ED ದಾಳಿ ಬಳಿಕ ಜಮೀರ್ ಏಕಾಂಗಿ; ಸಿದ್ದರಾಮಯ್ಯರ ಅತಿ ಪ್ರಾಧಾನ್ಯತೆಯೇ ಮುಳುವಾಗ್ತಿದ್ಯಾ?

ED ದಾಳಿ ಬಳಿಕ ಜಮೀರ್ ಏಕಾಂಗಿ; ಸಿದ್ದರಾಮಯ್ಯರ ಅತಿ ಪ್ರಾಧಾನ್ಯತೆಯೇ ಮುಳುವಾಗ್ತಿದ್ಯಾ?

ಬೆಂಗಳೂರು: ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇತ್ತೀಚೆಗೆ ಕಾಂಗ್ರೆಸ್​ ನಾಯಕ ಜಮೀರ್ ಅಹಮ್ಮದ್​ ನಿವಾಸದ ಮೇಲೆ ದಾಳಿ ಮಾಡಿ ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇ.ಡಿ ದಾಳಿಯಿಂದ ಕೊಂಚ ವಿಚಲಿತರಾಗಿರುವ ಜಮೀರ್ ಜಮೀರ್ ಅಹಮ್ಮದ್, ನಿನ್ನೆ ಸುದ್ದಿಗೋಷ್ಠಿ ನಡೆಸಿ ಮಾಜಿ ಸಿಎಂ ಹೆಚ್​​.ಡಿ.ಕುಮಾರಸ್ವಾಮಿ ವಿರುದ್ಧ ಗುಡುಗಿದ್ದರು. ನಮ್ಮ ಪಕ್ಷದವರನ್ನ ಬಿಟ್ಟು, ಉಳಿದ ಬಿಜೆಪಿ ಹಾಗೂ ಜೆಡಿಎಸ್​ ಪಕ್ಷದವರು ನನ್ನ ವಿರುದ್ಧ ದೂರು ನೀಡಿದ್ದರಿಂದ ಈ ದಾಳಿ ನಡೆದಿದೆ. 15 ದಿನಗಳ ಬಳಿಕ ದಾಖಲೆಗಳ ಸಮೇತ ಅಧಿಕಾರಿಗಳಿಗೆ ದೂರು ನೀಡಿದವರು ಯಾರು ಅನ್ನೋದನ್ನ ತಿಳಿಸುತ್ತೇನೆ ಎಂದಿದ್ದಾರೆ. ನನ್ನ ಮೇಲೆ ಅಷ್ಟೊಂದು ದ್ವೇಷ ಇದ್ದರೆ, ರಾಜಕೀಯವಾಗಿ ಹೋರಾಟ ಮಾಡಬಹುದಿತ್ತು. ಈ ರೀತಿ ಮಾಡಿದರೆ ದೇವರು ಅವರನ್ನ ಕ್ಷಮಿಸುತ್ತಾನೆಯೇ ಎಂದು ಪ್ರಶ್ನೆ ಮಾಡಿದ್ದರು.

blank

ನಿವಾಸದ ಮೇಲೆ ಇಡಿ ದಾಳಿ ಮಾಡಿದ ಬಳಿಕ ನಿಗಿ ನಿಗಿ ಕೆಂಡ ಕಾರುತ್ತಿರುವ ಜಮೀರ್ ಅಹಮ್ಮದ್ ಖಾನ್ ಈ ವಿಚಾರದಲ್ಲಿ ಒಬ್ಬಂಟಿಯಾಗಿದ್ದಾರೆ! ಅನ್ನೋ ಮಾತುಗಳು ರಾಜಕೀಯ ವಲಯದಲ್ಲಿ ಜೋರಾಗಿದೆ. ಅವರ ಬೆನ್ನಿಗೆ ಯಾವೊಬ್ಬ ಸ್ವಪಕ್ಷೀಯ ಅಲ್ಪಸಂಖ್ಯಾತ ನಾಯಕರೂ ನಿಂತಿಲ್ಲ. ಎಲ್ಲರೂ ಮೌನಯುದ್ಧ ಆರಂಭಿಸಿದ್ದಾರೆ. ಜಮೀರ್ ಅಹಮ್ಮದ್ ಖಾನ್ ಪರ ಯಾವ ಅಲ್ಪಸಂಖ್ಯಾತ ನಾಯಕರೂ ಧ್ವನಿ ಎತ್ತುತ್ತಿಲ್ಲ ಎನ್ನಲಾಗಿದೆ.

