ಕಾರ್ಯಕರ್ತರಿಗೆ ನೋವಾಗದಂತೆ ನಡೆದುಕೊಳ್ಳುವುದಾಗಿ ಸಿಎಂ ಹೇಳಿದ್ದಾರೆ: ಪ್ರೀತಂ ಗೌಡ

ಬೆಂಗಳೂರು: ಕಾರ್ಯಕರ್ತರಿಗೆ ನೋವಾಗದಂತೆ ನಡೆದುಕೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾತು ಕೊಟ್ಟಿದ್ದಾರೆ ಎಂದು ಶಾಸಕ ಪ್ರೀತಂ ಗೌಡ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸಿಎಂ ಭೇಟಿ ಮಾಡಿ ಬಳಿಕ ಮಾತನಾಡಿದ ಅವರು, ಇಲ್ಲಿವರೆಗೆ ಪಕ್ಷವನ್ನು ಅಭಿವೃದ್ಧಿ ಮಾಡಿದ್ದೇನೆ. ಸಂಘಟನೆ ಮುಂದುವರಿಸಿಕೊಂಡು ಹೋಗುತ್ತೇನೆ. ಇಂದು ಸಿಎಂ ಅವರನ್ನು ಭೇಟಿ ಮಾಡಿದ್ದು, ಕಾರ್ಯಕರ್ತರ ನೋವನ್ನು ತಿಳಿಸಿಕೊಟ್ಟಿದ್ದೇನೆ. ಸಿಎಂ ಹಾಗೂ ಸಚಿವ ಆರ್.ಅಶೋಕ್ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಕೇವಲ ಆಶ್ವಾಸನೆಯಲ್ಲ, ಮಾತು ಕೊಟ್ಟಿದ್ದಾರೆ. ಕಾರ್ಯಕರ್ತರಿಗೆ ನೋವಾಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಹಿರಿಯರ ಮಾತಿಗೆ ನಾನು ಒಪ್ಪುತ್ತೇನೆ. 120 ಶಾಸಕರು ಸಿಎಂ ಬೆನ್ನಿಗಿದ್ದೇವೆ. ವೈಯಕ್ತಿಕ ಅಧಿಕಾರದ ಬಗ್ಗೆ ಮಾತನಾಡಲ್ಲ ಎಂದರು.

ನಾನು ಮಂತ್ರಿ ಸ್ಥಾನವನ್ನೇ ಕೇಳಿಲ್ಲ. ಕಾರ್ಯಕರ್ತರು ಹೇಳಿದ್ದಾರೆ, ಅದನ್ನೇ ಹೇಳಿದ್ದೇನೆ. ಯಾರೇ ಆದರೂ ಊಟಕ್ಕೆ ದೇವೇಗೌಡರ ಮನೆಗೆ ಹೋಗಲಿ. ನೆಲ, ಜಲ, ಭಾಷೆ ಬಗ್ಗೆ ಬೇಕಾದರೆ ಮಾತನಾಡಲಿ. ಆದರೆ ಬೇರೆ ಕಾರಣಕ್ಕೆ ಹೋಗುವುದು ಎಷ್ಟು ಸರಿ? ಅದೂ ಸಿಎಂ ಆಗಿ 24 ಗಂಟೆಯೊಳಗೆ ಹೋಗಿದ್ದು ಸರಿಯೇ? ಹೀಗೆಂದು ನಮ್ಮ ಕಾರ್ಯಕರ್ತರು ಕೇಳುತ್ತಿದ್ದಾರೆ. ಇದು ಕಾರ್ಯಕರ್ತರು ಕೇಳಿದ್ದು, ನಾನಲ್ಲ ಎಂದು ತಿಳಿಸಿದರು.

