ಪಾಕ್​​​ನಲ್ಲಿ 8 ವರ್ಷದ ಬಾಲಕನ ವಿರುದ್ಧ ದೇವದೂಷಣೆ ಕೇಸ್; ಮರಣದಂಡನೆ ಸಾಧ್ಯತೆ

ಪಾಕ್​​​ನಲ್ಲಿ 8 ವರ್ಷದ ಬಾಲಕನ ವಿರುದ್ಧ ದೇವದೂಷಣೆ ಕೇಸ್; ಮರಣದಂಡನೆ ಸಾಧ್ಯತೆ

​​ಪಾಕ್​​ ಪಂಜಾಬ್ ಪ್ರಾಂತ್ಯದಲ್ಲಿರುವ ಹಿಂದೂ ದೇವಾಲಯದ ಮೇಲೆ ಕಿಡಿಗೇಡಿಗಳ ಗುಂಪೊಂದು ದಾಳಿ ಮಾಡಿ ದೇವರ ವಿಗ್ರಹಗಳನ್ನು ಧ್ವಂಸ ಮಾಡಿತ್ತು. ಎಂಟು ವರ್ಷದ ಹಿಂದೂ ಹುಡುಗನೋರ್ವ ಕಳೆದ ವಾರ ಸೆಮಿನರಿಯ ಗ್ರಂಥಾಲಯದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂದು ಆರೋಪಿಸಿ ಈ ದಾಳಿ ನಡೆಸಲಾಗಿತ್ತು. ಕಿಡಿಗೇಡಿಗಳ ಈ ದಾಳಿಯನ್ನು ಪಾಕ್​​ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ ಕೂಡ ಖಂಡಿಸಿದ್ದರು. ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಪಾಕ್​ ಪೊಲೀಸರಿಗೆ ಸೂಚಿಸಿದ್ದರು.

ಕೋರ್ಟ್​ ಆದೇಶದ ಮೇರೆಗೆ ರಹೀಮ್ ಯಾರ್ ಖಾನ್ ಜಿಲ್ಲೆಯ ಭೋಂಗ್ ನಗರದದಲ್ಲಿರುವ ಹಿಂದೂ ದೇವಾಲಯದ ಮೇಲೆ ದಾಳಿ ನಡೆಸಿದ್ದ 20 ಮಂದಿಗೂ ಹೆಚ್ಚು ಆರೋಪಿಗಳನ್ನು ಪಾಕಿಸ್ತಾನ ಪೊಲೀಸರು ಬಂಧಿಸಿದ್ದರು. ಒಂದೆಡೆ ಹಿಂದೂ ದೇವಾಲಯದ ಮೇಲೆ ದಾಳಿ ನಡೆಸಿದ ಆರೋಪಿಗಳ ಬಂಧನವಾಗಿದ್ದರೆ, ಇನ್ನೊಂದೆಡೆ ಮುಸ್ಲಿಂ ಸೆಮಿನರಿ ಮೇಲೆ ಮೂತ್ರ ವಿಸರ್ಜನೆ ಮಾಡಿ ಅಪವಿತ್ರಗೊಳಿಸಿದ ಆರೋಪದ ಮೇರೆಗೆ ಅಪ್ರಾಪ್ತ ಹಿಂದೂ ಹುಡುಗ ವಿರುದ್ಧ ಕೇಸ್​​ ದಾಖಲಿಸಲಾಗಿದೆ.

