ಶೂಟಿಂಗ್ ವೇಳೆ ಬಿದ್ದು ಗಾಯಗೊಂಡ ಪ್ರಕಾಶ್ ರೈ- ಹೆಚ್ಚಿನ ಚಿಕಿತ್ಸೆಗೆ ಹೈದರಾಬಾದ್‍ಗೆ ಶಿಫ್ಟ್

ಹೈದರಾಬಾದ್: ನಟ ಪ್ರಕಾಶ್ ರೈ ಚಿತ್ರೀಕರಣದ ವೇಳೆ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಕೂದಲೆಳೆ ಅಂತರದಲ್ಲಿ ದೊಡ್ಡ ಅಪಾಯದಿಂದ ಪಾರಾಗಿದ್ದಾರೆ. ಸದ್ಯ ಶಸ್ತ್ರಚಿಕಿತ್ಸೆಗಾಗಿ ಹೈದರಾಬಾದ್‍ಗೆ ತೆರಳುತ್ತಿದ್ದಾರೆ.

ತಮಿಳು ನಟ ಧನುಷ್ ಅಭಿನಯದ ಚಿತ್ರದಲ್ಲಿ ಪ್ರಕಾಶ್ ರೈ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ‘ತಿರುಚಿತ್ರಾಂಬಲಂ’ ಚಿತ್ರದ ಶೂಟಿಂಗ್ ಚೆನ್ನೈನಲ್ಲಿ ನಡೆಯುತ್ತಿದೆ. ಕಳೆದ ವಾರದಿಂದ ಚಿತ್ರೀಕರಣದಲ್ಲಿ ಪ್ರಕಾಶ್ ರೈ ಪಾಲ್ಗೊಂಡಿದ್ದಾರೆ. ಇಂದು ಚಿತ್ರೀಕರಣದ ವೇಳೆ ಆಯಾತಪ್ಪಿ ಬಿದ್ದ ಪ್ರಕಾಶ್ ರೈ ಗಾಯಗೊಂಡರು. ಕೂಡಲೆ ಚೆನ್ನೈನ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಪಡೆದ ಪ್ರಕಾಶ್ ರೈ ಇದೀಗ ಶಸ್ತ್ರಚಿಕಿತ್ಸೆಗಾಗಿ ಹೈದರಾಬಾದ್‍ಗೆ ಫ್ಲೈಟ್ ಹತ್ತಿದ್ದಾರೆ.

ಈ ಘಟನೆ ಬಗ್ಗೆ ಟ್ವೀಟ್ ಮಾಡಿ ಪ್ರಕಾಶ್ ರೈ ಮಾಹಿತಿ ನೀಡಿದ್ದಾರೆ. ಬಿದ್ದ ಪರಿಣಾಮ ಫ್ರ್ಯಾಕ್ಚರ್ ಆಗಿದೆ. ಈಗ ಶಸ್ತ್ರಚಿಕಿತ್ಸೆಗಾಗಿ ಹೈದರಾಬಾದ್‍ಗೆ ತೆರಳುತ್ತಿದ್ದೇನೆ. ಸ್ನೇಹಿತ ಡಾ.ಗುರುವ ರೆಡ್ಡಿ ಚಿಕಿತ್ಸೆ ನೀಡಲಿದ್ದಾರೆ. ಬೇಗ ಚೇತರಿಸಿಕೊಳ್ಳುತ್ತೇನೆ ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ. ಗಾಯಗೊಂಡಿರುವ ಪ್ರಕಾಶ್ ರೈ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಚಿತ್ರರಂಗದ ಸ್ನೇಹಿತರು ಹಾಗೂ ಅಭಿಮಾನಿಗಳು ಹಾರೈಸುತ್ತಿದ್ದಾರೆ

Source: publictv.in Source link