನ ವಿಪರೀತ ಹೆಚ್ಚಾಗುತ್ತಿದೆ.ಇನ್ನು ಹತ್ತು ವರ್ಷಗಳಲ್ಲಿ ಪರಿಸ್ಥಿತಿ ಮಿತಿಮೀರಿ ಹೋಗಲಿದೆ ಎಂದು ವಿಶ್ವಸಂಸ್ಥೆ ವರದಿ ಎಚ್ಚರಿಕೆ ನೀಡಿದೆ.ವಿಶ್ವದ ನಾಯಕರು ತಾಪಮಾನ ಏರಿಕೆ ತಡೆಯುವ ನಿಟ್ಟಿನಲ್ಲಿ ಪ್ರಯತ್ನಕ್ಕೆ ಮುಂದಾಗಬೇಕು.ಇಲ್ಲದೇ ಹೋದಲ್ಲಿ ವಿಶ್ವಕ್ಕೆ ತಾಪಮಾನ ಏರಿಕೆ ಅಪಾಯವನ್ನು ತಂದೊಡ್ಡಲಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುವುದು ಖಚಿತ ಅಂತಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮೂರು ಸಾವಿರಕ್ಕೂ ಹೆಚ್ಚು ಪುಟಗಳ ಈ ವರದಿಯನ್ನು 234 ವಿಜ್ಞಾನಿಗಳು ಸಿದ್ಧಪಡಿಸಿದ್ದಾರೆ.

9. ‘ಸ್ವರ್ಣ ಪದಕ ಇಡೀ ದೇಶಕ್ಕೆ ಸೇರಿದ್ದು’

blank
ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಇತಿಹಾಸ ರಚನೆ ಮಾಡಿರುವ ಭಾರತದ ಅಥ್ಲೀಟ್ಸ್​​​ ನೀರಜ್​ ಚೋಪ್ರಾಗೆ ಭಾರತದಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಇದಾದ ಬಳಿಕ ಅಶೋಕ್​ ಹೋಟೆಲ್​ನಲ್ಲಿ ಅಭಿನಂದನಾ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ವೇಳೆ, ಮಾತನಾಡಿರುವ ಚೋಪ್ರಾ, ಸ್ವರ್ಣ ಪದಕ ನನಗೆ ಮಾತ್ರವಲ್ಲ ಇಡೀ ದೇಶಕ್ಕೆ ಸೇರಿದ್ದು ಅಂತಾ ಹೇಳಿದ್ದಾರೆ. ಅಲ್ಲದೆ ಟೋಕಿಯೋದಲ್ಲಿ ಚಿನ್ನದ ಪದಕ ಗೆದ್ದಾಗಿನಿಂದಲೂ ಅದನ್ನ ಜೇಬಿನಲ್ಲಿಟ್ಟುಕೊಂಡು ತಿರುಗಾಡುತ್ತಿದ್ದೇನೆ. ಫೈನಲ್​​ಗೆ ಅರ್ಹತೆ ಪಡೆದುಕೊಂಡ ಬಳಿಕ ಇದು ನನ್ನ ಜೀವನದ ಅತ್ಯುತ್ತಮ ಅವಕಾಶ,ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು ಎಂದು ನಿರ್ಧಾರ ಮಾಡಿದ್ದೆ ಅಂತಾ ಚೋಪ್ರಾ ಹೇಳಿದ್ದಾರೆ.

10. ಬ್ರಿಟಿಷ್ ಹೈಕಮಿಷನರ್​ಗೆ ಕನ್ನಡ ಹೇಳಿಕೊಟ್ಟ ದ್ರಾವಿಡ್

ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ, ಕನ್ನಡಿಗ ರಾಹುಲ್​ ದ್ರಾವಿಡ್​ ಭಾರತದ ಬ್ರಿಟಿಷ್​ ಹೈಕಮಿಷನರ್​ ಅಲೆಕ್ಸ್​ ಎಲ್ಲಿಸ್​ಗೆ ಕನ್ನಡ ಕಲಿಸುವ ಮೂಲಕ ಗಮನ ಸೆಳೆದಿದ್ದಾರೆ. ಬೆಂಗಳೂರಿನಲ್ಲಿ ದ್ರಾವಿಡ್​ರನ್ನು ಭೇಟಿ ಮಾಡಿರುವ ಎಲ್ಲಿಸ್​​, ಕನ್ನಡದ ಕೆಲ ಪದಗಳನ್ನು ಕಲಿಯಲು ಬಯಸಿದ್ದು, ಈ ವೇಳೆ ದ್ರಾವಿಡ್​ ‘ಬೇಗ ಓಡಿ’ ಎಂದು ಹೇಳಿಕೊಟ್ಟಿದ್ದಾರೆ. ಎಲ್ಲಿಸ್,​ ದ್ರಾವಿಡ್​ ಹೇಳಿದಂತೆ ಕೆಲ ದೂರ ಓಡಿ ಬಳಿಕ ಒನ್​ ರನ್​ ಅಂತಾ ಹೇಳಿ ಕನ್ನಡದ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ.

Source: newsfirstlive.com Source link