ಎಂಟು ವರ್ಷದ ಹಿಂದೂ ಹುಡುಗನ ಮೇಲೆ ಸೆಮಿನರಿಯ ಗ್ರಂಥಾಲಯದಲ್ಲಿ ಮೂತ್ರ ವಿಸರ್ಜನೆ ಮಾಡಿದ ಆರೋಪ ಹೊರಿಸಿ ದೇವದೂಷಣೆ ಕಾನೂನಿನ ಅಡಿಯಲ್ಲಿ ಕೇಸ್​​ ದಾಖಲಿಸಲಾಗಿದೆ. ಒಂದು ವೇಳೆ ಈ ಪ್ರಕರಣದಲ್ಲಿ ಬಾಲಕ ಅಪರಾಧಿ ಎಂದು ಸಾಬೀತಾದರೆ ಮರಣದಂಡನೆ ಗ್ಯಾರಂಟಿ ಎನ್ನಲಾಗುತ್ತಿದೆ. ಅಪರಾಧ ಎಂದರೆ ಏನು ಎಂದು ತಿಳಿಯದ 8 ವರ್ಷದ ಅಪ್ರಾಪ್ತ ಬಾಲಕನನ್ನು ಪಾಕ್​​ ಕಾನೂನು ಬಲಿ ತೆಗೆದುಕೊಳ್ಳುವ ಸಾಧ್ಯತೆಗಳಿವೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಸಿದ್ಧಿ ವಿನಾಯಕ ಮಂದಿರ ಧ್ವಂಸ ಮಾಡಿದ ಉದ್ರಿಕ್ತ ಗುಂಪು

ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತಾಡಿರುವ ಬಾಲಕನ ಕುಟುಂಬಸ್ಥರು, ಭೋಂಗ್‌ನಲ್ಲಿ ಹಿಂದೂ ಮುಸ್ಲಿಮರು ಎಷ್ಟೋ ವರ್ಷಗಳಿಂದ ಶಾಂತಿಯುತವಾಗಿ ವಾಸಿಸುತ್ತಿದ್ದಾರೆ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ. ಆದರೀಗ, ನಮ್ಮ ಮನೆ ಹುಡುಗನಿಗೆ ಅಪರಾಧವೆಂದರೆ ಏನು ಅಂತಲೇ ಗೊತ್ತಿಲ್ಲ. ಇಂಥಾ ಮುಗ್ದ ಬಾಲಕನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಬಂಧಿಸಲಾಗಿತ್ತು. ದೇವದೂಷಣೆ ಕಾನೂನಿನ ಅಡಿಯಲ್ಲಿ ಕೇಸ್​​ ಮಾಡಲಾಗಿತ್ತು. ನಂತರ ಅಪ್ರಾಪ್ತ ವಯಸ್ಕನಾಗಿದ್ದಕ್ಕಾಗಿ ಕೋರ್ಟ್ ಆದೇಶದ ಮೇರೆಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯ್ತು ಎಂದರು.

ಇದನ್ನೂ ಓದಿ: ಪಾಕ್​​ನಲ್ಲಿ ದೇವಸ್ಥಾನ ಧ್ವಂಸ ಪ್ರಕರಣ; 150 ಜನರ ವಿರುದ್ಧ ಕೇಸ್​​​, 20 ಮಂದಿ ಅರೆಸ್ಟ್​

ಬಾಲಕನನ್ನು ಬಿಡುಗಡೆ ಮಾಡಿದ್ದೇ ತಡ ದಾಳಿಕೋರರು ಕೋಲು, ಕಲ್ಲುಗಳು ಮತ್ತು ಇಟ್ಟಿಗೆಗಳಿಂದ ದೇವಲಾಯ ಹೊಡೆದು ಹಾಕಿದರು. ಧಾರ್ಮಿಕ ಘೋಷಣೆಗಳನ್ನು ಕೂಗುತ್ತಾ ಹಿಂದೂಗಳ ಮನೆಗಳ ಮೇಲೆ ದಾಳಿ ಮಾಡಿದರು. ನಮಗೆ ಇಲ್ಲಿ ಉಳಿವಿಲ್ಲ. ಹಾಗಾಗಿ ನಮ್ಮನ್ನು ನಾವು ಕಾಪಾಡಿಕೊಳ್ಳಲು ಎಲ್ಲಾ ಹಿಂದುಗಳು ಅಲ್ಲಿಂದ ಮನೆ ಖಾಲಿ ಮಾಡಿದ್ದೇವೆ ಎಂದು ಬಾಲಕನ ಕುಟುಂಬಸ್ಥರು ತಮ್ಮ ಅಳಲು ತೋಡಿಕೊಂಡರು.

Source: newsfirstlive.com Source link