ಕ್ಯಾನ್ಸರ್​ನಿಂದ ಬಳಲುತ್ತಿದ್ದ ನಟಿ ಶರಣ್ಯ ನಿಧನ

ತಿರುವನಂತಪುರಂ: ಕ್ಯಾನ್ಸರ್, ಬ್ರೇನ್ ಟ್ಯೂಮರ್‌ನಿಂದ ಬಳಲುತ್ತಿದ್ದ ಮಲಯಾಳಂನ ಖ್ಯಾತ ಚಲನಚಿತ್ರ ಮತ್ತು ಕಿರುತೆರೆ ನಟಿ ಶರಣ್ಯ ಶಶಿ ಸಾವನ್ನಪ್ಪಿದ್ದಾರೆ.

ನಟಿ ಶರಣ್ಯ(35) 2012 ರಲ್ಲಿ ಬ್ರೈನ್ ಟ್ಯೂಮರ್ ಪತ್ತೆಯಾಗಿತ್ತು. ಬಳಿಕ ಹಲವು ಬಾರಿ ನಟಿ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದರು ಮತ್ತು ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದ ಅನೇಕ ಜನರಿಗೆ ಸ್ಫೂರ್ತಿಯಾಗಿದ್ದರು. ಕ್ಯಾನ್ಸರ್ ವಿರುದ್ಧ ನಟಿ ಧೈರ್ಯದಿಂದ ಹೋರಾಡಿದ್ದಕ್ಕಾಗಿ ವ್ಯಾಪಕವಾಗಿ ಪ್ರಶಂಸಿಸಲಾಗಿತ್ತು.

ಕಳೆದ ಹತ್ತು ವರ್ಷಗಳಿಂದ ಅವರು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು. 2012ರಲ್ಲಿ ಅವರಿಗೆ ಬ್ರೇನ್ ಟ್ಯೂಮರ್ ಇದೆ ಎಂಬುದು ತಿಳಿದುಬಂದಿತ್ತು. 11ಕ್ಕೂ ಹೆಚ್ಚು ಬಾರಿ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಆದರೂ ಕ್ಯಾನ್ಸರ್ ಗೆಲ್ಲಲು ಶರಣ್ಯಾಗೆ ಸಾಧ್ಯವಾಗಿಲ್ಲ. ಕಳೆದ ಮೇ 23 ರಂದು ಕೋವಿಡ್ ರೋಗಲಕ್ಷಣಗಳು ಕಾಣಿಸಿಕೊಂಡ ನಂತರ ಶರಣ್ಯ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಆಸ್ಪತ್ರೆಯ ವೆಂಟಿಲೇಟರ್ ಐಸಿಯುನಲ್ಲಿ ಹಲವು ದಿನಗಳ ಕಾಲ ಚಿಕಿತ್ಸೆ ನೀಡಲಾಗಿತ್ತು. ಜೂನ್ ನಲ್ಲಿ ಕೆಲ ದಿನಗಳ ಕಾಲ ಐಸಿಯುನಿಂದ ಹೊರಬಂದಿದ್ದರು. ಆದರೆ ಆಕೆಯ ಸ್ಥಿತಿ ಮತ್ತಷ್ಟು ಹದಗೆಟ್ಟ ನಂತರ ಪುನಃ ದಾಖಲಾಗಿದ್ದರು. ಅಂತಿಮವಾಗಿ ಇಂದು ಕೊನೆಯುಸಿರೆಳೆದಿದ್ದಾರೆ.

ಶರಣ್ಯಾ ಶಶಿ ನಿಧನಕ್ಕೆ ಅನೇಕರು ಕಂಬನಿ ಮಿಡಿದಿದ್ದಾರೆ. ತೀವ್ರ ಅನಾರೋಗ್ಯದ ನಡುವೆಯೂ ನಮ್ಮ ಮನೋಬಲದ ಕಾರಣಕ್ಕೆ ಅವರು ಅನೇಕರಿಗೆ ಸ್ಫೂರ್ತಿ ಆಗಿದ್ದರು. ಈಗ ಅವರ ನಿಧನದಿಂದ ಮಲಯಾಳಂ ಚಿತ್ರರಂಗದಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. ಚಿಕಿತ್ಸಾ ವೆಚ್ಚಗಳಿಂದಾಗಿ ನಟಿ ಆರ್ಥಿಕ ಸಂಕಷ್ಟಗಳನ್ನು ಎದುರಿಸಬೇಕಾಯಿತು. ಹೀಗಾಗಿ ಚಲನಚಿತ್ರ ಮತ್ತು ಟಿವಿ ಉದ್ಯಮದ ಅನೇಕ ಸಹ ನಟರು ನಟಿಯನ್ನು ಬೆಂಬಲಿಸಲು ಒಗ್ಗೂಡಿದರು ಮತ್ತು ಶರಣ್ಯ ಅವರಿಗೆ ಸಹಾಯ ಮಾಡಿದ್ದರು.

Source: publictv.in Source link