ಸೋಮಣ್ಣಗೆ ತಿರುಗೇಟು
ನನ್ನ ನಿಲುವು ಬದಲಾಗಿಲ್ಲ, ನಾನು ಪ್ರಶ್ನೆ ಮಾಡಿದ್ದು ನೂರಕ್ಕೆ ನೂರು ಸತ್ಯ. ಒಂದು ಬಾರಿ ಗೆದ್ದರೆ ಐದು ಬಾರಿ ಗೆಲ್ಲೋದು, ಮೊದಲು ಗೆದ್ದವರಿಗೂ ಒಂದೇ ವೋಟು, ಆರು ಬಾರಿ ಗೆದ್ದವರಿಗೂ ಒಂದೇ ವೋಟು. ನಾನು ರಾಜಕಾರಣ ಮಾಡೋಕೆ ಬಂದವನು. ಕಬ್ಬನ್ ಪಾರ್ಕ್, ಲಾಲ್ ಬಾಗ್ ನೋಡೋಕೆ ಬಂದಿಲ್ಲ. ಮಾತನಾಡಬೇಕಾದರೆ ಗೌರವ ಕೊಟ್ಟು ಗೌರವಪಡೆಯಬೇಕು. ಹಿರಿಯರು ಮಾರ್ಗದರ್ಶನ ಮಾಡಲಿ. ಅದನ್ನು ಬಿಟ್ಟು ಬೇರೆಯವರ ಬಗ್ಗೆ ಮಾತನಾಡುವುದು ಬೇಡ ಎಂದು ಸಚಿವ ವಿ.ಸೋಮಣ್ಣಗೆ ಟಾಂಗ್ ನೀಡಿದರು.

ಎಲ್ಲೆ ಮೀರಿ ನಡೆದುಕೊಳ್ಳುತ್ತಿದ್ದಾರಾ ಹಾಸನ ಶಾಸಕ ಪ್ರೀತಂ ಗೌಡ ಎಂಬ ಚರ್ಚೆ ಬಿಜೆಪಿಯಲ್ಲಿ ಇದೀಗ ಎದ್ದಿದೆ. ಮೊದಲು ಸಿಎಂ ಬೊಮ್ಮಾಯಿ ಕುರಿತು ಪ್ರೀತಂಗೌಡ ಟೀಕೆ ಮಾಡಿದ್ದು, ಈಗ ಹಿರಿಯ ಸಚಿವ ವಿ ಸೋಮಣ್ಣ ಬುದ್ಧಿವಾದಕ್ಕೆ ಪ್ರೀತಂ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಮಾಜಿ ಪ್ರಧಾನಿ ಎಚ್.ಡಿ.ಕುಮಾರಸ್ವಾಮಿ ನಿವಾಸಕ್ಕೆ ಆಶೀರ್ವಾದಕ್ಕೆ ಭೇಟಿ ಕೊಟ್ಟಿದ್ದ ಸಿಎಂ ವಿರುದ್ಧ ಅಸಮಧಾನ ಹೊರ ಹಾಕಿದ್ದರು. ಇದರ ಬೆನ್ನಲ್ಲೇ ಹಿರಿಯ ಸಚಿವ ವಿ.ಸೋಮಣ್ಣ ವಿರುದ್ಧವೂ ಕಿಡಿ ಕಾರಿದ್ದಾರೆ. ದೇವೇಗೌಡರ ಭೇಟಿ ಮಾಡಿದ್ದ ಸಿಎಂ ಬೊಮ್ಮಾಯಿಯರವರನ್ನು ಪ್ರೀತಂ ಗೌಡ ಟೀಕೆ ಮಾಡಿದ್ದು ಸರಿಯಲ್ಲ. ಪ್ರೀತಂ ಗೌಡ ಇನ್ನೂ ಬೆಳೆಯಬೇಕಾದ ಹುಡುಗ, ಹಾಗೆಲ್ಲ ಮಾತಾಡಬಾರದು ಎಂದು ಎಂದು ಸಚಿವ ವಿ ಸೋಮಣ್ಣ ಬುದ್ಧಿವಾದ ಹೇಳಿದ್ದರು. ಆದರೆ ವಿ.ಸೋಮಣ್ಣ ಬುದ್ಧಿವಾದಕ್ಕೆ ಆಪ್ತರ ಬಳಿ ಪ್ರೀತಂ ಗೌಡ ಅಸಮಾಧಾನ ತೋಡಿಕೊಂಡಿದ್ದಾರೆ. ವಿ.ಸೋಮಣ್ಣ ಯಾರು ನನಗೆ ಬುದ್ಧಿ ಹೇಳೋಕೆ? ವಿ.ಸೋಮಣ್ಣ ಉಡಾಫೆಯ ಮಾತು ಬಿಡಲಿ ಎಂದು ಆಪ್ತರ ಬಳಿ ಹೇಳಿಕೊಂಡಿರುವುದಾಗಿ ಮಾಹಿತಿ ಲಭ್ಯವಾಗಿದೆ.

Source: publictv.in Source link