ಯಾವೆಲ್ಲಾ ನಾಯಕರಿಂದ ಮೌನ..?
ಸಿಎಂ ಇಬ್ರಾಹಿಂ, ತನ್ವೀರ್ ಸೇಠ್, ಸಲೀಂ ಅಹಮ್ಮದ್, ನಜೀರ್ ಅಹಮ್ಮದ್, ನಾಸೀರ್ ಹುಸೇನ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಮುಖಂಡರು ಮಹಾಮೌನವಹಿಸಿದ್ದಾರೆ. ಮತ್ತೊಂದು ವಿಚಾರ ಏನಂದ್ರೆ ನಿನ್ನೆ ಮಾಜಿ ಸಚಿವ ಯುಟಿ ಖಾದರ್ ಸುದ್ದಿಗೋಷ್ಟಿ ನಡೆಸಿದ್ದರು. ಈ ವೇಳೆ ಜಮೀರ್ ಬಗ್ಗೆ ಖಾದರ್ ಯಾವುದೇ ಸಮರ್ಥನೆಗೆ ಮುಂದಾಗಲಿಲ್ಲ. ಮಾಧ್ಯಮಗಳ ಪ್ರಶ್ನೆಯ ನಂತರವೂ ಜಮೀರ್ ಪರ ಗಟ್ಟಿಯಾಗಿ ಮಾತನಾಡಿಯೆ ಇಲ್ಲ. ಈ ಮೂಲಕ ‘ಮಾಡಿದುಣ್ಣೋ ಮಹರಾಯ ಅಂತಿದ್ದಾರೆ’ ಕಾಂಗ್ರೆಸ್​ ಪಕ್ಷದ ಅಲ್ಪಸಂಖ್ಯಾತ ನಾಯಕರು ಅನ್ನೋ ಮಾತುಗಳು ಕೇಳಿಬಂದಿವೆ.

blank

ಯಾಕೆ ಈ ಮೌನ..?
ರಾಜಕೀಯ ವಲಯದಲ್ಲಿ ಆಗುತ್ತಿರುವ ಚರ್ಚೆಗಳ ಪ್ರಕಾರ, ಕಾಂಗ್ರೆಸ್ ಪಕ್ಷದಲ್ಲಿ ಜಮೀರ್​ ಅಹಮ್ಮದ್​ಗೆ ಸಿಗುತ್ತಿರೋ ಮನ್ನಣೆ ಬಗ್ಗೆ ಅಲ್ಪಸಂಖ್ಯಾತ ನಾಯಕರು ತೀವ್ರ ಅಸಮಾಧಾನಗೊಂಡಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಜಮೀರ್​ಗೆ ಕೊಡ್ತಿರೋ ಪ್ರಾಧಾನ್ಯತೆ ಬಗ್ಗೆ ಈ ಹಿಂದೆ ಬಹಿರಂಗವಾಗಿಯೇ ಸಿಎಂ ಇಬ್ರಾಹಿಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಜಮೀರ್ ಹಾಗೂ ತನ್ವೀರ್ ಸೇಠ್ ನಡುವೆಯೂ ಪೊಲಿಟಿಕಲ್ ವಾರ್ ನಡೆದಿದೆ.

blank

ಜಮೀರ್ ಈಗ ಏಕಾಂಗಿ
ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಮುಖಂಡರೆಲ್ಲ ಒಂದೆಡೆ; ಸಿದ್ದರಾಮಯ್ಯ ಜೊತೆಗಿರೋ ಜಮೀರ್ ಇನ್ನೊಂದೆಡೆ ಆದಂತಾಗಿದೆ. ಕಾಂಗ್ರೆಸ್​ ಪಕ್ಷದ ಅಲ್ಪಸಂಖ್ಯಾತರ ಮುಖಂಡರ ನಡುವಿನ ಕೋಲ್ಡ್ ವಾರ್​​ನಿಂದಾಗಿ ಜಮೀರ್ ಇದೀಗ ಏಕಾಂಗಿಯಾಗಿದ್ದಾರೆ. ಇದಕ್ಕೆ ಜಾರಿ ನಿರ್ದೇಶನದ ಅಧಿಕಾರಿಗಳು ನಡೆಸಿದ ದಾಳಿ ಬಳಿಕ ಅಲ್ಪಸಂಖ್ಯಾತ ಮುಖಂಡರು ಮೌನ ವಹಿಸಿರುವುದೇ ನಿದರ್ಶನವಾಗಿದೆ.

ವಿಶೇಷ ವರದಿ: ವೀರೇಂದ್ರ ಉಪ್ಪುಂದ, ಪೊಲಿಟಿಕಲ್ ಬ್ಯೂರೋ.

Source: newsfirstlive.com Source link